ಮುಂಬೈ ಮಕ್ಕಳಿಗೆ ಕನ್ನಡತಿ ಪಾಠ ಮೊಬೈಲ್‌ ಫೋನನ್ನು ಬಳಸದವರು ಯಾರಾದರೂ ಇದ್ದಾರೆಯೇ, ಬಿಲ್ಕುಲ್ ಇಲ್ಲ, ಇಂದಿನ ಜನಾಂಗ ದಿನದ 24 ಗಂಟೆಗಳಲ್ಲಿ ಬಹಳಷ್ಟು ಸಮಯವನ್ನು ಮೊಬೈಲಿನೊಂದಿಗೆ ಕಳೆಯುವುದಂತೂ ಸತ್ಯ. ಹಾಗಾದರೆ ಅಂತಹವರು ಒಂದು ದಿನದಲ್ಲಿ ಕನಿಷ್ಟ ಹದಿನೈದು ನಿಮಿಷಗಳನ್ನು ಒಂದು ಮಗುವಿನ ಕಲಿಕೆಗಾಗಿ ಮೀಸಲಿಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಇಂತಹ ಒಂದು ವಿಭಿನ್ನ ಕಾರ್ಯಕ್ರಮ ‘ಮೊಬೈಲ್ ಮೆಂಟರ್’. ಆಂಗ್ಲ ಭಾಷೆಯನ್ನು ಚೆನ್ನಾಗಿ ಮಾತನಾಡಬಲ್ಲ ಒಬ್ಬ ವ್ಯಕ್ತಿ ದಿನದಲ್ಲಿ ಹದಿನೈದು ನಿಮಿಷ ಮಗುವಿಗೆ ಮೊಬೈಲಿನ ಮೂಲಕ ಇಂಗ್ಲಿಷ್‌ ಕಲಿಸುವುದು. ಈ ಕಾರ್ಯಕ್ರಮದ ರೂವಾರಿ ಮುಂಬೈನಲ್ಲಿರುವ ಕನ್ನಡತಿ, ‘ಆಶಾ‘ ಸಂಸ್ಥೆಯ ಸಂಸ್ಥಾಪಕಿ ಮೀರಾ ರಮಣ್. ‘ಆವೋ ಸೀಖನಾ ಹೋಗಾ ಆಸಾನ್’ (ಬನ್ನಿ ಕಲಿಕೆ ಸುಲಭವಾಗಿದೆ) ಎನ್ನುವ ಘೋಷಣೆಯೊಂದಿಗೆ ಆಶಾದ ಉಗಮವಾಯಿತು. ‘ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ದೇಶಕ್ಕೆ ಮತ್ತು ಸಮಾಜದ ಸೇವೆ ಮಾಡಬೇಕೆನ್ನುವ ತುಡಿತವಿರುತ್ತದೆ ಆದರೆ ಮಾರ್ಗ ಗೊತ್ತಿರುವುದಿಲ್ಲ. ಜೊತೆಗೆ ತಮ್ಮದೇ ಆದ ಮಿತಿಗಳು, ಜವಾಬ್ದಾರಿಗಳಿರುತ್ತವೆ, ಹೀಗಾಗಿ ಮಾಡಬೇಕೆನ್ನುವ ಮನಸ್ಸಿದ್ದರೂ ಅದು ಹಾಗೆಯೇ ಉಳಿದು ಬಿಡುತ್ತದೆ. ಮಾಡುವ ಮನಸಿರುವವರು ಮತ್ತು ಕಲಿಯುವ ಆಸೆಯಿದ್ದೂ ತೀರಿಸಿಕೊಳ್ಳಲಾರದ ಮಕ್ಕಳ ನಡುವೆ ಅನುಬಂಧ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಬಡಾವಣೆಯ ಕಲಿಯಲು ಅನುಕೂಲವಿಲ್ಲದಿರುವ ಮಕ್ಕಳಿಗೆ ಅವರ ಶಾಲೆಯಲ್ಲಿ ಸಿಗದ ಶಿಕ್ಷಣವನ್ನು ಅವರಿಗೆ ಮುಟ್ಟಿಸುವ ಉದ್ದೇಶ ‘ಆಶಾ’ ಸಂಸ್ಥೆಯದ್ದು ಎನ್ನುತ್ತಾರೆ ಮೀರಾ. ಮುಂಬೈನಂತಹ ಮಹಾನಗರದಲ್ಲಿ ಪ್ರತಿಯೊಂದು ಪ್ರತಿಷ್ಟಿತ ಬಡಾವಣೆಯ ಜೊತೆಗೆ ಅಥವಾ ಪಕ್ಕದಲ್ಲೇ ಒಂದು ಕೊಳೆಗೇರಿ ಇರುತ್ತದೆ. ಈ ಎರಡು ವಿಭಿನ್ನ ವರ್ಗಗಳು ಪರಸ್ಪರ ಅವಲಂಬಿತರು, ಆದರೂ ಒಬ್ಬರಿಗೊಬ್ಬರು ದೂರ ದೂರವೇ, ಇವರ ಮಧ್ಯೆ ಒಂದು ರೀತಿಯ ಸೌಹಾರ್ದಯುತ ಸೇತುವೆಯಂತಿದೆ ‘ಆಶಾ’ ಎನ್ನುತ್ತಾರೆ ಅವರು. ವಾಟ್ಸ್‌ಆ್ಯಪ್‌ನಲ್ಲಿ ಈ ಬಗ್ಗೆ ಸಂದೇಶ ಕಳಿಸಿದೊಡನೆಯೇ ಸಾಕಷ್ಟು ಜನರು ಮೊಬೈಲ್ ಮೆಂಟರ್ ಆಗಲು ಮುಂದೆ ಬಂದಿದ್ದಾರೆ, ಈ ಪೈಕಿ ಮುಂಬೈನ ಹೊರಗಿನವರೂ, ಕರ್ನಾಟಕದವರೂ ಸಹಾ ಇದ್ದಾರೆ ಎನ್ನುತ್ತಾರೆ. ‘ಬಡಾವಣೆಯ ಪಾರ್ಕಿನಲ್ಲೇ ಈ ಕಾರ್ಯಕ್ರಮ ನಡೆಸುವುದರಿಂದ ಯಾವುದೇ ಬಂಡವಾಳದ ಅಗತ್ಯವಿಲ್ಲ, ಮತ್ತೆ ಕೆಲಸ ಮಾಡುವವರೆಲ್ಲರೂ ಸ್ವಯಂ ಇಚ್ಛೆಯಿಂದ ಯಾವುದೇ ಆಮಿಷೆ ಇಲ್ಲದೆ ಮಾಡುವರು, ಹೀಗಾಗಿ ಇಲ್ಲಿ ಹಣದ ಪ್ರಶ್ನೆ ಬರುವುದಿಲ್ಲ. ವಾರಕ್ಕೆರಡು ದಿನ ಆ ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು ಕಲಿಸುತ್ತೇವೆ. ಮಿಕ್ಕ ದಿನಗಳಲ್ಲಿ ಭಾಷಣ ಮಾಡುವುದು, ವಿನೋದದೊಂದಿಗೆ ವಿಜ್ಞಾನದ ಕಲಿಯುವಿಕೆ, ನಾಟಕ, ನೃತ್ಯ, ಹಾಡುವಿಕೆ, ಯೋಗ, ಧ್ಯಾನ, ನಮ್ಮ ಪುರಾಣದ ನೀತಿ ಕಥೆಗಳು ಎಲ್ಲವನ್ನೂ ತಿಳಿಸಿಕೊಡಲಾಗುತ್ತದೆ. ಶನಿವಾರ ಅವರ ಮುಂದಿನ ಓದಿಗೆ ಸಹಾಯಕವಾಗುವಂತಹ ಕೆರಿಯರ್ ಕೌನ್ಸಿಲಿಂಗ್, ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗೆ, ಈ ರೀತಿ ಅನೇಕ ವಿಷಯಗಳ ಮೇಲೆ ಬೆಳಕನ್ನು ಚೆಲ್ಲಲಾಗುತ್ತದೆ. ಇಲ್ಲಿ ಆ ಮಕ್ಕಳಿಗೆ ಪಾಠ ಮಾಡಲು ಬರುವವರೆಲ್ಲಾ ನಿಜಕ್ಕೂ ಅನೇಕ ವಿಷಯಗಳಲ್ಲಿ ಪರಿಣತರು, ಎಲ್ಲಕ್ಕಿಂತ ಹೆಚ್ಚಾಗಿ ಆ ಮಕ್ಕಳಿಗೆ ಕಲಿಸುವ ಕಾಳಜಿಯನ್ನು ಹೊಂದಿರುವವರು, ಆದ್ದರಿಂದ ಈ ಪುಟಾಣಿಗಳಿಗೆ ಯಾವುದೇ ಖಾಸಗಿ ಶಾಲೆಯಲ್ಲಿ ದೊರಕುವುದಕ್ಕಿಂತ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ’ ಎನ್ನುತ್ತಾರೆ ಮೀರಾ. ಬೆಂಗಳೂರಿನ ವಿದ್ಯಾವರ್ಧಕ ಶಾಲೆ, ಎಂ.ಇ.ಎಸ್. ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ್ದಾರೆ ಮೀರಾ. ಇವರು ಬೆಂಗಳೂರಿನಲ್ಲಿದ್ದಾಗಲೂ ತಮ್ಮ ಮನೆಯ ಕೆಲಸದ ಹುಡುಗಿಗೆ ಇಂಗ್ಲಿಷ್ ಕಲಿಸಿ ರಿಸೆಪ್ಷನಿಸ್ಟ್ ಕೆಲಸ ಪಡೆಯಲು ಸಹಕಾರ ನೀಡಿದ್ದರು. ಮದುವೆಯ ನಂತರ ರಿಯಾದ್‌ಗೆ ಹೋದಾಗ, ಅಲ್ಲಿಯೂ ಮಕ್ಕಳಿಗೆ ಪರಿಸರದ ಪಾಠ ಹೇಳಿ ಕೊಟ್ಟರು. ಅಲ್ಲಿ ಐದು ವರ್ಷವಿದ್ದು ಮುಂಬೈಗೆ ಬಂದಾಗ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಮಾಡುವಾಗಲೂ ಅಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್‌ ಕಲಿಸಲು ಮುಂದಾದರು. ನಂತರ ಕೊಳೆಗೇರಿ ಮಕ್ಕಳಿಗೆ ತಮ್ಮ ಗೆಳತಿಯರ ಸಹಾಯದಿಂದ ವಾರದಲ್ಲಿ ಒಂದು ದಿನ ಪಾಠ ಹೇಳಿಕೊಡಲು ಪ್ರಾರಂಭಿಸಿದರು. ಈಗ ಅದು ವಾರದಲ್ಲಿ ಏಳುದಿನವೂ ಈ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ನಾಮುಂದು ತಾಮುಂದು ಎಂದು ಮುಂದೆ ಬರುತ್ತಿದ್ದಾರೆ ‘ಈಗ ನಮ್ಮೊಂದಿಗೆ 45 ಮಕ್ಕಳಿದ್ದಾರೆ. ಪ್ರತಿ ದಿನ (ಭಾನುವಾರ ಹೊರತುಪಡಿಸಿ) ಸಂಜೆ 4.30ರಿಂದ ಆರು ಗಂಟೆಯವರೆಗೆ ಶಿಕ್ಷಣ ನೀಡಲಾಗುತ್ತದೆ. 45 ಮಕ್ಕಳಿಗೆ ಪಾಠ ಹೇಳಲು 45 ಜನ ಸಿದ್ಧರಿದ್ದಾರೆ. ಅವರು ಬೋಧಿಸುವುದರ ಜೊತೆಗೆ ಅವರ ಓದಿಗೆ ಸಹಾಯಕವಾಗುವಂತಹ ಪರಿಕರಗಳನ್ನು ನೀಡಲು ಸಿದ್ಧರಿದ್ದಾರೆ. ಆ ಮಕ್ಕಳ ಶ್ರದ್ಧೆಯನ್ನು ನೋಡಿದರೆ ಸಂತೋಷವಾಗುತ್ತದೆ. ಪ್ರಧಾನಿ ಮೋದಿಯವರು ‘ವಾರದಲ್ಲಿ ಒಂದು ದಿನವಾದರೂ ಯಾವುದಾದರೂ ಶಾಲೆಗೆ ಹೋಗಿ ಮಕ್ಕಳಿಗೆ ಶಿಕ್ಷಣ ನೀಡಿ’ ಎಂದು ಶಿಕ್ಷಕ ದಿನಾಚರಣೆಯಲ್ಲಿ ಹೇಳಿದ ಮಾತೇ ನನಗೆ ಸ್ಪೂರ್ತಿ’ ಎನ್ನುತ್ತಾರೆ ಸಿ.ವಿ. ಮೀರಾ ರಮಣ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.