ಕೆಪಿಎಲ್‌ನಲ್ಲಿ ರಾಕ್‌ ಸ್ಟಾರ್ಸ್‌ ಹುಬ್ಬಳ್ಳಿಯಲ್ಲಿ ಕಳೆದ ವರ್ಷ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌) ಟೂರ್ನಿಯ ಮೂರನೇ ಆವೃತ್ತಿಯ ಎರಡನೇ ಹಂತದ ಪಂದ್ಯಗಳ ಸಂದರ್ಭ. ಸಿನಿಮಾ ನಟರ ತಂಡ ‘ರಾಕ್‌ ಸ್ಟಾರ್ಸ್‌’ ಮೈಸೂರಿನಲ್ಲಿ ನಡೆದ ಮೊದಲ ಹಂತದಲ್ಲಿ ಎಲ್ಲ ಐದೂ ಪಂದ್ಯಗಳನ್ನು ಸೋತು ವಾಣಿಜ್ಯ ನಗರಿಗೆ ಬಂದಿತ್ತು. ಸಾವಿರಾರು ಸಂಖ್ಯೆಯ ಪ್ರೇಕ್ಷಕರ ಬೆಂಬಲದ ನಡುವೆ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೋಲು ಕಂಡು ಶೂನ್ಯ ಸಂಪಾದನೆಯೊಂದಿಗೆ ವಾಪಸಾಗಿತ್ತು. ಮೈಸೂರಿನಲ್ಲಿ ತಂಡದ ಪ್ರದರ್ಶನ ಗಮನಿಸಿದ ಕೆಎಸ್‌ಸಿಎ ‘ರಾಕ್ ಸ್ಟಾರ್ಸ್‌’ ತಂಡದಲ್ಲಿ ಕೆಲವು ವೃತ್ತಿಪರ ಆಟಗಾರರನ್ನೂ ಸೇರಿಸುವ ಯೋಜನೆ ಹಾಕುವ ಸಿದ್ಧತೆಯಲ್ಲಿತ್ತು. ಟೂರ್ನಿಯ ಅಂತಿಮ ಪಂದ್ಯಗಳ ಸಂದರ್ಭದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಈ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗ ಮಾಡಿದ್ದರು. ‘ರಾಕ್‌ ಸ್ಟಾರ್ಸ್‌ ತಂಡದ ಬಲ ಹೆಚ್ಚಿಸುವುದಕ್ಕಾಗಿ ಕೆಲವು ವೃತ್ತಿಪರ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಅವಕಾಶ ನೀಡಲಾಗುವುದು, ಮುಂದಿನ ಬಾರಿ ಇದು ಜಾರಿಗೆ ಬರಲಿದೆ’ ಎಂದು ಅವರು ತಿಳಿಸಿದ್ದರು. ಅವರ ಮಾತು ಈಗ ನಿಜವಾಗಿದೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಕರ್ನಾಟಕದ ಹಿರಿಯ ಆಟಗಾರರಾದ ವೆಂಕಟೇಶ ಪ್ರಸಾದ್‌, ಸುನಿಲ್‌ ಜೋಶಿ, ಡೇವಿಡ್‌ ಜಾನ್ಸನ್‌ ಮುಂತಾದವರು ಈಗ ಬೆಳ್ಳಿ ತೆರೆಯ ತಾರೆಗಳ ಜೊತೆ ಇದ್ದಾರೆ. ಇದರಿಂದ ತಂಡಕ್ಕೆ, ಕೆಎಸ್‌ಸಿಎ ಮತ್ತು ಪ್ರೇಕ್ಷಕರಿಗೆ ‘ಸ್ಟಾರ್ಸ್‌’ ಶಕ್ತಿ ಹೆಚ್ಚುವ ನಿರೀಕ್ಷೆ ಮೂಡಿದೆ. ತಂಡದ ಬಲ ಹೆಚ್ಚಿಸಿದ್ದರಿಂದ ಪ್ರೇಕ್ಷಕರ ನಿರೀಕ್ಷೆಗೆ ಹೆಚ್ಚು ಮಹತ್ವವಿದೆ. ಯಾಕೆಂದರೆ ಕಳೆದ ಬಾರಿ ಕೆಪಿಎಲ್‌ನಲ್ಲಿ ತಂಡವನ್ನು ಸೇರಿಸಿಕೊಂಡ ಸಂದರ್ಭದಲ್ಲಿ ಸಿನಿಮಾದ ಪ್ರತಿಭಾವಂತ ನಾಯಕರು ಮತ್ತು ಶಕ್ತಿಶಾಲಿ ಖಳನಾಯಕರು ವಾಸ್ತವದ ಅಂಗಣದಲ್ಲಿ ಹೇಗೆ ಆಡಬಲ್ಲರು ಎಂಬ ಕುತೂಹಲ ಎಲ್ಲರಿಗೂ ಇತ್ತು. ಸೆಲೆಬ್ರಿಟೀಸ್ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕದ ಚಿತ್ರ ನಟರು ಉತ್ತಮ ಪ್ರದರ್ಶನ ನೀಡಿದ್ದರೂ ಕೆಪಿಎಲ್‌ನಲ್ಲಿ ಬಲಿಷ್ಠ ತಂಡಗಳ ವಿರುದ್ಧದ ಹೋರಾಟ ನೋಡಲು ಎಲ್ಲರೂ ಕಾತರರಾಗಿದ್ದರು. ಆದರೆ ಆರೂ ಪಂದ್ಯಗಳನ್ನು ಸೋತು ‘ಸ್ಟಾರ್ಸ್‌’ ಕಳೆಗುಂದಿತ್ತು. ಅನಿಶ್ಚಿತತೆಯ ಆಟವಾದ ಕ್ರಿಕೆಟ್‌ನಲ್ಲಿ ಯಾರ ಶಕ್ತಿಯನ್ನೂ ಕಡೆಗಣಿಸುವಂತಿಲ್ಲ ಎಂಬುದು ನಿಜ. ಆದರೆ ರಾಕ್‌ಸ್ಟಾರ್ಸ್‌ ಆಡಿದ ರೀತಿ ಅನೇಕರ ಬೇಸರಕ್ಕೆ ಕಾರಣವಾಗಿತ್ತು. ‘ಕೇವಲ ಲೆಕ್ಕಕ್ಕೆ ಮಾತ್ರ ತಂಡವೊಂದು ಆಡಬೇಕೇ?’ ಎಂಬ ಪ್ರಶ್ನೆಗಳು ಕೂಡ ಕೇಳಿ ಬಂದಿದ್ದವು. ಮೈಸೂರಿನಲ್ಲಿ ನಡೆದ ಮಂಗಳೂರು ಯುನೈಟೆಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋಲುಂಡ ತಂಡ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ 136 ರನ್‌ಗಳಿಂದ ಸೋಲು ಕಂಡಿತ್ತು. ಇದರ ಮಧ್ಯೆ ಬಳ್ಳಾರಿ ಟಸ್ಕರ್ಸ್‌ ವಿರುದ್ಧ 73 ರನ್‌ಗಳಿಂದ, ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 96 ರನ್‌ಗಳಿಂದ, ಮೈಸೂರು ವಾರಿಯರ್ಸ್‌ ವಿರುದ್ಧ 10 ವಿಕೆಟ್‌ಗಳಿಂದ, ಬಿಜಾಪುರ ಬುಲ್ಸ್‌ ವಿರುದ್ಧ 49 ರನ್‌ಗಳಿಂದ ನಿರಾಸೆ ಕಂಡಿತ್ತು. ಗಮನ ಸೆಳೆದವರು: ನಿರಂತರ ಸೋಲು ಕಂಡರೂ ತಂಡದ ಕ್ರೀಡಾಸ್ಫೂರ್ತಿ ಕ್ರಿಕೆಟ್‌ ಪ್ರಿಯರ ಮೆಚ್ಚುಗೆ ಗಳಿಸಿತ್ತು. ಬೆಳ್ಳಿ ತೆರೆಯಲ್ಲಿ ಛಲದಿಂದ ಹೋರಾಡುವಂತೆ ತಂಡದ ಆಟಗಾರರು ಮೈದಾನದಲ್ಲೂ ದಿಟ್ಟತನದ ಹೋರಾಟ ಪ್ರದರ್ಶಿಸಿದ್ದಾರೆ. ಕೆಲವರು ಉತ್ತಮ ಮೈಲಿಗಲ್ಲುಗಳನ್ನೂ ಸ್ಥಾಪಿಸಿದ್ದಾರೆ. ಪ್ಯಾಂಥರ್ಸ್‌ ವಿರುದ್ಧ 96 ರನ್‌ಗಳ ಸೋಲುಂಡರೂ ಎರಡನೇ ಇನಿಂಗ್ಸ್‌ನಲ್ಲಿ 118 ರನ್‌ ಗಳಿಸಿ ತಂಡ ಗಮನ ಸೆಳೆದಿತ್ತು. ಇದು ಕೆಪಿಎಲ್‌ನಲ್ಲಿ ತಂಡದ ಅತ್ಯಧಿಕ ಸ್ಕೋರ್ ಕೂಡ ಆಗಿದೆ. ವಾರಿಯರ್ಸ್‌ ವಿರುದ್ಧ ಕೇವಲ ಏಳು ವಿಕೆಟ್ ಕಳೆದುಕೊಂಡು 117 ರನ್‌ ಗಳಿಸಿಯೂ ಗಮನ ಸೆಳೆದಿತ್ತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಾಜೀವ, ಪ್ರದೀಪ ಮತ್ತು ಧ್ರುವ ಶರ್ಮಾ ಬ್ಯಾಟಿಂಗ್‌ನಲ್ಲೂ ತೇಜ, ವಿಕ್ರಾಂತ್‌ ಮುಂತಾದವರೂ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಜೀವ ಒಟ್ಟು ಆರು ಪಂದ್ಯಗಳಲ್ಲಿ 140 ರನ್‌ ಗಳಿಸಿದ್ದಾರೆ. ಪ್ರದೀಪ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ (44) ದಾಖಲಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇಬ್ಬರೂ ಟೂರ್ನಿಯಲ್ಲಿ ತಲಾ ಆರು ಸಿಕ್ಸರ್‌ ಬಾರಿಸಿದ್ದರೆ, ತೇಜ ಮತ್ತು ನಾಯಕ ಸುದೀಪ್‌ ಒಂದೇ ಪಂದ್ಯದಲ್ಲಿ ತಲಾ ಮೂರು ಸಿಕ್ಸರ್‌ ಬಾರಿಸಿ ಮಿಂಚಿದ್ದಾರೆ. ತೇಜ, ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 42 ರನ್‌ಗಳಿಗೆ 3 ವಿಕೆಟ್ ಕಬಳಿಸಿ ಬೌಲಿಂಗ್‌ ಸಾಮರ್ಥ್ಯ ಮೆರೆದಿದ್ದರು. ಪ್ರದೀಪ, ರಾಜೀವ ಮತ್ತು ಧ್ರುವ ಉತ್ತಮ ಜೊತೆಯಾಟಗಳನ್ನೂ ಪ್ರದರ್ಶಿಸಿದ್ದಾರೆ. ಟೈಗರ್ಸ್‌ ವಿರುದ್ಧ ಪ್ರದೀಪ ಮತ್ತು ರಾಜೀವ ಮೊದಲ ವಿಕೆಟ್‌ಗೆ 44 ರನ್‌ ಜೋಡಿಸಿದ್ದರೆ, ಮಂಗಳೂರು ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ ಇದೇ ಜೋಡಿ ಎರಡನೇ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ಪ್ರದರ್ಶಿಸಿದ್ದಾರೆ. ನಾಲ್ಕನೇ ವಿಕೆಟ್‌ಗೆ ಮಂಗಳೂರು ವಿರುದ್ಧದ ಪಂದ್ಯದಲ್ಲಿ ಪ್ರದೀಪ ಮತ್ತು ಧ್ರುವ 44 ರನ್‌ ಕಲೆ ಹಾಕಿ ಕಿಚ್ಚ ಬಳಗದ ಹೋರಾಟದ ಕೆಚ್ಚು ಹೆಚ್ಚಿಸಿದ್ದರು. ಹಿನ್ನಡೆ ಯಾಕೆ?: ಇಷ್ಟೆಲ್ಲ ಇದ್ದರೂ ತಂಡ ಹಿನ್ನಡೆ ಯಲ್ಲಿರುವುದು ಯಾಕೆ ಎಂಬ ಪ್ರಶ್ನೆ ಕ್ರಿಕೆಟ್‌ ಪ್ರಿಯರಲ್ಲಿ ಸಹಜವಾಗಿ ಮೂಡಿದೆ. ಸಮರ್ಪಕ ತರಬೇತುದಾರ ಇಲ್ಲದೇ ಇರುವುದು ಮತ್ತು ಸರಿಯಾದ ಯೋಜನೆ ರೂಪಿಸದಿರುವುದು ತಂಡದ ಸೋಲಿಗೆ ಕಾರಣವಾಗುತ್ತಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅನಿಸಿಕೆ. ಆದರೂ ತಂಡದ ಸ್ಫೂರ್ತಿಯನ್ನು ಅಲ್ಲಗಳೆಯುವಂತಿಲ್ಲ. ‘ತಂಡ ಯಾಕೆ ಆಡುತ್ತದೆ ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು. ಹೇಗೆ ಆಡುತ್ತಾರೆ ಎಂಬುದು ಮುಖ್ಯ. ವೃತ್ತಿಪರ ಕ್ರಿಕೆಟಿಗರ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯವನ್ನು ಅವರು ಗಳಿಸಿಕೊಂಡಿದ್ದಾರೆ. ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಅನುಕೂಲ ಆಗಲಿ ಎಂದೇ ಕೆಎಸ್‌ಸಿಎ ವೃತ್ತಿಪರ ಆಟಗಾರರನ್ನು ರಾಕ್‌ಸ್ಟಾರ್ಸ್‌ಗೆ ಒದಗಿಸಿದೆ. ಇದರಿಂದ ಅವರ ಬಲ ಖಂಡಿತಾ ಹೆಚ್ಚಲಿದೆ’ ಎಂಬುದು ಬ್ರಿಜೇಶ್‌ ಪಟೇಲ್ ಅವರ ಅನಿಸಿಕೆ. *** ರಾಕ್‌ ಸ್ಟಾರ್ಸ್‌ ಆಟಗಾರರ ಪಟ್ಟಿ ಸುದೀಪ್‌ (ನಾಯಕ, ವಿಕೆಟ್‌ ಕೀಪರ್‌) ರಾಜು ಗೌಡ ಸಿ.ರಘು ಚರಣ್‌ ತೇಜ ಧ್ರುವ ಶರ್ಮಾ ರಾಹುಲ್‌ ರಾಜೀವ ಎಚ್‌. ಆದರ್ಶ ಮದನ್‌ ಮೋಹನ್‌ ರಾಜಕುಮಾರ ನಿತೀಶ್‌ ಪಿ.ಡಿ. ಪ್ರತಾಪ (ಇವರೆಲ್ಲರೂ ಚಲನಚಿತ್ರ ರಂಗಕ್ಕೆ ಸೇರಿದವರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.