ಭರವಸೆಯ ಹಾದಿಯಲ್ಲಿ... ಬ್ಯಾಡ್ಮಿಂಟನ್‌, ಟೆನಿಸ್‌, ಅಥ್ಲೆಟಿಕ್‌ ಎಂದಾಕ್ಷಣ ಸೈನಾ ನೆಹ್ವಾಲ್‌, ಸಾನಿಯಾ ಮಿರ್ಜಾ, ಲಿಯಾಂಡರ್‌ ಪೇಸ್‌, ವಿಕಾಸ್‌ ಗೌಡ, ಎಂ.ಆರ್‌. ಪೂವಮ್ಮ ಹೀಗೆ ಹಲವು ಹೆಸರುಗಳು ಥಟ್ಟನೆ ನೆನಪಿಗೆ ಬರುತ್ತವೆ. ಆದರೆ ಇದೇ ವಿಭಾಗಗಳಲ್ಲಿ ಸ್ಪರ್ಧಿಸಿ ಅಂತರರಾಷ್ಟ್ರೀಯ ಮತ್ತು ಪ್ಯಾರಾಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಪದಕದ ಸಾಧನೆ ಮಾಡಿದ ಪ್ಯಾರಾ ಕ್ರೀಡಾಪಟುಗಳ ಒಂದೇ ಒಂದು ಹೆಸರು ಹೊಳೆಯುವುದಿಲ್ಲ. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಶೂಟಿಂಗ್‌, ಟೆನಿಸ್‌, ಆರ್ಚರಿ ಕ್ರೀಡೆಗಳಂತೆ ಪ್ಯಾರಾ ಕ್ರೀಡಾಕೂಟವೂ ಭಾರತದಲ್ಲಿ ಈಗ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಒಲಿಂಪಿಕ್‌ನಲ್ಲಿ ಇದುವರೆಗೂ ಭಾರತದ ಯಾವೊಬ್ಬ ಅಥ್ಲೀಟ್‌ ಕೂಡಾ ಪದಕ ಗೆದ್ದಿಲ್ಲ. ಆ ಕೊರಗನ್ನು ಪ್ಯಾರಾ ಅಥ್ಲೀಟ್‌ಗಳು ದೂರ ಮಾಡಿದ್ದಾರೆ. 1972ರಲ್ಲಿ ಜರ್ಮನಿ ದೇಶದ ಹಿಡಲ್‌ಬರ್ಗ್‌ನಲ್ಲಿ ನಡೆದ ಪ್ಯಾರಾಲಿಂಪಿಕ್‌ ಅನ್ನು ಒಮ್ಮೆ ನೆನಪಿಸಿಕೊಳ್ಳಿ. ಆ ವರ್ಷ ಮುರಳಿಕಾಂತ್‌ ಪಾಟ್ಕರ್‌ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದರು. ಮಹಿಳೆಯರ 50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಅವರು 37.31 ಸೆಕೆಂಡುಗಳಲ್ಲಿ ಗುರಿ ಸೇರಿದ್ದರು. ಅದು ವಿಶ್ವ ದಾಖಲೆ ಎಂಬುದು ಹೆಮ್ಮೆಯ ಸಂಗತಿ. ಆ ಬಳಿಕ ಭೀಮಾರಾವ್‌ ಕೆಸಾರ್ಕರ್‌, ಜೋಗಿಂದರ್‌ ಸಿಂಗ್‌ ಬೇಡಿ, ದೇವೇಂದ್ರ ಜಜಾರಿಯಾ, ರಾಜೀಂದರ್‌ ಸಿಂಗ್‌್ ರಾಹೇಲು ಮತ್ತು ಕರ್ನಾಟಕದ ಎಚ್‌.ಎನ್‌. ಗಿರೀಶ್‌ ಅವರೂ ಪದಕ ಗೆದ್ದಿದ್ದಾರೆ. ಮುಂದಿನ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುವ ಪ್ಯಾರಾಲಿಂಪಿಕ್‌ನಲ್ಲೂ ಭಾರತದ ಪ್ಯಾರಾ ಅಥ್ಲೀಟ್‌ಗಳಿಂದ ಹೆಚ್ಚಿನ ಪದಕ ನಿರೀಕ್ಷಿಸಲಾಗಿದೆ. ಹೈಜಂಪ್‌ ಸ್ಪರ್ಧೆಯಲ್ಲಿ ಎಚ್‌.ಎನ್‌. ಗಿರೀಶ್‌ ಮತ್ತು ದೆಹಲಿಯ ಶರತ್‌ ಈಗಾಗಲೇ ಅರ್ಹತೆ ಗಳಿಸಿದ್ದಾರೆ. ಇವರಿಬ್ಬರೂ ಒಂದೇ ವಿಭಾಗದಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ. ಮುಂದೆ ಇನ್ನೂ ಸಾಕಷ್ಟು ಕ್ರೀಡಾಕೂಟಗಳು ನಡೆಯಲಿವೆ. ಅಲ್ಲಿ ಉತ್ತಮ ಸಾಮರ್ಥ್ಯ ನೀಡುವ ಅಥ್ಲೀಟ್‌ಗಳಿಗೂ ಪ್ಯಾರಾಲಿಂಪಿಕ್‌ಗೆ ಅರ್ಹತೆ ಗಳಿಸುವ ಅವಕಾಶ ಇದೆ. ಬ್ಯಾಡ್ಮಿಂಟನ್‌ನಲ್ಲಿ ಭರವಸೆಯ ಕಿರಣ ಕೇವಲ ಅಥ್ಲೆಟಿಕ್‌ ಮಾತ್ರವಲ್ಲ. ಪ್ಯಾರಾ ಬ್ಯಾಡ್ಮಿಂಟನ್‌ನಲ್ಲೂ ಭಾರತ ಭರವಸೆಯ ಹಾದಿಯಲ್ಲಿ ಸಾಗುತ್ತಿದೆ. ಹೋದ ವಾರ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಬಿಡಬ್ಲ್ಯುಎಫ್‌ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌ನಲ್ಲಿ ಭಾರತ 11 ಪದಕಗಳನ್ನು ಗೆದ್ದುಕೊಂಡಿದ್ದು ಇದಕ್ಕೆ ಸಾಕ್ಷಿ. ಪುರುಷರ ಸಿಂಗಲ್ಸ್‌ನ ಎಸ್‌ಎಲ್‌–3, ಎಸ್‌ಎಲ್‌–4 ವಿಭಾಗಗಳಲ್ಲಿ ಕ್ರಮವಾಗಿ ಪ್ರಮೋದ್‌ ಭಗತ್‌ ಮತ್ತು ತರುಣ್‌ ಹಾಗೂ ಡಬಲ್ಸ್‌ನ ಎಸ್‌ಎಲ್‌–3 ಮತ್ತು ಎಸ್‌ಎಲ್‌–4 ವಿಭಾಗದಲ್ಲಿ ಆನಂದ್‌ಕುಮಾರ್‌ ಬೋರೆಗೌಡ ಮತ್ತು ಮನೋಜ್‌ ಸರ್ಕಾರ್‌ ಚಿನ್ನ ಗೆದ್ದಿದ್ದರು. ಮಿಶ್ರ ಡಬಲ್ಸ್‌ನ ಎಸ್‌ಎಲ್‌–3 ಮತ್ತು ಎಸ್‌ಯು–5 ವಿಭಾಗದಲ್ಲಿ ರಾಜಕುಮಾರ್‌ ಮತ್ತು ಪರುಲ್‌ ದಲಸುಖ್‌ಬಾಯಿ ಚಿನ್ನ ಜಯಿಸಿದ್ದು ಅಸಾಮಾನ್ಯ ಸಾಧನೆಯೇ ಸರಿ. ಈ ಬಾರಿಯ ಪ್ಯಾರಾಲಿಂಪಿಕ್‌ನಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆ ಇಲ್ಲ. ಆದರೆ 2020ರ ಪ್ಯಾರಾಲಿಂಪಿಕ್‌ನಲ್ಲಿ ಇದನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಭಾರತದ ಸ್ಪರ್ಧಿಗಳು ಚಿನ್ನ ಬೇಟೆಯಾಡುವುದರಲ್ಲಿ ಅನುಮಾನವೇ ಇಲ್ಲ. ಕರ್ನಾಟಕದ ಹೆಜ್ಜೆ ಗುರುತು... ಪ್ಯಾರಾ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಪರ್ಧಿಗಳು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಹೈಜಂಪ್‌ನಲ್ಲಿ ಗಿರೀಶ್‌, ಈಜು ವಿಭಾಗದಲ್ಲಿ ಶರತ್‌ ಗಾಯಕ್ವಾಡ್‌ ಮತ್ತು ಮಾಲತಿ ಹೊಳ್ಳಾ ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಮುಕುಂದ್‌ ನಿರಂಜನ್‌ ಅವರೂ ವಿಶ್ವ ಮಟ್ಟದ ಈಜು ಸ್ಪರ್ಧೆಗಳಲ್ಲಿ ಪದಕಗಳನ್ನು ಕೊರಳಿಗೇರಿಸಿ ಕೊಂಡಿದ್ದಾರೆ. 2012ರ ಒಲಿಂಪಿಕ್‌ನಲ್ಲಿ ಭಾರತದ 10 ಮಂದಿ ಭಾಗವಹಿಸಿದ್ದರು. ಆದರೆ ಪದಕ ದಕ್ಕಿದ್ದು ಮಾತ್ರ ಒಂದು. ಆ ಏಕೈಕ ಪದಕ ತಂದುಕೊಟ್ಟವರು ರಾಜ್ಯದ ಎಚ್‌.ಎನ್‌. ಗಿರೀಶ್‌. ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಅವರು ಚೊಚ್ಚಲ ಅವಕಾಶದಲ್ಲಿಯೇ ಬೆಳ್ಳಿ ಜಯಿಸಿದ್ದರು. ಅವರು 1.74 ಮೀಟರ್ಸ್‌ ಎತ್ತರ ಜಿಗಿದ್ದಿದ್ದರು. ಅವರ ಪ್ರತಿಸ್ಪರ್ಧಿ ಕೂಡಾ ಇಷ್ಟೇ ಮೀ. ಜಿಗಿದಿದ್ದರು. ಆದರೆ ಅದಕ್ಕೆ ಅವರು ಒಂದು ಅವಕಾಶ ಮಾತ್ರ ತೆಗೆದುಕೊಂಡಿದ್ದರು. ಗಿರೀಶ್‌ ಎರಡನೇ ಪ್ರಯತ್ನದಲ್ಲಿ ಇದನ್ನು ಪೂರೈಸಿದ್ದರು. ಹೀಗಾಗಿ ಚಿನ್ನ ಕೈತಪ್ಪಿತ್ತು. ‘ಹೋದ ಪ್ಯಾರಾಲಿಂಪಿಕ್‌ನಲ್ಲಿ ಅಲ್ಪದರಲ್ಲೇ ಚಿನ್ನ ಜಯಿಸುವ ಅವಕಾಶ ಕಳೆದುಕೊಂಡಿದ್ದೆ. ಹೀಗಾಗಿ ಈ ಬಾರಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಚಿನ್ನ ಗೆಲ್ಲುವುದು ನನ್ನ ಏಕೈಕ ಗುರಿ’ ಎಂದು ಅವರು ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಶರತ್‌ ಮತ್ತು ನಿರಂಜನ್‌ ಕೂಡಾ ಅಪ್ರತಿಮ ಸಾಧಕರೇ. ಅವರೂ ಪ್ಯಾರಾಲಿಂಪಿಕ್‌ ಅರ್ಹತೆಯ ಹಾದಿಯಲ್ಲಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಆನಂದ್‌ಕುಮಾರ್‌ ಬೋರೆಗೌಡ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಬೆಳಗಿದ್ದಾರೆ. 2003ರಲ್ಲಿ ನಡೆದಿದ್ದ ಇಸ್ರೇಲ್‌ ಅಂತರರಾಷ್ಟ್ರೀಯ ಕೂಟದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದ ಅವರು ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. 2004ರ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೂ ಏರಿದ್ದರು.2012ರಲ್ಲಿ ಫ್ರಾನ್ಸ್‌, ಸ್ಪೇನ್‌, ಕೊರಿಯ ಮತ್ತು ಟರ್ಕಿಗಳಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದ ಅವರು ಮರು ವರ್ಷವೇ (2013) ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ಪಟ್ಟ ಅಲಂಕರಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.