ಎತ್ತರದ ಗುರಿಯತ್ತ ದಾಪುಗಾಲು ಲಲಿತಾ ಬಾಬರ್‌ ಬೀಜಿಂಗ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಲಲಿತಾ ಬಾಬರ್‌ ಅವರು ಎಂಟನೇಯವರಾಗಿ ಗುರಿಮುಟ್ಟಿ ಭಾರತದ ಅಥ್ಲೆಟಿಕ್‌ನಲ್ಲಿ ಎತ್ತರಕ್ಕೇರಿದ್ದಾರೆ. ಈ ಮೂಲಕ ಅಂತರ ರಾಷ್ಟ್ರೀಯ ಅಥ್ಲೆಟಿಕ್‌ನಲ್ಲಿ ಭಾರತದ ಆಶಾಕಿರಣವಾಗಿ ಗೋಚರಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ವಿಭಾಗದ ಫೈನಲ್‌ನಲ್ಲಿ ಸ್ವರ್ಧಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಲಲಿತಾ ಅವರದಾಯಿತು. ಅವರು ಒಂದು ವರ್ಷದ ಹಿಂದಷ್ಟೇ ಸ್ಟೀಪಲ್‌ಚೇಸ್‌ನಲ್ಲಿ ಅಭ್ಯಾಸ ಪ್ರಾರಂಭಿಸಿ ಅಲ್ಪಾವಧಿಯಲ್ಲಿಯೇ ಈ ಸಾಧನೆ ಮಾಡಿದ್ದು ವಿಶೇಷ. ಇದು ಭಾರತದ ಅಥ್ಲೆಟಿಕ್‌ ಕ್ಷೇತ್ರದ ಪಾಲಿಗೆ ದೊಡ್ಡ ಸಾಧನೆ. ಪಿ.ಟಿ. ಉಷಾ, ಕೆ.ಎಂ. ಬೀನಾಮೋಳ್‌, ಟಿಂಟು ಲೂಕ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಟ್ರ್ಯಾಕ್‌ನಲ್ಲಿ ಸೆಮಿಫೈನಲ್‌ ತಲುಪಿದ್ದೇ ಇದುವರೆಗಿನ ಸಾಧನೆಯಾಗಿತ್ತು. ಮಾತ್ರವಲ್ಲ, ಮಹಿಳಾ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿಜಾರ್ಜ್, ಶಾಟ್‌ಪಟ್‌ನಲ್ಲಿ ಇಂದರ್‌ಜಿತ್‌ ಸಿಂಗ್‌, ಡಿಸ್ಕಸ್‌ ಎಸೆತದಲ್ಲಿ ವಿಕಾಸ್‌ ಗೌಡ ಮಾತ್ರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಫೈನಲ್‌ ತಲುಪಿದ ಹೆಗ್ಗಳಿಕೆ ಹೊಂದಿದ್ದಾರೆ. ಒಂದು ಕೂಟದಿಂದ ಇನ್ನೊಂದು ಕೂಟಕ್ಕೆ ಸಾಮರ್ಥ್ಯವನ್ನು ಸುಧಾರಿಸಿ ಕೊಳ್ಳುತ್ತಿರುವ ಲಲಿತಾ, ಜಾಗತಿಕ ಮಟ್ಟದ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ಸೂಚನೆ ನೀಡಿದ್ದಾರೆ. 26 ವರ್ಷ ವಯಸ್ಸಿನ ಅಥ್ಲೀಟ್‌ 12 ತಿಂಗಳ ಅವಧಿಯಲ್ಲಿಯೇ ಮೂರು ಬಾರಿ ರಾಷ್ಟ್ರೀಯ ದಾಖಲೆಗಳನ್ನು ಉತ್ತಮಪಡಿಸಿಕೊಂಡಿದ್ದಾರೆ. ಕಠಿಣ ಹಾದಿಯಲ್ಲಿ... ಲಲಿತಾ ಶಿವಾಜಿ ಬಾಬರ್‌ ಜನಿಸಿದ್ದು ಮಹಾರಾಷ್ಟ್ರದ ಸತಾರಾದ ಬರಗಾಲ ಪೀಡಿತ ಗ್ರಾಮವೊಂದರಲ್ಲಿ. ಕೃಷಿಯನ್ನೇ ನೆಚ್ಚಿಕೊಂಡಿದ್ದ ಪೋಷಕರ ಬದುಕು ಬರದಿಂದ ತತ್ತರಿಸಿತ್ತು. ಲಲಿತಾ ಜೀವನವೂ ಅಷ್ಟೇ ಸಂಕಷ್ಟಗಳಿಂದ ಕೂಡಿತ್ತು. 5ಅಡಿ 6ಇಂಚು ಎತ್ತರದ ನಿಲುವಿನ ಲಲಿತಾ ಬಾಲ್ಯದಿಂದಲೇ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ದೈಹಿಕವಾಗಿ ಅಥ್ಲೆಟಿಕ್‌ಗೆ ಇರಬೇಕಾದ ಸಾಮರ್ಥ್ಯ ಸಹಜವಾಗಿಯೇ ಮೈಗೂಡಿತ್ತು. ಲಲಿತಾ ಬಾಲ್ಯದಿಂದಲೇ ಓಟದ ಕುರಿತು ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ಹಳ್ಳಿಯಿಂದ 4 ಕಿ.ಮೀ ದೂರದಲ್ಲಿದ್ದ ಶಾಲೆಗೆ ಓಡುತ್ತಲೇ ಹೋಗುತ್ತಿದ್ದ ಲಲಿತಾರ ಓಟದ ಬದುಕು ಅಲ್ಲಿಂದಲೇ ಶುರುವಾಗಿದೆ. ಅವರ ಕ್ರೀಡಾ ವೃತ್ತಿ ಬದುಕು ಪ್ರಾರಂಭವಾಗಿದ್ದು ಟ್ರ್ಯಾಕ್‌ನಲ್ಲಿ. ದೂರ ಅಂತರದ ಓಟಗಾರ್ತಿಯಾಗಿ ಲಲಿತಾ ಗುರುತಿಸಿಕೊಂಡರು. ಸಂಕೋಚ ಸ್ವಭಾವದ ಅವರಲ್ಲಿ ಆರಂಭದಲ್ಲಿ ದೂರದ ಓಟಗಳನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿ ಪೈಪೋಟಿ ನೀಡುವ ಸಾಮರ್ಥ್ಯ ತನ್ನಲ್ಲಿದೆ ಎಂಬುದನ್ನೂ ಅರಿತವರಲ್ಲ. 2014ರ ಜನವರಿಯಲ್ಲಿ ಮುಂಬೈ ಮ್ಯಾರಥಾನ್‌ನಲ್ಲಿ ಗೆಲುವಿನ ಸಾಧನೆ ಮಾಡಿದ್ದರು. ಆಗಲೇ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ನಂತಹ ಬಹುವಿಭಾಗದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಬೇಕೆಂಬ ದೃಢಸಂಕಲ್ಪ ಅವರಲ್ಲಿ ಮೂಡಿದ್ದು. ಸತತ ಪರಿಶ್ರಮ, ಅಭ್ಯಾಸ ಮ್ಯಾರಥಾನ್‌ ಗೆಲುವು ಮುಂತಾದುವುಗಳೆಲ್ಲಾ ಸ್ಟೀಪಲ್‌ಚೇಸ್‌ನಲ್ಲಿ ಪಳಗಬೇಕೆಂಬ ಬಯಕೆಗೆ ಸ್ಫೂರ್ತಿಯಾಯಿತು. ಅದೇ ತಿಂಗಳು 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ತೊಡಗಿಕೊಂಡರು. ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಲಲಿತಾ, ಸುಧಾ ಸಿಂಗ್‌ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನೂ ಅಳಿಸಿದರು. 2015ರ ವುಹಾನ್‌ ಏಷ್ಯನ್‌ ಅಥ್ಲೆಟಿಕ್ಸ್‌ ಚಾಪಿಯನ್‌ಷಿಪ್‌ನಲ್ಲಿ ತಮ್ಮ ಹಳೆಯ ದಾಖಲೆಯನ್ನು ಸುಧಾರಿಸುವ ಜೊತೆಗೆ ಚಿನ್ನದ ಪದಕವನ್ನೂ ಜಯಿಸಿದರು. ಈ ಗೆಲುವು ರಿಯೊ ಒಲಿಂಪಿಕ್ಸ್‌ನ ಬಾಗಿಲು ತೆರೆಯುವಂತೆ ಮಾಡಿತು. ಬೀಜಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೂ ತಮ್ಮ ಹಳೆಯ ದಾಖಲೆಯನ್ನು ತಾವೇ ಮುರಿದರು. ಅಮೆರಿಕದ ಸ್ಟೀಫನಿ ಗಾರ್ಸಿಯಾ, ಕೊಲ್ಲೀನ್ ಕ್ಯುಗ್ಲೇ, ಮೊರಾಕ್ಕೊದ ಸಲೀಮಾ ಎಲೌಲಿ ಯಾಲಮಿ, ಕೆನ್ಯಾದ ರೊಸೆಫ್ಲೈನ್‌ ಚೆಪಂಗೆಟಿಚ್‌ ಮುಂತಾದ ಪರಿಣತರನ್ನು ಹಿಂದಿಕ್ಕಿದ ಲಲಿತಾ ಸಾಧನೆ ಕಡಿಮೆಯೇನಲ್ಲ. ‘ಲಲಿತಾ ಅವರಿಂದ ಮೂಡಿಬಂದ ಸಾಮರ್ಥ್ಯ ದೂರ ಅಂತರದ ಓಟಗಾರರು ಮತ್ತು ಇತರೆ ಅಥ್ಲೀಟ್‌ಗಳ ಮೇಲೆ ತನ್ನದೇ ಪ್ರಭಾವ ಬೀರಲಿದೆ. ಆಕೆ ಬದ್ಧತೆ ಮತ್ತು ಶಿಸ್ತಿನ ಅಥ್ಲೀಟ್‌. ಮತ್ತಷ್ಟು ಒಳ್ಳೆಯ ಪ್ರದರ್ಶನ ನೀಡು ತ್ತಾರೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ಅಥ್ಲೆ ಟಿಕ್‌ ತರಬೇತುದಾರ ಪಿ. ರಾಧಾಕೃಷ್ಣನ್‌ ನಾಯರ್‌. ಬೀಜಿಂಗ್‌ನಲ್ಲಿನ ತಮ್ಮ ಸಾಧನೆಯ ಕುರಿತು ತೃಪ್ತಿ ವ್ಯಕ್ತಪಡಿಸಿರುವ ಲಲಿತಾ, ರಿಯೊ ಒಲಿಂಪಿಕ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಆಶಯ ಹೊಂದಿದ್ದಾರೆ. ಲಲಿತಾ ಅವ ರಿಗೆ ಇದು ಮೊದಲ ದೊಡ್ಡ ಸ್ಪರ್ಧೆ. ಈ ಅವ ಕಾಶದಲ್ಲಿಯೇ ಗಮನಾರ್ಹ ಸಾಧನೆ ಮಾಡಿ ರುವ ಅವರು ಭಾರತದ ಅಥ್ಲೆಟಿಕ್‌ ಕ್ಷೇತ್ರದಲ್ಲಿನ ದೇಶದ ಭರವಸೆಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.