ಕಿರಿಯನ ಹಿರಿಯ ಹೆಜ್ಜೆ ತಂದೆಯ ಜೊತೆ ದೇಹದಾರ್ಢ್ಯ ಸ್ಪರ್ಧೆಗಳನ್ನು ವೀಕ್ಷಿಸಲು ಹೋಗುತ್ತಿದ್ದ ಆ ಕಾಲೇಜು ವಿದ್ಯಾರ್ಥಿ ಒಂದು ದಿನ ಮನದಲ್ಲೇ ಶಪಥ ಮಾಡಿದ: ‘ನಾನೂ ಬಾಡಿ ಬಿಲ್ಡರ್‌ ಆಗಬೇಕು, ರಾಜ್ಯಕ್ಕೆ ಹೆಸರು ತರಬೇಕು...’ ಕೇವಲ ಶಪಥ ಮಾಡಿದ್ದು ಮಾತ್ರವಲ್ಲ, ಜಿಮ್‌ಗೆ ಹೋಗಲು ಆರಂಭಿಸಿದ ನಂತರ ಕಠಿಣ ಶ್ರಮ ಹಾಕಿದ. ಅದಕ್ಕೆ ಬೇಗನೆ ಫಲ ಸಿಕ್ಕಿತು. ಮೊದಲ ವರ್ಷವೇ ವಿಶ್ವವಿ ದ್ಯಾಲಯವನ್ನು ಪ್ರತಿನಿಧಿಸಿದ ಆ ವಿದ್ಯಾರ್ಥಿ ನಂತರ ನಿರಂತರ ಗೆಲುವಿನ ಸೋಪಾನ ತುಳಿದ. ನಾಲ್ಕು ವರ್ಷಗ ಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಷ್ಟು ಬಲಿಷ್ಠ ಮಾಂಸಖಂಡಗಳನ್ನು ಸಿದ್ಧಿಸಿಕೊಂಡ. ಹುಬ್ಬಳ್ಳಿಯ ಶಾಂತಿನಗರ ನಿವಾಸಿ ಅಭಿಷೇಕ್‌ ಗೌಡ ಅವರ ಕಥೆ ಇದು. ಸ್ಥಳೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುತ್ತ ಗಮನ ಸೆಳೆದ ಇವರು ಈಗ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಿದ್ಧರಾಗುತ್ತಿ ದ್ದಾರೆ. ಅಕ್ಟೋಬರ್‌ 3ರಂದು ಉಜ್ಬೆಕಿಸ್ತಾನದಲ್ಲಿ ನಡೆ ಯಲಿರುವ ಏಷ್ಯಾ ಮಟ್ಟದ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅವರು ನವೆಂಬರ್‌ನಲ್ಲಿ ನಡೆಯಲಿರುವ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ ಮೇಲೂ ಕಣ್ಣಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನಿಂದ ಹೋಟೆಲ್‌ ಉದ್ಯಮಕ್ಕಾಗಿ ಹುಬ್ಬಳ್ಳಿಗೆ ಬಂದವರು ಅಭಿ ಷೇಕ್ ಅವರ ಪಾಲಕರಾದ ರತ್ನಾಕರ ಗೌಡ ಹಾಗೂ ಶೈಲಾ. ಚಿಕ್ಕಂದಿನಿಂದಲೇ ದೇಹದಾರ್ಢ್ಯ ‘ಕಲೆ’ಯ ಬಗ್ಗೆ ಆಸಕ್ತರಾಗಿದ್ದ ರತ್ನಾಕರ ನಿತ್ಯವೂ ವ್ಯಾಯಾಮ ಮಾಡುತ್ತಿ ದ್ದರು. ಇದನ್ನು ನೋಡುತ್ತ ಬೆಳೆದ ಅಭಿಷೇಕ್‌ ಆಕ್ಸ್‌ ಫರ್ಡ್‌ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ದೇಹ ದಾರ್ಢ್ಯ ಸ್ಪರ್ಧೆಯ ಬಗ್ಗೆ ಆಸಕ್ತಿ ಮೂಡಿತು. ತಾಜ್‌ ಜಿಮ್‌ ಸೇರಿದ ಒಂದೇ ವರ್ಷದಲ್ಲಿ ಕರ್ನಾಟಕ ವಿಶ್ವವಿದ್ಯಾಲ ಯವನ್ನು ಪ್ರತಿನಿಧಿಸಿ ಚಿನ್ನ ಗೆದ್ದರು. ಅಂತರ ವಿವಿ ಸ್ಪರ್ಧೆಯಲ್ಲಿ ಬೆಳ್ಳಿಯನ್ನೂ ಕೊರಳಿಗೇರಿಸಿಕೊಂಡರು. ನಂತರ ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಲವಿನ್‌ ಕೆ ನಡೆಸುವ ‘ಬಾಡಿ ಟೋನ್‌’ ಜಿಮ್‌ನಲ್ಲಿ ಸಾಧನೆ ಮುಂದುವರಿಯಿತು. ಕಳೆದ ಬಾರಿ ದಸರಾ ಅಂಗವಾಗಿ ನಡೆದ ಸ್ಪರ್ಧೆಯಲ್ಲೂ ಚಿನ್ನ ಗೆದ್ದರು. ಇತ್ತೀಚೆಗೆ ವಿಶಾಖ ಪಟ್ಟಣಂನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಅಭಿಷೇಕ್‌ ಅವರ ದೇಹಸೌಷ್ಠವ ಕಂಡ ನೌಕಾದಳದವರು ಅವರಿಗೆ ಉದ್ಯೋಗ ನೀಡುವುದಕ್ಕೂ ಮುಂದೆ ಬಂದಿದ್ದಾರೆ. ‘ಹರೆಯಕ್ಕೆ ಬಂದಾಗ ಹುಡುಗ ಯಾವುದೇ ಚಟಕ್ಕೆ ಒಳಗಾಗಬಾರದು ಎಂದು ಆತನಿಗೆ ದೇಹದಾರ್ಢ್ಯದಲ್ಲಿ ಆಸಕ್ತಿ ಮೂಡುವಂತೆ ಪ್ರೇರೇಪಿಸಿದೆ. ಆತ ತಾನು ಆರಿಸಿಕೊಂಡ ಕ್ಷೇತ್ರದಲ್ಲಿ ಶ್ರಮ ಹಾಕಿ ಮುಂದೆ ಸಾಗಿದ. ಅದಕ್ಕೆ ಫಲ ಸಿಕ್ಕಿದೆ’ ಎಂದು ತಂದೆ ರತ್ನಾಕರ ಗೌಡ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.