ಯುವಪಡೆಯ ಫೀಲ್ಡಿಂಗ್ ಪ್ರೀತಿ ಆಸ್ಟ್ರೇಲಿಯಾದ ಪತ್ರಕರ್ತ ಜರ್ರೋದ್ ಕಿಂಬರ್ ಏಳು ತಿಂಗಳ ಹಿಂದೆ ಒಂದು ಸುದೀರ್ಘ ಲೇಖನ ಬರೆದಿದ್ದರು. ಅದರಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಯುವಕರೆಲ್ಲಾ ‘ಟ್ವೆಂಟಿ-20’ ಗುಂಗಿನಲ್ಲೇ ಇದ್ದು, ಟೆಸ್ಟ್ ಕ್ರಿಕೆಟ್‌ನ ಕೌಶಲಗಳನ್ನೆಲ್ಲಾ ಮಣ್ಣುಪಾಲು ಮಾಡಿದ್ದಾರೆ ಎಂಬ ಧಾಟಿಯಲ್ಲಿ ವಾದ ಮಂಡಿಸಿದ್ದರು. ಅದಕ್ಕೆ ಪುಷ್ಟಿ ಕೊಡಲು ಅಭ್ಯಾಸ ಪಂದ್ಯಗಳನ್ನು ಗಂಭೀರವಾಗಿ ಪರಿಗಣಿಸದ ಯುವ ಆಟಗಾರರ ಮನಸ್ಥಿತಿ, ಆಸ್ಟ್ರೇಲಿಯಾ ಎದುರು ಕೈಚೆಲ್ಲಿದ ಕ್ಯಾಚ್‌ಗಳು, ಸ್ಲಿಪ್ ಕ್ಷೇತ್ರರಕ್ಷಣೆಯಲ್ಲಿ ಮಾಡಿದ ಎಡವಟ್ಟುಗಳು ಎಲ್ಲವನ್ನೂ ಪಟ್ಟಿ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಬದ್ಧತೆಯನ್ನು ಹೊಗಳಿದ್ದವರೂ ಅದೇ ಜರ್ರೋದ್. ಆಸ್ಟ್ರೇಲಿಯಾ ವಿರುದ್ಧ ಭಾರತದ ಯುವ ಆಟಗಾರರು ಆಡಿದ ರೀತಿಯನ್ನು ಮಾತ್ರ ಟೀಕಿಸದ ಅವರು, ‘ಟ್ವೆಂಟಿ-20’ ತರುವ ಹಣಕಾಸು, ಅದರಿಂದ ಆಟಗಾರರ ಮನಸ್ಸಿನ ಮೇಲೆ ಆಗಿರುವ ವ್ಯತಿರಿಕ್ತ ಪರಿಣಾಮಗಳನ್ನೆಲ್ಲಾ ವ್ಯಂಗ್ಯದ ಧಾಟಿಯಲ್ಲಿ ಬರೆದಿದ್ದರು. ದ್ರಾವಿಡ್ ಹದಿನೈದು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಘಟಾನುಘಟಿ ಬೌಲರ್‌ಗಳಾದ ಗ್ಲೆನ್ ಮೆಕ್‌ಗ್ರಾ, ಶೇನ್ ವಾರ್ನ್ ಬೆವರಿಳಿಸಿದ ಟೆಸ್ಟ್ ಪಂದ್ಯವನ್ನೂ ಅವರೊಮ್ಮೆ ಮೆಲುಕು ಹಾಕಿದ್ದರು. ಕ್ರಿಕೆಟ್ ವಿಮರ್ಶೆ ಬರೆಯುವ ಭರದಲ್ಲಿ ನಿರ್ದಿಷ್ಟ ಸರಣಿಯ ಫಲಿತಾಂಶ ಹಾಗೂ ಆಟದ ವೈಖರಿಯನ್ನು ಇಡೀ ತಂಡದ ಹಣೆಬರಹ ಎನ್ನುವ ಶೈಲಿಯಲ್ಲಿ ಬರೆಯುವುದು ಕೂಡ ಸರಿಯಲ್ಲವೇನೋ? ಶ್ರೀಲಂಕಾದಲ್ಲಿ ಅದೇ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ 2–1ರಿಂದ ಗೆದ್ದು ಐತಿಹಾಸಿಕ ಗೆಲುವು ಪಡೆದು ಬಂದಿರುವ ಭಾರತದ ಆಟವನ್ನು ನೋಡಿದರೆ ಜರ್ರೋದ್ ಮಂಡಿಸಿದ ಎಷ್ಟೋ ವಾದಗಳು ಹುಸಿಯಾಗಿರುವುದು ಸ್ಪಷ್ಟವಾಗುತ್ತದೆ. ಏಳು ತಿಂಗಳಲ್ಲಿ ಭಾರತ ತನ್ನನ್ನು ತಾನು ಇಷ್ಟರಮಟ್ಟಿಗೆ ತಿದ್ದಿಕೊಂಡಿತೇ ಎಂದು ಖುದ್ದು ಜರ್ರೋದ್ ಅವಾಕ್ಕಾಗ ಬೇಕೇನೋ? ಕೆಲವು ಉದಾಹರಣೆಗಳನ್ನು ನೋಡೋಣ. ಒಂದು: ಆರ್. ಅಶ್ವಿನ್ ಚುರುಕಾದ ಆಫ್‌ಸ್ಪಿನ್ನರ್. ಕೊನೆಯ ಟೆಸ್ಟ್ ಇನಿಂಗ್ಸ್ ಆಡುತ್ತಿದ್ದ ಕುಮಾರ ಸಂಗಕ್ಕಾರ ಹಿಡಿದಿದ್ದ ಬ್ಯಾಟ್ ಅಂಚನ್ನು ಚೆಂಡು ಸವರಿದ್ದನ್ನು ಸ್ಪಿಪ್‌ನಲ್ಲಿ ಇದ್ದ ಅಜಿಂಕ್ಯ ರಹಾನೆ ಚುರುಕು ಕಣ್ಣುಗಳು ನೋಡಿದವು. ಎಡಕ್ಕೆ ಚಿಮ್ಮಿದ ಅವರ ಒಂದೇ ಕೈಗೆ ಕ್ಯಾಚ್ ಸಿಕ್ಕಿತು. ಎರಡು: ಲಾಹಿರು ತಿರುಮಾನೆ ಕೂಡ ಒಳ್ಳೆಯ ಬ್ಯಾಟ್ಸ್‌ಮನ್. ಅವರ ಕ್ಯಾಚನ್ನು ಸ್ಲಿಪ್‌ನಲ್ಲಿ ಇದ್ದ ಅದೇ ರಹಾನೆ ಬಲಕ್ಕೆ ಬಾಗಿ ಎರಡೂ ಕೈಗಳಿಂದ ಹಿಡಿದದ್ದು ಇನ್ನೊಂದು ಮುಖ್ಯವಾದ ಕ್ಷಣ. ಮೂರು: ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಏಂಜೆಲೊ ಮ್ಯಾಥ್ಯೂಸ್ ಬ್ಯಾಟ್‌ನ ಅಂಚಿಗೆ ತಾಗಿಬಂದ ಚೆಂಡನ್ನು ಅಂದಾಜು ಮಾಡಿ ಹಿಡಿದ ರೀತಿಯೂ ಬೆರಗು ಮೂಡಿಸುವಂಥದ್ದು. ನಾಲ್ಕು: ಮೂರನೇ ಟೆಸ್ಟ್‌ನ ಕೊನೆಯ ಇನಿಂಗ್ಸ್. ಮತ್ತೆ ಅಶ್ವಿನ್ ಸ್ಪಿನ್‌ನ ಮೋಡಿ. ಸಿಲ್ಲಿ ಪಾಯಿಂಟ್‌ನಲ್ಲಿ ಹೆಲ್ಮೆಟ್ ಹಾಕಿ ನಿಂತಿದ್ದು ರಾಹುಲ್. ತಿರಿಮಾನೆ ಅಶ್ವಿನ್ ಸ್ಪಿನ್‌ಗೆ ವಿರುದ್ಧ ದಿಕ್ಕಿನಲ್ಲಿ ಬ್ಯಾಟ್ ಬೀಸಿದರು. ಅದಕ್ಕೆ ತಾಗಿ, ಎಡಬದಿಗೆ ಹಾರಿ ವೇಗವಾಗಿ ಹೋಗುತ್ತಿದ್ದ ಚೆಂಡನ್ನು ಒಂದು ಕೈಯಲ್ಲಿ ತಡೆದು, ಎರಡನೇ ಯತ್ನದಲ್ಲಿ ರಾಹುಲ್ ಹಿಡಿದರು. ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕ ನಂತರ ಅಶ್ವಿನ್, ತಮಗೆ ಇಪ್ಪತ್ತು ವಿಕೆಟ್‌ಗಳು ಸಿಕ್ಕಿವೆಯೆಂದರೆ ಫೀಲ್ಡಿಂಗ್ ಸೊಗಸಾಗಿತ್ತು ಎಂದೇ ಅರ್ಥ ಎಂಬ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದು ಸಹ ಆಟಗಾರರೆಲ್ಲಾ ಇಳಿಸಿದ ಬೆವರಿಗೆ ಸಾಕ್ಷಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಲೋಸ್-ಇನ್ ಫೀಲ್ಡಿಂಗ್ ಕುರಿತು ಅನೇಕ ವಿಮರ್ಶಾ ಬರಹಗಳು ಬಂದಿವೆ. ಕೆಲವೇ ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಕ್ಲೋಸ್-ಇನ್ ಫೀಲ್ಡಿಂಗ್ ಭೇದಿಸಿ ಬೆಂಗಳೂರಿನ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಲೀಲಾಜಾಲವಾಗಿ ಟೆಸ್ಟ್ ಇನಿಂಗ್ಸ್ ಆಡಿದ ವೈಖರಿಯ ಕುರಿತು ರಾಮಚಂದ್ರ ಗುಹಾ ಬರೆದಿದ್ದರು. ಸುದೀರ್ಘ ಕಾಲ ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡುವವರೇ ಹೆಚ್ಚಾಗಿ ಸ್ಲಿಪ್‌ನಲ್ಲಿ ನಿಲ್ಲುತ್ತಾರೆ. ಈ ಸಲ ಅಜಿಂಕ್ಯ ರಹಾನೆ ಸ್ಲಿಪ್ ಫೀಲ್ಡಿಂಗ್‌ನ ಚುರುಕುತನದ ಪ್ರಾತ್ಯಕ್ಷಿಕೆ ನೀಡುವಂತೆ ಆಡಿದ್ದು ಸುಳ್ಳಲ್ಲ. ಫೀಲ್ಡಿಂಗ್‌ನಲ್ಲಿ ಶ್ರೀಲಂಕಾದ ಕೆಲವು ಮರೆಯಲಾಗದ ಕ್ಷಣಗಳನ್ನು ಕೂಡ ನೆನಪಿಸಿಕೊಳ್ಳಬೇಕು. ರಂಗನಾ ಹೆರಾತ್ ಎಸೆತವು ಹರಭಜನ್‌ ಸಿಂಗ್ ಬ್ಯಾಟ್‌ನ ಒಳ ಅಂಚಿಗೆ ತಾಗಿ ಚಿಮ್ಮಿದಾಗ, ಶಾರ್ಟ್‌ಲೆಗ್‌ನಲ್ಲಿದ್ದ ಕುಶಾಲ್ ಸಿಲ್ವಾ ಚಂಗನೆ ಜಿಗಿದು ಹಿಡಿದ ಕ್ಷಣ ಅವುಗಳಲ್ಲಿ ಒಂದು. ಪಿ. ಸಾರಾ ಓವಲ್‌ನಲ್ಲಿ ಕೊಹ್ಲಿ ಥರ್ಡ್‌ಮನ್ ಬೌಂಡರಿಯತ್ತ ಚೆಂಡನ್ನು ತಳ್ಳಲು ಮೊದಲೇ ಅಣಿಯಾದದ್ದನ್ನು ಸ್ಲಿಪ್‌ನಲ್ಲಿ ಇದ್ದ ಮ್ಯಾಥ್ಯೂಸ್ ಗಮನಿಸಿದರು. ಜಾಣತನದಿಂದ ತುಸು ಬಲಬದಿಗೆ ಅವರು ನಿಂತದ್ದರ ಫಲವೇ ಯಶಸ್ವಿ ಕ್ಯಾಚ್. ಗಾಲ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 66 ರನ್‌ಗಳಿಗೆ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡಿತ್ತು. ಇಶಾಂತ್ ಶರ್ಮಾ ಎಸೆತವನ್ನು ಆಡಲು ಹೋದ ಚಾಂಡಿಮಲ್ ಬ್ಯಾಟ್‌ನ ಅಂಚಿಗೆ ಚೆಂಡು ತಗುಲಿ, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕಡೆಗೆ ನುಗ್ಗಿತು. ಸಹಾ ಆ ಕ್ಯಾಚ್ ಬಿಟ್ಟರು. ಆಮೇಲೆ ಚಾಂಡಿಮಾಲ್ 59 ರನ್ ಸೇರಿಸಿದರು. ಕೆ.ಎಲ್. ರಾಹುಲ್ ಮೊದಲ ಟೆಸ್ಟ್ ಶತಕ ದಾಖಲಿಸಿದ್ದೂ ಒಂದೂ ಜೀವದಾನದ ನಂತರವೇ. ಭಾರತದ ಯುವಕರ ಚುರುಕು ಪಾದಚಲನೆ ಹಾಗೂ ಟೆಸ್ಟ್ ಫೀಲ್ಡಿಂಗ್‌ನ ಗಾಂಭೀರ್ಯಕ್ಕೆ ಅನೇಕ ಉದಾಹರಣೆಗಳನ್ನು ನೀಡಿದ ಈ ಸರಣಿಯು ಶ್ರೀಲಂಕಾ ನಾಯಕ ಏಂಜೆಲೊ ಮ್ಯಾಥ್ಯೂಸ್ ಒಂಟಿತನಕ್ಕೂ ಕನ್ನಡಿ ಹಿಡಿಯಿತು. 55 ಟೆಸ್ಟ್ ಪಂದ್ಯಗಳ ಅನುಭವ ಬೆನ್ನಿಗಿಟ್ಟುಕೊಂಡು, ತಾಳ್ಮೆಯಿಂದ ನಿಲ್ಲಲು ಹೆಣಗಾಡುತ್ತಿರುವ ಯುವಪಡೆ ಕಟ್ಟಿಕೊಂಡು ಅವರು ಪಡಿಪಾಟಲು ಪಟ್ಟರು. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರಾಗಿ 68.80 ಸರಾಸರಿ ಇರುವ ಮ್ಯಾಥ್ಯೂಸ್ ಈ ಸರಣಿಯಲ್ಲೂ ಏಕಾಂಗಿಯಾಗಿ ಹೋರಾಡಿದರು ಎನ್ನಬೇಕು. ಹಲವು ದಾಖಲೆಗಳನ್ನು ನೀಡಿದ ಟೆಸ್ಟ್ ಸರಣಿಯ ಖುಷಿಯ ಬಹುಪಾಲು ಸಂದದ್ದು ಭಾರತದ ನಾಯಕ ವಿರಾಟ್ ಕೊಹ್ಲಿ ಅವರಿಗೆ. 1988-89ರ ನಂತರ ಭಾರತವು ಮೂರು ಟೆಸ್ಟ್‌ಗಳ ಇದುವರೆಗಿನ ಯಾವ ಸರಣಿಗಳಲ್ಲೂ 60 ವಿಕೆಟ್‌ಗಳನ್ನು ಪಡೆದಿರಲಿಲ್ಲ. ಆಗ ನ್ಯೂಜಿಲೆಂಡ್ ಎದುರಾಳಿಯಾಗಿತ್ತು. ಈಗ ಶ್ರೀಲಂಕಾ. ಅಂಥದೊಂದು ದಾಖಲೆ ಸಾಧ್ಯವಾಗಿದ್ದರೆ, ಫೀಲ್ಡಿಂಗ್‌ನ ಕಾಣ್ಕೆ ಇದೆ ಎಂದೇ ಅರ್ಥವಲ್ಲವೇ? ಈ ಸರಣಿಯನ್ನು ಆಸ್ಟ್ರೇಲಿಯಾ ಪತ್ರಕರ್ತ ಜರ್ರೋದ್ ಹೇಗೆ ವಿಶ್ಲೇಷಿಸುವರೋ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.