ಅಪ್ಪನ ಹಾದಿಯಲ್ಲಿ ಮಕ್ಕಳು... ಸಾದಿಕ್‌ ಕಿರ್ಮಾನಿ, ದೈವಿಕ್‌ ವಿಶ್ವನಾಥ್‌, ಸ್ಟುವರ್ಟ್‌ ಬಿನ್ನಿ, ಉದಿತ್‌ ಪಟೇಲ್, ಕಿಶೋರ್ ಕಾಮತ್‌...! ಈ ಆಟಗಾರರೆಲ್ಲಾ ಕರ್ನಾಟಕ ಪ್ರೀಮಿಯರ್‌ ಲೀಗ್ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದವರು. ಅಷ್ಟೇ ಅಲ್ಲ; ಕೆಎಸ್‌ಸಿಎ ಲೀಗ್‌ ಟೂರ್ನಿಗಳಲ್ಲಿ ಗಮನ ಸೆಳೆಯುತ್ತಿರುವ ಆಟಗಾರರು. ಅಂದಹಾಗೆ, ಇವರೆಲ್ಲಾ ದಿಗ್ಗಜ ಕ್ರಿಕೆಟಿಗರ ಪುತ್ರರು. ಈ ಆಟಗಾರರು ಅಪ್ಪನ ಹಾದಿಯಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯ ಟೂರ್ನಿಯ ವಿಶೇಷವೆಂದರೆ ‘ನಮ್ಮ ಶಿವಮೊಗ್ಗ’ ತಂಡವೊಂದರಲ್ಲೇ ಸಾದಿಕ್‌, ದೈವಿಕ್‌ ಹಾಗೂ ಸ್ಟುವರ್ಟ್‌ ಇದ್ದರು. ಅಷ್ಟೇ ಅಲ್ಲ; ಕೆಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಮೇಲಿನ ಸ್ಥಾನ ದಲ್ಲಿರುವ ಆಟಗಾರ ಸಾದಿಕ್‌. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ಇವರು ಈ ಟೂರ್ನಿಯ ಲೀಗ್‌ ಹಂತದಲ್ಲಿ 338 ರನ್‌ ಕಲೆಹಾಕಿದರು. ಅಷ್ಟೇ ಅಲ್ಲ; ನಾಲ್ಕು ಅರ್ಧ ಶತಕ ಬಾರಿಸಿ ಮಿಂಚಿದರು. ಅಂದಹಾಗೆ, 1983ರಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ತಂಡದ ಸದಸ್ಯ ಸೈಯದ್‌ ಕಿರ್ಮಾನಿ ಅವರ ಪುತ್ರ ಸಾದಿಕ್‌. ವಿಶೇಷವೆಂದರೆ ಸಾದಿಕ್‌ ಕೂಡ ವಿಕೆಟ್‌ ಕೀಪರ್‌. ಈ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ‘ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಾನು ವಿದಾಯ ಹೇಳಿ ಮೂರು ವರ್ಷವಾದ ಮೇಲೆ ಸಾದಿಕ್‌ ಜನಿಸಿದ. ಚಿಕ್ಕಂದಿನಿಂದಲೇ ವಿಕೆಟ್‌ ಕೀಪರ್‌ ಆಗಬೇಕೆಂಬ ಆಸೆ ಆತನಿಗೆ. ರಾಜ್ಯ ಜೂನಿಯರ್‌ ತಂಡದಲ್ಲಿ ಆಡಿ ಗಮನ ಸೆಳೆದಿದ್ದಾನೆ. ಈಗ ರಾಜ್ಯದಲ್ಲಿರುವ ಅತ್ಯುತ್ತಮ ವಿಕೆಟ್‌ ಕೀಪರ್‌ –ಬ್ಯಾಟ್ಸ್‌ಮನ್‌ ಸಾದಿಕ್‌. ಅಂಕಿ ಅಂಶಗಳೇ ಅದನ್ನು ಸಾಬೀತುಪಡಿಸುತ್ತವೆ’ ಎಂದು ಕಿರ್ಮಾನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 26 ವರ್ಷ ವಯಸ್ಸಿನ ಸಾದಿಕ್‌ ಎರಡು ವರ್ಷ ಗಳಿಂದ ಮಲ್ಲೇಶ್ವರ ಜಿಮ್ಖಾನಾ ತಂಡದಲ್ಲಿ ಆಡುತ್ತಿದ್ದಾರೆ. ಅದಕ್ಕೂ ಮೊದಲು ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್ ಪ್ರತಿನಿಧಿಸಿದ್ದರು. ಜಿಆರ್‌ವಿ ಪುತ್ರ ದೈವಿಕ್‌ ಜಿ.ಆರ್‌. ವಿಶ್ವನಾಥ್‌ ಪುತ್ರ ದೈವಿಕ್‌ ಕೂಡ ರಾಜ್ಯ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿರುವ ಆಟಗಾರ. ಆಫ್‌ ಸ್ಪಿನ್ನರ್‌ ಆಗಿರುವ ಇವರು ‘ನಮ್ಮ ಶಿವಮೊಗ್ಗ’ ಪರ ಕೆಲ ಪಂದ್ಯಗಳಲ್ಲಿ ಆಡಿದರು. 21 ವರ್ಷ ವಯಸ್ಸಿನ ದೈವಿಕ್‌ ಕೆಎಸ್‌ಸಿಎ ಲೀಗ್‌ನಲ್ಲಿ ಸ್ವಸ್ತಿಕ್‌ ಯೂನಿಯನ್‌ ಪರ ಆಡುತ್ತಿದ್ದಾರೆ. ಅಷ್ಟೇ ಅಲ್ಲ; ರಾಜ್ಯ ಜೂನಿಯರ್‌ ತಂಡವನ್ನೂ ಪ್ರತಿನಿಧಿಸಿದ್ದಾರೆ. ಕೆಎಸ್‌ಸಿಎ ಕಾರ್ಯದರ್ಶಿಯೂ ಆಗಿರುವ ಬ್ರಿಜೇಶ್‌ ಪಟೇಲ್‌ ಅವರ ಪುತ್ರ ಉದಿತ್‌ ಈ ಬಾರಿ ಮಂಗಳೂರು ಯುನೈಟೆಡ್‌ ತಂಡದಲ್ಲಿ ಆಡಿದರು. ರಣಜಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಿರುವ ರಾಜ್ಯದ ಪ್ರಮೋದ್ ಕಾಮತ್ ಪುತ್ರ ಕಿಶೋರ್ ಈ ಬಾರಿ ಹುಬ್ಬಳ್ಳಿ ಟೈಗರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯರೂ ಆಗಿರುವ ರೋಜರ್‌ ಬಿನ್ನಿ ಅವರ ಪುತ್ರ ಸ್ಟುವರ್ಟ್‌ ಈಗ ಭಾರತ ಟೆಸ್ಟ್‌ ತಂಡದಲ್ಲಿ ಆಡುತ್ತಿದ್ದಾರೆ. ಶ್ರೀಲಂಕಾದಲ್ಲಿ 22 ವರ್ಷಗಳ ಬಳಿಕ ಟೆಸ್ಟ್‌ ಸರಣಿ ಜಯಿಸಿದ ಭಾರತ ತಂಡದ ಸದಸ್ಯ ಕೂಡ. ಆಲ್‌ರೌಂಡರ್‌ ಸ್ಟುವರ್ಟ್‌ ಕೆಪಿಎಲ್‌ನಲ್ಲಿ ‘ನಮ್ಮ ಶಿವಮೊಗ್ಗ’ ತಂಡದ ಸಾರಥ್ಯ ವಹಿಸಿದ್ದರು. ಎಂದಿನಂತೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚು ಹರಿಸಿದರು. ಅಂದಹಾಗೆ, ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ಕೂಡ ನಿಧಾನಕ್ಕೆ ಸದ್ದು ಮಾಡುತ್ತಿದ್ದಾನೆ. 12 ವರ್ಷದೊ ಳಗಿನವರ ಶಾಲಾ ಟೂರ್ನಿಗಳಲ್ಲಿ ಹೆಚ್ಚು ರನ್‌ ಗಳಿಸಿ ‘ಅತ್ಯುತ್ತಮ ಬ್ಯಾಟ್ಸ್‌ಮನ್‌’ ಎನಿಸಿಕೊಂಡಿದ್ದಾನೆ. ಸಿಗದ ಸ್ಥಾನ; ಕಿರ್ಮಾನಿ ಬೇಸರ ‘ಕೆಎಸ್‌ಸಿಎ ಲೀಗ್‌ ಹಾಗೂ ಕೆಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಸಾದಿಕ್‌ ಆಟ ಆಯ್ಕೆ ಗಾರರ ಕಣ್ಣಿಗೆ ಏಕೆ ಕಾಣುತ್ತಿಲ್ಲ, ಅವನು ಮಾಡಿ ರುವ ತಪ್ಪಾದರೂ ಏನು, ರಣಜಿ ಸಂಭವ ನೀಯರ ಪಟ್ಟಿಯಲ್ಲಿ ಏಕೆ ಸ್ಥಾನ ನೀಡಿಲ್ಲ’ ಎಂದು ಸಾದಿಕ್‌ ತಂದೆ ಸೈಯದ್‌ ಕಿರ್ಮಾನಿ ಪ್ರಶ್ನಿಸಿದ್ದಾರೆ. ‘ರಾಜ್ಯ ಲೀಗ್‌ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿಕೆಟ್‌ ಕೀಪರ್‌–ಬ್ಯಾಟ್ಸ್‌ಮನ್ ಎಂದರೆ ಸಾದಿಕ್‌. ಕೆಪಿಎಲ್‌ನಲ್ಲಿ ನಾಲ್ಕು ಅರ್ಧ ಶತಕ ಗಳಿಸಿರುವುದೇ ಇದಕ್ಕೆ ಸಾಕ್ಷಿ. ಆದರೂ, ಅವಕಾಶ ನೀಡಿಲ್ಲ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.