ನಿವೃತ್ತರ ಬದಲಿಗೆ ಯಾರು? ಕ್ರಿಕೆಟ್ ಜಗತ್ತಿನಲ್ಲಿ ಕಳೆದ ಎಂಟು ತಿಂಗಳಿಂದ ನಿವೃತ್ತಿಯ ಪರ್ವ ನಡೆಯುತ್ತಿದೆ. ಬಹುತೇಕ ಎಲ್ಲ ದೇಶಗಳ ದಿಗ್ಗಜ ಕ್ರಿಕೆಟಿಗರು ವಿದಾಯ ಹೇಳುತ್ತಿರುವ ಸಮಯ ಇದು. ಇನ್ನೊಂದು ಅರ್ಥದಲ್ಲಿ ಹಳೆ ನೀರು ಸಾಗರ ಸೇರಿ, ಹೊಸ ನೀರಿಗೆ ಜಾಗ ಮಾಡಿ ಕೊಡುವ ಪ್ರಕ್ರಿಯೆಯೂ ಹೌದು. ಆದರೆ, ಹಳೆಯ ನೀರು ಹರಿದ ಹಾದಿಯಲ್ಲಿ ಜೀವಜಲವಾಗಿ, ಜಲಪಾತವಾಗಿ, ಸಮೃದ್ಧಿಗೆ ಆಧಾರವಾದ ರೀತಿಯಲ್ಲಿಯೇ ಹೊಸತು ಸಾಗಬೇಕು ಎಂಬ ನಿರೀಕ್ಷೆಯೂ ಸಹಜವಾದದ್ದು. ಹೋದ ಡಿಸೆಂಬರ್‌ನಲ್ಲಿ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಅವರಷ್ಟೇ ಸಮರ್ಥ ನಾಯಕನನ್ನು ನೋಡುವ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ಇನ್ನೂ ನನಸಾಗಬೇಕಷ್ಟೆ. ಅದೇ ರೀತಿ ಕಳೆದ ಜೂನ್‌ನಲ್ಲಿ ಬ್ಯಾಟ್ ಕೆಳಗಿಟ್ಟ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್, ಕ್ರಿಸ್ ರೋಜರ್ಸ್, ಶೇನ್ ವಾಟ್ಸನ್, ಬ್ರಾಡ್ ಹಡಿನ್ ಹೀಗೆ ಹಲವು ಖ್ಯಾತನಾಮರು ಬಿಟ್ಟು ಹೋದ ಸ್ಥಳಗಳು ಈಗ ಖಾಲಿಯಿವೆ. ಅವುಗಳನ್ನು ತುಂಬುವವರು ಯಾರು? ಪ್ರತಿ ಬಾರಿ ಶ್ರೇಷ್ಠ ಆಟಗಾರರೊಬ್ಬರು ನಿವೃತ್ತಿಯಾದಾಗಲೂ ಇಂತಹದೊಂದು ಸವಾಲು ಧುತ್ತನೆ ಎದುರಾಗುತ್ತದೆ. ಕಾಲ ಸರಿದಂತೆ ಮತ್ತಷ್ಟು ತಾರೆಗಳು ಮಿನುಗಿ ಆ ಜಾಗ ತುಂಬುವ ಕ್ರಿಯೆಯೂ ನಡೆಯುತ್ತಿತ್ತು. ಆದರೆ, ಕಳೆದ 3–4 ವರ್ಷಗಳ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ನಿರಾಸೆ ಎದ್ದು ಕಾಣುತ್ತದೆ. ಟ್ವೆಂಟಿ–20 ಚುಟುಕು ಕ್ರಿಕೆಟ್‌ನ ಮಾಯೆ ಕಾರಣವಿರಬಹುದು ಅಥವಾ ಹಣವೇ ಪ್ರಧಾನವಾಗುತ್ತಿರುವ ವಿದ್ಯಮಾನವೂ ಇರಬಹುದು. 27 ವರ್ಷಗಳ ಹಿಂದೆ ಸುನಿಲ್ ಗಾವಸ್ಕರ್ ನಿವೃತ್ತರಾದ ನಂತರ ಯಾರು ಎನ್ನುವ ಪ್ರಶ್ನೆಗೆ ಸಚಿನ್ ತೆಂಡೂಲ್ಕರ್ ಉತ್ತರವಾಗಿ ಸಿಕ್ಕರು. ಕೃಷ್ಣಮಾಚಾರಿ ಶ್ರೀಕಾಂತ್ ಜಾಗಕ್ಕೆ ನವಜ್ಯೋತ್‌ ಸಿಂಗ್ ಸಿಧು, ವೀರೇಂದ್ರ ಸೆಹ್ವಾಗ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಸಿಕ್ಕರು. ಮಧ್ಯಮ ಕ್ರಮಾಂಕದಲ್ಲಿ ಮೊಹಿಂದರ್ ಅಮರನಾಥ್, ಮೊಹಮ್ಮದ್ ಅಜರುದ್ದೀನ್, ದಿಲೀಪ್ ವೆಂಗಸರ್ಕಾರ್ ಅವರ ರಕ್ಷಣಾತ್ಮಕ ಆಟವನ್ನು ಮರೆಸಿಬಿಡುವಂತೆ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಬೆಳೆದರು. ದಾಖಲೆಗಳ ದೊಡ್ಡ ಬೆಟ್ಟವನ್ನೇ ನಿರ್ಮಿಸಿ ಹೋದರು. ಬೌಲಿಂಗ್‌ನಲ್ಲಿಯೂ ಅಂತಹ ಕೊರತೆ ಕಾಡಿರಲಿಲ್ಲ. ಕಪಿಲ್‌ದೇವ್ ನಿವೃತ್ತಿಯಾಗುವಾಗ ತಂಡದಲ್ಲಿ ಜಾವಗಲ್ ಶ್ರೀನಾಥ್ ಹೆಜ್ಜೆಗುರುತು ಮೂಡಿಸಲು ಆರಂಭಿಸಿದ್ದರು. ನಂತರ ಅವರೊಂದಿಗೆ ಕನ್ನಡಿಗ ವೆಂಕಟೇಶ್ ಪ್ರಸಾದ್, ಮುಂಬೈನ ಜಹೀರ್ ಖಾನ್, ಆಶಿಶ್ ನೆಹ್ರಾ, ಅಜಿತ್ ಅಗರ್ಕರ್ ಮತ್ತಿತರರ ದಂಡು ಸಾಗಿ ಬಂತು. ಈಗಲೂ ಮಧ್ಯಮವೇಗಿಗಳಿಗೆ ಕೊರತೆಯಿಲ್ಲ. ದೊಡ್ಡ ಸಾಲು ಇದೆ. ಆದರೆ ಸ್ಪಿನ್ ವಿಭಾಗಕ್ಕೆ ಈ ಮಾತು ಸಲ್ಲುವುದಿಲ್ಲ. ಹರಭಜನ್ ಸಿಂಗ್ ಇಲ್ಲದಿದ್ದರೂ ತಂಡಕ್ಕೆ ಆಫ್‌ಸ್ಪಿನ್ ಮೂಲಕ ಆಸರೆಯಾಗಬಲ್ಲ ಆರ್. ಅಶ್ವಿನ್ ಇದ್ದಾರೆ. ಆದೇ ಅನಿಲ್ ಕುಂಬ್ಳೆಯವರಿಂದ ತೆರವಾಗಿರುವ ಲೆಗ್‌ಸ್ಪಿನ್ನರ್ ಸ್ಥಾನ ತುಂಬಲು ಎಷ್ಟು ಜನ ಇದ್ದಾರೆ. ಇತ್ತೀಚೆಗೆ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಕೂಡ ಇದೇ ಮಾತು ಹೇಳಿದ್ದಾರೆ. ‘ಸದ್ಯ ತಂಡದಲ್ಲಿರುವ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಅವರಿಗೂ ವಯಸ್ಸಾಗುತ್ತಿದೆ. ಅವರ ನಂತರ ಯಾರು?’ ಎಂದು ಬೇಡಿ ಕೇಳಿದ್ದರು. ಮಣಿಂದರ್ ಸಿಂಗ್, ರವಿಶಾಸ್ತ್ರಿ, ವೆಂಕಟಪತಿ ರಾಜು ಅವರ ನಂತರ ಎಡಗೈ ಸ್ಪಿನ್ನರ್ ಜಾಗವೂ ಬಹುಕಾಲ ಖಾಲಿಯಿತ್ತು. ನಂತರ ಗದುಗಿನ ಸುನಿಲ್ ಜೋಶಿ ಕೆಲವು ಕಾಲ ಆ ಜಾಗ ತುಂಬುವ ಪ್ರಯತ್ನ ಮಾಡಿದ್ದರು. ಈಗ ರವೀಂದ್ರ ಜಡೇಜ, ಪ್ರಗ್ಯಾನ್ ಓಜಾ ಆ ಜಾಗದಲ್ಲಿ ಗಟ್ಟಿ ಹೆಜ್ಜೆ ಇಡುವ ಪ್ರಯತ್ನದಲ್ಲಿದ್ದಾರೆ. ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ವಿವಿಎಸ್ ಲಕ್ಷ್ಮಣ್ ಅವರಂತೆ ಮಣಿಕಟ್ಟಿನ ಸುಂದರ ಚಲನೆಯ ಮೂಲಕ ಬೌಲರ್‌ಗಳ ಬೆವರಿಳಿಸುವ ಬ್ಯಾಟ್ಸ್‌ಮನ್, ಸಹನೆಯಿಂದ ಇನಿಂಗ್ಸ್‌ ಕಟ್ಟುತ್ತಿದ್ದ ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್, ದಾಖಲೆಗಳ ಬೆಟ್ಟವನ್ನು ಕಟ್ಟಬಲ್ಲ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸುವ ಆಟಗಾರರ ಹುಡುಕಾಟ ಇನ್ನೂ ಮುಗಿದಿಲ್ಲ. ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಹಾದಿಯಲ್ಲಿದ್ದಾರೆ. ಆದರೆ ಸಾಗಬೇಕಾದ ದೂರ ಬಹಳಷ್ಟಿದೆ. ದೋನಿ ಬಿಟ್ಟುಹೋದ ನಾಯಕನ ಪಟ್ಟದಲ್ಲಿ ಕೊಹ್ಲಿ ಒಂದಷ್ಟು ಭರವಸೆ ಮೂಡಿಸಿರಬಹುದು. ಆದರೆ, ವಿಕೆಟ್‌ಕೀಪರ್ ಸ್ಥಾನಕ್ಕೆ ದಿಟ್ಟೆದೆಯ ಆಟಗಾರ ಸಿಕ್ಕಿಲ್ಲ. ಶ್ರೀಲಂಕಾದ ಮೂರು ಟೆಸ್ಟ್‌ಗಳಲ್ಲಿ ವೃದ್ಧಿಮಾನ್ ಸಹಾ, ನಮನ್ ಓಜಾ, ಕೆ.ಎಲ್.ರಾಹುಲ್ ಅವರು ವಿಕೆಟ್‌ಕೀಪರ್ ಗ್ಲೌಸ್‌ ಧರಿಸಬೇಕಾಯಿತು. ಇದು ಭಾರತ ತಂಡದ ಕಥೆ ಮಾತ್ರವಲ್ಲ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಶೇನ್ ವಾರ್ನ್, ಬ್ರೆಟ್‌ ಲೀ, ಗಿಲ್‌ಕ್ರಿಸ್ಟ್, ಲಂಕಾ ತಂಡದ ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್, ಸಂಗಕ್ಕಾರ, ಪಾಕಿಸ್ತಾನದ ಮಿಸ್ಬಾ ಉಲ್ ಹಕ್, ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ ಅವರ ಎತ್ತರಕ್ಕೆ ಏರುವವರು ಸಮೀಪದಲ್ಲಿ ಕಾಣುತ್ತಿಲ್ಲ. ಆದರೆ, ಯಾವ ದೇಶದಲ್ಲಿಯೂ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಸೌಲಭ್ಯಗಳು ಹೆಚ್ಚಾಗಿವೆ. ಕ್ರಿಕೆಟ್ ಟೂರ್ನಿಗಳು, ಆರ್ಥಿಕ ಸೌಲಭ್ಯಗಳು ಬೇರೆ ಕ್ರೀಡೆಗಳ ಆಟಗಾರರು ಹೊಟ್ಟೆಕಿಚ್ಚು ಪಡುವಷ್ಟರ ಮಟ್ಟಿಗೆ ಕ್ರಿಕೆಟಿಗರಿಗೆ ಸಿಗುತ್ತಿವೆ. ಆದರೂ ಹಳಬರು ಬಿಟ್ಟು ಹೋದ ಜಾಗ ತುಂಬುವವರ ಕೊರತೆ ಕಾಡುತ್ತಿದೆ. ‘ಇವತ್ತು ಟೆಸ್ಟ್‌, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಕ್ರಿಕೆಟ್ ನಡೆಯುತ್ತಿದೆ. ವರ್ಷಪೂರ್ತಿ ಆಟಗಾರರು ನಿರಂತರವಾಗಿ ಆಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪೈಪೋಟಿಯು ಉತ್ತುಂಗದಲ್ಲಿದೆ. ಇದರ ನಡುವೆ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಇದು ಕೂಡ ಆಟಗಾರರ ಮೇಲೆ ಒತ್ತಡ ಹೆಚ್ಚಲು ಕಾರಣವಾಗುತ್ತಿದೆ. ಅಲ್ಲದೇ ಮೊದಲಿನಂತೆ ಕೇವಲ ಕ್ರಿಕೆಟ್‌ ಮೇಲಿನ ಪ್ರೀತಿಯಿಂದ ಮೈದಾನಕ್ಕಿಳಿಯುವ ಆಟಗಾರರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಅದರ ಹಿಂದೆ ಇರುವ ಖ್ಯಾತಿ, ಹಣ, ಪ್ರಾಯೋಜಕತ್ವ ಇತ್ಯಾದಿಗಳೂ ಪ್ರಮುಖ ಗುರಿಯಾಗುತ್ತಿವೆ’ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಲೇಖಕ ಪೀಟರ್ ರೂಬೆಕ್ ಒಂದೊಮ್ಮೆ ಹೇಳಿದ್ದ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಆದರೂ ಕಾಲಚಕ್ರದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಗಳೂ ಇರುತ್ತವೆ. ಇತಿಹಾಸ ಮರುಕಳಿಸಲೂಬಹುದು. ‘ಸಂಗೀತ ಎನ್ನುವುದು ತೂಗುವ ತೊಟ್ಟಿಲು. ಒಬ್ಬರು ಹೋದ್ರ ಇನ್ನೊಬ್ಬರು ಬಂದು ಕೈ ಹಚ್ಚಿ ತೂಗ್ತಾರ’ ಎಂದು ಹಿಂದೂಸ್ತಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ ಯಾವಾಗಲೂ ಹೇಳುತ್ತಿದ್ದ ಮಾತು ಕ್ರಿಕೆಟ್‌ಗೂ ಅನ್ವಯಿಸುತ್ತದೆ. ತೊಟ್ಟಿಲು ತೂಗುವ ಸಮರ್ಥ ಕೈಗಳು ಬರಬಹುದು. * ಶೇನ್ ವಾಟ್ಸನ್ 59 ಟೆಸ್ಟ್‌ಗಳಲ್ಲಿ 3731 ರನ್, 4 ಶತಕ ಮತ್ತು 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 190 ಪಂದ್ಯಗಳಿಂದ 5757 ರನ್, 9 ಶತಕ, 33 ಅರ್ಧಶತಕ ಸೇರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 49 ಪಂದ್ಯಗಳಿಂದ 1164 ರನ್, 10 ಅರ್ಧಶತಕ ಗಳಿಸಿದ್ದಾರೆ. * ಬ್ರಾಡ್‌ ಹಡಿನ್ 66 ಟೆಸ್ಟ್‌ಗಳಲ್ಲಿ 3266 ರನ್ ಗಳಿಸಿದ್ದಾರೆ. ಅದರಲ್ಲಿ 4 ಶತಕ, 18 ಅರ್ಧಶತಕಗಳು ಇವೆ. ಏಕದಿನ ಕ್ರಿಕೆಟ್‌ನಲ್ಲಿ 126 ಪಂದ್ಯಗಳಿಂದ 3122 ರನ್ ಗಳಿಸಿದ್ದಾರೆ. ಎರಡು ಶತಕ 16 ಅರ್ಧಶತಕಗಳಿವೆ. ಟಿ20 ಕ್ರಿಕೆಟ್‌ನಲ್ಲಿ 34 ಪಂದ್ಯಗಳಿಂದ 402 ರನ್ ಗಳಿಸಿದ್ದಾರೆ. * ಮೈಕಲ್ ಕ್ಲಾರ್ಕ್ 115 ಟೆಸ್ಟ್‌ಗಳಲ್ಲಿ 8643 ರನ್, 28 ಶತಕ ಮತ್ತು 27 ಅರ್ಧಶತಕ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 245 ಪಂದ್ಯಗಳಿಂದ 7981 ರನ್, 8 ಶತಕ, 58ಅರ್ಧಶತಕ ಗಳಿಸಿದ್ದಾರೆ. 34 ಟಿ20 ಪಂದ್ಯಗಳಿಂದ 488 ರನ್ ಪೇರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.