ವಿಶ್ವ ಅಥ್ಲೆಟಿಕ್ಸ್‌ ಭಾರತ ಎಲ್ಲಿದೆ? ವಿಶ್ವಕಪ್‌ ಕ್ರಿಕೆಟ್‌, ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗಳ ಹಾಗೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಕೂಡಾ ತನ್ನದೇ ಪರಂಪರೆ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಒಲಿಂಪಿಕ್ಸ್‌ನಷ್ಟೇ ಮಹತ್ವ ಹೊಂದಿರುವ ಈ ಚಾಂಪಿಯನ್‌ಷಿಪ್‌ ಅಥ್ಲೀಟ್‌ಗಳಿಗೆ ಪ್ರತಿಷ್ಠೆಯ ಕಣವೂ ಹೌದು. ಇದು ಈ ಬಾರಿ ಚೀನಾದಲ್ಲಿ ಆಯೋಜನೆಗೊಂಡಿದ್ದು ರಿಯೊ ಒಲಿಂಪಿಕ್ಸ್‌ಗೆ ಕೆಲ ತಿಂಗಳು ಮುಂಚಿತವಾಗಿ ನಡೆಯುತ್ತಿರುವುದು ವಿಶೇಷ. ಬಹುಮುಖ್ಯವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಹಾಗೂ ಈಗಾಗಲೇ ಅರ್ಹತೆ ಗಳಿಸಿರುವವರಿಗೆ ಪ್ರತಿಷ್ಠಿತ ಕೂಟಕ್ಕೂ ಮುನ್ನ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಇದು ಉತ್ತಮ ವೇದಿಕೆ. ವಿಶ್ವದ ಬಲಿಷ್ಠ ರಾಷ್ಟ್ರಗಳ ಘಟಾನುಘಟಿ ಅಥ್ಲೀಟ್‌ಗಳು ಇಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಇಲ್ಲಿ ಉತ್ಕೃಷ್ಟ ಸಾಮರ್ಥ್ಯ ನೀಡುವತ್ತ ಗಮನ ಹರಿಸುತ್ತಾರೆ. ಆದರೆ ಹಿಂದಿನ ಕೆಲ ಆವೃತ್ತಿಗಳಲ್ಲಿ ಸ್ಪರ್ಧಿಗಳಿಂದ ನಿರೀಕ್ಷಿತ ಸಾಮರ್ಥ್ಯ ಕಂಡುಬಂದಿಲ್ಲ. ಹೀಗಾಗಿ ಈ ಬಾರಿ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌(ಐಎಎಎಫ್‌) ವಿಶ್ವ ದಾಖಲೆ ನಿರ್ಮಿಸುವ ಸ್ಪರ್ಧಿಗಳಿಗೆ ಒಂದು ಲಕ್ಷ ಡಾಲರ್‌ (₹65.90 ಲಕ್ಷ) ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಅಥ್ಲೀಟ್‌ಗಳಿಂದ ಗುಣಮಟ್ಟದ ಸಾಮರ್ಥ್ಯ ಮೂಡಿಬರಲಿ ಎಂಬುದು ಇದರ ಹಿಂದಿನ ಉದ್ದೇಶ. ಈ ಬಾರಿ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕ, ಜಪಾನ್‌, ಯೂರೋಪ್‌, ಕೆನ್ಯಾ, ರಷ್ಯಾ, ಜರ್ಮನಿ, ಜಮೈಕಾ, ಸೋವಿಯತ್‌ ಒಕ್ಕೂಟ, ಬ್ರಿಟನ್‌, ಪೋಲೆಂಡ್‌, ಭಾರತ, ಜೆಕ್‌ ಗಣರಾಜ್ಯ , ಚೀನಾ ಸೇರಿದಂತೆ ಪ್ರಮುಖವಾಗಿ 140 ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೂರ ಅಂತರದ ಓಟಗಳಲ್ಲಿ ಆಫ್ರಿಕಾ ಖಂಡದ ರಾಷ್ಟ್ರಗಳ ಸ್ಪರ್ಧಿಗಳು, ಸ್ಪ್ರಿಂಟ್‌ ವಿಭಾಗಗಳಲ್ಲಿ ಅಮೆರಿಕದ ಸ್ಪರ್ಧಿಗಳ ಪ್ರಾಬಲ್ಯ ಹಿಂದಿನಿಂದಲೂ ಇದ್ದಿದ್ದೆ. ಅದು ಈ ಬಾರಿಯೂ ಮುಂದುವರಿಯಬಹುದು. ಪುರುಷರ 100 ಮೀಟರ್ಸ್‌ ವಿಭಾಗದಲ್ಲಿ ಜಮೈಕಾದ ಉಸೇನ್‌ ಬೋಲ್ಟ್‌ ಮತ್ತು ಅಮೆರಿಕದ ಜಸ್ಟಿನ್‌ ಗ್ಯಾಟ್ಲಿನ್‌ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಮುಖ್ಯವಾಗಿ ಈ ವಿಭಾಗದಲ್ಲಿ ರೋಚಕ ಪೈಪೋಟಿ ಕಂಡುಬರುವ ನಿರೀಕ್ಷೆ ಇದೆ. ಅದೇ ರೀತಿ ಪೋಲ್‌ ವಾಲ್ಟ್‌, ಮಧ್ಯಮ ಅಂತರದ ಓಟ, ದೂರ ಅಂತರದ ಓಟದ ವಿಭಾಗಗಳಲ್ಲೂ ಸ್ಪರ್ಧೆ ಕಠಿಣವಾಗಿರಲಿದೆ. ಇಲ್ಲಿ ಭಾಗವಹಿಸು ತ್ತಿರುವ ಪ್ರಮುಖ ಅಥ್ಲೀಟ್‌ಗಳು ಈಗಾ ಗಲೇ ಡೈಮಂಡ್‌ ಲೀಗ್‌ ಸೇರಿದಂತೆ ಹಲವು ಲೀಗ್‌ಗಳಲ್ಲಿ ಆಡಿ ಸೂಕ್ತ ರೀತಿಯಲ್ಲಿ ಸಜ್ಜುಗೊಂಡಿ ದ್ದಾರೆ ಎಂಬುದು ನನ್ನ ಅಭಿಪ್ರಾಯ. ಇನ್ನು ಭಾರತದ ಸಾಧನೆಯ ವಿಷಯಕ್ಕೆ ಬಂದರೆ ಇಲ್ಲಿ ನಾವು ಒಂದು ಕಂಚು ಗೆಲ್ಲಲ್ಲಷ್ಟೇ ಶಕ್ತವಾಗಿದ್ದೇವೆ. 2003 ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕೇರಳದ ಅಂಜು ಬಾಬ್ಬಿ ಜಾರ್ಜ್‌ ಅವರಿಂದ ಈ ಸಾಧನೆ ಮೂಡಿಬಂದಿತ್ತು ಎಂಬುದು ಹೆಮ್ಮೆಯ ಸಂಗತಿ. ಅಂಜು ಆ ಚಾಂಪಿಯನ್‌ಷಿಪ್‌ನ ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ 6.70 ಮೀಟರ್ಸ್‌ ದೂರ ಜಿಗಿದಿದ್ದರು. ಆ ಬಳಿಕ ನಮಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗಗನಕುಸುಮ. ಈ ಬಾರಿ 17 ಸದಸ್ಯರ ತಂಡ ಚೀನಾ ಪ್ರವಾಸ ಕೈಗೊಂಡಿದೆ. ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ವಿಕಾಸ್‌ ಗೌಡ, ಶಾಟ್‌ಪಟ್‌ನಲ್ಲಿ ಇಂದರ್‌ಜಿತ್‌ ಸಿಂಗ್‌ ಭರವಸೆ ಮೂಡಿಸಿದ್ದಾರೆ. ಕರ್ನಾಟಕದ ಎಂ.ಆರ್‌.ಪೂವಮ್ಮ ಅವರನ್ನು ಹೊಂದಿರುವ ಮಹಿಳೆಯರ 4X400 ಮೀಟರ್ಸ್‌ ರಿಲೆ ತಂಡವೂ ವಿಶ್ವಾಸ ಹೆಚ್ಚಿಸಿದೆ. ಪುರುಷರ ಹಾಗೂ ಮಹಿಳಾ ವಿಭಾಗದ 20 ಮೀಟರ್ಸ್‌ ನಡಿಗೆ ಸ್ಪರ್ಧೆಯಲ್ಲೂ ಹೆಚ್ಚಿನ ಸ್ಪರ್ಧಿಗಳಿದ್ದಾರೆ. ಹಾಗಂತ ನಾವು ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ ಇವರೆಲ್ಲಾ ತಮ್ಮ ಹಿಂದಿನ ದಾಖಲೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂಬ ಭರವಸೆಯಂತೂ ಖಂಡಿತಾ ಇದೆ. ಒಂದು ವೇಳೆ ಯಾರಾದರೂ ಪದಕ ಗೆದ್ದರೆಂದಿಟ್ಟುಕೊಳ್ಳಿ ಅದು ಪವಾಡವಲ್ಲದೇ ಮತ್ತೇನು ಅಲ್ಲ. ಅಷ್ಟಕ್ಕೂ ಅಥ್ಲೀಟ್‌ಗಳಿಂದ ನಾವು ಪದಕ ನಿರೀಕ್ಷಿಸುವ ಮುನ್ನ ಅವರಿಗೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಮೆರಿಕ, ಚೀನಾ, ದಕ್ಷಿಣ ಕೊರಿಯಾ, ಜರ್ಮನಿ, ರಷ್ಯಾ ದೇಶಗಳ ಸ್ಪರ್ಧಿಗಳಿಗಳಿಗೆ ನಮ್ಮ ಅಥ್ಲೀಟ್‌ಗಳು ಯಾವ ವಿಭಾಗದಲ್ಲೂ ಸಾಟಿಯಾಗಲಾರರು. ಈ ಹಿಂದೆ ಇದ್ದ ಸೌಕರ್ಯಗಳಲ್ಲಿಯೇ ಕಠಿಣ ಅಭ್ಯಾಸ ನಡೆಸಿ ನಮ್ಮ ಅಥ್ಲೀಟ್‌ಗಳು ಈ ರಾಷ್ಟ್ರಗಳ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಇತರ ರಾಷ್ಟ್ರಗಳಿಗೆ ಹೋಲಿ ಸಿದರೆ ನಾವು ಅಥ್ಲೀಟ್‌ಗಳಿಗೆ ಕೊಡುತ್ತಿರುವ ಮೂಲಭೂತ ಸೌಕರ್ಯಗಳು ನಗಣ್ಯ. ಅಮೆರಿಕ, ರಷ್ಯಾ, ಜರ್ಮನಿಯ ವಿಷಯ ಬಿಟ್ಟುಬಿಡೋಣ. ನಮ್ಮ ನೆರೆಯ ರಾಷ್ಟ್ರಗಳಾದ ಚೀನಾ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಜಪಾನ್‌ಗಳ ಜೊತೆಗೆ ನಮ್ಮನ್ನು ಹೋಲಿಸಿಕೊಳ್ಳುವುದಾದರೆ ನಾವು ಎಷ್ಟು ಹಿಂದುಳಿದಿದ್ದೇವೆ ಎಂಬುದರ ಅರಿವಾಗುತ್ತದೆ. ಅಲ್ಲಿ ಒಬ್ಬ ಪರಿಪೂರ್ಣ ಅಥ್ಲೀಟ್‌ ಆಗಿ ರೂಪುಗೊಳ್ಳಲು ಏನೆಲ್ಲಾ ಮೂಲ ಭೂತ ಸೌಕರ್ಯಗಳ ಅಗತ್ಯವಿದೆಯೊ ಅದನ್ನೆಲ್ಲಾ ಸಮಯಕ್ಕೆ ಸರಿಯಾಗಿ ಒದಗಿಸಲಾಗುತ್ತದೆ. ಆದರೆ ನಮ್ಮ ದೇಶದ ಪರಿಸ್ಥಿತಿಯೇ ಬೇರೆ. ಇಲ್ಲಿ ಒಂದು ರಾಜ್ಯದಲ್ಲಿ ಇದ್ದ ಸೌಕರ್ಯ ಮತ್ತೊಂದು ರಾಜ್ಯದಲ್ಲಿ ಇಲ್ಲ. ಪ್ರತಿ ವಿಷಯದಲ್ಲೂ ಅಸಮಾನತೆ ದಟ್ಟವಾಗಿ ನೆಲೆಯೂರಿದೆ. ನಾವು ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟ ಬಂದಾಗ ಸೌಕರ್ಯಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅದನ್ನು ಸಮರ್ಪಕವಾಗಿ ಒದಗಿಸುವಲ್ಲಿ ಎಡವುತ್ತಿದ್ದೇವೆ. ಒಬ್ಬ ಅಥ್ಲೀಟ್‌ನ ಸಾಮರ್ಥ್ಯ ವೃದ್ಧಿಗೆ ಏನೆಲ್ಲಾ ಸೌಕರ್ಯ ಬೇಕು ಎಂಬುದರ ಅರಿವು ನಮಗೆ ಇದೆ. ಆದರೆ ಅದನ್ನು ಕೊಡುತ್ತಿಲ್ಲ ಅಷ್ಟೇ. ನಮ್ಮಲ್ಲೊಂದು ಕೆಟ್ಟ ಪದ್ಧತಿ ಬೇರೂರಿದೆ. ಇಲ್ಲಿ ಪ್ರತಿ ವಿಷಯದಲ್ಲೂ ಆಡಳಿತಗಾರರು ನೇರವಾಗಿ ಮೂಗು ತೂರಿಸುತ್ತಾರೆ. ಈಗ ಹಾಕಿ ತಂಡದ ಕೋಚ್‌ ವಿಚಾರದಲ್ಲಿ ಆದ ಬೆಳವಣಿಗೆಗಳನ್ನೇ ತೆಗೆದುಕೊಳ್ಳಿ. ಆದರೆ ಬೇರೆ ರಾಷ್ಟ್ರಗಳಲ್ಲಿ ಇಂತಹ ಸಂದಿಗ್ಧತೆಗಳು ಉದ್ಭವಿಸುವುದು ವಿರಳ. ಅಲ್ಲೆಲ್ಲಾ ಪೂರ್ವ ಯೋಜಿತವಾಗಿ ತರಬೇತಿಗಳನ್ನು ನೀಡಲಾಗುತ್ತದೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಅಥ್ಲೀಟ್‌ಗಳಿಗೆ ಸಹಾಯ ಹಸ್ತ ನೀಡುತ್ತಿದೆ. ಆದರೆ ಫೆಡರೇಷನ್‌ಗಳು ಇದನ್ನು ಕಾರ್ಯಗತ ಮಾಡಲು ನಿರ್ಲಕ್ಷ ತೋರುತ್ತಿವೆ. ಆರ್ಚರಿ, ಶೂಟಿಂಗ್‌ ಸೇರಿದಂತೆ ಕೆಲ ಕ್ರೀಡೆಗಳು ಈಗ ಭಾರತದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿವೆ. ಈ ಕ್ರೀಡೆಗಳಲ್ಲಿ ಗುರುತಿಸಿಕೊಂಡಿರುವ ಹಲವು ಸ್ಪರ್ಧಿಗಳು ಈಗಾಗಲೇ ಒಲಿಂಪಿಕ್ಸ್‌ಗೂ ಅರ್ಹತೆ ಹೊಂದಿದ್ದಾರೆ. ಈ ಕ್ರೀಡೆಗಳಲ್ಲಿ ನಾವು ನಿರ್ದಿಷ್ಟವಾಗಿ ಇಂತಹವರು ಚಿನ್ನ, ಬೆಳ್ಳಿ ಕಂಚು ಹೀಗೆ ಯಾವುದಾದರೂ ಪದಕ ಗೆಲ್ಲಬಹುದು ಎಂದು ಮೊದಲೇ ನಿರ್ಧರಿಸಬಹುದು. ಆದರೆ ಅಥ್ಲೆಟಿಕ್ಸ್‌ ವಿಷಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹಾಗೆ ಭರವಸೆ ಇಟ್ಟುಕೊಳ್ಳುವಂತೆ ನಮ್ಮ ಅಥ್ಲೀಟ್‌ಗಳು ಬೆಳೆಯಬೇಕು. ಹಾಗಾಗದ ಹೊರತು ಪದಕ ಮರೀಚಿಕೆಯೇ ಸರಿ. (ಲೇಖಕರು ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್‌ ಮತ್ತು ಧ್ಯಾನ್‌ಚಂದ್‌ ಪ್ರಶಸ್ತಿ ಪುರಸ್ಕೃತರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.