ಇವರಿಗೆ ಸರಿಸಾಟಿ ಯಾರು...? ಗ್ರ್ಯಾಂಡ್‌ಸ್ಲಾಮ್‌ನಲ್ಲಿ 33 ಬಾರಿ ಫೈನಲ್‌ ಪ್ರವೇಶ... ಅಚ್ಚರಿಯಾಗಬಹುದು ಅಲ್ಲವೇ? ಆದರೆ, ಇದು ನಿಜ. ವಿಶ್ವದ ಘಟಾನುಘಟಿ ಆಟಗಾರರೇ ಕಣದಲ್ಲಿರುವ ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿಗಳ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಅವರೊಬ್ಬರ ಸಾಧನೆ ಇದು. ಅಷ್ಟೇ ಅಲ್ಲ, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ, ರೋಹನ್‌ ಬೋಪಣ್ಣ ಕೂಡ ಅಮೋಘ ಪ್ರದರ್ಶನದ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌, ಸೆರೆನಾ ವಿಲಿಯಮ್ಸ್‌, ಮರಿಯಾ ಶರಪೋವಾ ಮಿಂಚು ಹರಿಸುತ್ತಿದ್ದರೆ ಡಬಲ್ಸ್‌ ಹಾಗೂ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರದ್ದೇ ಪ್ರಾಬಲ್ಯ. ಪೇಸ್‌, ಭೂಪತಿ, ಸಾನಿಯಾ ಅವರ ಟೆನಿಸ್‌ ಜೀವನ ಆರಂಭವಾಗಿದ್ದು ಸಿಂಗಲ್ಸ್‌ನೊಂದಿಗೆ. ಇವರೆಲ್ಲಾ ಜೂನಿಯರ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದವರು. ಪೇಸ್‌ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅಷ್ಟೇ ಏಕೆ, ಪೀಟ್‌ ಸಾಂಪ್ರಾಸ್‌ ಅವರಂಥ ಶ್ರೇಷ್ಠ ಆಟಗಾರರನ್ನು ಒಮ್ಮೆ ಮಣಿಸಿದ್ದರು. ಸಾನಿಯಾ ಒಮ್ಮೆ ವಿಶ್ವ ಟೆನಿಸ್‌ ನಲ್ಲಿ 27ನೇ ಸ್ಥಾನಕ್ಕೇರಿ ಭರವಸೆ ಮೂಡಿಸಿದ್ದರು. ಡೇವಿಸ್ ಕಪ್‌ನಲ್ಲಿ ಚಿಲಿ, ನೆದರ್‌ಲೆಂಡ್‌ನಂಥ ತಂಡಗಳ ಎದುರು ಭಾರತ ಗೆಲ್ಲಲು ಭೂಪತಿ ಅವರು ಸಿಂಗಲ್ಸ್‌ನಲ್ಲಿ ತೋರಿದ್ದ ಅದ್ಭುತ ಪ್ರದರ್ಶನ ಕಾರಣ. ಆದರೆ, ಸಿಂಗಲ್ಸ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ಈ ಆಟಗಾರರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಕ್ರಮೇಣ ಡಬಲ್ಸ್‌ ಮೊರೆ ಹೋದರು. ಅಮೆರಿಕ ಓಪನ್‌ ಗ್ರ್ಯಾಂಡ್‌ಸ್ಲಾಮ್‌ಗೆ ಮುನ್ನ ಪೇಸ್‌ ಡಬಲ್ಸ್‌ನಲ್ಲಿ 8 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 8 ಪ್ರಶಸ್ತಿ ಎತ್ತಿ ಹಿಡಿದಿದ್ದರೆ, ಬೆಂಗಳೂರು ಮೂಲದ ಭೂಪತಿ 12 ಪ್ರಶಸ್ತಿ ಜಯಿಸಿದ್ದಾರೆ. ಪೇಸ್‌ ಅವರು ಶ್ರೇಷ್ಠ ಆಟಗಾರ್ತಿಯರು ಎನಿಸಿರುವ ಮಾರ್ಟಿನಾ ನವ್ರಾಟಿಲೋವಾ, ಲೀಸಾ ರೇಮಂಡ್‌, ಕಾರಾ ಬ್ಲ್ಯಾಕ್‌, ಮಾರ್ಟಿನಾ ಹಿಂಗಿಸ್‌ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಹಾಗೂ ಡಬಲ್ಸ್‌ನಲ್ಲಿ ಭೂಪತಿ, ಮಾರ್ಟಿನ್‌ ಡ್ಯಾಮ್‌, ಲೂಕಾಸ್‌ ಡೌಹ್ಲಿ, ರಾಡೆಕ್‌ ಸ್ಟೆಪಾನೆಕ್‌ ಜೊತೆಗೂಡಿ ಪೈಪೋಟಿ ನಡೆಸಿದ್ದಾರೆ. ಅಕಸ್ಮಾತ್‌ ಭೂಪತಿ–ಪೇಸ್‌ ಜೊತೆಗೂಡಿ ಆಟ ಮುಂದು ವರಿಸಿದ್ದರೆ ಮತ್ತಷ್ಟು ಪ್ರಶಸ್ತಿಗಳು ಭಾರತದ ಪಾಲಾಗುತ್ತಿದ್ದವು. ಮಿಶ್ರ ಡಬಲ್ಸ್‌ನಲ್ಲಿ ನವ್ರಾಟಿಲೋವಾ ಜೊತೆ ಅಮೋಘ ಯಶಸ್ಸು ಕಂಡಿದ್ದ ಪೇಸ್‌ ಈಗ ಸ್ವಿಟ್ಜರ್‌ಲೆಂಡ್‌ನ ಹಿಂಗಿಸ್‌ ಜೊತೆಗೂಡಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. 1997ರಲ್ಲಿ ಚೊಚ್ಚಲ ಸಾಧನೆ: ಗ್ರ್ಯಾಂಡ್‌ಸ್ಲಾಮ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಭೂಪತಿ. ಜಪಾನ್‌ನ ರಿಕಾ ಹಿರಾಕಿ ಜೊತೆಗೂಡಿ 1997ರಲ್ಲಿ ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಆಗ ಭೂಪತಿಗೆ ಕೇವಲ 23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿಂಗಲ್ಸ್‌ ಬಿಟ್ಟು ಡಬಲ್ಸ್‌ನತ್ತ ಚಿತ್ತ ಹರಿಸಿದ್ದಕ್ಕೆ ಅವರು ಟೀಕೆ ಎದುರಿಸಬೇಕಾಯಿತು. ಡಬಲ್ಸ್‌ನಲ್ಲಿ ಪೇಸ್‌ ಹಾಗೂ ಭೂಪತಿ 1999ರಲ್ಲಿ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದರು. ಪೇಸ್‌ ಕೂಡ 24ನೇ ವಯಸ್ಸಿನಲ್ಲಿ ಡಬಲ್ಸ್‌ ಮೊರೆ ಹೋದರು. ಸಿಂಗಲ್ಸ್‌ನಿಂದ ಡಬಲ್ಸ್‌ನತ್ತ... ಆರಂಭದ ದಿನಗಳಲ್ಲಿ ಸಿಂಗಲ್ಸ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಸಾನಿಯಾ ಈಗ ಸಂಪೂರ್ಣವಾಗಿ ಡಬಲ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸತತ ಗಾಯದ ಸಮಸ್ಯೆ ಬಳಿಕ ಅವರು ಡಬಲ್ಸ್‌ನಲ್ಲಿ ಆಡಲು ನಿರ್ಧರಿಸಿದರು. ಅಷ್ಟೇ ಅಲ್ಲ; ಕೆಲ ತಿಂಗಳ ಹಿಂದೆ ಅಗ್ರಪಟ್ಟ ಅಲಂಕರಿಸಿದ್ದರು. ‘ಸಿಂಗಲ್ಸ್‌ನಲ್ಲಿ ಆಡುವಾಗ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಕಷ್ಟ. ಆದರೆ, ಪದೇಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿರುವ ನನಗೆ ಸಿಂಗಲ್ಸ್‌ನಲ್ಲಿ ಖಂಡಿತ ಭವಿಷ್ಯವಿಲ್ಲ. ಟೆನಿಸ್‌ ಬಿಟ್ಟು ದೂರವಿರುವುದು ಅಸಾಧ್ಯದ ಮಾತು. ಹಾಗಾಗಿ ಡಬಲ್ಸ್‌ನಲ್ಲಿ ಆಡುತ್ತಿದ್ದೇನೆ’ ಎಂದು ಕೆಲ ದಿನಗಳ ಹಿಂದೆ ಸಾನಿಯಾ ಹೇಳಿದ್ದರು. ಹಿಂಗಿಸ್‌ ಜೊತೆಗೂಡಿ ಆಡುತ್ತಿರುವ ಸಾನಿಯಾ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದರು. ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಇದು ಭಾರತಕ್ಕೆ ದೊರೆತ ಚೊಚ್ಚಲ ಪ್ರಶಸ್ತಿ ಎನ್ನುವುದು ವಿಶೇಷ. ಡಬಲ್ಸ್‌ನಲ್ಲಿ ಒತ್ತಡ ಕಡಿಮೆ... ಸಿಂಗಲ್ಸ್‌ಗೆ ಹೋಲಿಸಿದರೆ ದೈಹಿಕವಾಗಿ ಹಾಗೂ ಮಾನಸಿಕ ವಾಗಿ ಡಬಲ್ಸ್‌ನಲ್ಲಿ ಒತ್ತಡ ಕಡಿಮೆ. ಏಕೆಂದರೆ ಅಂಗಳದಲ್ಲಿ ಓಡಾ ಟವೂ ಕಡಿಮೆ. ಹಾಗಾಗಿ ಗಾಯದ ಸಮಸ್ಯೆ ಉದ್ಭವಿಸುವುದಿಲ್ಲ. ದೀರ್ಘಕಾಲ ಆಡಲು ಸಾಧ್ಯವಾಗುತ್ತದೆ. ಅಲ್ಲದೆ, ಜೊತೆಗಾರನ ಸಲಹೆ ಹಾಗೂ ಪ್ರೋತ್ಸಾಹ ಇರುತ್ತದೆ. ಹಾಗಾಗಿ ಯುವಪೀಳಿಗೆಯ ಹೆಚ್ಚಿನ ಆಟಗಾರರು ಡಬಲ್ಸ್‌ನತ್ತ ಗಮನ ಹರಿಸುತ್ತಿದ್ದಾರೆ. ಸಿಂಗಲ್ಸ್‌ ಹಾದಿ ಕಷ್ಟ ಎಂಬುದು ಅವರು ನೀಡುವ ಕಾರಣ. ಇದೊಂದು ಆಶಾದಾಯಕ ಬೆಳವಣಿಗೆ ಅಲ್ಲದಿರ ಬಹುದು. ಆದರೆ, ಟೆನಿಸ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಉತ್ತಮ ನಡೆ. ಬೋಪಣ್ಣ ಕೂಡ ಈಗ ಸಿಂಗಲ್ಸ್‌ ತೊರೆದು ಡಬಲ್ಸ್‌ ಆಡು ತ್ತಿದ್ದಾರೆ. ಸಿಂಗಲ್ಸ್‌ನಲ್ಲಿ ಆರಕ್ಕೇರದ ಸೋಮದೇವ್‌ ದೇವ ವರ್ಮನ್‌ ಕೂಡ ನಿಧಾನಕ್ಕೆ ಡಬಲ್ಸ್‌ನತ್ತ ವಾಲುತ್ತಿದ್ದಾರೆ. ಅದೇನೇ ಇರಲಿ, ಡಬಲ್ಸ್‌, ಮಿಶ್ರ ಡಬಲ್ಸ್‌ ವಿಚಾರದಲ್ಲಿ ಸದ್ಯ ಭಾರತಕ್ಕೆ ಯಾವುದೇ ದೇಶ ಸರಿಸಾಟಿ ಇಲ್ಲ. ಡಬಲ್ಸ್‌ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಆಟಗಾರರಿಗೆ ಸಿಂಗಲ್ಸ್‌ನಲ್ಲಿ ಉತ್ತಮ ಆಟ ಆಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆ. * ಡಬಲ್ಸ್‌ಗೆ ಮಹತ್ವ ಕಡಿಮೆ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ಗೆ ಮಹತ್ವ ಕಡಿಮೆ. ಬಹುಮಾನ ಮೊತ್ತ, ಪ್ರೇಕ್ಷಕರ ಅಭಿಮಾನ, ಪ್ರಾಯೋಜಕರ ಒಲವು, ಮಾಧ್ಯಮಗಳಲ್ಲಿ ಲಭಿಸುವ ಪ್ರಚಾರ ಸೇರಿದಂತೆ ಎಲ್ಲರ ಚಿತ್ತ ಸಿಂಗಲ್ಸ್‌ನತ್ತ ಇರುತ್ತದೆ. ಹಾಗಾಗಿಯೇ ಫೆಡರರ್‌, ನಡಾಲ್‌, ಶರಪೋವಾ ಅವರಂಥ ಆಟಗಾರರು ಡಬಲ್ಸ್‌ನಲ್ಲಿ ಆಡುವುದು ಕಡಿಮೆ. ಅಮೆರಿಕ ಓಪನ್‌ನಲ್ಲಿ ಸಿಂಗಲ್ಸ್‌ ಚಾಂಪಿಯನ್‌ ಆದವರಿಗೆ ₹22 ಕೋಟಿ ರೂಪಾಯಿ ಬಹುಮಾನವಿದ್ದರೆ, ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದವರಿಗೆ ಕೇವಲ ₹3.8 ಕೋಟಿ ರೂಪಾಯಿ. ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆದವರಿಗೆ ಲಭಿಸುವುದು ಕೇವಲ ಒಂದು ಕೋಟಿ ರೂಪಾಯಿ. ಅಲ್ಲದೆ, ಇದನ್ನು ಇಬ್ಬರು ಆಟಗಾರರು ಹಂಚಿಕೊಳ್ಳಬೇಕು. ಈ ವ್ಯತ್ಯಾಸವೇ ಎಲ್ಲವನ್ನು ಹೇಳುತ್ತದೆ. ಆದರೆ, ಯಾವುದೇ ಟೂರ್ನಿಗಳು ಇರಲಿ 33 ಬಾರಿ ಫೈನಲ್‌ ಪ್ರವೇಶಿಸುವುದು ಅಂದರೆ ಖಂಡಿತ ಹುಡುಗಾಟದ ವಿಷಯವಲ್ಲ. ಅದರಲ್ಲೂ 42ನೇ ವಯಸ್ಸಿನ ಪೇಸ್‌ ಅವರ ಈ ಸಾಧನೆ ಅದ್ಭುತ. * ಹಿಂಗಿಸ್‌ ಎಂಬ ಚಾಂಪಿಯನ್‌... ‘ಸ್ವಿಸ್‌ ಮಿಸ್‌’ ಎಂದೇ ಖ್ಯಾತಿ ಪಡೆದಿರುವ ಮಾರ್ಟಿನಾ ಹಿಂಗಿಸ್‌ ಸಿಂಗಲ್ಸ್‌ನಲ್ಲಿ 90ರ ದಶಕದಲ್ಲಿ ಹಲವು ವರ್ಷಗಳ ಕಾಲ ಅಗ್ರಸ್ಥಾನದಲ್ಲಿ ಮಿಂಚಿದವರು. ಗಾಯದ ಕಾರಣ ನಿವೃತ್ತಿ ಘೋಷಿಸಿದ್ದ ಅವರು ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಹಲವು ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದು ಡಬಲ್ಸ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹಿಂಗಿಸ್‌ಗೆ ಈಗ 34 ವರ್ಷ ವಯಸ್ಸು. ವಿಶೇಷವೆಂದರೆ ಹಿಂಗಿಸ್‌ ಅವರು ಸಿಂಗಲ್ಸ್‌ ಆಡುತ್ತಿದ್ದ ಸಮಯದಲ್ಲಿ ರೋಜರ್‌ ಫೆಡರರ್‌ ‘ಬಾಲ್‌ಬಾಯ್‌’ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.