ಕ್ರೀಡಾ ಹಾಸ್ಟೆಲ್‌ಗಳಲ್ಲಿ ಕುಸ್ತಿ ಮಿಂಚು ಈ ಬಾರಿ ಕಾಮನ್‌ವೆಲ್ತ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಪ್ರಕಟಿಸಿದಾಗ ಅದರಲ್ಲಿ ಧಾರವಾಡದ ರಫೀಕ್‌ ಹೊಳಿ ಸ್ಥಾನ ಪಡೆದಿದ್ದರು. ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಅವರು. ಉತ್ತರ ಕರ್ನಾಟಕದ ಕುಸ್ತಿಪಟುಗಳು ಅನೇಕ ಬಾರಿ ಇಂಥ ಅಚ್ಚರಿಯನ್ನು ತಂದುಕೊಟ್ಟಿದ್ದಾರೆ. ಏಷ್ಯಾ ಚಾಂಪಿಯನ್‌ ಷಿಪ್‌ನ ಸಬ್ ಜೂನಿಯರ್‌ ವಿಭಾಗದಲ್ಲಿ ಕಳೆದ ಬಾರಿ ಚಿನ್ನ ಗೆದ್ದ ಗದಗದ ಪ್ರೇಮಾ ಹುಚ್ಚಣ್ಣವರ, ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 40 ವರ್ಷಗಳ ನಂತರ ಧಾರವಾಡ ವಿವಿಗೆ ಚಿನ್ನ ತಂದುಕೊಟ್ಟ ನಾಗರಾಜ... ಹೀಗೆ ಸಾಗುವ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ಕೇಂದ್ರದ ಪ್ರಶಾಂತ ಬೇಲೇರಿ. ರಾಂಚಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕುಸ್ತಿಯ 46 ಕೆ.ಜಿ.ವಿಭಾಗದಲ್ಲಿ ಕಂಚು ಗೆದ್ದ ಅವರು ಭಾರತ ತಂಡದ ತರಬೇತಿ ಶಿಬಿರದಲ್ಲಿದ್ದು ಈಗ ವಾಪಸಾಗಿದ್ದಾರೆ. ಈ ಹೆಸರುಗಳು ಕುಸ್ತಿ ಕ್ಷೇತ್ರದಲ್ಲಿ ಮಿಂಚಲು ಪ್ರಮುಖ ಕಾರಣ ಉತ್ತರ ಕರ್ನಾಟಕದ ಕ್ರೀಡಾ ನಿಲಯಗಳಲ್ಲಿರುವ ಕುಸ್ತಿ ತರಬೇತಿ. ಧಾರವಾಡದಲ್ಲಿ ಸಾಯ್‌, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳ ಹಾಗೂ ದಾವಣಗೆರೆಯಲ್ಲಿರುವ ರಾಜ್ಯದ ಕ್ರೀಡಾ ನಿಲಯಗಳಲ್ಲಿ ಕುಸ್ತಿಗೆ ಪ್ರತ್ಯೇಕ ತರಬೇತಿ ಸೌಲಭ್ಯವಿದೆ. ಸೌಕರ್ಯಗಳ ಕೊರತೆ ಇದ್ದರೂ ದೇಹಬಲ ಹೆಚ್ಚಿಸಿಕೊಂಡು, ಆತ್ಮಸ್ಥೈರ್ಯ ಮೂಡಿಸಿಕೊಂಡು ಮುನ್ನುಗ್ಗುವುದು ಇಲ್ಲಿ ಹೇಳಿಕೊಡುವ ಯಶಸ್ಸಿನ ಮಂತ್ರ. ಕ್ರೀಡಾ ನಿಲಯಗಳಲ್ಲಿರುವ ಕುಸ್ತಿ ತರಬೇತಿ ಸೌಲಭ್ಯವನ್ನು ಬಳಸಲು ಹೊರಗಿನ ಆಸಕ್ತರಿಗೂ ಅವಕಾಶ ನೀಡಲಾಗುತ್ತದೆ. ಗರಡಿ ಮನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಇಂಥ ನಡೆ ಗ್ರಾಮೀಣ ಕುಸ್ತಿಯ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ಕಾರಣದಿಂದಲೇ ಉತ್ತರ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಮುಂಬೈ ಕರ್ನಾಟಕವನ್ನು ಕೆಲವರು ‘ಕುಸ್ತಿಯ ಕಣಜ’ ಎಂದೇ ಕರೆಯುತ್ತಾರೆ. ದೋಹಾದಲ್ಲಿ ಕಂಚು ಗೆದ್ದ ವಿನಾಯಕ ದಳವಿ, ಜೂನಿಯರ್‌ ವಿಭಾಗದಲ್ಲಿ ಮಿಂಚಿದ ಮಹೇಶ ಡಿ, ವಾಯು ಸೇನೆಯಲ್ಲಿರುವ ಸಚಿನ್ ಪಡತರೆ ಮುಂತಾದವರೆಲ್ಲರೂ ಕ್ರೀಡಾ ನಿಲಯಗಳಲ್ಲಿ ಬೆಳೆದವರು. ಇನ್ನು ಎರಡು ತಿಂಗಳಲ್ಲಿ ಈ ಬಾರಿಯ ಕುಸ್ತಿ ಸ್ಪರ್ಧೆಗಳ ‘ಹಂಗಾಮು’ ಆರಂಭವಾಗಲಿದೆ. ಹೀಗಾಗಿ ಕ್ರೀಡಾ ನಿಲಯಗಳಲ್ಲಿ ಈಗ ‘ಸಾಮು’ ಜೋರಾಗಿದೆ. ಕಳೆದ ಬಾರಿ ವಿವಿಧ ವಯೋಮಾನದವರ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವಾಪಸಾದ ಉತ್ತರ ಕರ್ನಾಟಕದ ‘ಹಾಸ್ಟೆಲ್‌ ಹುಡುಗರು’ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಅಂತರರಾಷ್ಟ್ರೀಯ ಮಟ್ಟಕ್ಕೆ ಜಿಗಿಯುವ ಕನಸು ಹೊತ್ತಿದ್ದಾರೆ. ಉತ್ತರ ಕರ್ನಾಟಕದ ಕ್ರೀಡಾ ನಿಲಯಗಳ ಪೈಕಿ ಬೆಳಗಾವಿ ನಿಲಯದ್ದು ದೊಡ್ಡ ಹೆಸರು. 11 ವರ್ಷದೊಳಗಿನವರ ವಿಭಾಗದಿಂದ ಪದವಿ ವರೆಗೂ ಇಲ್ಲಿ ಪ್ರವೇಶಾವಕಾಶವಿದೆ. ಸದ್ಯ 60 ಮಂದಿ ಕುಸ್ತಿ ಅಭ್ಯಾಸ ಮಾಡುತ್ತಿದ್ದು ಇವರ ಪೈಕಿ 25 ಮಂದಿ ಹೆಣ್ಣುಮಕ್ಕಳು. ಕುಸ್ತಿಯಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳಿಗೆ ಬೇಗ ತೆರೆದುಕೊಳ್ಳುವ ಸಂಸ್ಥೆ ಇದು. ಹೊಸತಾಗಿ ಅಖಾಡಕ್ಕೆ ಬಂದಿರುವ ಬೆಲ್ಟ್‌ ರೆಸ್ಲಿಂಗ್‌ ಅಳವಡಿಸಲು ತಯಾರಿ ನಡೆಯುತ್ತಿರುವುದು ಇದಕ್ಕೆ ನಿದರ್ಶನ. ಬಾಗಲಕೋಟೆಯಲ್ಲಿರುವ ನಿಲಯಕ್ಕೆ ಈ ಬಾರಿ ಸೀನಿಯರ್‌ ವಿಭಾಗ ಮಂಜೂರು ಆಗಿದೆ. ಹೀಗಾಗಿ ಎಂಟನೇ ತರಗತಿ ನಂತರದವರೂ ಇನ್ನು ಮುಂದೆ ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಹಳಿಯಾಳ ಮತ್ತು ಗದಗದಲ್ಲಿರುವ ಕ್ರೀಡಾನಿಲಯದಲ್ಲಿ 14 ವರ್ಷದೊಳಗಿನವರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಹೊರಗಿನಿಂದ ಬಂದು ಅಭ್ಯಾಸ ಮಾಡುವವರ ಸಂಖ್ಯೆ ದೊಡ್ಡದಿದೆ. ‘ದೇಶದಲ್ಲಿ ಹರಿಯಾಣ, ದೆಹಲಿ ಮತ್ತು ಪಂಜಾಬ್‌ ಇದ್ದಂತೆ ರಾಜ್ಯದಲ್ಲಿ ಉತ್ತರ ಕರ್ನಾಟಕ. ಬೆಳಗಾವಿ ಜಿಲ್ಲೆಯೊಂದರಲ್ಲೇ ಕುಸ್ತಿಗೆ ಭಾರಿ ಹೆಸರಿದೆ. ಈ ಕಾರಣಕ್ಕೆ ಈ ಭಾಗದಲ್ಲಿ ಕುಸ್ತಿ ಅಕಾಡೆಮಿಯೊಂದನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಬಹಳ ವರ್ಷದಿಂದ ಇದೆ’ ಎನ್ನುತ್ತಾರೆ ಕ್ರೀಡಾ ನಿಲಯದ ಕೋಚ್‌ ಎ.ಆರ್‌.ಕೆ. ನಾಗರಾಜ . ಧಾರವಾಡ ಸಾಯ್‌ ಮತ್ತು ಬೆಳಗಾವಿ ಕ್ರೀಡಾ ನಿಲಯದಲ್ಲಿ ಇಬ್ಬರು ತರಬೇತುದಾರರು ಇದ್ದಾರೆ. ಉಳಿದ ಕಡೆಗಳಲ್ಲಿ ಕುಸ್ತಿಪಟುಗಳನ್ನು ತಯಾರು ಮಾಡುವ ಜವಾಬ್ದಾರಿ ಒಬ್ಬೊಬ್ಬ ತರಬೇತುದಾರನ ಹೆಗಲ ಮೇಲಿದೆ. ಜಾಗದ ಅಭಾವ, ಮ್ಯಾಟ್‌ ಸೌಲಭ್ಯದ ಕೊರತೆ ಇತ್ಯಾದಿ ಸಮಸ್ಯೆಗಳು ಎಲ್ಲ ಕಡೆಯೂ ಇದೆ. ಕುಸ್ತಿಗೆ ಈ ಭಾಗದಲ್ಲಿ ಇರುವ ಪ್ರಸಿದ್ಧಿಯಿಂದಾಗಿ ಕುಸ್ತಿಪಟುಗಳ ಆಸಕ್ತಿಯ ಮೇಲೆ ಇದ್ಯಾವುದೂ ಮಾರಕ ಪರಿಣಾಮ ಬೀರುವುದಿಲ್ಲ ಎಂಬುದು ಕೋಚ್‌ಗಳ ಅಭಿಪ್ರಾಯ. ‘ಸಮಸ್ಯೆಗಳು ತುಂಬಾ ಇವೆ. ಆದರೆ ಅದರ ಬಗ್ಗೆ ಚಿಂತೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ. ನಿರಂತರ ಅಭ್ಯಾಸ ನಡೆಯುತ್ತದೆ. ಮುಕ್ತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರೂ ಬಹಳ ಮಂದಿ ಇದ್ದಾರೆ’ಎನ್ನುತ್ತಾರೆ ಧಾರವಾಡ ಸಾಯ್‌ ಕೇಂದ್ರದ ಕೋಚ್‌ ಶಂಕರಪ್ಪ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.