ಸವಾಲಿನ ಹಾದಿ ಮನೆಯಲ್ಲಿ ಕ್ರೀಡೆಗೆ ಪೂರಕವಾದ ವಾತಾವರಣ. ಮಕ್ಕಳಿಗೆ ಪಾಠದೊಂದಿಗೆ ಮೈದಾನದ ಒಡನಾಟವೂ ಮುಖ್ಯ ಎಂಬ ನೀತಿಯಲ್ಲಿ ನಂಬಿಕೆ ಇಟ್ಟಿರುವ ತಂದೆ. ಉತ್ತಮ ಬ್ಯಾಡ್ಮಿಂಟನ್ ಪಟು ಎಂದು ಹೆಸರು ಮಾಡಿದ ಅಣ್ಣ. ಇಂಥ ಪೂರಕ ವಾತಾವರಣದಲ್ಲಿ ಬೆಳೆದ ಆ ಆಟಗಾರ ರ‍್ಯಾಕೆಟ್‌ ಕೈಗೆತ್ತಿಕೊಂಡ ದಿನದಿಂದ ಕಠಿಣ ಪರಿಶ್ರಮ ಆರಂಭಿಸಿದ. ಸ್ಥಳೀಯ ಮಟ್ಟದಲ್ಲಿ ಸಿಗುವ ತರಬೇತಿ ಸಾಲದಿದ್ದಾಗ ಬೆಂಗಳೂರಿಗೆ ಹೋಗಿ ಅಭ್ಯಾಸದಲ್ಲಿ ತೊಡಗಿದ. ಅಲ್ಲಿ ಕ್ರೀಡಾ ಜೀವನದ ದಿಕ್ಕನ್ನೇ ಬದಲಿಸಿಕೊಂಡ. ಆ ಆಟಗಾರ ಈಗ ಥಾಯ್ಲೆಂಡ್‌ನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ರಾಜ್ಯದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ, ಧಾರವಾಡದ ಅಭಿಷೇಕ್ ಎಲಿಗಾರ ನಾಳೆಯಿಂದ (ಸೆಪ್ಟೆಂಬರ್‌ 29) ಅಕ್ಟೋಬರ್‌ 4ರ ವರೆಗೆ ನಡೆಯಲಿರುವ ಥಾಯ್ಲೆಂಡ್‌ ಓಪನ್‌ ಗ್ರಾಂಡ್‌ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಡುವ ಭಾರತದ ಏಕೈಕ ಆಟಗಾರ. ಬ್ಯಾಡ್ಮಿಂಟನ್‌ನಲ್ಲಿ ಪ್ರೌಢಿಮೆ ಸಾಧಿಸಿರುವ ಇಂಡೋನೇಷ್ಯಾ, ಮಲೇಷ್ಯಾ, ಜಪಾನ್‌, ಕೊರಿಯಾ ಮತ್ತು ಆತಿಥೇಯ ಥಾಯ್ಲೆಂಡ್‌ನ ಶ್ರೇಯಾಂಕಿತ ಆಟಗಾರರ ಜೊತೆ ಸೆಣಸಲಿರುವ ಅಭಿಷೇಕ್‌ಗೆ ಈ ಟೂರ್ನಿಯಲ್ಲಿ ಶ್ರೇಯಾಂಕ ಇಲ್ಲ. ಆದರೂ ಉತ್ತಮ ಸಾಧನೆ ತೋರುವ ಭರವಸೆಯಲ್ಲಿದ್ದಾರೆ. ಈ ವರ್ಷ ಈಗಾಗಲೇ ವಿದೇಶದಲ್ಲಿ ಎರಡು ಪ್ರಮುಖ ಟೂರ್ನಿಗಳಲ್ಲಿ ಆಡಿರುವ ಅನುಭವವೇ ಅವರ ಆತ್ಮವಿಶ್ವಾಸಕ್ಕೆ ಕಾರಣ. ಧಾರವಾಡದ ಉದಯರವಿ ಹಾಗೂ ಅನಿತಾ ಅವರ ಪುತ್ರ ಅಭಿಷೇಕ್‌ ಹುಬ್ಬಳ್ಳಿಯ ಜೆ.ಜಿ.ವಾಣಿಜ್ಯ ಕಾಲೇಜಿನ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿ. ಅಣ್ಣ ಋಷಿಕೇತ್‌ ಎಲಿಗಾರ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು. ಸಹೋದರನ ಜೊತೆಯಲ್ಲೇ ಬ್ಯಾಡ್ಮಿಂಟನ್ ಅಂಗಳಕ್ಕೆ ಇಳಿದ ಅಭಿಷೇಕ್‌ ಅವರ ಆರಂಭಿಕ ಅಭ್ಯಾಸ ನಡೆದದ್ದು ಕರ್ನಾಟಕ ವಿವಿ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ. ಶಾಲಾ ಹಂತದಲ್ಲಿ ಉತ್ತಮ ಹೆಸರು ಮಾಡಿದ್ದ ಅವರ ಆಟದ ವೇಗ ಮತ್ತು ತಂತ್ರಗಳನ್ನು ಗಮನಿಸಿದ ಸಂಬಂಧಿಕರೊಬ್ಬರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಸೇರಿಸಲು ನೆರವಾದರು. ಅಲ್ಲಿ ತರಬೇತುದಾರ ಗಂಗೂಲಿ ಪ್ರಸಾದ್ ಅವರು ಅಭಿಷೇಕ್‌ ಪ್ರತಿಭೆಗೆ ಸಾಣೆ ಹಿಡಿದರು. ಇದು ನಡೆದದ್ದು 2008–09ರ ಅವಧಿಯಲ್ಲಿ. ಆಗ ಅಭಿಷೇಕ್‌ಗೆ 15 ವರ್ಷ. ನಂತರ ಧಾರವಾಡದಲ್ಲಿ ನಡೆದ ಟೂರ್ನಿಯೊಂದರಲ್ಲಿ ಅಭಿಷೇಕ್‌ ಆಟವನ್ನು ಗಮನಿಸಿದ ಅಂತರರಾಷ್ಟ್ರೀಯ ಖ್ಯಾತಿಯ ವಿಮಲ್‌ ಕುಮಾರ್‌ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ತರಬೇತಿ ಕೊಟ್ಟರು. 2011ರಲ್ಲಿ ಕೊರಿಯಾದಲ್ಲಿ ನಡೆದ ಏಷ್ಯಾ ಮಟ್ಟದ ಜೂನಿಯರ್‌ ಆಟಗಾರರ ಟೂರ್ನಿಯಲ್ಲಿ ಪಾಲ್ಗೊಂಡರು. ಅಷ್ಟರಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎಲಿಗಾರ ಕರ್ನಾಟಕ ವಿವಿ ಬ್ಯಾಡ್ಮಿಂಟನ್‌ ತಂಡವನ್ನೂ ಪ್ರತಿನಿಧಿಸಿದ್ದರು. 16 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ ಮತ್ತು ಡಬಲ್ಸ್ ವಿಭಾಗಗಳೆರಡರಲ್ಲೂ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದ ಅವರು 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ನಿರಂತರ ಎರಡು ಬಾರಿ ಚಾಂಪಿಯನ್ ಆದರು. ಮೂರು ಬಾರಿ ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರತಿಭೆ ಒರೆಗೆ ಹಚ್ಚಿದ್ದಾರೆ. ಮುಕ್ತ ಟೂರ್ನಿಗಳ ಕಡೆಗೆ ಒಲವು ಸದ್ಯ ಮುಕ್ತ ಟೂರ್ನಿಗಳ ಕಡೆಗೆ ಒಲವು ಹೊಂದಿರುವ ಅವರು ಈ ವರ್ಷದ ಮೇ ತಿಂಗಳಲ್ಲಿ ಸ್ಮೈಲಿಂಗ್ ಫಿಷ್ ಥಾಯ್ಲೆಂಡ್‌ ಅಂತರರಾಷ್ಟ್ರೀಯ ಸರಣಿಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್‌ ಮೊದಲ ವಾರದಲ್ಲಿ ನಡೆದ ವಿಕ್ಟರ್‌ ಇಂಡೋನೇಷ್ಯಾ ಅಂತರರಾಷ್ಟ್ರೀಯ ಚಾಲೆಂಜ್‌ ಟೂರ್ನಿಯಲ್ಲೂ ಪಾಲ್ಗೊಂಡಿದ್ದರು. ಎರಡು ವರ್ಷಗಳಲ್ಲಿ ಬಹರೇನ್‌ ಓಪನ್‌, ಟಾಟಾ ಕಪ್‌ ಮತ್ತು ಸಯ್ಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಅವರಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಆಗಲಿಲ್ಲ. ಹೀಗಾಗಿ ಈಗ ಥಾಯ್ಲೆಂಡ್‌ನಲ್ಲಿ ಉತ್ತಮ ಸಾಧನೆಯ ಛಲ ಮೂಡಿದೆ. ‘ಸದ್ಯ ವಿಶ್ವರ‍್ಯಾಂಕಿಂಗ್‌ನಲ್ಲಿ 300ನೇ ಸ್ಥಾನದಲ್ಲಿರುವ ನನಗೆ ಈ ಟೂರ್ನಿಯಲ್ಲಿ ಕನಿಷ್ಠ 60 ಪಾಯಿಂಟ್‌ಗಳನ್ನು ಬ್ರೇಕ್‌ ಮಾಡುವ ಗುರಿ ಇದೆ. ಇದಕ್ಕಾಗಿ ಕಠಿಣ ಪರಿಶ್ರಮ ಹಾಕುತ್ತಿದ್ದೇನೆ’ ಎಂದು ಥಾಯ್ಲೆಂಡ್‌ನಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಭಿಷೇಕ್ ಹೇಳಿದರು. ‘ದೇಶದಲ್ಲಿ ಬ್ಯಾಡ್ಮಿಂಟನ್‌ ಈಗ ಉತ್ತಮ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾದದ್ದು ಖುಷಿ ನೀಡಿದೆ. ಮೂಲಸೌಕರ್ಯ ಇಲ್ಲದ ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಕಠಿಣ ಶ್ರಮ ಹಾಕಿದ್ದರಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದು ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.