ಶಾಲೆಗೆ ಬನ್ನಿ ಶನಿವಾರ.. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಪ್ರತಿಭಾವಂತರ ಸೇವೆಯನ್ನು ಪಡೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ‘ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ’ ಎಂಬ ವಿನೂತನ ಯೋಜನೆಯನ್ನು ರೂಪಿಸಿದೆ. ತಮ್ಮಲ್ಲಿರುವ ವಿದ್ಯೆಯನ್ನು ದಾನ ಮಾಡಲು ಬಯಸುವ ಯಾರು ಬೇಕಾದರೂ ಶಾಲೆಗೆ ಬಂದು ಶಿಕ್ಷಕರಂತೆ ಪಾಠ ಮಾಡುವ ಮುಕ್ತ ಅವಕಾಶವನ್ನು ಈ ಯೋಜನೆಯಡಿ ಕಲ್ಪಿಸಲಾಗಿದೆ. ಕಲಿಸುವ ಮನಸ್ಸು ಇರುವ ಯಾರು ಬೇಕಾದರೂ ತಮ್ಮಲ್ಲಿರುವ ಪ್ರತಿಭೆಯನ್ನು ಶಾಲಾ ಮಕ್ಕಳೊಂದಿಗೆ ಹಂಚಿಕೊಳ್ಳಬಹುದು. ಇದಕ್ಕೆ ಯಾವುದೇ ಗಡಿರೇಖೆ ಇಲ್ಲ. ಯಾವ ಶಾಲೆಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಭಾವಂತರಿಗೆ ತಮ್ಮಲ್ಲಿರುವ ವಿದ್ಯೆಯನ್ನು ದಾನ ಮಾಡಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅಂತಹವರ ಸೇವೆಯನ್ನು ಪಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಲವರು ನಾನಾ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಅಂತಹವರು ತಾವು ಕಲಿತ ಅಥವಾ ಸಮೀಪದ ಶಾಲೆಯ ಮಕ್ಕಳಿಗೆ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಬಯಸುತ್ತಾರೆ. ಈ ಕಾರ್ಯಕ್ರಮದ ಮೂಲಕ ಅವರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ ಎನ್ನುತ್ತಾರೆ ಶಿಕ್ಷಣ ಮತ್ತು ತರಬೇತಿ ಇಲಾಖೆಯ ನಿರ್ದೆಶಕ ಎಸ್‌.ಜಯಕುಮಾರ್‌. ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿ ಗಳು, ಸರ್ಕಾರಿ ನೌಕರರು, ಶಿಕ್ಷಣ ಸಂಸ್ಥೆಗಳು, ಜೈವಿಕ, ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿನ ಪರಿಣತರೂ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿನ ಪ್ರತಿಭಾನ್ವಿತರು ಇಚ್ಚೆಪಟ್ಟ ಶಾಲೆಯಲ್ಲಿ ಪ್ರತಿ ಶನಿವಾರ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು. ಶನಿವಾರ ಅರ್ಧದಿನ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಸಾಫ್ಟ್‌ವೇರ್‌ ಕಂಪೆನಿಗಳ ಉದ್ಯೋಗಿಗಳಿಗೆ ಶನಿವಾರ ರಜೆ ಇರುತ್ತದೆ. ಆ ದಿನ ತಮ್ಮೂರಿನ ಅಥವಾ ತಮಗೆ ಹತ್ತಿರವಾಗುವ ಯಾವುದೇ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹಂಚಿಕೊಳ್ಳಬಹುದು. ಶಾಲೆಗಳಲ್ಲಿ ಮಕ್ಕಳಿಗೆ ಕಷ್ಟವೆನಿಸುವ ಆಂಗ್ಲಭಾಷೆ, ವಿಜ್ಞಾನ, ಗಣಿತ ವಿಷಯಗಳಲ್ಲದೆ ಸಾಮಾನ್ಯ ಜ್ಞಾನ, ಮಾಹಿತಿ ಸಂವಹನ, ಕ್ರೀಡೆ ಸೇರಿದಂತೆ ಮಕ್ಕಳ ಜ್ಞಾನವಿಸ್ತಾರಕ್ಕೆ ಪೂರಕವಾಗುವ ವಿಷಯಗಳನ್ನು ಬೋಧಿಸುವ ಮೂಲಕ ಅವರಿಗೆ ಮಾರ್ಗದರ್ಶನ ನೀಡಬಹುದು. ಸರ್ಕಾರಿ ನೌಕರರಿಗೆ 2ನೇ ಶನಿವಾರ ರಜೆ. ಆ ದಿನ ಶಾಲೆಗೆ ತೆರಳಿ ಪಾಠ ಮಾಡಬಹುದು. ಆದರೆ, ಇದಕ್ಕಾಗಿ ಸರಳವಾದ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಆ ಪ್ರಕಾರ ಶಾಲೆಗೆ ತೆರಳಿ ಪಾಠ ಮಾಡಲು ಬಯಸುವವರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ನಮೂನೆಯೊಂದನ್ನು ಸಿದ್ಧಪಡಿಸಲಾಗಿದೆ. ಮಕ್ಕಳ ಹಕ್ಕುಗಳು ಮತ್ತು ಅವರ ಸುರಕ್ಷತೆ ಬಗ್ಗೆ ರಚಿಸಿರುವ ಯಾವುದೇ ನಿಯಮಗಳಿಗೆ ಚ್ಯುತಿಬಾರದಂತೆ ಶಾಲೆಯಲ್ಲಿ ನಡೆದುಕೊಳ್ಳಬೇಕು ಎಂದು ಷರತ್ತುಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನೋಂದಣಿ ಹೇಗೆ?: .... ಅಂತರ್ಜಾಲ ತಾಣಕ್ಕೆ ಹೋದರೆ ://../// ಲಿಂಕ್ ಸಿಗುತ್ತದೆ. ಅಲ್ಲಿಗೆ ಹೋಗಿ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮಕ್ಕಳಿಗೆ ಬೋಧನೆ ಮಾಡಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ಇ–ಮೇಲ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಬೇಕು. ಉದ್ಯೋಗದಲ್ಲಿರುವ ವ್ಯಕ್ತಿ ತಾನು ಜನಿಸಿದ ಊರು, ವ್ಯಾಸಂಗ ಮಾಡಿದ ಶಾಲೆ ಅಥವಾ ಆತ ಬಯಸುವ ಯಾವುದೇ ನಗರ/ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿಕೊಂಡ ಶಾಲೆಯ ಮುಖ್ಯ ಶಿಕ್ಷಕರಿಗೆ ಪೂರ್ವಭಾವಿಯಾಗಿ ಅವರು ಕೆಲಸ ನಿರ್ವಹಿಸುತ್ತಿರುವ ಅಧಿಕೃತ ಸಂಸ್ಥೆಯ ವಿಳಾಸದ ಗುರುತು ಪತ್ರದೊಂದಿಗೆ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕು. ವಿದ್ಯಾರ್ಹತೆ, ಮಕ್ಕಳಲ್ಲಿ ಹಂಚಿಕೊಳ್ಳಲು ಬಯಸುವ ವಿಷಯ, ಶಾಲೆಗೆ ಬರುವ ದಿನ, ಶಾಲೆಯಲ್ಲಿ ಇರುವ ಸಮಯ ಇತ್ಯಾದಿ ವಿವರಗಳನ್ನು ನೀಡಬೇಕು. ಶಾಲೆಗೆ ಬರಲು ಒಪ್ಪಿಕೊಂಡ ದಿನದಂದು (ಶನಿವಾರ) ಬರಲು ಆಗದಿದ್ದರೆ ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಶಾಲೆಗೆ ಭೇಟಿ ನೀಡಿದ ವೇಳೆ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಪಠ್ಯ ವಿಷಯ ಅಥವಾ ಪಠ್ಯದಲ್ಲಿನ ಬೋಧನಾ ಅಂಶಗಳಿಗೆ ಅನುಕೂಲವಾಗುವ ಪೂರಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದ ಇಲಾಖೆ ಇದೀಗ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿನ ಪ್ರತಿಭಾವಂತರ ಸೇವೆ ಪಡೆಯಲು ಕಾರ್ಯಕ್ರಮ ರೂಪಿಸಿದೆ. ಅವರ ಅನುಭವ, ಜ್ಞಾನ, ವಿಚಾರಗಳು ಮಕ್ಕಳಿಗೆ ತಲುಪಬೇಕು. ಆ ಮೂಲಕ ಮಕ್ಕಳ ಜ್ಞಾನ ವಿಕರ್ಷಿಸಬೇಕು ಎಂಬುದು ಇಲಾಖೆಯ ಆಶಯ. ಎರಡು ತಿಂಗಳ ಹಿಂದೆಯಷ್ಟೆ ಜಾರಿಗೆ ಬಂದಿರುವ ಈ ಕಾರ್ಯಕ್ರಮ ಫಲಕಾರಿಯಾಗುವುದೇ ಎಂಬುದನ್ನು ಕಾದುನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.