ರಾಜ್ಯದಲ್ಲಿ ಪ್ಲಾಸ್ಟಿಕ್‌ ಚೆಂಡಿನ ಸದ್ದು... ಚೆನ್ನೈನಲ್ಲಿ ಆಗಸ್ಟ್‌ 12ರಿಂದ ನಡೆಯಲಿರುವ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯೊಂದಿಗೆ ಭಾರತ ಟೇಬಲ್‌ ಟೆನಿಸ್‌ನ ಹೊಸ ಋತು ಆರಂಭವಾಗಲಿದೆ. ಅಧಿಕೃತವಾಗಿ ಪ್ಲಾಸ್ಟಿಕ್ ಚೆಂಡನ್ನು ಬಳಸು­ವುದರಿಂದ ಈ ಟೂರ್ನಿ ದೇಶದ ಟೇಬಲ್‌ ಟೆನಿಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಚೆನ್ನೈಗೆ ಆಟಗಾರರನ್ನು ಕಳುಹಿಸಲು ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಟೇಬಲ್‌ ಟೆನಿಸ್ ಸಂಸ್ಥೆ ಕೂಡ ಪ್ಲಾಸ್ಟಿಕ್‌ ಚೆಂಡಿನ ಬಳಕೆಯ ಹಾದಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಹುಬ್ಬಳ್ಳಿಯಲ್ಲಿ ಜುಲೈ ಮೊದಲ ವಾರದಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೂರ್ನಿ ರಾಜ್ಯದಲ್ಲಿ ಪ್ಲಾಸ್ಟಿಕ್‌ ಚೆಂಡಿನ ಬಳಕೆಗೆ ನಾಂದಿ ಹಾಡಿತು. ನೈರುತ್ಯ ರೈಲ್ವೆ ಆಶ್ರಯದಲ್ಲಿ ರೈಲ್ವೆ ಉತ್ತರ ಸಂಸ್ಥೆ ಅಂಗಣದಲ್ಲಿ ನಡೆದ ನಾಲ್ಕು ದಿನಗಳ ಟೂರ್ನಿ ಈ ಕಾರಣಕ್ಕೆ ‘ಪ್ರೇಕ್ಷಕ ಸ್ನೇಹಿ’ಯಾಯಿತು. ಜುಲೈ 11ರಿಂದ ಬೆಳಗಾವಿಯಲ್ಲಿ ಆರಂಭವಾಗಿರುವ ಈ ಋತುವಿನ ಐದನೇ ರಾಜ್ಯ ರ್‍ಯಾಂಕಿಂಗ್ ಟೂರ್ನಿಯಲ್ಲೂ ಪ್ಲಾಸ್ಟಿಕ್‌ ಚೆಂಡಿನದೇ ಸದ್ದು ಕೇಳುತ್ತಿದೆ; ರಾಜ್ಯದಲ್ಲಿ ಸೆಲ್ಯುಲಾಯ್ಡ್‌ ಚೆಂಡು ತೆರೆಯ ಹಿಂದೆ ಸರಿದಿದೆ. ಚೆಂಡು ತಯಾರಿಸುವ ಕಾರ್ಮಿಕರ ಮತ್ತು ಚೆಂಡನ್ನು ಬಳಸುವ ಆಟಗಾರರ ಆರೋಗ್ಯಕ್ಕೆ ಮಾರಕ ಎಂಬ ಕಾರಣಕ್ಕೆ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಒಕ್ಕೂಟ (ಐಟಿಟಿಎಫ್‌) ಸೆಲ್ಯುಲಾಯ್ಡ್‌ ಚೆಂಡಿನ ಬದಲಿಗೆ ಪ್ಲಾಸ್ಟಿಕ್ ಚೆಂಡು ಬಳಸಲು ನಿರ್ಧರಿಸಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಚೆಂಡಿನ ಬಳಕೆ ಕಳೆದ ವರ್ಷ ಜುಲೈ ತಿಂಗಳಲ್ಲೇ ಆರಂಭವಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಚೆಂಡು ಲಭಿಸದೇ ಇರುವುದು ಮತ್ತು ಬೆಲೆ ಅಧಿಕವಾಗಿರುವುದರಿಂದ ಪ್ಲಾಸ್ಟಿಕ್‌ ಚೆಂಡು ಭಾರತದ ಟೇಬಲ್‌ಗಳಿಗೆ ತಲುಪಲು ಸುಮಾರು ಒಂದು ವರ್ಷ ಬೇಕಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸ್ಪರ್ಧಿಗಳನ್ನು ಅಣಿಗೊಳಿಸಬೇಕಾದರೆ ಪ್ಲಾಸ್ಟಿಕ್ ಚೆಂಡು ಬಳಸುವುದು ಅನಿವಾರ್ಯವಾದ ಕಾರಣ ಭಾರತ ಟೇಬಲ್‌ ಟೆನಿಸ್‌ ಒಕ್ಕೂಟ (ಟಿಟಿಎಫ್‌ಐ) ಎಲ್ಲ ರಾಜ್ಯಗಳಿಗೂ ಸಾಕಷ್ಟು ಚೆಂಡು ಸಿಗುವಂತೆ ವ್ಯವಸ್ಥೆ ಮಾಡುವುದರೊಂದಿಗೆ ಗೊಂದಲ ಕೊನೆಗೊಂಡಿದೆ. ಈ ವರ್ಷದಿಂದ ಸೆಲ್ಯುಲಾಯ್ಡ್‌ ಚೆಂಡು ಜಾರಿಯಲ್ಲಿರುವುದಿಲ್ಲ ಎಂಬ ಫರ್ಮಾನು ಕೂಡ ಟಿಟಿಎಫ್‌ಐನಿಂದ ಹೊರಬಿದ್ದಿದೆ. ರಾಜ್ಯದಲ್ಲಿ ಜೂನ್‌ ತಿಂಗಳಲ್ಲೇ ಈ ವರ್ಷದ ಟೂರ್ನಿಗಳು ಆರಂಭಗೊಂಡಿವೆ. ರಾಜ್ಯ ಸಂಸ್ಥೆಯ ಆಶ್ರಯದಲ್ಲಿ ನಡೆದ ಮೊದಲ ಮೂರು ಟೂರ್ನಿಗಳಲ್ಲಿ ಸೆಲ್ಯುಲಾಯ್ಡ್‌ ಚೆಂಡು ಬಳಸಲಾಗಿತ್ತು. ನಂತರವಷ್ಟೇ ಹೊಸ ಹಾದಿಯಲ್ಲಿ ಹೆಜ್ಜೆ ಇಡಲಾಯಿತು. ಅತಿಯಾದ ವೇಗದಿಂದಾಗಿ ಟೇಬಲ್ ಟೆನಿಸ್‌ ಆಟದಲ್ಲಿ ಪ್ರೇಕ್ಷಕರು ಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂಬ ವಾದ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ನಿಧಾನಕ್ಕೆ ಚಲಿಸುವ ಚೆಂಡು ತಯಾರಿ ಬಗ್ಗೆ ಯೋಚಿಸಲು ಇದು ಕೂಡ ಒಂದು ಕಾರಣ. ಸೆಲ್ಯುಲಾಯ್ಡ್‌ ಚೆಂಡಿಗಿಂತ ಪ್ಲಾಸ್ಟಿಕ್‌ ಚೆಂಡಿನ ತೂಕ ಹೆಚ್ಚಾಗಿದ್ದು ಗಾತ್ರವೂ ಕೊಂಚ ಅಧಿಕ. ಇದರಿಂದಾಗಿ ಚೆಂಡಿನ ವೇಗ ಕಡಿಮೆಯಾಗುತ್ತದೆ. ಪ್ರತಿ ಗೇಮ್‌ನಲ್ಲೂ ರ‍್ಯಾಲಿಗಳ ಸಂಖ್ಯೆ ಹೆಚ್ಚುತ್ತದೆ. ಇದು ಆಟದ ಮೇಲೆ ಕುತೂಹಲ ಬೆಳೆಯಲು ಕಾರಣವಾಗುತ್ತದೆ. ಕೆಲವು ತಿಂಗಳಿಂದ ಪ್ಲಾಸ್ಟಿಕ್‌ ಚೆಂಡಿನಲ್ಲಿ ಅಭ್ಯಾಸ ಮಾಡಿದ ರಾಜ್ಯದ ಆಟಗಾರರು ಈಗ ಸ್ಪರ್ಧಾತ್ಮಕ ಆಟಕ್ಕೆ ಹೊಂದಿಕೊಂಡಿದ್ದಾರೆ. ‘ಪ್ಲಾಸ್ಟಿಕ್‌ ಚೆಂಡು ಕೊಂಚ ವಿಭಿನ್ನ. ಸ್ಪಿನ್‌ ಮಾಡಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ ಆಟದ ಶೈಲಿಯಲ್ಲಿ ಮಹತ್ವದ ವ್ಯತ್ಯಾಸವೇನೂ ಮಾಡಬೇಕಾದ ಅಗತ್ಯವಿಲ್ಲ’ ಎಂಬುದು ಆಟಗಾರರ ಅನಿಸಿಕೆ. ‘ಸೆಲ್ಯುಲಾಯ್ಡ್‌ ಚೆಂಡಿಗಿಂತ ಪ್ಲಾಸ್ಟಿಕ್ ಚೆಂಡಿನ ಗತಿ ಸ್ವಲ್ಪ ನಿಧಾನ. ಇದರಿಂದ ಆಟದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಹೊಸ ಚೆಂಡಿಗೆ ಹೊಂದಿಕೊಳ್ಳಲು ಹೆಚ್ಚಿನ ಶ್ರಮ ಅಗತ್ಯವಿರಲಿಲ್ಲ. ಈಗ ಸೆಲ್ಯುಲಾಯ್ಡ್‌ ಚೆಂಡಿನಷ್ಟೇ ಸಲೀಸಾಗಿ ಈ ಚೆಂಡಿನಲ್ಲಿ ಆಡಲು ಸಾಧ್ಯವಾಗುತ್ತಿದೆ’ ಎಂದು ರಾಜ್ಯದ ಉದಯೋನ್ಮುಖ ಆಟಗಾರ್ತಿ ಬೆಂಗಳೂರಿನ ಖುಷಿ ಅಭಿಪ್ರಾಯಪಡುತ್ತಾರೆ. ಚೆಂಡು ಬದಲಾದ್ದರಿಂದ ತರಬೇತುದಾರರು ಕೂಡ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ. ಹೊಸ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಕಲೆಯನ್ನು ಹೇಳಿಕೊಡಲು ಅವರು ಸಜ್ಜಾಗಿದ್ದಾರೆ. ‘ತರಬೇತಿಯ ವಿಧಾನದಲ್ಲಿ ವಿಶೇಷವಾದ ಬದಲಾವಣೆ ಮಾಡಬೇಕಾಗಿ ಬಂದಿಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ಹೇಗೆ ಒಗ್ಗಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಿದ್ದೇವೆ’ ಎಂದು ಭಾರತೀಯ ರೈಲ್ವೆ ತಂಡದ ಕೋಚ್‌ ಬೋನಾ ಥಾಮಸ್‌ ಜಾನ್‌ ಹೇಳಿದರು. ‘ಸೆಲ್ಯುಲಾಯ್ಡ್‌ ಚೆಂಡು ವೇಗವಾಗಿ ಸಾಗುವುದರಿಂದ ಸುದೀರ್ಘ ರ್‍ಯಾಲಿಗಳಿಗೆ ಅವಕಾಶ ಇರುವುದಿಲ್ಲ. ಸ್ಪರ್ಧೆಗಳಲ್ಲಿ ಬಹುತೇಕ ಎಲ್ಲ ಗೇಮ್‌ಗಳು ಕೂಡ ಎರಡು ಅಥವಾ ಮೂರು ರ್‍ಯಾಲಿಗಳಿಗೆ ಮುಗಿದೇ ಹೋಗುತ್ತವೆ. ಈ ಕಾರಣದಿಂದಲೇ ಅನೇಕರು ಟೇಬಲ್ ಟೆನಿಸ್ ಆಟ ವೀಕ್ಷಿಸಲು ಇಷ್ಟಪಡುತ್ತಿಲ್ಲ. ಪ್ಲಾಸ್ಟಿಕ್‌ ಚೆಂಡಿನ ಗತಿ ನಿಧಾನ ಇರುವುದರಿಂದ ಎದುರಾಳಿಗೆ ರಿಟರ್ನ್ ಮಾಡಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಹೀಗಾಗಿ ರ‍್ಯಾಲಿಗಳು ಹೆಚ್ಚುತ್ತವೆ ಇದು ಆಟದ ಮೇಲೆ ಪೂರಕ ಪರಿಣಾಮ ಬೀರಲಿದೆ’ ಎಂದು ಬೋನಾ ಥಾಮಸ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ವೇಗ ಕಡಿಮೆಯಾಗಲು ಕಾರಣ?: ಸೆಲ್ಯುಲಾಯ್ಡ್‌ ಚೆಂಡಿನ ಗಾತ್ರಕ್ಕಿಂತ ಪ್ಲಾಸ್ಟಿಕ್ ಚೆಂಡು ದೊಡ್ಡದು. 38 ಎಂ.ಎಂ. ಗಾತ್ರದ ಸೆಲ್ಯುಲಾಯ್ಡ್‌ ಚೆಂಡನ್ನು 2000ನೇ ಇಸವಿಯಲ್ಲಿ ಐಟಿಟಿಎಫ್‌ 39 ಎಂ.ಎಂ ಆಗಿ ಪರಿವರ್ತಿಸಿತ್ತು. ಪ್ಲಾಸ್ಟಿಕ್‌ ಚೆಂಡಿನ ಗಾತ್ರ 40 ಎಂ.ಎಂ ದಾಟಿದೆ. ಈ ಚೆಂಡನ್ನು ಸುಲಭವಾಗಿ ಪತ್ತೆ ಮಾಡಲು ಅದರ ಮೇಲೆ 40 ಪ್ಲಸ್‌ ಎಂದು ನಮೂದಿಸಲಾಗುತ್ತಿದೆ. ‘ಪ್ಲಾಸ್ಟಿಕ್‌ ಚೆಂಡು ಹೆಚ್ಚು ಬೌನ್ಸ್ ಆಗುವುದಿಲ್ಲ. ಹೀಗಾಗಿ ಆಟದ ಗತಿ ನಿಧಾನವಾಗುತ್ತದೆ. ಇದರಲ್ಲಿ ಸೀಮ್‌ ಇರುವ ಮತ್ತು ಸೀಮ್‌ ಇಲ್ಲದ ಚೆಂಡುಗಳಿವೆ. ಇವು ಕೂಡ ಆಟದ ಮೇಲೆ ಪರಿಣಾಮ ಬೀರುತ್ತವೆ. ಸೀಮ್‌ ಇರುವ ಚೆಂಡು ಹೆಚ್ಚು ಸ್ಪಿನ್ ಆಗುವುದರಿಂದ ರಕ್ಷಣಾತ್ಮಕ ಆಟಗಾರನಿಗೂ ಸೀಮ್‌ ಇಲ್ಲದ ಚೆಂಡು ಆಕ್ರಮಣಕಾರಿ ಆಟಗಾರನಿಗೂ ನೆರವಾಗುತ್ತದೆ’ ಎಂದು ರೆಫರಿ ಮಂಜುನಾಥ ಕೆ.ಆರ್‌. ಹೇಳುತ್ತಾರೆ. ರಾಜ್ಯಕ್ಕೆ ಬರಲು ತಡವೇಕೆ?: ಭಾರತದಲ್ಲಿ ಕಳೆದ ಋತುವಿನಲ್ಲಿ ಸೆಲ್ಯುಲಾಯ್ಡ್‌ ಚೆಂಡನ್ನೇ ಬಳಸಲಾಗಿತ್ತು. ಹೀಗಾಗಿ ರಾಜ್ಯಗಳಲ್ಲೂ ಇದೇ ಚೆಂಡನ್ನು ಬಳಸಬೇಕಾಗಿತ್ತು. ಹಳೆಯ ಚೆಂಡಿನ ದಾಸ್ತಾನು ಮುಗಿಯದೇ ಹೊಸ ಚೆಂಡು ತಯಾರಿಸಲು ಕಂಪೆನಿಗಳು ಮುಂದಾಗದೇ ಇದ್ದುದರಿಂದ ಚೆಂಡಿನ ಲಭ್ಯತೆಯೂ ಸಾಕಷ್ಟು ಇರಲಿಲ್ಲ. ‘ಪ್ಲಾಸ್ಟಿಕ್‌ ಚೆಂಡುಗಳು ಸಿಗಬೇಕಾದರೆ ಒಂದು ವರ್ಷ ಕಾಯಬೇಕಾಯಿತು. ಈಗ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದೆ. ರಾಜ್ಯದಲ್ಲಿ ಸೆಲ್ಯುಲಾಯ್ಡ್‌ ಚೆಂಡುಗಳ ಕಾಲ ಮುಗಿಯಿತು’ ಎಂದು ರಾಜ್ಯ ಟೇಬಲ್‌ ಟೆನಿಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮತ್ತು ಭಾರತ ಟಿಟಿ ಒಕ್ಕೂಟದ ತಾಂತ್ರಿಕ ಸಮಿತಿ ಸದಸ್ಯ ಟಿ.ಜಿ.ಉಪಾಧ್ಯೆ ತಿಳಿಸಿದರು. ‘ಬೆಲೆ ಹೆಚ್ಚಳದಿಂದಾಗಿ ಭಾರತದಲ್ಲಿ ಹೊಸ ಚೆಂಡಿನ ಬಳಕೆ ಸವಾಲಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಟೇಬಲ್‌ ಟೆನಿಸ್‌ ಸಂಸ್ಥೆಗಳಿಗೆ ಟಿಟಿಎಫ್‌ಐ ಕಡಿಮೆ ಬೆಲೆಯಲ್ಲಿ ಚೆಂಡು ನೀಡುತ್ತಿದೆ. ರಾಜ್ಯದಲ್ಲೂ ಟೂರ್ನಿಗಳಿಗೆ ಪ್ರತಿ ಡಜನ್‌ಗೆ ₹ 600 ಕಡಿತ ಮಾಡಿ ಚೆಂಡು ಒದಗಿಸುತ್ತಿದ್ದೇವೆ. ಸದ್ಯ ಚೆಂಡಿನ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿದ್ದು ನಮ್ಮವರು ಈಗ ಸೆಲ್ಯುಲಾಯ್ಡ್‌ನಿಂದ ಮುಕ್ತರಾಗಿದ್ದಾರೆ’ ಎಂದು ರಾಜ್ಯ ಟೇಬಲ್‌ ಟೆನಿಸ್‌ ಸಂಸ್ಥೆಯ ಕಾರ್ಯದರ್ಶಿ ನಂದನ್‌ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.