ಪ್ರತ್ಯೇಕ ಕ್ರೀಡಾ ಇಲಾಖೆಯ ಮಹತ್ವ ಕರ್ನಾಟಕದಲ್ಲಿ ಕ್ರೀಡಾ ಇಲಾಖೆಯಿಂದ ಯುವಜನ ಸಬಲೀಕರಣ ವಿಭಾಗವನ್ನು ಬೇರ್ಪಡಿಸಬೇಕೆಂಬ ಅಭಿಪ್ರಾಯ ಈಚೆಗೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಇದೀಗ ಚಳವಳಿ ನಡೆಸುತ್ತಿರುವ ರಾಜ್ಯ ಕ್ರೀಡಾ ಪ್ರಾಧಿಕಾರದ ಕೋಚ್‌ಗಳ ಮುಖ್ಯ ಬೇಡಿಕೆಗಳಲ್ಲಿ ಇದೂ ಒಂದು. ಐವತ್ತರ ದಶಕದಲ್ಲಿ ಉದಾರ ಮನಸ್ಸಿನ ಸಾಹುಕಾರರು, ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದರು. ಎಸ್‌.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿಕ್ಕಾಗಿಯೇ ಮೈಸೂರು ರಾಜ್ಯ ಕ್ರೀಡಾ ಪರಿಷತ್ತು ಹುಟ್ಟು ಪಡೆಯಿತು. ಮೈಸೂರು ನಗರದ ಪೈಲ್ವಾನರಾಗಿದ್ದ ರಾಜಕಾರಣಿ ಸಾಹುಕಾರ್‌ ಚೆನ್ನಯ್ಯ ಅವರು ಆ ಪರಿಷತ್ತಿನ ಮೊದಲ ಅಧ್ಯಕ್ಷರಾದರು. ನಂತರ ಜೆ.ಬಿ.ಮಲ್ಲಾರಾಧ್ಯ ಅದರ ಅಧ್ಯಕ್ಷ ಪಟ್ಟಕ್ಕೇರಿದರು. ಎಪ್ಪತ್ತರ ದಶಕದಲ್ಲಿ ರಾಜ್ಯದಲ್ಲಿ ಹುಟ್ಟು ಪಡೆದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮೊದಲ ಸಚಿವ ಎಂಬ ಹೆಗ್ಗಳಿಕೆ ಆರ್‌.ಗುಂಡೂರಾವ್‌ ಅವರದ್ದು. ಆಗ ಇಲಾಖೆಯ ಮೊದಲ ನಿರ್ದೇಶಕರಾಗಿದ್ದ ಹಿರಿಯ ಪೊಲೀಸ್‌ ಆಧಿಕಾರಿ ಜೋಗಿಂದರ್‌ ಸಿಂಗ್‌ ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನೀತಿ ನಿಯಮಾವಳಿಗಳನ್ನು ರೂಪಿಸಿದರು. ನಂತರದ ದಿನಗಳಲ್ಲಿ ಇಲಾಖೆಯ ಆಯುಕ್ತರಾಗಿ ಎ.ಜೆ.ಆನಂದನ್‌, ಕೆ.ಯು.ಶೆಟ್ಟಿ ಸೇರಿದಂತೆ ಕೆಲವರು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಈ ಕಾಲಘಟ್ಟದಲ್ಲಿಯೇ ಕೊಡಗಿನ ಕೂಡಿಗೆಯಲ್ಲಿ ಮೊದಲ ಕ್ರೀಡಾ ಶಾಲೆ ರೂಪುಗೊಂಡಿತು. ಕ್ರೀಡಾ ಪರಿಷತ್ತಿನ ಚಟುವಟಿಕೆಯ ನಂತರದ ದಿನಗಳಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲು ಮತ್ತು ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಅನುದಾನ ನೀಡುವ ಪ್ರಕ್ರಿಯೆಗಷ್ಟೇ ಸೀಮಿತಗೊಂಡಿತು. ಡಿ.ಎಸ್‌.ನರಸಿಂಗರಾವ್‌, ಪ್ರಕಾಶ್‌ ಪಡುಕೋಣೆ, ಬಿ.ಎಸ್‌.ರಾಘವನ್‌ ಮುಂತಾದವರೂ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 90ರ ದಶಕದಲ್ಲಿ 4ನೇ ರಾಷ್ಟ್ರೀಯ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ರೀತಿಯಲ್ಲೇ ರಾಜ್ಯದಲ್ಲಿಯೂ ಕ್ರೀಡೆಯ ಏಳ್ಗೆಗಾಗಿ ‘ಕರ್ನಾಟಕ ಕ್ರೀಡಾ ಪ್ರಾಧಿಕಾರ’ವನ್ನು ಆರಂಭಿಸಲಾಯಿತು. ಈ ಸಂಸ್ಥೆಯನ್ನು1995ರಲ್ಲಿ ಬೆಂಗಳೂರು ಜಿಲ್ಲಾ ಸಹಕಾರ ಸಂಘದಲ್ಲಿ ನೋಂದಾಯಿಸಲಾಯಿತು. ಪ್ರಾಧಿಕಾರದ ಆಡಳಿತ ಮಂಡಳಿಯನ್ನೂ ರಚಿಸಲಾಯಿತು. ಇದು ಆಗ ಇಲಾಖೆಯ ಆಯುಕ್ತರಾಗಿದ್ದ ಎ.ಜೆ.ಆನಂದನ್‌ ಅವರ ಕನಸಿನ ಕೂಸು. ವೈಜ್ಞಾನಿಕ ನೆಲೆಯಲ್ಲಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಅಂದು ಪ್ರಾಧಿಕಾರದ ಮೇಲಿತ್ತು. ಕೋಚ್‌ಗಳ ನೇಮಕಾತಿಯೂ ಸೇರಿದಂತೆ ಹಲವು ಕೆಲಸಗಳನ್ನು ಪ್ರಾಧಿಕಾರ ಆರಂಭಿಸಿತು. ಇದರ ಮೊದಲ ಅಧ್ಯಕ್ಷರಾಗಿ ರತನ್‌ ಸಿಂಗ್‌ ಕಾರ್ಯ ನಿರ್ವಹಿಸಿದ್ದರು. ಆದರೆ ಅಂದಿನಿಂದ ಇಂದಿನವರೆಗೆ ಈ ಪ್ರಾಧಿಕಾರದ ಬಗ್ಗೆ ಅದೇಕೋ ಏನೋ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಆಗ ನೇಮಕಗೊಂಡ ಕೋಚ್‌ಗಳು ಇವತ್ತಿಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕ್ರೀಡಾ ಪ್ರಾಧಿಕಾರದಿಂದ ಹಿಂದೆ ನೇಮಕಗೊಂಡ ತರಬೇತುದಾರರನ್ನು ಈವರೆಗೂ ನೌಕರಿ ಭದ್ರತೆ ನೀಡದೆ, ಸರಿಯಾದ ವೇತನ ಶ್ರೇಣಿಯನ್ನೂ ನೀಡದೆ ಅತಂತ್ರ ಸ್ಥಿತಿಯಲ್ಲಿಟ್ಟಿರುವುದು ಸಂಬಂಧಪಟ್ಟವರ ಬೇಜವಾಬ್ದಾರಿತನದ ನಡೆಯಾಗಿದೆ. ಅಪಾರ ಅನುಭವ ಹೊಂದಿರುವ ತರಬೇತುದಾರರನ್ನು ನಿರ್ಲಕ್ಷಿಸಲಾಗಿದೆ. ಇದರ ವಿರುದ್ಧ ಇದೀಗ ನೂರಕ್ಕೂ ಹೆಚ್ಚು ಕೋಚ್‌ಗಳು ನೊಂದು ಚಳವಳಿಯನ್ನೂ ನಡೆಸಿದ್ದಾರೆ. ಪ್ರಸಕ್ತ ಯುವಜನ ಸಬಲೀಕರಣ ಇಲಾಖೆಯು ಯುವಜನ ಕೌಶಲ ತರಬೇತಿ, ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳಿಗೆ ಹೆಚ್ಚಿನ ಗಮನ ನೀಡುತ್ತಿದೆ. ಹೀಗಾಗಿ ಇಲಾಖೆಯಲ್ಲಿಯೇ ಕ್ರೀಡಾ ಚಟುವಟಿಕೆಗಳ ಬಗ್ಗೆ ಮಲತಾಯಿ ಧೋರಣೆ ಇದೆ ಎಂದರೆ ತಪ್ಪಾಗಲಾರದು. ಕ್ರೀಡೆಯ ಅಭಿವೃದ್ಧಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದೆ. ಹಲವು ಒಳಾಂಗಣ ಕ್ರೀಡಾಂಗಣಗಳಿವೆ. ಕ್ರೀಡಾ ಶಾಲೆಗಳಿವೆ. ಇವುಗಳೆಲ್ಲದರ ಉಸ್ತುವಾರಿಗೆ ತಾಂತ್ರಿಕವಾಗಿ ನೈಪುಣ್ಯ ಹೊಂದಿರುವವರ ಅಗತ್ಯವಿದೆ. ಆದರೆ ಈ ಕೊರತೆ ರಾಜ್ಯದಲ್ಲಿ ತೀವ್ರವಾಗಿದೆ. ರಾಜ್ಯ ಸರ್ಕಾರ ಕ್ರೀಡಾಭಿವೃದ್ಧಿಯ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬಹುದಾಗಿದೆ. ಕ್ರೀಡಾ ಪ್ರಾಧಿಕಾರದ ಆಡಳಿತವನ್ನು ನೋಡಿಕೊಳ್ಳಲು, ಕ್ರೀಡೆಯ ಬಗ್ಗೆ ಸಂಪೂರ್ಣ ಜ್ಞಾನ ಇರುವ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ರಾಜ್ಯದ ಎಲ್ಲಾ ಕ್ರೀಡಾ ಸಂಸ್ಥೆಗಳನ್ನು ಪ್ರಾಧಿಕಾರದ ಅಧೀನಕ್ಕೆ ತರಬೇಕು. ಭಾರತೀಯ ಕ್ರೀಡಾ ಪ್ರಾಧಿಕಾರದ ಯೋಜನೆಗಳಂತೆ ರಾಜ್ಯದಲ್ಲಿಯೂ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ಕ್ರೀಡಾಭಿವೃದ್ಧಿಗಾಗಿ ಬರುವ ಎಲ್ಲಾ ಆರ್ಥಿಕ ನೆರವನ್ನು ಕ್ರೀಡಾ ಚಟುವಟಿಕೆಗಳಿಗಾಗಿಯೇ ಬಳಸಬೇಕು. ಕ್ರೀಡಾ ಪ್ರಾಧಿಕಾರವನ್ನು ಪುನರ್‌ರಚಿಸಿ, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುಭವಿ ಕ್ರೀಡಾ ತಂತ್ರಜ್ಞರು, ಕ್ರೀಡಾಪಟುಗಳನ್ನು ನೇಮಿಸಬೇಕು. ಇಷ್ಟರ ಮಟ್ಟಿಗೆ ಹೆಜ್ಜೆಗಳನ್ನಿರಿಸಿದರೂ ರಾಜ್ಯದಲ್ಲಿ ಕ್ರೀಡಾಭಿವೃದ್ಧಿಯ ದಿಸೆಯಲ್ಲಿ ಮಹತ್ವದ ದಾಪುಗಾಲು ಇರಿಸಿದಂತಾಗುತ್ತದೆ. (ಲೇಖಕರು ಇಂಡಿಯನ್‌ ಫಿಟ್‌ನೆಸ್‌, ಬಾಡಿಬಿಲ್ಡರ್ಸ್‌ ಫಡೆರೇಷನ್‌ನ ಮಹಾ ಕಾರ್ಯದರ್ಶಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.