ಪಿಯುಸಿಯಲ್ಲಿ ಕ್ರಿಕೆಟ್‌ ಬರುವುದೆಂದು? ರಾಜ್ಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ಕ್ರಿಕೆಟ್‌ ಆಡುವ ಕನಸು ನನಸಾಗಿಸಲು ನಡೆಸಿದ ಪ್ರಯತ್ನಕ್ಕೆ ಈ ಬಾರಿಯೂ ಯಶಸ್ಸು ಸಿಗಲಿಲ್ಲ. ಪಿಯುಸಿ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಹತ್ತು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಈ ಬಾರಿ ಇದಕ್ಕೆ ಫಲ ಸಿಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕೊನೆಯ ಕ್ಷಣದಲ್ಲಿ ಇಲಾಖೆಯಲ್ಲಿ ಆದ ಬದಲಾವಣೆಗಳಿಂದಾಗಿ ಆಸೆ ಕಮರಿ ಹೋಗಿದೆ. ಬೆಲ್ಟ್‌ ಕುಸ್ತಿಯಂಥ ಆಧುನಿಕ ಶೈಲಿಯ ಕ್ರೀಡೆಯನ್ನು ಈ ಬಾರಿ ಹೊಸತಾಗಿ ಸೇರಿಸಿದ ಇಲಾಖೆ, ಜನಪ್ರಿಯ ಕ್ರೀಡೆಯಾದ ಕ್ರಿಕೆಟ್‌ ಅನ್ನು ಪರಿಗಣಿಸದೇ ಇರುವುದರ ಬಗ್ಗೆ ಬೇಸರ ವ್ಯಕ್ತವಾಗಿದೆ. ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 14 ಮತ್ತು 16 ವರ್ಷದೊಳಗಿನವರ ವಿಭಾಗದ ಕ್ರಿಕೆಟ್‌ ಇದೆ. ವಿಶ್ವವಿದ್ಯಾಲಯ ಮಟ್ಟದಲ್ಲೂ ಕ್ರಿಕೆಟ್‌ ಆಡಲು ಅವಕಾಶವಿದೆ. ಪಿಯುಸಿಯಲ್ಲಿ ಮಾತ್ರ ಎರಡು ವರ್ಷ ಇಲಾಖೆ ವತಿಯಿಂದ ಆಡಲು ಅವಕಾಶವಿಲ್ಲ. ಮಹತ್ವದ ಘಟ್ಟದಲ್ಲಿ ಅನಿವಾರ್ಯವಾಗಿ ಆಟದಿಂದ ದೂರ ಉಳಿಯಬೇಕಾಗಿ ಬರುವುದರಿಂದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಉನ್ನತ ಶಿಕ್ಷಣಕ್ಕೆ ಸೀಟು ಗಿಟ್ಟಿಸುವ ಸಂದರ್ಭದಲ್ಲಿ ಭಾರಿ ಹಿನ್ನಡೆಯಾಗುತ್ತದೆ ಎಂಬುದು ಪಿಯುಸಿ ಕ್ರೀಡೆಯಲ್ಲಿ ಕ್ರಿಕೆಟ್‌ ಅಳವಡಿಸಬೇಕು ಎಂದು ಒತ್ತಾಯಿಸುವವರ ವಾದ. ಶೈಕ್ಷಣಿಕ ವಾತಾವರಣದಲ್ಲಿ ಏಕಾಏಕಿ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬರುವುದರಿಂದ ಆಗುವ ನಷ್ಟದ ಬಗ್ಗೆ ಯೋಚಿಸಿದ ಕ್ರಿಕೆಟ್‌ ಪ್ರಿಯರು ಹತ್ತು ವರ್ಷಗಳಿಂದ ಈ ವಿಷಯಕ್ಕೆ ಸಂಬಂಧಪಟ್ಟು ಹೋರಾಟ ನಡೆಸುತ್ತಿದ್ದಾರೆ. ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಆದರೆ ಈ ಪ್ರಸ್ತಾಪವನ್ನು ಪ್ರತಿ ಬಾರಿ ಕ್ರೀಡಾ ಸಲಹಾ ಸಮಿತಿ ನಿರಾಕರಿಸುತ್ತ ಬಂದಿದೆ. ‘ಇಷ್ಟು ದೊಡ್ಡ ಕ್ರೀಡೆಯನ್ನು ಆಡಿಸುವುದು ಕಷ್ಟ ಸಾಧ್ಯ. ಹೀಗಾಗಿ ಅದರ ತಂಟೆಗೆ ಹೋಗುವುದು ಬೇಡ’ ಎಂಬುದು ಸಲಹಾ ಸಮಿತಿಯ ನಿಲುವು. ‘ಈ ಬಾರಿಯೂ ಕ್ರಿಕೆಟ್‌ ಸೇರ್ಪಡೆ ಕುರಿತು ಸಲಹಾ ಸಮಿತಿಯಲ್ಲಿ ಚರ್ಚೆ ಆಗಿದೆ. ಆದರೆ ಕ್ರಿಕೆಟ್‌ ಜನಪ್ರಿಯತೆಯೇ ಇದಕ್ಕೆ ಅಡ್ಡಿಯಾಗಿದೆ. ಈ ಆಟವನ್ನು ಸೇರಿಸಿದರೆ ಬಹುತೇಕ ಎಲ್ಲ ಕಾಲೇಜುಗಳೂ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ಅದನ್ನು ಆಡಿಸುವುದು ಕಷ್ಟ ಎಂಬ ಅಭಿಪ್ರಾಯ ಸಲಹಾ ಸಮಿತಿಯಿಂದ ಬಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ರವೀಂದ್ರ ರಿತ್ತಿ ತಿಳಿಸಿದರು. ಆದರೆ ಕ್ರೀಡಾ ಸಲಹಾ ಸಮಿತಿಯ ವಾದವನ್ನು ಕ್ರಿಕೆಟ್‌ ಸಂಘಟಕರು ಒಪ್ಪುವುದಿಲ್ಲ. ‘ಎಲ್ಲ ಕ್ರೀಡೆಗಳಿಗೂ ಅವಕಾಶ ಕೊಡಬೇಕಾದುದು ಇಲಾಖೆಯ ಕರ್ತವ್ಯ. ಇದರಿಂದ ನುಣುಚಿಕೊಳ್ಳುವುದು ಸರಿಯಲ್ಲ’ ಎನ್ನುತ್ತಾರೆ ಕ್ರಿಕೆಟ್ ಸೇರ್ಪಡೆಗೆ ಸಂಬಂಧಿಸಿ ಹೋರಾಟ ನಡೆಸುತ್ತಿರುವ, ಕೋಚ್‌ ವಸಂತ ಮುರ್ಡೇಶ್ವರ. ‘ರಾಜ್ಯ ಕ್ರಿಕೆಟ್‌ ಸಂಸ್ಥೆ 14 ಮತ್ತು 16 ವರ್ಷದೊಳಗಿನವರ ಟೂರ್ನಿ ಹಮ್ಮಿಕೊಳ್ಳುವುದರಿಂದ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡಲು ಆಟಗಾರರಿಗೆ ಅವಕಾಶವಿದೆ. ವಿಶ್ವವಿದ್ಯಾಲಯ ಮಟ್ಟದಲ್ಲೂ ಆಡಲು ಸಾಕಷ್ಟು ಅವಕಾಶವಿದೆ. ಆದರೆ ಪಿಯುಸಿಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಬೇರ್ಪಡಿಸಿದ ನಂತರ ಪಿಯು ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ 16 ವರ್ಷದೊಳಗಿನವರ ಟೂರ್ನಿಯಲ್ಲಿ ಆಡುವುದಾದರೂ ಕೇವಲ ಒಂದು ವರ್ಷ ಮಾತ್ರ ಅವಕಾಶ ಸಿಗುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಹೋರಾಟ ನಡೆಯುತ್ತಿದೆ’ ಎಂದು ವಸಂತ ಹೇಳಿದರು. * ಪಿಯುಸಿ ವಿದ್ಯಾರ್ಥಿಗಳ ಕ್ರೀಡಾ ಸ್ಪರ್ಧೆಗಳ ವಿವರ ಈಜು, ವಾಟರ್‌ ಪೋಲೊ, ಟೇಬಲ್‌ ಟೆನಿಸ್‌ ವಾಲಿಬಾಲ್‌ , ಕೊಕ್ಕೊ, ಫುಟ್‌ಬಾಲ್‌, ಕಬಡ್ಡಿ , ಬ್ಯಾಸ್ಕೆಟ್‌ಬಾಲ್‌, ಷಟಲ್‌ ಬ್ಯಾಡ್ಮಿಂಟನ್‌, ಬಾಲ್‌ ಬ್ಯಾಡ್ಮಿಂಟನ್‌, ಹಾಕಿ, ಥ್ರೋಬಾಲ್‌, ಟೆನಿಕಾಯ್ಟ್‌, ಅಥ್ಲೆಟಿಕ್ಸ್‌, ನೆಟ್‌ಬಾಲ್‌, ಕುಸ್ತಿ, ಚೆಸ್‌, ಸೈಕ್ಲಿಂಗ್‌, ಜೂಡೊ, ಜಿಮ್ನಾಸ್ಟಿಕ್ಸ್‌, ಯೋಗ, ಲಾನ್‌ ಟೆನಿಸ್‌, ಹ್ಯಾಂಡ್‌ಬಾಲ್‌, ಟೇಕ್ವಾಂಡೊ, ಬೆಲ್ಟ್‌ ಕುಸ್ತಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.