ಟ್ರ್ಯಾಕ್‌ ತಪ್ಪಿದ ಅಥ್ಲೀಟ್‌ಗಳು... ಅಥ್ಲೀಟ್‌ಗಳನ್ನು ನಂಬುವಂತಿಲ್ಲವೇ? ವಿಶ್ವದೆಲ್ಲೆಡೆಯಿರುವ ಕ್ರೀಡಾ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು. ಸಂಡೇ ಟೈಮ್ಸ್‌ ಮತ್ತು ಎಆರ್‌ಡಿ ಸುದ್ದಿ ವಾಹಿನಿ ಸಿಡಿಸಿದ ‘ಬಾಂಬ್‌’ ವಿಶ್ವ ಅಥ್ಲೆಟಿಕ್ಸ್‌ ಕ್ಷೇತ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಮಾಧ್ಯಮಗಳು ಬಹಿರಂಗಪಡಿಸಿರುವ ‘ಸತ್ಯ’ ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ. ಉದ್ದೀಪನ ಮದ್ದು ಪಿಡುಗು ಅಥ್ಲೆಟಿಕ್ಸ್‌ ಕ್ಷೇತ್ರವನ್ನು ಆವರಿಸಿಕೊಂಡಿದೆ ಎಂಬುದು ಹೊಸ ಸುದ್ದಿಯೇನಲ್ಲ. ಕೆನಡಾದ ವೇಗದ ಓಟಗಾರ ಬೆನ್‌ ಜಾನ್ಸನ್‌ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕಾರಣ 1988ರ ಸೋಲ್‌ ಒಲಿಂಪಿಕ್ಸ್‌ನ ಚಿನ್ನದ ಪದಕ ಕಳೆದುಕೊಂಡ ಘಟನೆಯಿಂದ ಹಿಡಿದು ಇದುವರೆಗೆ ಅಥ್ಲೆಟಿಕ್ಸ್‌ ರಂಗದಲ್ಲಿ ತಲ್ಲಣ ಉಂಟುಮಾಡಿದ ಹಲವು ಉದ್ದೀಪನ ಮದ್ದು ವಿವಾದಗಳು ನಡೆದಿವೆ. ಆದರೆ ಈಗ ಎದ್ದಿರುವ ವಿವಾದ ಹಿಂದಿನ ಎಲ್ಲಾ ಘಟನೆಗಳನ್ನು ಮೀರಿಸುವಂತಹದ್ದು. ಒಲಿಂಪಿಕ್ಸ್‌ ಮತ್ತು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಸ್ಪರ್ಧಿಗಳ ಮೇಲೂ ಉದ್ದೀಪನ ಮದ್ದು ವಿವಾದದ ಕರಿನೆರಳು ಆವರಿಸಿದೆ. ಪ್ರಮುಖ ಕೂಟಗಳಲ್ಲಿ ಪದಕ ಗೆದ್ದ ಅಥ್ಲೀಟ್‌ಗಳನ್ನು ಸಂಶಯದ ಕಣ್ಣಿನಿಂದ ನೋಡುವಂತಾಗಿದೆ. ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ (ಐಎಎಎಫ್‌) 2001 ರಿಂದ 2012ರ ವರೆಗಿನ ಅವಧಿಯವರೆಗೆ ಕೈಗೊಂಡಿದ್ದ ರಕ್ತಪರೀಕ್ಷೆಯ ದತ್ತಾಂಶ ಸೋರಿಕೆಯಾಗಿದೆ. 5 ಸಾವಿರ ಅಥ್ಲೀಟ್‌ಗಳ ರಕ್ತದ ಮಾದರಿಯ ವಿವರಗಳು ತನ್ನಲ್ಲಿ ಇರುವುದಾಗಿ ‘ಸಂಡೇ ಟೈಮ್ಸ್‌’ ಹೇಳಿದೆ. ಇದರಲ್ಲಿ 800 ಅಥ್ಲೀಟ್‌ಗಳ ರಕ್ತದ ಮಾದರಿ ‘ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಐಎಎಎಫ್‌ ನಿಯಮಗಳಿಗೆ ತಕ್ಕಂತೆ ಇಲ್ಲ’ ಎಂದು ವರದಿ ತಿಳಿಸಿದೆ. ಈ ಅಥ್ಲೀಟ್‌ಗಳಲ್ಲಿ ಮೂರನೇ ಒಂದರಷ್ಟು ಮಂದಿ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದವರು! ಆದ್ದರಿಂದ ಈಗ ಎದ್ದಿರುವ ವಿವಾದಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬೀಳದಿರಲು ಅಥ್ಲೀಟ್‌ಗಳು ‘ಬ್ಲಡ್‌ ಡೋಪಿಂಗ್‌’ ಅನುಸರಿಸುತ್ತಿದ್ದಾರೆ ಎಂಬುದು ಪತ್ರಿಕೆ ಮಾಡಿರುವ ಆರೋಪ. ಕಡೆಗಣಿಸುವಂತಿಲ್ಲ: ಮಾಧ್ಯಮಗಳು ಬಹಿರಂಗಮಾಡಿರುವ ವಿವರಗಳನ್ನು ‘ಸುಳ್ಳು’ ಎಂದು ತಳ್ಳಿಹಾಕುವಂತಿಲ್ಲ. ಆದರೆ ಐಎಎಎಫ್‌ ಎಲ್ಲ ಆರೋಪಗಳನ್ನು ಏಕಾಏಕಿ ತಳ್ಳಿಹಾಕಿದ್ದು, ‘ಗೊಂದಲ ಉಂಟುಮಾಡುವ ವರದಿ’ ಎಂದಿದೆ. ಐಎಎಎಫ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬ್ರಿಟನ್‌ನ ಸೆಬಾಸ್ಟಿಯನ್‌ ಕೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಇದು ಅಥ್ಲೀಟ್‌ಗಳ ಮೇಲೆ ಸಾರಿರುವ ಯುದ್ಧ’ ಎಂದಿದ್ದಾರೆ, ಆದರೆ ಐಎಎಎಫ್‌ ಸ್ವಲ್ಪವೂ ಯೋಚಿಸದೆ ಈ ಆರೋಪಗಳನ್ನು ತಳ್ಳಿಹಾಕಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಏಕೆಂದರೆ ಈ ಮಾಧ್ಯಮಗಳು ತಮಗೆ ದೊರೆತ ರಕ್ತದ ಮಾದರಿಯ ವಿವರಗಳನ್ನು ‘ಉದ್ದೀಪನ ಮದ್ದು ತಡೆ’ ವಿಭಾಗದ ಇಬ್ಬರು ತಜ್ಞರಿಗೆ ತೋರಿಸಿಯೇ ಬಹಿರಂಗಪಡಿಸಿತ್ತು. ಆಸ್ಟ್ರೇಲಿಯಾದ ತಜ್ಞರಾದ ರಾಬಿನ್‌ ಪ್ಯಾರಿಸೊಟೊ ಮತ್ತು ಮೈಕಲ್‌ ಅಶೆಂಡನ್‌ ಅವರು ವರದಿಯ ಅಧ್ಯಯನ ನಡೆಸಿದ್ದಾರೆ. ‘ಕೆಲವು ಅಥ್ಲೀಟ್‌ಗಳು ಯಾರ ಭಯವೂ ಇಲ್ಲದೆ ಉದ್ದೀಪನ ಮದ್ದು ಸೇವಿಸಿದ್ದಾರೆ’ ಎಂದು ಇವರು ಹೇಳಿದ್ದಾರೆ. ಆದರೆ ಐಎಎಎಫ್‌ ಮಾತ್ರ ಈ ತಜ್ಞರ ಹೇಳಿಕೆಗೆ ಬೆಲೆ ನೀಡಿಲ್ಲ. ‘ಇವರು ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದಂತೆ ಐಎಎಎಫ್‌ ಜತೆ ಒಮ್ಮೆಯೂ ಕೆಲಸ ಮಾಡಿಲ್ಲ. ಆದ್ದರಿಂದ ಐಎಎಎಫ್‌ ಸಂಗ್ರಹಿಸಿದ ರಕ್ತದ ಮಾದರಿಯ ಬಗ್ಗೆ ಏನೂ ಹೇಳುವ ಹಕ್ಕು ಇವರಿಗಿಲ್ಲ’ ಎಂದಿದೆ. ಈ ಮೂಲಕ ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಿದೆ. ಆದರೆ ಸಂಡೇ ಟೈಮ್ಸ್‌ ಪತ್ರಿಕೆಯು ಐಎಎಎಫ್‌ನ ಬದ್ಧತೆಯನ್ನು ಪ್ರಶ್ನಿಸಿದೆ. ‘200 ದೇಶಗಳ ಸಾವಿರಾರು ಅಥ್ಲೀಟ್‌ಗಳ ಉದ್ದೀಪನ ಮದ್ದು ಪರೀಕ್ಷೆಯನ್ನು ನೋಡಿಕೊಳ್ಳಲು ಐಎಎಎಫ್‌ ಕೇವಲ 10 ಸಿಬ್ಬಂದಿಯನ್ನು ಮಾತ್ರ ಹೊಂದಿದೆ’ ಎಂದು ವ್ಯಂಗ್ಯವಾಡಿದೆ. ಭಾರತೀಯ ಅಥ್ಲೀಟ್‌ಗಳ ಮೇಲೂ ಅನುಮಾನ: ‘ಸಂಡೇ ಟೈಮ್ಸ್‌’ ಮಾಡಿರುವ ಆರೋಪ ಭಾರತದ ಅಥ್ಲೀಟ್‌ಗಳನ್ನೂ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿದೆ. 800 ಅಥ್ಲೀಟ್‌ಗಳಲ್ಲಿ ಶೇ 5 ರಷ್ಟು ಭಾರತೀಯ ಸ್ಪರ್ಧಿಗಳು ಇದ್ದಾರೆ ಎಂಬುದು ವರದಿಯಲ್ಲಿದೆ. ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ ಮತ್ತು ನಾಡಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಈ ವರದಿ ನಿಜವೇ ಆಗಿದ್ದರೆ, ಭಾರತದಲ್ಲೂ ಬ್ಲಡ್‌್ ಡೋಪಿಂಗ್‌ ನಡೆಯುತ್ತಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ’ ಎಂದು ಕ್ರೀಡಾ ಔಷಧ ತಜ್ಞ ಪಿ.ಎಸ್‌.ಎಂ ಚಂದ್ರನ್‌ ಪ್ರತಿಕ್ರಿಯಿಸಿದ್ದಾರೆ. ‘ಎರಿತ್ರೊಪೊಯೆಟಿನ್‌ (ಇಪಿಒ) ಈಗ ಭಾರತದಲ್ಲೂ ಲಭ್ಯ. ಆದ್ದರಿಂದ ಬ್ಲಡ್‌ ಡೋಪಿಂಗ್‌ ಆರೋಪವನ್ನು ಕಡೆಗಣಿಸುವಂತಿಲ್ಲ’ ಎಂಬುದು ಅವರ ಹೇಳಿಕೆ. ಆದರೆ ಭಾರತದಲ್ಲಿರುವ ಯಾವುದೇ ಉದ್ದೀಪನ ಮದ್ದು ಪರೀಕ್ಷೆ ಕೇಂದ್ರಗಳಲ್ಲಿ ‘ಬ್ಲಡ್‌ ಡೋಪಿಂಗ್‌’ ಇದುವರೆಗೆ ಪತ್ತೆಯಾಗಿಲ್ಲ. ರಷ್ಯಾ, ಕೆನ್ಯಾದವರು ಮೋಸ ಮಾಡಿದ್ದಾರೆಯೇ?: ದೂರ ಅಂತರದ ಓಟದಲ್ಲಿ ಪ್ರಾಬಲ್ಯ ಸಾಧಿಸಿರುವ ಕೆನ್ಯಾ ಮತ್ತು ಅಥ್ಲೆಟಿಕ್ಸ್‌ನಲ್ಲಿ ಶಕ್ತಿ ಎನಿಸಿರುವ ರಷ್ಯಾದ ಸ್ಪರ್ಧಿಗಳ ಮೇಲೆ ಅನುಮಾನ ದಟ್ಟವಾಗಿವೆ. ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ರಷ್ಯಾದ ಅಥ್ಲೀಟ್‌ಗಳಲ್ಲಿ ಶೇ 80 ರಷ್ಟು ಮಂದಿಯ ರಕ್ತದ ಮಾದರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ವರದಿಯಲ್ಲಿದೆ. ಜಿಗಿತ ಮತ್ತು ಎಸೆತದ ಸ್ಪರ್ಧೆಗಳಲ್ಲಿ ರಷ್ಯನ್ನರು ಪ್ರಾಬಲ್ಯ ಮೆರೆಯುವುದು ಸಾಮಾನ್ಯ. ಇದೀಗ ಈ ದೇಶದ ಪ್ರಮುಖ ಅಥ್ಲೀಟ್‌ಗಳು ‘ಮೋಸ’ ಮಾಡಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ವಿಶ್ವದ ಅತಿವೇಗದ ಓಟಗಾರ ಜಮೈಕದ ಉಸೇನ್‌ ಬೋಲ್ಟ್‌ ಅವರ ರಕ್ತದ ಮಾದರಿ ‘ಸಾಮಾನ್ಯ’ವಾಗಿದೆ ಎಂದು ಪತ್ರಿಕೆ ಹೇಳಿರುವುದು ಅವರ ಕೋಟ್ಯಂತರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಐಎಎಎಫ್‌ ಮೇಲೆ ಹೆಚ್ಚಿದ ಒತ್ತಡ: ಅಥ್ಲೀಟ್‌ಗಳ ರಕ್ತದ ಮಾದರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಅವರು ಉದ್ದೀಪನ ಮದ್ದು ಸೇವಿಸಿದ್ದಕ್ಕೆ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೂ ಈ ದತ್ತಾಂಶ ಸೋರಿಕೆ ವಿವಾದ ಐಎಎಎಫ್‌ಗೆ ಮುಜುಗರ ಉಂಟುಮಾಡಿದೆ. ಬೀಜಿಂಗ್‌ನಲ್ಲಿ ಇದೇ ತಿಂಗಳ 22 ರಿಂದ 30ರ ವರೆಗೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಹೊಸ ವಿವಾದದಿಂದ ಉಂಟಾಗಿರುವ ಕಾವನ್ನು ತಣಿಸಿ ಈ ಚಾಂಪಿಯನ್‌ಷಿಪ್‌ಅನ್ನು ಯಶಸ್ವಿಯಾಗಿ ನಡೆಸುವ ಸವಾಲು ಐಎಎಎಫ್‌ ಮುಂದಿದೆ. ಏನಿದು ‘ಬ್ಲಡ್‌ ಡೋಪಿಂಗ್‌’? ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಿಸಿ ಆ ಮೂಲಕ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಹೊಸ ತಂತ್ರವನ್ನು ಕೆಲವು ಅಥ್ಲೀಟ್‌ಗಳು ಅನುಸರಿಸುತ್ತಾರೆ. ಇದನ್ನು ‘ಬ್ಲಡ್‌ ಡೋಪಿಂಗ್‌’ ಎನ್ನುವರು. ‘ಬ್ಲಡ್‌ ಡೋಪಿಂಗ್‌’ ಅನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ಮಾಡಲು ಸಾಧ್ಯ. ‘ರಕ್ತ ವರ್ಗಾವಣೆ’ (ಬ್ಲಡ್‌ ಟ್ರ್ಯಾನ್ಸ್‌ಫ್ಯೂಷನ್‌) ಒಂದು ವಿಧಾನ. ಸ್ಪರ್ಧೆಗೆ ಕೆಲವು ವಾರಗಳು ಇರುವಾಗ ಅಥ್ಲೀಟ್‌ನ ದೇಹದಿಂದ ಒಂದರಿಂದ ನಾಲ್ಕು ಯೂನಿಟ್‌ಗಳಷ್ಟು (ಒಂದು ಯೂನಿಟ್‌ ಅಂದರೆ 450 ಮಿ.ಲೀ) ರಕ್ತವನ್ನು ಹೊರ ತೆಗೆದು. ಅದನ್ನು ಸೂಕ್ತ ವಿಧಾನದಲ್ಲಿ ಸಂರಕ್ಷಿಸಿಡಲಾಗುವುದು. ಸಂರಕ್ಷಿಸಿಡಲಾದ ಅದೇ ರಕ್ತವನ್ನು ಸ್ಪರ್ಧೆಗೆ 1 ರಿಂದ 7 ದಿನಗಳು ಇರುವಾಗ ಮತ್ತೆ ಅಥ್ಲೀಟ್‌ನ ದೇಹಕ್ಕೆ ಸೇರಿಸಲಾಗುವುದು. ಇದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಆಯಾಸವನ್ನು ದೀರ್ಘಕಾಲ ತಾಳಿಕೊಳ್ಳುವಂತಹ ಶಕ್ತಿ ದೇಹಕ್ಕೆ ಲಭಿಸುತ್ತದೆ. ಏಳು ಸಲ ಟೂರ್‌ ಡಿ ಫ್ರಾನ್ಸ್‌ ಗೆದ್ದಿದ್ದ ಅಮೆರಿಕದ ಸೈಕ್ಲಿಸ್ಟ್‌ ಲ್ಯಾನ್ಸ್‌ ಆರ್ಮ್‌ಸ್ಟ್ರಾಂಗ್‌ ಇದೇ ತಂತ್ರವನ್ನು ಅನುಸರಿಸಿದ್ದರು ಎನ್ನಲಾಗಿದೆ. ಆದರೆ ಇದೀಗ ಎರಿತ್ರೊಪೊಯೆಟಿನ್‌ (ಇಪಿಒ) ಎಂಬ ಉದ್ದೀಪನ ಮದ್ದು ದೊರೆಯುವ ಕಾರಣ ‘ಬ್ಲಡ್‌ ಡೋಪಿಂಗ್‌’ ಸುಲಭ ಎನಿಸಿದೆ. ಇದನ್ನು ಚುಚ್ಚುವ ಮೂಲಕ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯ. ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ವಿವಿಧ ಭಾಗಗಳಿಗೆ ಸಾಗಿಸುವ ಕೆಲಸವನ್ನು ಕೆಂಪು ರಕ್ತ ಕಣಗಳು ಮಾಡುತ್ತವೆ. ಸ್ನಾಯುಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಕೆಯಾಗುವ ಕಾರಣ ಬಳಲಿಕೆ ಮಾಯವಾಗಿ ಅಧಿಕ ಶಕ್ತಿ ದೊರೆಯುತ್ತದೆ. ಆದೇ ರೀತಿ ಆಮ್ಲಜನಕ ಒಯ್ಯಬಲ್ಲ ‘ಸಿಂಥೆಟಿಕ್‌ ಕೆಮಿಕಲ್‌’ಅನ್ನು ಚುಚ್ಚುವ ವಿಧಾನವನ್ನೂ ಕೆಲವರು ಅನುಸರಿಸುತ್ತಾರೆ. ‘ಬ್ಲಡ್‌ ಡೋಪಿಂಗ್‌’ಅನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಿಲ್ಲ. ಇದರಿಂದ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾದರೂ ಅಥ್ಲೀಟ್‌ಗಳು ಸಿಕ್ಕಿಬೀಳದೆ ಪಾರಾಗುತ್ತಾರೆ. ಸೇನೆಯಲ್ಲಿ ‘ಬ್ಲಡ್‌ ಡೋಪಿಂಗ್‌’ ತಂತ್ರ ಅಮೆರಿಕ ಸೇನೆಯ ವಿಶೇಷ ಪಡೆಯ ಕಮಾಂಡೊಗಳು 1993 ರಲ್ಲಿ ಮೊದಲ ಬಾರಿಗೆ ‘ಬ್ಲಡ್‌ ಡೋಪಿಂಗ್‌’ಅನ್ನು ಪರೀಕ್ಷಿಸಿದ್ದರು. ವಿಶೇಷ ಪಡೆಯ ಕಮಾಂಡೊಗಳ ದೇಹದಿಂದ ಎರಡು ಯೂನಿಟ್‌ಗಳಷ್ಟು ರಕ್ತವನ್ನು ಹೊರ ತೆಗೆಯಲಾಗುತ್ತಿತ್ತು. ಆ ಬಳಿಕ ಸೇನಾ ಕಾರ್ಯಾಚರಣೆಗೆ 24 ಗಂಟೆಗಳು ಇರುವಾಗ ಆ ರಕ್ತವನ್ನು ಮತ್ತೆ ದೇಹಕ್ಕೆ ಸೇರಿಸಲಾಗುತ್ತಿತ್ತು. ಹೀಗೆ ಮಾಡಿದಾಗ ರಕ್ತವು ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಒಯ್ದು, ಸೈನಿಕರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಿತ್ತು. 1998 ರಲ್ಲಿ ಆಸ್ಟ್ರೇಲಿಯಾದ ಸೇನೆಯು ತನ್ನ ವಾಯುಪಡೆಯ ಸಿಬ್ಬಂದಿಗೆ ಈ ರೀತಿಯ ‘ತಂತ್ರ ಅನುಸರಿಸಲು ಒಪ್ಪಿಗೆ ನೀಡಿತ್ತು. ಐಎಎಎಫ್‌ ಕೈಗೊಂಡಿರುವ ಕ್ರಮ * 2001 ರಿಂದ ಅಥ್ಲೀಟ್‌ಗಳ 19 ಸಾವಿರಕ್ಕೂ ಅಧಿಕ ರಕ್ತ ಪರೀಕ್ಷೆಗಳನ್ನು ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ಮಾಡಲಾಗಿರುವ ಅತ್ಯಂತ ಸಮಗ್ರ ರಕ್ತ ಪರೀಕ್ಷೆ ಕಾರ್ಯಕ್ರಮ ಇದಾಗಿದೆ * ಈ ಎಲ್ಲ ಪರೀಕ್ಷೆಗಳನ್ನು ತನ್ನ ತಜ್ಞರಿಂದ ನಿಯಮಗಳಿಗೆ ಅನುಗುಣವಾಗಿ ಮಾಡಿಸಿದೆ. * ಉದ್ದೀಪನ ಮದ್ದು ತಡೆ ಕಾರ್ಯಕ್ರಮಗಳಿಗಾಗಿ 2014 ಮತ್ತು 2015 ರಲ್ಲಿ ತಲಾ ₨ 13 ಕೋಟಿ ಮೊತ್ತ ಮೀಸಲಿಟ್ಟಿದೆ. * ಐಎಎಎಫ್‌ ವೈದ್ಯಕೀಯ ಮತ್ತು ಉದ್ದೀಪನ ಮದ್ದು ತಡೆ ವಿಭಾಗ 10 ಪೂರ್ಣಾವಧಿ ಸಿಬ್ಬಂದಿಯನ್ನು ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.