ಜಿಲ್ಲಾ ಮಟ್ಟದಲ್ಲೂ ಬೇಕಿದೆ ವೃತ್ತಿಪರ ಸ್ಪರ್ಶ ಭಾರತದ ಬ್ಯಾಡ್ಮಿಂಟನ್‌ ಕ್ರೀಡಾ ರಂಗದಲ್ಲಿ ಸೈನಾ ನೆಹ್ವಾಲ್‌ ಮಿಂಚು ಹರಿಸುತ್ತಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಇಂತಹ ಅನೇಕ ಬ್ಯಾಡ್ಮಿಂಟನ್‌ ಪ್ರತಿಭೆಗಳನ್ನು ಸೃಷ್ಟಿಸುವ ನಗರವಾಗಿ ಬೆಳೆದಿದೆ. ಇದಕ್ಕೆ ಕಾರಣ ಇಲ್ಲಿ ಲಭ್ಯವಿರುವ ಮೂಲ ಸೌಕರ್ಯ, ಕೋಚಿಂಗ್‌, ಉತ್ತಮ ಅಂಗಣಗಳು. ಆದರೆ ಈ ಕ್ರೀಡೆಯಲ್ಲಿ ಎತ್ತರಕ್ಕೇರಲು ಹಂಬಲಿಸುವ ಗ್ರಾಮೀಣ ಪ್ರತಿಭೆಗಳಿಗೆ ಮಾತ್ರ ಇಂತಹ ಅವಕಾಶಗಳು ಸಿಗುತ್ತಿಲ್ಲ. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿಗೆ ಮೀಸಲಾಗಿರುವ ಎಚ್‌ಕೆ ಆರ್‌ಡಿಬಿ ಕಲಬುರ್ಗಿಯ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್‌ ಅಂಗಣ ಸಿದ್ಧಪಡಿಸಿದೆ. ಈ ಕ್ರೀಡಾಂಗಣದಲ್ಲಿ ಈಗಾಗಲೇ ಹತ್ತು ಹಲವು ಪ್ರಮುಖ ಟೂರ್ನಿಗಳು ನಡೆದಿವೆ. ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರದ ಸುಸಜ್ಜಿತವಾದ ಕ್ರೀಡಾ ಸಮುಚ್ಚಯಗಳಿವೆ, ಆದರೆ ಯಾವ ಉದ್ದೇಶದಿಂದ ಇವುಗಳ ನಿರ್ಮಾಣವಾಗಿ ದೆಯೋ ಅದು ಆಗುತ್ತಿಲ್ಲ. ‘ಧಾರವಾಡದಲ್ಲಿ ಒಳ್ಳೆಯ ಅಂಗಣಗಳಿವೆ. ಅಲ್ಲಿ ಕ್ಲಬ್‌ ಸದಸ್ಯರು ಆಡಿದ ಮೇಲೆ ಬಾಕಿ ಉಳಿದ ಸಮಯದಲ್ಲಿ ನಮಗೆ ಅಭ್ಯಾಸ ನಡೆಸಲು ಅವಕಾಶ ಸಿಗುತಿತ್ತು. ಹೀಗಾಗಿ ದೂರದ ಬೆಂಗಳೂರಿಗೆ ಹೋಗಿ ಹೆಚ್ಚಿನ ತರಬೇತಿ ಪಡೆಯಬೇಕಾಯಿತು. ಅಲ್ಲದೇ ಎನ್‌ಐಎಸ್‌ ಕೋಚ್‌ ಇಲ್ಲ. ಜತೆಗೆ ಅಭ್ಯಾಸ ನಡೆಸಲು ಸರಿಸಮಾನ ಆಟಗಾರರ ಕೊರತೆಯೂ ಇದೆ’ ಎನ್ನುವುದು ಧಾರವಾಡದ ಪ್ರತಿಭಾನ್ವಿತ ಬ್ಯಾಡ್ಮಿಂಟನ್‌ ಆಟಗಾರ ಅಭಿಷೇಕ್‌ ಯೆಲಿಗಾರ್‌ ಅನಿಸಿಕೆ. ಕಲಬುರ್ಗಿಯಲ್ಲಿ ಇತ್ತೀಚೆಗೆ ಕ್ರೀಡೆಗೆ ಹೆಚ್ಚಿನ ಮೂಲ ಸೌಲಭ್ಯ ಒದಗಿಸುವ ಪ್ರಯತ್ನಗಳು ನಡೆದಿವೆ. ಕ್ರೀಡಾಪಟುಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ‘ನುರಿತ ತರಬೇತುದಾರರ ಕೊರತೆಯಿಂದ ದೂರದ ಪುಣೆಗೆ ಹಾಗೂ ಹೈದರಾಬಾದ್‌ಗೆ ಮಗಳನ್ನು ತರಬೇತಿ ಪಡೆಯಲು ಕಳುಹಿಸಬೇಕಾಗಿ ಬಂದಿದೆ. ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಮುಖ್ಯ. ಸಿಂಥೆಟಿಕ್‌ ಟ್ರ್ಯಾಕ್‌ ಸಿದ್ಧಗೊಂಡಿದ್ದರೂ ಅದರ ಸೌಲಭ್ಯ ಪಡೆಯಲು ಕಳೆದ ಎರಡು ವರ್ಷಗಳಿಂದ ಸಾಧ್ಯವಾಗುತ್ತಿಲ್ಲ’ ಎನ್ನುವುದು ಕಲಬುರ್ಗಿಯ ಬ್ಯಾಡ್ಮಿಂಟನ್‌ ಆಟಗಾರ್ತಿ ಕೋಮಲ್‌ ಸಿಂಗ್‌ ಅವರ ತಂದೆ ಜಯಂತ್‌ ಸಿಂಗ್‌ ಅವರ ಅಭಿಪ್ರಾಯ. ‘ಬೆಂಗಳೂರಿನ ಕ್ರೀಡಾಪಟುಗಳಲ್ಲಿ ಪ್ರತಿಭೆಯಿದ್ದರೆ ಅದನ್ನು ಅರಳಿಸಲು ಬೇಕಾಗುವ ಎಲ್ಲಾ ಅವಕಾಶಗಳಿವೆ. ಆದರೆ ಸರ್ಕಾರ ಕ್ರೀಡೆಗೆ ನೀಡುವ ಪ್ರೋತ್ಸಾಹ ಮಾತ್ರ ಬಹಳ ನೀರಸವಾಗಿದೆ. ರಾಜ್ಯ ಮಟ್ಟ ,ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರೆ ಕ್ರೀಡಾಪಟುಗಳಿಗೆ ನೀಡುವ ನಗದು ಬಹುಮಾನ ಪಡೆಯಲು ಎರಡು ಮೂರು ವರ್ಷಗಳೇ ತಗಲುತ್ತದೆ. ಶಾಲಾ ಕಾಲೇಜುಗಳಲ್ಲಿ ಉಳಿದ ರಾಜ್ಯಗಳ ಕ್ರೀಡಾಪಟುಗಳಿಗೆ ನೀಡುವ ಕೃಪಾಂಕ ಪದ್ಧತಿ ನಮ್ಮಲ್ಲಿಲ್ಲ. ಇದರಿಂದ ಎಸ್‌ಎಸ್‌ಎಲ್‌ಸಿ ನಂತರ ಪೋಷಕರು ಕ್ರೀಡೆಯಿಂದ ತಮ್ಮ ಮಕ್ಕಳನ್ನು ದೂರವಿಡುತ್ತಿದ್ದಾರೆ’ ಎಂದು ಕರ್ನಾಟಕದ ಭರವಸೆಯ ಬ್ಯಾಡ್ಮಿಂಟನ್‌ ಪಟು ಅರ್ಚನಾ ಪೈ ತಂದೆಯಾದ ಅನಂತ್‌ ಪೈ ಅವರ ಅಭಿಮತ. ಕೋಚ್‌ಗಳ ನೇಮಕಕ್ಕೆ ಮೀನಮೇಷ: ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಅಭಿವೃದ್ಧಿಗೆ ಬೇಕಾದ ಕಟ್ಟಡಗಳನ್ನು ನಿರ್ಮಿಸಿ ಕೈತೊಳೆದುಕೊಳ್ಳುವ ಸರ್ಕಾರ ಉತ್ತಮ ತರಬೇತುದಾರರ ನೇಮಕಕ್ಕೆ ಆದ್ಯತೆ ನೀಡದೇ ಇರುವುದು ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾ ಪಟುಗಳು ಬೆಳೆಯಲು ಪ್ರತಿಕೂಲ ವಾತಾವರಣ ಉಂಟು ಮಾಡಿದೆ. ಸರಿಯಾದ ತರಬೇತುದಾರರಿಂದ ತರಬೇತಿ ಸಿಗುವ ವ್ಯವಸ್ಥೆ ಇಂತಹ ಜಿಲ್ಲಾ ಕೇಂದ್ರಗಳ ಕ್ರೀಡಾಂಗಣದಲ್ಲಿ ಇಲ್ಲದಿರುವುದು ಇಂತಹ ವಾತಾವರಣ ನಿರ್ಮಾಣಕ್ಕೆ ಕಾರಣ. ‘ಬ್ಯಾಡ್ಮಿಂಟನ್‌ ಆಟ ಕಲಿಯಬೇಕೆಂದು ಬಹಳ ಆಸೆಯಿದ್ದ ನನಗೆ ಅಂದಿನ ದಿನಗಳಲ್ಲಿ ಉತ್ತಮ ತರಬೇತುದಾರರಾಗಲೀ, ಒಳ್ಳೆಯ ಕಿಟ್‌ ಆಗಲೀ ಪಡೆಯಲಾಗಲಿಲ್ಲ. ಆದರೆ ಆಟದ ಮೇಲಿನ ಪ್ರೀತಿ ನನಗೆ ಇಂದು ಸಹಾಯಕ ಕೋಚ್‌ ಆಗುವ ಅವಕಾಶ ದೊರಕಿಸಿಕೊಟ್ಟಿದೆ. ಸರ್ಕಾರದ ಅಧೀನದಲ್ಲಿರುವ ಈ ಕ್ರೀಡಾಂಗಣದಲ್ಲಿ ಕೋಚ್‌ ಹುದ್ದೆಗೆ ನೀಡುವ ಸಂಭಾವನೆ ತೀರಾ ಕಡಿಮೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಒಳ್ಳೆಯ ಸಂಭಾವನೆ ನೀಡುತ್ತಾರೆ. ಒಳ್ಳೆಯ ತರಬೇತುದಾರರ ಕೊರತೆಯಿರುವ ಕಾರಣ ಕಲಬುರ್ಗಿಯಂತಹ ಪ್ರದೇಶದಿಂದ ಒಳ್ಳೆಯ ಬ್ಯಾಡ್ಮಿಂಟನ್‌ ಪಟುಗಳು ಹೊರಬರಲು ಆಗುತ್ತಿಲ್ಲ. ಇದನ್ನು ಗಮನಿಸಿ ಒಳ್ಳೆಯ ತರಬೇತುದಾರರನ್ನು ನೇಮಸಿ ಒಳ್ಳೆಯ ಸಂಭಾವನೆ ನೀಡಿದಲ್ಲಿ ಇಷ್ಟೊಂದು ಹಣ ವ್ಯಯಿಸಿ ನಿರ್ಮಿಸಿರುವ ಕ್ರೀಡಾ ಸಮುಚ್ಛಯದ ಸರಿಯಾದ ಉಪಯೋಗ ಆಗುವಂತೆ ನೋಡಬಹುದು’ ಎನ್ನುವುದು ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ (ಪಿಪಿಬಿಎ) ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಕಲಬುರ್ಗಿಯವರಾದ ಇರ್ಫಾನ್‌ ಖಾನ್‌ ಅವರ ಕಳಕಳಿಯ ಮಾತುಗಳು. ಬೆಕ್ಕಿಗೆ ಗಂಟೆ ಕಟ್ಟುವವರಾರು: ಸಿಂಥೆಟಿಕ್‌ ಅಂಗಣದಲ್ಲಿ ಆಡಲು ಬ್ಯಾಡ್ಮಿಂಟನ್‌ ಶೂಗಳ ಬಳಕೆ ಕಡ್ಡಾಯ. ಅದೇ ರೀತಿ ಅಂಗಣದ ಶುಚಿತ್ವ ಬಹಳ ಮುಖ್ಯ. ಇಲ್ಲಿ ಆಡಲು ಬರುವ ಹವ್ಯಾಸಿ ಆಟಗಾರರು ನಿಯಮ ಪಾಲಿಸುವಂತೆ ನೋಡುವ ಜವಾಬ್ದಾರಿ ಕ್ರೀಡಾಂಗಣದ ಆಡಳಿತದ್ದು. ಆದರೆ ಇಲ್ಲಿ ಆಡುವವರಲ್ಲಿ ನಗರದ ಪ್ರಭಾವಿಗಳೇ ಹೆಚ್ಚಿನವರು. ಅವರೆಲ್ಲರ ಮನವೊಲಿಸಿ ಈ ಅಂಗಣವನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ನೋಡಿಕೊಳ್ಳುವುದು ತುಂಬಾ ಕಠಿಣವಾದ ಸವಾಲಾಗಿದೆ. ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ಕಲಬುರ್ಗಿಯ ಪ್ರತಿಭೆಗಳಾದ ರೋಹನ್‌ ಹೈಬತ್ತಿ ಹಾಗೂ ರೋಹಿತ್‌ ಹೈಬತ್ತಿ ಅವರ ತಂದೆಯವರ ಮಾತು ಜಿಲ್ಲಾ ಮಟ್ಟದಲ್ಲಿ ಕ್ರೀಡೆಗಳಿಗೆ ಎಷ್ಟು ಪ್ರೋತ್ಸಾಹ ಸಿಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬಹುದು. ‘ನನ್ನ ಮಕ್ಕಳನ್ನು ಈ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಅಭ್ಯಾಸಕ್ಕೆ ಕರೆ ತರುತ್ತಿದ್ದೆ. ಆಗ ಕ್ಲಬ್‌ನ ಸದಸ್ಯರು ಬಂದಾಗ ಕೋರ್ಟ್‌ ಖಾಲಿ ಮಾಡುತ್ತಿದ್ದೆವು. ಅಷ್ಟೇ ವ್ಯವಸ್ಥೆಯಲ್ಲಿ ನನ್ನ ಮಗ ರೋಹಿತ್‌ ರಾಜ್ಯಮಟ್ಟದ ಚಾಂಪಿಯನ್‌ ಆಗಿದ್ದ. ನಂತರ ಉತ್ತಮ ತರಬೇತಿಯ ಕೊರತೆಯಿಂದ ಬ್ಯಾಡ್ಮಿಂಟನ್‌ ಕ್ರೀಡೆಯನ್ನು ವೃತ್ತಿಪರವಾಗಿ ಮುಂದುವರಿಸಲು ಆಗಲಿಲ್ಲ’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು. ‘ಕಲಬುರ್ಗಿ ಭಾಗದಲ್ಲಿ ಕ್ರೀಡೆಗೆ ಬೇಕಾಗಿರುವ ಗ್ರೇಡಿಂಗ್‌ ನೀಡುವ ಕಾರ್ಯಕ್ಕೆ ಎಚ್‌ಕೆಆರ್‌ಡಿಬಿ ಮುಂದಾಗಿದೆ. ಈ ಕಾರಣದಿಂದ ಕ್ರೀಡಾಂಗಣಕ್ಕೆ ಬೇಕಾಗಿರುವ ಹಲವು ಮೂಲ ಸೌಕರ್ಯಗಳನ್ನು ಹೆಚ್ಚಿನ ಅನುಧಾನ ಬಳಸಿ ಅಬಿವೃದ್ಧಿ ಮಾಡಲಾಗುತ್ತಿದೆ. ಮುಂದೆ ಬ್ಯಾಡ್ಮಿಂಟನ್‌ ಅಭ್ಯಸಿಸುವ ಕ್ರೀಡಾಪಟುಗಳಿಗೆ ಮಂಡಳಿಯ ಹಣದಲ್ಲೇ ಸಾಮಾಗ್ರಿಗಳನ್ನು ನೀಡುವ ಉದ್ದೇಶವಿದೆ. ಇದಕ್ಕಾಗಿ ಕೆಲವೊಂದು ನಿಯಮಗಳ ಬದಲಾವಣೆ ಮಾಡಲಾಗುತ್ತದೆ. ಆರೋಗ್ಯ ಕಾಪಾಡಲು ಹಾಗೂ ಮನರಂಜನೆಗೆ ಆಡಲು ಬರುವವರಿಗೆ ನಂತರದ ಆದ್ಯತೆ ಹಾಗೂ ಶುಲ್ಕ ಹೆಚ್ಚಿಸುವ ಪ್ರಸ್ತಾವವಿದೆ’ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅಮ್ಲನ್‌ ಆದಿತ್ಯ ಬಿಸ್ವಾಸ್‌ ಹೇಳಿದರು. ಲಕ್ಷಗಟ್ಟಲೆ ಹಣವನ್ನು ವ್ಯಯಿಸಿ ನಿರ್ಮಾಣವಾಗಿರುವ ಈ ಬ್ಯಾಡ್ಮಿಂಟನ್‌ ಕ್ರೀಡಾಂಗಣದ ನಿರ್ವಹಣೆಗೆ ಬೇಕಾಗಿರುವ ಸಿಬ್ಬಂದಿಗಳ ಕೊರತೆ ಇದೆ. ಕೇವಲ ಕಟ್ಟಡಗಳನ್ನು ನಿರ್ಮಿಸಿ ಅದರೊಳಗೆ ನಡೆಯಬೇಕಾದ ಚಟುವಟಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನೀಡದೆ ಇರುವ ಆಡಳಿತ ವರ್ಗದ ಧೋರಣೆಗಳಿಂದ ಇಂತಹ ಕ್ರೀಡಾ ಸಮುಚ್ಛಯಗಳಲ್ಲಿ ನಡೆಯಬೇಕಾದ ಕ್ರೀಡಾ ಚಟುವಟಿಕೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಸರ್ಕಾರದ ಮಟ್ಟದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮಾಡಬೇಕಾದ ಮೊದಲ ಕೆಲಸವಾದ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಕಲಬುರ್ಗಿಯಂತಹ ನಗರಗಳಿಂದ ಸೈನಾ ನೆಹ್ವಾಲ್‌ ಅಥವಾ ಪಿ.ಕಶ್ಯಪ್‌ ಅವರಂತಹ ಅದೆಷ್ಟೋ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆಯಾಗಿ ನಿಡಬಹುದು ಎನ್ನುವುದು ಇಲ್ಲಿನ ಕ್ರೀಡಾಭಿಮಾನಿಗಳ ಬಯಕೆ. * ಗುರುಕುಲವಿದೆ ಗುರುಗಳು ಬೇಕಾಗಿದ್ದಾರೆ ಕಲಬುರ್ಗಿಯ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಹೊಸದಾಗಿ ಅಂದಾಜು 41.23ಲಕ್ಷ ಮೌಲ್ಯದ ಯೋನೆಕ್ಸ್‌ ಕಂಪೆನಿಯ ಮ್ಯಾಟ್‌ಗಳನ್ನು ಹಾಕಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಅನುಗುಣವಾಗಿ ಆರು ಅಂಗಣಗಳು ಸಿದ್ಧಗೊಂಡಿವೆ. ಸೋರುತ್ತಿದ್ದ ಚಾವಣಿಗಳ ದುರಸ್ತಿ ಕಾರ್ಯಗಳು ಪೂರ್ಣಗೊಂಡಿದೆ. ₹9.8ಲಕ್ಷದಲ್ಲಿ ಹೊಸದಾಗಿ 48 ಉತ್ತಮ ಗುಣಮಟ್ಟದ ವಿದ್ಯುತ್‌ದೀಪಗಳನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿ ಒಂದು ಒಳಾಂಗಣ ಕ್ರೀಡಾಂಗಣಕ್ಕೆ ಏನೆಲ್ಲಾ ಮೂಲ ಸೌಕರ್ಯಗಳು ಬೇಕು ಅದೆಲ್ಲವೂ ಇಲ್ಲಿದೆ. ಇಂತಹ ಬ್ಯಾಡ್ಮಿಂಟನ್‌ ಅಂಗಣದಲ್ಲಿ ಆಡುವವರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬರುವವರೇ ಹೆಚ್ಚು. ವೃತ್ತಿಪರ ಬ್ಯಾಡ್ಮಿಂಟನ್‌ ಕ್ರೀಡಾಪಟುಗಳು ಇಲ್ಲಿ ಅಭ್ಯಾಸ ಮಾಡುವುದು ವಿರಳ. ಇತ್ತೀಚೆಗೆ ಖಾಸಗಿ ಕ್ಲಬ್‌ ಸಣ್ಣ ಪ್ರಮಾಣದಲ್ಲಿ ಕೋಚಿಂಗ್‌ ಆರಂಭಿಸಿದೆ. ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಮೂರು ಕೋರ್ಟ್‌ಗಳನ್ನು ಕಾಯ್ದಿರಿಸಲಾಗಿದೆ. ‘ಕಳೆದ ಒಂದು ವರ್ಷದಿಂದ ಸಾಕ್ಷಿ ಬಾಡ್ಮಿಂಟನ್‌ ಕ್ಲಬ್‌ ನಡೆಸುತ್ತಿದ್ದೇನೆ. ಒಟ್ಟು 13 ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಂದ ಪಡೆಯುವ ಶುಲ್ಕದಲ್ಲಿ ಕಲಿಯಲು ಬೇಕಾಗುವ ಫೆದರ್‌ ಶಟಲ್‌ ಖರೀದಿಸಿ ಆಡಿಸುವುದು ತುಂಬಾ ದುಬಾರಿಯೂ ಅಗಿದೆ. ನಮಗೆ ಪ್ರಸಕ್ತ ಮೂರು ಅಂಗಣಗಳನ್ನು ಕಾಯ್ದಿರಿಸಿದ್ದಾರೆ. ಆದರೆ ತರಬೇತಿಗೆ ನೀಡಲಾದ ಸಮಯವನ್ನು ಈಗಿನ 7.30 ಇರುವುದನ್ನು 8.30ರ ತನಕ ವಿಸ್ತರಿಸಲು ಮನವಿ ಮಾಡಿದ್ದೇವೆ’ ಎಂದು ಕಲಬುರ್ಗಿಯ ಸಾಕ್ಷಿ ಬಾಡ್ಮಿಂಟನ್‌ ಕ್ಲಬ್‌ ಸಂಚಾಲಕರಾದ ಯೋಗೇಶ್‌ ಪಾಟೀಲ್‌ ಹೇಳುತ್ತಾರೆ. ‘ಬೆಂಗಳೂರಿನಂತಹ ನಗರಗಳಲ್ಲಿ ಕೆಲಸ ಮಾಡುವು ದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಕಲಬುರ್ಗಿ ಯಂತಹ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಉತ್ತಮ ವೇತನ ದೊರೆ ತಲ್ಲಿ ನಮ್ಮಂತಹ ಕೋಚ್‌ಗಳು ಇಲ್ಲಿ ಕೆಲಸ ಮಾಡಬಹುದು. ಆದರೆ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ’ ಎನ್ನುವುದು ಪಿಪಿಬಿಎ ಕೋಚ್‌ ಇರ್ಫಾನ್‌ ಖಾನ್‌ ಅವರ ಮಾತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.