ಭರವಸೆಯ ಯುವ ತಾರೆಯರು... ‘ನನ್ನ ಬದುಕಿನ ಬವಣೆ ನನಗಿರಲಿ. ಮಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಷ್ಟರ ಮಟ್ಟಕ್ಕೆ ಎತ್ತರಕ್ಕೇರಬೇಕು. ಆಗ ನನ್ನ ಪ್ರತಿ ಬೆವರ ಹನಿಗೂ ಫಲ ಸಿಕ್ಕಂತಾಗುತ್ತದೆ...’ ಹೋದ ವಾರ ಅಪಿಯಾದಲ್ಲಿ ನಡೆದ ಯೂತ್‌ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಮಹಮ್ಮದ್ ಹಾದೀಶ್ ತಂದೆ ಮಹಮ್ಮದ್‌ ಮುಸ್ತಫಾ ಅವರ ಅತ್ಯಂತ ಭಾವುಕ ನುಡಿಗಳಿವು. ಹಾದೀಶ್‌ ಈ ಕ್ರೀಡಾಕೂಟದ ಜಾವಲಿನ್‌ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್‌ ಎನ್ನುವ ಕೀರ್ತಿ ಹೊಂದಿದ್ದಾರೆ. ಉತ್ತರ ಪ್ರದೇಶದ ಪ್ರಾಥಗಡ್‌ ಜಿಲ್ಲೆಯಲ್ಲಿ ಮುಸ್ತಫಾ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯ ಸ್ಥಿತಿಯೂ ಹೇಳಿಕೊಳ್ಳುವಂತಿಲ್ಲ. ಹಾದೀಶ್‌ ಸಂಕಷ್ಟದ ಸಂದರ್ಭದಲ್ಲಿಯೂ ಭರವಸೆ ಮೂಡಿಸುತ್ತಿದ್ದಾರೆ. ಅಲಹಾಬಾದ್‌ನಲ್ಲಿರುವ ಮದನ್‌ ಮೋಹನ್‌ ಮಾಳವಿಯಾ ಕ್ರೀಡಾಂಗಣದಲ್ಲಿಯೇ ಹಾದೀಶ್‌ ಕ್ರೀಡಾ ಬದುಕಿಗೆ ನೆಲೆ ಸಿಕ್ಕಿದ್ದು. 2008ರಲ್ಲಿ ಪುಣೆಯಲ್ಲಿ ಯೂತ್‌ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು. ಆಗ ಕರ್ನಾಟಕದ ಎಂ.ಆರ್‌. ಪೂವಮ್ಮ 4X400 ಮೀಟರ್ಸ್‌ ರಿಲೇಯಲ್ಲಿ ಚಿನ್ನ ಮತ್ತು 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಹೀಗೆ ಸಾಕಷ್ಟು ಕ್ರೀಡಾಪಟುಗಳಿಗೆ ಸಾಮರ್ಥ್ಯ ಸಾಬೀತು ಮಾಡಲು ಯೂತ್ ಕ್ರೀಡಾಕೂಟ, ಯೂತ್ ಒಲಿಂಪಿಕ್ಸ್‌ ಹಾಗೂ ಏಷ್ಯನ್‌ ಕಾಮನ್‌ವೆಲ್ತ್‌ ಕೂಟ ಸೇರಿದಂತೆ ಹಲವಾರು ಕ್ರೀಡಾಕೂಟಗಳು ವೇದಿಕೆಯಾಗಿವೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಪೈಪೋಟಿ ಎದುರಿಸಲು ಯೂತ್‌ ಕ್ರೀಡಾಕೂಟಗಳಲ್ಲಿ ಲಭಿಸುವ ಅನುಭವವೂ ನೆರವಾಗುತ್ತಿದೆ. ಆದ್ದರಿಂದಾಗಿಯೇ ಜೂನಿಯರ್‌ ಮಟ್ಟದ ಕೂಟಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಲಭಿಸುತ್ತದೆ. ಯೂತ್ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಪ್ರತಿಬಾರಿಯೂ ಗಮನಾರ್ಹ ಸಾಮರ್ಥ್ಯ ತೋರುತ್ತಲೇ ಬಂದಿದ್ದಾರೆ. ವೇಟ್‌ ಲಿಫ್ಟರ್‌ ದೀಪಕ್ ಲಾಥರ್‌, 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಜಿಶ್ನಾ ಮ್ಯಾಥ್ಯೂ, ಚಂದನ್‌ ಬೌರಿ, ಸ್ಕ್ವಾಷ್‌ ಸ್ಪರ್ಧೆಯಲ್ಲಿ ಸೆಂಥಿಲ್‌ ಕುಮಾರ್‌, ಬಿಲ್ಲುಗಾರ್ತಿ ಪ್ರಾಚಿ ಸಿಂಗ್‌, ಟೆನಿಸ್‌ನಲ್ಲಿ ಶಶಿಕುಮಾರ್‌ ಮುಕುಂದ್‌, ಧೃತಿ ತಾತಾಚಾರ್‌ ವೇಣುಗೋಪಾಲ್‌, ಬಾಕ್ಸರ್‌ ಗೌರವ್‌ ಸೋಲಂಕಿ, ಶಾಟ್‌ಪಟ್‌ನಲ್ಲಿ ಅನಾಮಿಕ ದಾಸ್‌, ಆಶಿಶ್‌ ಭಲೋಟಿಯಾ ಅವರು ಅಪಿಯಾ ನಗರದಲ್ಲಿ ಪದಕಗಳನ್ನು ಜಯಿಸಿ ಹೊಸ ಭರವಸೆಗೆ ಕಾರಣರಾಗಿದ್ದಾರೆ. ಹಾದೀಶ್‌ ಕೊಲಂಬಿಯಾದಲ್ಲಿ ಇತ್ತೀಚೆಗೆ ನಡೆದ ವಿಶ್ವ ಯುವ ಅಥ್ಲೆಟಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. 25 ವರ್ಷದ ಪೂವಮ್ಮ ಇಂತಹ ಯುವ ಕೂಟಗಳ ಮಟ್ಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದರಿಂದಲೇ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತಿದೆ. ಪೂವಮ್ಮ ಮತ್ತು ಹಾದೀಶ್ ಅವರ ಸಾಧನೆಗಳ ಮಾಹಿತಿ ಉದಾಹರಣೆಯಷ್ಟೇ. ಅವರಂತೆಯೇ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಜಿಶ್ನಾ ಮ್ಯಾಥ್ಯೂ, ಟಿಂಟು ಲೂಕಾ, ಖುಶ್ಬೀರ್‌ ಕೌರ್‌ (20 ಕಿ.ಮೀ. ನಡಿಗೆ), 2012ರ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ‘ಉತ್ತಮ ಅಥ್ಲೀಟ್‌’ ಗೌರವ ಪಡೆದಿದ್ದ ಅಂಜನಾ ತಾಮ್ಕೆ (400 ಮತ್ತು 800ಮೀ.), ಕಿಸಾನ್‌ ತದ್ವಿ (3000ಮೀ.), ದ್ಯುತಿ ಚಾಂದ್‌ (100 ಹಾಗೂ 200ಮೀ.), ಅರ್ಪಿಂದರ್‌ ಸಿಂಗ್‌ (ಟ್ರಿಪಲ್‌ ಜಂಪ್‌), ದೇವೇಂದ್ರ ಸಿಂಗ್‌ (ಬಾಕ್ಸಿಂಗ್), ಶಿವ ಥಾಪಾ (ಬಾಕ್ಸಿಂಗ್‌), ನವಜೀತ್‌ ಕೌರ್ ಧಿಲ್ಲಾನ್‌ (ಡಿಸ್ಕಸ್‌ ಎಸೆತ) ಮತ್ತು ಕೇರಳದ ಇರ್ಫಾನ್‌ ಥೋಡಿ (20 ಕಿ.ಮೀ. ನಡಿಗೆ) ಹಲವಾರು ಮಂದಿ ಯುವ ಕ್ರೀಡಾಕೂಟಗಳಲ್ಲಿ ಭರವಸೆ ಮೂಡಿಸಿದ್ದರು. ಇದೇ ವರ್ಷ ದೋಹಾದ ಕತಾರ್‌ನಲ್ಲಿ ನಡೆದ ಏಷ್ಯನ್‌ ಯೂತ್‌ ಅಥ್ಲೆಟಿಕ್ಸ್‌ನಲ್ಲಿ ಬಿಯಾಂತ್‌ ಸಿಂಗ್‌ (800 ಮೀಟರ್ಸ್‌ ಓಟ), ಕಿಸಾನ್ ತದ್ವಿ (3000ಮೀ. ಓಟ) ಹಾಗೂ ಆಶಿಶ್‌ ಜಾಕರ್‌ ಮತ್ತು ಮೀರಜ್‌ ಅಲಿ (ಹ್ಯಾಮರ್‌ ಅಲಿ) ಉತ್ತಮ ಸಾಮರ್ಥ್ಯ ನೀಡಿ ಭವಿಷ್ಯದಲ್ಲಿ ಶ್ರೇಷ್ಠ ಅಥ್ಲೀಟ್‌ ಆಗುವ ಭರವಸೆ ಮೂಡಿಸಿದ್ದಾರೆ. ಇದಕ್ಕೆಲ್ಲಾ ಯೂತ್‌ ಮಟ್ಟದ ಕೂಟಗಳು ರಹದಾರಿಯಾಗಿವೆ. ಕ್ರೀಡಾಕೂಟದ ಬಗ್ಗೆ 2000ನೇ ವರ್ಷದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಚೊಚ್ಚಲ ಯೂತ್‌ ಕಾಮನ್‌ವೆಲ್ತ್‌ ಕೂಟ ನಡೆಯಿತು. ಆಗ 14 ರಾಷ್ಟ್ರಗಳ 733 ಕ್ರೀಡಾಪಟುಗಳು ಭಾಗವಹಿಸಿದ್ದರು. ಮೂರು ದಿನ ನಡೆದ ಕೂಟದಲ್ಲಿ ಎಂಟು ಕ್ರೀಡೆಗಳಿಗೆ ಅವಕಾಶ ನೀಡಲಾಗಿತ್ತು. ಪ್ರತಿ ಕೂಟದಿಂದಲೂ ಕ್ರೀಡೆಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. * ಭಾರತದ ಸಾಧನೆ ಪೆಸಿಫಿಕ್‌ ಸಾಗರದಲ್ಲಿರುವ ಸಮೋ ಎಂಬ ದ್ವೀಪ ರಾಷ್ಟ್ರದ ಅಪಿಯಾ ನಗರದಲ್ಲಿ ಹೋದ ವಾರ ಐದು ದಿನಗಳ ಕಾಲ ನಡೆದ ಕಾಮನ್‌ವೆಲ್ತ್ ಯೂತ್‌ ಕ್ರೀಡಾಕೂಟ ಶುಕ್ರವಾರ ಮುಗಿದಾಗ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತ್ತು. ಮೊದಲ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಮಲೇಷ್ಯಾ ದೇಶಗಳು ಪಡೆದವು. ಭಾರತ 9ಚಿನ್ನ, 4ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗಳಿಸಿತು. 14ರಿಂದ 18 ವರ್ಷದೊಳಗಿನ ವಯೋಮಿತಿಯವರಿಗಾಗಿ ನಡೆಯುವ ಈ ಕೂಟದಲ್ಲಿ 40 ದೇಶದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಭಾರತದ 25 ಮಂದಿ ಕ್ರೀಡಾಪಟುಗಳು ಅಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.