ಚುಟುಕು ಕ್ರಿಕೆಟ್‌ನಲ್ಲಿ ಸ್ಪಿನ್‌ ಮೋಡಿ 2009ರಲ್ಲಿ ನಡೆದ ಟ್ವೆಂಟಿ – 20 ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಮಧ್ಯಮ ವೇಗಿ ಉಮರ್ ಗುಲ್ ಐದು ವಿಕೆಟ್ ಕಬಳಿಸಿ ದಾಖಲೆ ಮಾಡಿದರು. ಇದರ ನಂತರ ಕೆಲ ಕಾಲ ಗುಲ್‌ ಅವರ ಸ್ವಿಂಗ್ ಬೌಲಿಂಗ್‌ ಕುರಿತು ಭಾರಿ ಚರ್ಚೆ ನಡೆಯಿತು. ಹನ್ನೊಂದು ಓವರ್‌ಗಳಷ್ಟು ಹಳೆಯದಾದ ಚೆಂಡನ್ನು ಅವರು ಸ್ವಿಂಗ್ ಮಾಡಿದ ರೀತಿಯ ಬಗ್ಗೆ ಕ್ರಿಕೆಟ್‌ ತಜ್ಞರ ನಡುವೆ ಸಾಕಷ್ಟು ಮಾತುಕತೆ ನಡೆಯಿತು. ಈ ಸಾಮರ್ಥ್ಯವನ್ನು ಸಿದ್ಧಿಸಿಕೊಂಡಿರುವ ಉಮರ್‌ ಗುಲ್‌ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದವು. ರಾಜ್ಯದ ಯುವ ಸ್ಪಿನ್‌ ಬೌಲರ್‌ಗಳನ್ನು ಹೀಗೆ ಪ್ರಶಂಸಿಸುವ ಕಾಲ ಈಗ ಸನ್ನಿಹಿತವಾಗಿದೆ. ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಅವರ ಪ್ರದರ್ಶನ ಇದಕ್ಕೆ ಆಸ್ಪದ ನೀಡಿದೆ. ಕ್ರಿಕೆಟ್‌ನ ಎಲ್ಲ ಮಾದರಿಯಲ್ಲಿ ಸಾಮಾನ್ಯವಾಗಿ ಹೊಸ ಚೆಂಡನ್ನು ವೇಗಿಗಳ ಕೈಗೆ ನೀಡಲಾಗುತ್ತದೆ. ಪೇಸ್ ಬಳಸಿಕೊಂಡು ಅವರು ಬೌಲಿಂಗ್ ಮಾಡುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ಈಗ ಪರಿಸ್ಥಿತಿ ಬದಲಾಗುತ್ತಿದೆ. ನಾಯಕ, ಹೊಸ ಚೆಂಡನ್ನು ಸ್ಪಿನ್ನರ್‌ಗಳ ಕೈಗೆ ನೀಡುತ್ತಿದ್ದಾರೆ. ಕೆಪಿಎಲ್‌ನಲ್ಲೂ ಇಂಥ ನೋಟ ಸಾಮಾನ್ಯ. ಹುಬ್ಬಳ್ಳಿಯಲ್ಲಿ ಮುಕ್ತಾಯಗೊಂಡ ಕೆಪಿಎಲ್‌ನ ಮೊದಲ ಹಂತದಲ್ಲಿ ನಡೆದ 15 ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳಲ್ಲಿ ವೇಗದ ಬೌಲರ್ ಜೊತೆ ಸ್ಪಿನ್ನರ್‌ಗಳು ಹೊಸ ಚೆಂಡನ್ನು ಹಂಚಿಕೊಂಡಿದ್ದಾರೆ. ಬಳ್ಳಾರಿ ಟಸ್ಕರ್ಸ್‌ ವಿರುದ್ಧದ ಪಂದ್ಯದಲ್ಲಿ ಮೈಸೂರು ತಂಡದ ನಾಯಕ ಒಂದು ತುದಿಯಿಂದ ಎಡಗೈ ಸ್ಪಿನ್ನರ್‌ ಜಗದೀಶ ಸುಚಿತ್ ಅವರಿಂದ ಬೌಲಿಂಗ್‌ ಮಾಡಿಸಿದ್ದರೆ ಇನ್ನೊಂದು ತುದಿಯಿಂದ ಆಫ್‌ ಸ್ಪಿನ್‌ ದಾಳಿಯ ತಂತ್ರ ರೂಪಿಸಿದ್ದರು. ಈ ಪಂದ್ಯದಲ್ಲಿ ಸುಚಿತ್‌ ಐದು ವಿಕೆಟ್‌ ಪಡೆದಿದ್ದರು. ಸ್ಪಿನ್‌ ಪ್ರಯೋಗದಿಂದಾಗಿ ಕೆಪಿಎಲ್‌ ಬೌಲರ್‌ಗಳ ಸ್ನೇಹಿ ಕ್ರಿಕೆಟ್‌ ಆಗಿಯೂ ಮಾರ್ಪಡುತ್ತಿದೆ. ಕಳೆದ ಬಾರಿ ಐಪಿಎಲ್‌ಗೆ ಆಯ್ಕೆಯಾದ ಸುಚಿತ್‌ ಮತ್ತು ಕೆ.ಸಿ.ಕಾರ್ಯಪ್ಪ ಇಬ್ಬರೂ ಸ್ಪಿನ್ನರ್‌ಗಳು ಎಂಬುದು ಗಮನಾರ್ಹ. ಕ್ಷೇತ್ರರಕ್ಷಣೆಯ ನಿಯಮ ಚುಟುಕು ಕ್ರಿಕೆಟ್‌ನ ಕ್ಷೇತ್ರ ರಕ್ಷಣೆ ನಿಯಮ ಕೂಡ ಸ್ಪಿನ್ನರ್‌ಗಳ ಮೂಲಕ ದಾಳಿ ಆರಂಭಿಸಲು ತಂಡದ ನಾಯಕರನ್ನು ಪ್ರೇರೇಪಿಸುತ್ತಿದೆ. ಪವರ್‌ ಪ್ಲೇ ಸಂದರ್ಭದಲ್ಲಿ ಸ್ಪಿನ್ ದಾಳಿ ನಡೆಸಿದರೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಸುಲಭವಾಗುತ್ತದೆ. ಸಾಮಾನ್ಯವಾಗಿ ಆಫ್ ಸ್ಪಿನ್ನರ್‌ ಹಾಕುವ ಎಸೆತಗಳು ಒಳಕ್ಕೆ ನುಗ್ಗಿ ಬಂದರೆ ಎಡಗೈ ಬೌಲರ್‌ ಮತ್ತು ಲೆಗ್‌ ಸ್ಪಿನ್ನರ್‌ ಹಾಕುವ ಎಸೆತಗಳು ಸ್ಪಿನ್‌ ಆಗಿ ಆಫ್ ಸ್ಟಂಪ್‌ನಿಂದ ದೂರ ಹೋಗುತ್ತವೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ವೇಗಿಗಳ ವಿರುದ್ಧ ಆಡಿ ಅಭ್ಯಾಸ ಇರುವುದರಿಂದ ಏಕಾಏಕಿ ಸ್ಪಿನ್ನರ್‌ಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಗೊಂದಲಕ್ಕೆ ಸಿಲುಕಿ ರನ್‌ ಗಳಿಕೆ ಕಡಿಮೆಯಾಗುತ್ತದೆ. ಅನಿರೀಕ್ಷಿತ ಸ್ಪಿನ್ ದಾಳಿಯಿಂದ ತಬ್ಬಿಬ್ಬಾಗಿ ವಿಕೆಟ್‌ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚು ಇರುತ್ತದೆ. ಹೀಗಾಗಿಯೇ ಕೆಪಿಎಲ್‌ನಲ್ಲಿ ಸ್ಪಿನ್ನರ್‌ಗಳಿಗೆ ಬೇಡಿಕೆ ಹೆಚ್ಚು. ಈ ಕಾರಣಕ್ಕೇ ಬಹುತೇಕ ಎಲ್ಲ ತಂಡಗಳಲ್ಲೂ ಐದರಿಂದ ಏಳು ಮಂದಿ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್‌ ಪಾರಮ್ಯ ಈ ಬಾರಿಯ ಕೆಪಿಎಲ್‌ನಲ್ಲಿ ಉರುಳಿದ ಒಟ್ಟು 149 ವಿಕೆಟ್‌ಗಳ ಪೈಕಿ 136 ವಿಕೆಟ್‌ಗಳು ಬೌಲರ್‌ಗಳ ಖಾತೆಗೆ ಜಮೆ ಆಗಿವೆ (13 ರನೌಟ್‌). ಈ ಪೈಕಿ 79 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಬುಟ್ಟಿಗೆ ಹಾಕಿಕೊಂಡಿದ್ದಾರೆ. 34 ವಿಕೆಟ್‌ಗಳು ಎಡಗೈ ಸ್ಪಿನ್ನರ್‌ಗಳ ಪಾಲಾಗಿದ್ದು ಎಂಟು ವಿಕೆಟ್‌ಗಳು ಲೆಗ್‌ ಸ್ಪಿನ್ನರ್‌ಗಳಿಗೆ ಲಭಿಸಿವೆ. ಹೊಸ ಚೆಂಡನ್ನು ಸಹಜಕ್ಕಿಂತ ಹೆಚ್ಚು ವೇಗವಾಗಿ ಹಾಕಿದ ಸ್ಪಿನ್ನರ್‌ಗಳು ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಸ್ಪಿನ್ನರ್‌ಗಳು ಕಡಿಮೆ ಇರುವ ತಂಡಗಳು ಸಾಕಷ್ಟು ರನ್‌ ಬಿಟ್ಟುಕೊಟ್ಟಿದ್ದಾರೆ. ಬಳ್ಳಾರಿ ಟಸ್ಕರ್ಸ್‌ ವಿರುದ್ಧದ ಪಂದ್ಯದಲ್ಲಿ ರಾಕ್‌ ಸ್ಟಾರ್ಸ್‌ನ ರಾಜೀವ ಮತ್ತು ರಾಹುಲ್‌ ಜೋಡಿಯ ಭಾರಿ ಓಟವನ್ನು ಎಡಗೈ ಸ್ಪಿನ್ನರ್‌ ಐ.ಜಿ.ಅನಿಲ್ ನಿಯಂತ್ರಿಸಿದ್ದರು. ವೇಗಿಗಳಾದ ಪ್ರಸಿದ್ಧ ಕೃಷ್ಣ ಮತ್ತು ಎನ್‌.ಸಿ.ಅಯ್ಯಪ್ಪ ಮೂರು ಓವರ್‌ಗಳಲ್ಲಿ 33 ರನ್‌ ಬಿಟ್ಟುಕೊಟ್ಟಿದ್ದರೆ, ಅನಿಲ್‌ ಹಾಗೂ ಆಫ್ ಸ್ಪಿನ್ನರ್‌ ಅಮಿತ್ ವರ್ಮಾ ಜೋಡಿ ದಾಳಿಗಿಳಿದ ನಂತರ ತಂಡ 78 ರನ್‌ಗಳಿಗೆ ಆಲೌಟಾಗಿತ್ತು. ಈ ರೀತಿ ‘ಸಂಕಷ್ಟ ನಿರ್ವಹಣೆ’ಯ ಪಾತ್ರ ನಿರ್ವಹಿಸಿದ ಸ್ಪಿನ್ನರ್‌ಗಳ ಬಲದಿಂದಲೇ ಕೆಲವು ತಂಡಗಳು ನಿರಾಯಾಸ ಜಯವನ್ನು ಸಾಧಿಸಿವೆ. ಈ ಬಾರಿಯ ಮೊದಲ ಹಂತದಲ್ಲಿ ಅತಿಹೆಚ್ಚು ವಿಕೆಟ್‌ ಪಡೆದವರ ಸಾಲಿನಲ್ಲಿ ಸ್ಪಿನ್ ಬೌಲರ್‌ಗಳದ್ದೇ ಪಾರಮ್ಯ. ಇನಿಂಗ್ಸ್ ಒಂದರಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಮೊದಲ ಹತ್ತು ಮಂದಿಯಲ್ಲಿ ಏಳು ಮಂದಿ ಸ್ಪಿನ್ ಬೌಲರ್‌ಗಳು. ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಮೊದಲ ಮೂವರು ಸ್ಪಿನ್ನರ್‌ಗಳು. ಈ ಪಟ್ಟಿಯ ಮೊದಲ ಹತ್ತು ಮಂದಿಯಲ್ಲಿ ಆರು ಮಂದಿ ಸ್ಪಿನ್ನರ್‌ಗಳು. * ಸ್ಪಿನ್ ಬೌಲಿಂಗ್ ಕ್ರಿಕೆಟ್‌ನ ಅವಿಭಾಜ್ಯ ಅಂಗ. ಒಳ್ಳೆಯ ಸ್ಪಿನ್ನರ್ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲೂ ಬ್ಯಾಟ್ಸ್‌ಮನ್‌ಗೆ ಸವಾಲೊಡ್ಡಬಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳು ಕೇವಲ ರನ್‌ ನಿಯಂತ್ರಿಸುವುದು ಮಾತ್ರವಲ್ಲ, ವಿಕೆಟ್‌ ಕಬಳಿಸುವುದರಲ್ಲೂ ಮುಂಪಕ್ತಿಯಲ್ಲಿದ್ದಾರೆ. ಇದು ಯುವ ಸ್ಪಿನ್ನರ್‌ಗಳಿಗೆ ಮಾದರಿಯಾಗಬೇಕು. ನೆಟ್ಸ್‌ನಲ್ಲಿ ಹೆಚ್ಚು ಬೆವರು ಸುರಿಸಿ ಚೆಂಡನ್ನು ತಿರುಗಿಸಲು ಅಭ್ಯಾಸ ಮಾಡಬೇಕು. ರಾಜ್ಯದಲ್ಲಿ ಸ್ಪಿನ್‌ ಬೌಲಿಂಗ್‌ಗೆ ಸಂಬಂಧಿಸಿದಂತೆ ಆರೋಗ್ಯಕರ ಸ್ಪರ್ಧೆ ಏರ್ಪಡಲು ಕೆಪಿಎಲ್‌ ಟೂರ್ನಿ ನೆರವಾಗಲಿದೆ. -ಸುನಿಲ್‌ ಜೋಶಿ ಎಡಗೈ ಸ್ಪಿನ್ನರ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.