ದ್ವೀಪರಾಷ್ಟ್ರದ ರತ್ನ ಸಂಗಾ ‘ನಿಮ್ಮ ಮಗ ಬ್ಯಾಡ್ಮಿಂಟನ್, ಟೆನಿಸ್ ಮತ್ತು ಕ್ರಿಕೆಟ್‌ ಆಟಗಳನ್ನು ಚೆನ್ನಾಗಿ ಆಡುತ್ತಾನೆ. ಓದಿನಲ್ಲೂ ಮುಂದಿದ್ದಾನೆ. ಅದರೆ, ನನ್ನ ಅಭಿಪ್ರಾಯದಲ್ಲಿ ಆತ ಒಳ್ಳೆಯ ಕ್ರಿಕೆಟ್ ಆಟಗಾರನಾಗುವ ಸಾಮರ್ಥ್ಯ ಹೊಂದಿದ್ದಾನೆ. ಆ ನಿಟ್ಟಿನಲ್ಲಿ ನೀವು ಆತನಿಗೆ ಪ್ರೋತ್ಸಾಹ ಕೊಡುವುದು ಸೂಕ್ತ’ ಎರಡು ದಶಕಗಳ ಹಿಂದೆ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಟ್ರಿನಿಟಿ ಕಾಲೇಜಿನ ಪ್ರಾಚಾರ್ಯ ಲಿಯೋನಾರ್ಡ್ ಡಿ ಅಲ್ವಿಸ್ ತಮ್ಮ ಮುಂದೆ ಕುಳಿತಿದ್ದ ದಂಪತಿಗಳಿಗೆ ನೀಡಿದ್ದ ಸಲಹೆ ಇದು. ಪಾಲಕರೂ ನಿರ್ಲಕ್ಷಿಸಲಿಲ್ಲ. ಪುತ್ರನನ್ನು ಉತ್ತಮ ಕ್ರಿಕೆಟ್ ತರಬೇತಿಗೆ ಹಾಕಿದರು. ಇವತ್ತು ಅದೇ ಹುಡುಗ ಶ್ರೀಲಂಕಾ ಸೇರಿದಂತೆ ಇಡೀ ಕ್ರಿಕೆಟ್‌ ವಿಶ್ವದ ಅಗ್ರಗಣ್ಯ ಆಟಗಾರನಾಗಿ ಬೆಳೆದಿದ್ದಾನೆ. ಅವರೇ ಕುಮಾರ ಸಂಗಕ್ಕಾರ. ಕೊಲಂಬೊದಲ್ಲಿ ಭಾರತ ವಿರುದ್ಧದ ಎರಡನೇ ಟೆಸ್ಟ್‌ ಅವರಿಗೆ ಕೊನೆಯದ್ದು. 134 ಟೆಸ್ಟ್ ಆಡಿರುವ ಕುಮಾರ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅವರ ಸಾಧನೆ ಕ್ರಿಕೆಟ್‌ ಇತಿಹಾಸದ ಪುಸ್ತಕದಲ್ಲಿ ಸುವರ್ಣಪುಟವಾಗಿ ದಾಖಲಾಗಿದೆ. ಅಂದು ಕಾಲೇಜಿನ ಪ್ರಾಚಾರ್ಯರು ಕುಮಾರನ ಪ್ರತಿಭೆ ಗುರುತಿಸದೇ ಹೋಗಿದ್ದರೆ, ಬ್ಯಾಡ್ಮಿಂಟನ್ ಆಟಗಾರ ನಾಗಿಯೋ ಅಥವಾ ವೃತ್ತಿಪರ ವಕೀಲನಾಗಿಯೋ ಎಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರೋ ಗೊತ್ತಿಲ್ಲ. ಆದರೆ, ವಕೀಲಿ ವೃತ್ತಿ ಯಲ್ಲಿದ್ದ ತಂದೆ ಸ್ವರ್ಣಕುಮಾರ ಸಂಗಕ್ಕಾರ ಮತ್ತು ಕುಮಾರಿ ಸುರಂಗನಾ ದಂಪತಿ ಅಂದು ಮಗನ ಕೈಗೆ ಬ್ಯಾಟ್ ಕೊಡುವಾಗ, ಜಂಟಲ್‌ಮ್ಯಾನ್‌’ ಕ್ರೀಡೆಗೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ ಎಂಬ ಊಹೆಯನ್ನೂ ಮಾಡಿರಲಿಕ್ಕಿಲ್ಲ. ಕೋಟ್ಯಂತರ ಅಭಿಮಾನಿಗಳು ಮತ್ತು ಆಪ್ತರ ಪಾಲಿನ ‘ಸಂಗಾ’ ಅವರ ಕ್ರಿಕೆಟ್ ಜೀವನ ಲಂಕಾ ದ್ವೀಪದ ಯುವಪ್ರತಿಭೆಗಳಿಗೆ ಮಾರ್ಗದರ್ಶನದ ಕೈಪಿಡಿಯೇ ಹೌದು. ಸಹಆಟಗಾರರಿಗೆ ಸ್ನೇಹಿಯಾಗಿ, ಎದುರಾಳಿ ತಂಡದ ಆಟಗಾರರಿಗೆ ಸವಾಲಾಗಿ, ವಿವಾದಗಳಿಂದ ದೂರವಿದ್ದು ಕಟ್ಟಿಕೊಂಡ ಕೀರ್ತಿಸೌಧದ ಹೊಳಪು ಬಹುಕಾಲ ಉಳಿಯುವಂತದ್ದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಭಾರತಕ್ಕೆ ಸಚಿನ್ ಇದ್ದಂತೆ, ಲಂಕಾಕ್ಕೆ ಸಂಗಾ ಇದ್ದಾರೆ. ದಾಖಲೆಗಳ ಸರದಾರ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಸಂಗಾ, ತಮ್ಮ ತಂದೆಯಂತೆ ವಕೀಲನಾಗಲು ಬಯಸಿದವರು. ಆದರೆ, ಕ್ರಿಕೆಟ್‌ ಪ್ರವಾಸಗಳಿಂದಾಗಿ ಕಾನೂನು ಪದವಿಯನ್ನು ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ. ಕ್ರಿಕೆಟ್‌ನಲ್ಲಿ ಅವರು ಮಾಡಿದ ಸಾಧನೆಗಳು ಒಂದೆರಡಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಎಡಗೈ ಬ್ಯಾಟ್ಸ್‌ಮನ್‌ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ದ್ವಿಶತಕ ಗಳಿಸಿದ ವರಲ್ಲಿ ಇವರೇ ಎರಡನೇ ಬ್ಯಾಟ್ಸ್‌ಮನ್ (11). ಮೊದಲನೇ ಸ್ಥಾನದಲ್ಲಿ ಡಾನ್ ಬ್ರಾಡ್ಮನ್ (12) ಇದ್ದಾರೆ. ಇನ್ನೊಂದು ದ್ವಿಶತಕ ಗಳಿಸಿದ್ದರೆ, ಅವರನ್ನು ಸರಿಗಟ್ಟುವ ಅವಕಾಶ ಸಂಗಾಗೆ ಇತ್ತು. ಹೆಚ್ಚಿನ ಸಂಖ್ಯೆಯ ಶತಕಗಳನ್ನು (38) ದಾಖಲಿ ಸಿರುವವರ ಪಟ್ಟಿಯಲ್ಲಿ ನಾಲ್ಕನೇ ಆಟಗಾರ ಇವರು. ಸತತ ನಾಲ್ಕು ಟೆಸ್ಟ್‌ಗಳಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ವಿಶ್ವದ ಏಕೈಕ ಬ್ಯಾಟ್ಸ್‌ಮನ್. ಅದಲ್ಲದೆ 8000 (152 ಇನಿಂಗ್ಸ್), 9000(172), 11000 (208), 12000 (224) ರನ್ನುಗಳ ಮೈಲುಗಲ್ಲು ಗಳನ್ನು ವೇಗವಾಗಿ ದಾಟಿದ ದಾಂಡಿಗನೂ ಹೌದು. ಸಂಗಾ ಮತ್ತು ಆವರ ಆಪ್ತಮಿತ್ರ ಮಾಹೇಲ ಜಯವರ್ಧನೆ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಆಡಿದ ಜತೆಯಾಟದಲ್ಲಿ ಸೇರಿಸಿದ 624 ರನ್ ವಿಶ್ವಶ್ರೇಷ್ಠ ಪಾಲುದಾರಿಕೆ ದಾಖಲೆಯಾಗಿದೆ. ಅದರಲ್ಲಿ ಸಂಗಾ 287 ಮತ್ತು ಜಯವರ್ಧನೆ 324 ರನ್ ಗಳಿಸಿದ್ದರು. 2014ರಲ್ಲಿ 12 ಪಂದ್ಯಗಳಲ್ಲಿ 1480 (4 ಶತಕ, 9 ಅರ್ಧಶತಕ) ಗಳಿಸಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಯ ಪಡೆದಿದ್ದರು. ವಿಕೆಟ್‌ ಕೀಪರ್ ಆಗಿಯೂ ಇವರ ದಾಖಲೆ ಶ್ರೇಷ್ಠವಾದದ್ದು. 131 ಪಂದ್ಯಗಳಲ್ಲಿ 197 ಬಲಿ ಪಡೆದಿದ್ದಾರೆ. ಸಂಗಾ–ಜಯ ಸ್ನೇಹ ಒಂದೇ ತಂಡದಲ್ಲಿದ್ದು ಪರಸ್ಪರ ಪೈಪೋಟಿಗೆ ಬಿದ್ದು ಬೆಳೆಯುವ ಭರದಲ್ಲಿ ಒಮ್ಮೊಮ್ಮೆ ಮಾನವೀಯ ಸಂಬಂಧಗಳು ಹಿಂದೆ ಉಳಿಯುತ್ತವೆ. ಆದರೆ, ಸಂಗಕ್ಕಾರ ವಿಷಯದಲ್ಲಿ ಈ ಮಾತು ಅಪವಾದ. ಏಕೆಂದರೆ, ಸಂಗಾ ಮತ್ತು ಜಯವರ್ಧನೆ ಅವರ ನಡುವಿನ ಸ್ನೇಹ ಇಡೀ ಲೋಕಕ್ಕೆ ಗೊತ್ತು. ಇಬ್ಬರೂ ಶ್ರೇಷ್ಠ ಆಟಗಾರರು, ತಂಡವನ್ನು ಮುನ್ನಡೆಸುವ ಛಾತಿಯಿದ್ದ ನಾಯಕರು. ಆದರೆ, ಮೈದಾನದಿಂದ ಹೊರಗೆ ಇಬ್ಬರು ಆಪ್ತಮಿತ್ರರು. ಅವರ ಸ್ನೇಹದ ಪರಿಯು ತಂಡಕ್ಕೂ ದೊಡ್ಡ ಆಸ್ತಿಯಾಗಿತ್ತು. ಅವರ 624 ರನ್‌ಗಳ ಶ್ರೇಷ್ಠ ಪಾಲುದಾರಿಕೆ ಇನಿಂಗ್ಸ್‌ ಅನ್ನು ಮರೆಯಲು ಸಾಧ್ಯವೇ? ಅಲ್ಲದೇ ಅವರಿಬ್ಬರ ಒಟ್ಟು ಪಾಲುದಾರಿಕೆ ಆಟಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್‌ಗಳು ದಾಖಲಾಗಿರುವುದು ವಿಶೇಷ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ಇಬ್ಬರೂ ಒಂದೇ ದಿನ ನಿವೃತ್ತರಾದವರು. ಆದರೆ, ಜಯವರ್ಧನೆ ಟೆಸ್ಟ್‌ನಿಂದ ಹೋದ ವರ್ಷ ನಿವೃತ್ತಿ ಪಡೆದಿದ್ದರು. ಅವತ್ತು ಅವರು ಕೊನೆ ಪಂದ್ಯ ಆಡಿದ್ದ ಮೈದಾನದಲ್ಲಿಯೇ ಸಂಗಾ ಕೂಡ ಆಟಕ್ಕೆ ‘ಗುಡ್‌ ಬೈ’ ಹೇಳುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.