ಬೈಕ್‌ ಸಾಹಸಿಯ ಯಶೋಗಾಥೆ.. ಕೆ.ಪಿ ಅರವಿಂದ್‌... ಈ ಹೆಸರು ಈಗ ಮೋಟಾರು ರೇಸ್‌ ವಲಯದಲ್ಲಿ ಚಿರಪರಿಚಿತ. ಉಡುಪಿಯಲ್ಲಿ ಹುಟ್ಟಿದ ಅವರು ಶಾಲಾ ದಿನಗಳಲ್ಲಿಯೇ ಈಜು ಹಾಗೂ ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದರು. ಕ್ರಮೇಣ ಕ್ರೀಡಾ ವಾಹಿನಿಗಳಲ್ಲಿ ಬೈಕ್‌ ರೇಸ್‌ಗಳನ್ನು ನೋಡುತ್ತಾ ಅದರೆಡೆಗೆ ಆಕರ್ಷಿತ ರಾದರು. ಈಗ ಇದರಲ್ಲಿ ನೈಪುಣ್ಯ ಸಾಧಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸುತ್ತಿದ್ದಾರೆ. ಆರಂಭದಲ್ಲಿ ಸ್ವ ಪ್ರಯತ್ನದಿಂದ ಬೈಕ್‌ ಸಾಹಸಗಳನ್ನು ಕಲಿತ ಅರವಿಂದ್‌ ಒಮ್ಮೆ ಸ್ಥಳೀಯ ರೇಸ್‌ನಲ್ಲಿ ಟಿವಿಎಸ್‌ ಸಂಸ್ಥೆಯ ನುರಿತ ಬೈಕ್‌ ಸವಾರರನ್ನೇ ಹಿಂದಿಕ್ಕಿ ಚಾಂಪಿಯನ್‌ ಆಗಿದ್ದರು. ಅದು ಅವರ ಬದುಕಿಗೆ ಹೊಸ ತಿರುವು ನೀಡಿತು. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ. *ಈ ಸಾಹಸದ ಪಯಣ ಆರಂಭವಾಗಿದ್ದು ಹೇಗೆ? ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಕ್ಕೆ ಅಪ್ಪ ಮೋಟಾರು ಬೈಕ್‌ ಕೊಡಿಸಿದ್ದರು. ಆ ಬೈಕ್‌ನಲ್ಲಿ 2005ರಲ್ಲಿ ಸ್ಥಳೀಯವಾಗಿ ಅನೇಕ ರೇಸ್‌ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿದ್ದೆ. *ನಿಮಗೆ ಸ್ಫೂರ್ತಿ ಯಾರು? ಅಮೆರಿಕದ ಜೇಮ್ಸ್‌ ಸ್ಟೀವರ್ಟ್‌ ಬುಬ್ಬಾ ನನ್ನ ನೆಚ್ಚಿನ ರೈಡರ್‌. ಅವರು ಪಾಲ್ಗೊಂಡ ರೇಸ್‌ಗಳನ್ನು ಯೂ ಟ್ಯೂಬ್‌ನಲ್ಲಿ ವೀಕ್ಷಿಸುತ್ತೇನೆ. *ಈವರೆಗೆ ಪಾಲ್ಗೊಂಡ ಚಾಂಪಿಯನ್‌ಷಿಪ್‌ಗಳೆಷ್ಟು? 14 ರಾಷ್ಟ್ರೀಯ ಚಾಂಪಿಯನ್‌ಷಿಷ್‌ಗಳಲ್ಲಿ ಭಾಗವಹಿಸಿದ್ದೇನೆ. ಇವುಗಳಲ್ಲಿ ರ್‍ಯಾಲಿ, ಸೂಪರ್‌ ಕ್ರಾಸ್‌ ಮತ್ತು ಡರ್ಟ್‌ ಟ್ರ್ಯಾಕ್‌ ವಿಭಾಗಗಳಲ್ಲಿ ಚಾಂಪಿಯನ್‌ ಆಗಿದ್ದೇನೆ. *ಮನೆಯವರ ಪ್ರೋತ್ಸಾಹ ಹೇಗಿತ್ತು. ಅವರು ನಿಮ್ಮ ನಿರ್ಧಾರವನ್ನು ವಿರೋಧಿಸಲಿಲ್ಲವೇ? ಆರಂಭದಲ್ಲಿ ಅಪ್ಪ ಅಮ್ಮನಿಗೆ ಗೊತ್ತಿಲ್ಲದ ಹಾಗೆ ಸ್ಥಳೀಯ ರೇಸ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಒಮ್ಮೆ ಪ್ರಶಸ್ತಿ ಗೆದ್ದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಬೈಯ್ದಿದ್ದರು. ಕ್ರಮೇಣ ಅವರ ಮನವೊಲಿಸಿದೆ. *ಬೈಕ್‌ ಸಾಹಸ ಅಪಾಯದ ಕ್ರೀಡೆ. ಹೀಗಿದ್ದರೂ ಇದರಲ್ಲೇ ಮುಂದುವರಿ ಯಲು ಕಾರಣ? ನನಗೆ ಸವಾಲು ಎಂದರೆ ತುಂಬಾ ಇಷ್ಟ. ಏನೆ ಕೆಲಸ ಮಾಡಿದರೂ ಅದರಲ್ಲಿ ರಿಸ್ಕ್‌ ಇರಬೇಕು. *ರೇಸ್‌ ವೇಳೆ ಅವಘಡಗಳು ಸಂಭವಿಸಿದೆಯೇ? ಒಂದಲ್ಲ, ಹಲವು ಬಾರಿ ಟ್ರ್ಯಾಕ್‌ನಲ್ಲಿ ಅವಘಡಗಳು ಸಂಭವಿಸಿವೆ. ಘಟನೆಯಲ್ಲಿ ಬೆನ್ನು ಮೂಳೆ ಮುರಿದದ್ದೂ ಇದೆ. ಕೈ ಬೆರಳುಗಳು ಮತ್ತು ಕಾಲಿನ ಮಂಡಿಯ ಭಾಗಕ್ಕೆ ತೀವ್ರ ತೆರನಾದ ಪೆಟ್ಟೂ ಬಿದ್ದಿದೆ. *ಇಷ್ಟಾದರೂ ಇದರಿಂದ ದೂರ ಉಳಿಯಬೇಕು ಅನಿಸಲಿಲ್ಲವೇ? ಖಂಡಿತಾ ಇಲ್ಲ. ಆಸ್ಪತ್ರೆಯಲ್ಲಿದ್ದರೂ ನನ್ನ ಮನಸ್ಸು ಮಾತ್ರ ಮತ್ತೆ ಟ್ರ್ಯಾಕ್‌ಗೆ ಇಳಿಯಲು ತುಡಿಯುತ್ತಿತ್ತು. *ನಿಮ್ಮ ಅಭ್ಯಾಸ ಕ್ರಮ ಹೇಗಿರುತ್ತದೆ? ವಾರದಲ್ಲಿ ಮೂರು ದಿನ ಬೆಳಿಗ್ಗೆ ನಾಲ್ಕು ಗಂಟೆ ತರಬೇತಿ ನಡೆಸುತ್ತೇನೆ. ಪ್ರತಿ ದಿನವೂ ಒಂದೊಂದು ಗುರಿ ಇಟ್ಟುಕೊಂಡು ಅಭ್ಯಾಸ ನಡೆಸುತ್ತೇನೆ. *ಖರ್ಚು ವೆಚ್ಚಗಳನ್ನು ಹೇಗೆ ಸರಿದೂಗಿಸುತ್ತೀರಿ? ಆರಂಭದಲ್ಲಿ ಅಪ್ಪ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಬಳಿಕ ಟಿವಿಎಸ್‌ ಕಂಪೆನಿಯ ಪ್ರಾಯೋಜಕತ್ವ ಸಿಕ್ಕಿತು. *ಎಲ್ಲೆಲ್ಲಿ ಅಭ್ಯಾಸ ನಡೆಸುತ್ತೀರಿ? ಮಂಗಳೂರಿನಲ್ಲಿದ್ದಾಗ ಅಲ್ಲಿಯೇ ಇರುವ ಟ್ರ್ಯಾಕ್‌ನಲ್ಲಿ ತರಬೇತಿ ನಡೆಸುತ್ತೇನೆ. ಬೆಂಗಳೂರಿನಲ್ಲಿದ್ದಾಗ ಅತ್ತಿಬೆಲೆಯಲ್ಲಿರುವ ಟಿವಿಎಸ್‌ ಫ್ಯಾಕ್ಟರಿಯ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುತ್ತೇನೆ. *ನಿಮ್ಮ ಭವಿಷ್ಯದ ಕನಸು? ಡಕಾರ್‌ ರ್‍ಯಾಲಿಯಲ್ಲಿ ಭಾಗವಹಿಸಿ ಉತ್ತಮ ಸಾಮರ್ಥ್ಯ ನೀಡಬೇಕೆಂಬುದು ಪ್ರತಿಯೊಬ್ಬ ಬೈಕ್‌ ಸಾಹಸಿಯ ಕನಸಾಗಿರುತ್ತದೆ. ಅವರ ಪೈಕಿ ನಾನೂ ಒಬ್ಬ. * ಪ್ರಮುಖ ಸಾಧನೆಗಳು *2011ರಲ್ಲಿ ಶ್ರೀಲಂಕಾ ಮೋಟಾರು ರೇಸ್‌ ಚಾಲಕರ ಸಂಸ್ಥೆ ಸಂಘಟಿಸಿದ್ದ ಏಷ್ಯಾ ಮೋಟೊಕ್ರಾಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ *2013ರಲ್ಲಿ ಕೊಯಮತ್ತೂರು ಮತ್ತು ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರೀಯ ಸೂಪರ್‌ಕ್ರಾಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ *ಇದೇ ವರ್ಷ ನಡೆದ ದಕ್ಷಿಣ್‌ ಡೇರ್‌ ರ್‍ಯಾಲಿಯ ಅಲ್ಟಿಮೇಟ್‌ ಬೈಕ್‌ ವಿಭಾಗದಲ್ಲಿ ಚಾಂಪಿಯನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.