ಮರುಳಾದೆನೊ ಮರಳಾಟಕ್ಕೆ! ಆಟ ಎಂದರೆ ಮಕ್ಕಳಿಗೆ ಪಂಚಪ್ರಾಣ. ಅದರಲ್ಲೂ ಸಮುದ್ರತೀರದ ಮರಳಾಟ? ಮರಳಾಟದಲ್ಲಿ ಮಕ್ಕಳಿಗೆ ಸಮಯ ಕಳೆದದ್ದೇ ತಿಳಿಯದು. ಆದರೆ, ಎಲ್ಲಾ ಊರುಗಳಲ್ಲೂ ಸಮುದ್ರವಿರಬೇಕಲ್ಲ!. ಹಲವಾರು ಸಲ ಮನೆ ಕಟ್ಟಲು ದಾರಿಯ ಬದಿಯಲ್ಲಿ ಗುಡ್ಡೆ ಹಾಕಿರುವ ಮರಳಿನಲ್ಲಿ ಆಡುವ ಆಸೆ ಮಕ್ಕಳಿಗೆ. ಸಮಯ ಬೇಕಲ್ಲ? ಇಂದಿನ ಆಧುನಿಕ ಯುಗದಲ್ಲಿ. ಎಲ್ಲೆಲ್ಲೂ ತಂತ್ರಜ್ಞಾನವೇ ತಾಂಡವವಾಡುತ್ತಿರುವ ಕಾಲದಲ್ಲಿ ಮರಳಾಟ ಮಕ್ಕಳಿಗೆ ದೂರದ ಮಾತೇ. ಏನೀ ಮರಳಾಟ ( )? ಬಾಲ್ಯದಲ್ಲಿ ನಾವೆಲ್ಲರೂ ಮರಳಿನಲ್ಲಿ ಮನೆ ಕಟ್ಟಿ, ವಿವಿಧ ಚಿತ್ರಗಳನ್ನು ಮಾಡಿ, ನಮ್ಮ ಹೆಸರನ್ನು ಮರಳಿನಲ್ಲಿ ತಿದ್ದಿದ್ದು ನೆನಪಿರಬಹುದು. ಆದರೆ ‘ಮರಳಾಟ’ ಅಥವಾ ‘ ’ ಎನ್ನುವುದು ಒಂದು ರೀತಿಯ ಮನಶಾಸ್ತ್ರದ ಪರೀಕ್ಷೆಯಾಗಿ ಮತ್ತು ಚಿಕಿತ್ಸೆಯಾಗಿ ರೂಪುಗೊಂಡಿದ್ದು 1950ರ ದಶಕದಲ್ಲಿ. ಸ್ವಿಟ್ಜರ್‌ಲ್ಯಾಂಡಿನ ಮನಶಾಸ್ತ್ರಜ್ಞೆ ಡೋರಾಕಾಲ್ಫ್ ಇದರ ರೂವಾರಿ. ಹೇಗೆ ನಮ್ಮ ದೇಹದ ಮೇಲೆ ಆಗುವಂತಹ ಕೆಲವು ಗಾಯಗಳಿಗೆ ಸರಿಯಾದ ವಾತಾವರಣ ಕಲ್ಪಿಸಿದಾಗ, ಗುಣಮುಖ ಹೊಂದಲು ತಮ್ಮದೇ ಸಹಜ ಶಕ್ತಿಯಿರುತ್ತದೋ, ಹಾಗೆಯೇ ಮನಸ್ಸಿನ ನೋವು/ಆಘಾತಗಳಿಗೂ ಗುಣಮುಖವಾಗುವ ಶಕ್ತಿ ( ) ಇದೆ ಎನ್ನುವ ತತ್ವದ ಆಧಾರದ ಮೇಲೆ ಈ ‘ಮರಳಾಟ’ ಚಿಕಿತ್ಸೆಯಾಗಿ ರೂಪುಗೊಂಡಿತು. ಯಾವ ರಹಸ್ಯವನ್ನು ಬುದ್ಧಿಯು ಪರಿಹರಿಸಲು ನಿರರ್ಥಕವಾಗಿ ಪ್ರಯತ್ನಿಸುತ್ತದೋ, ಅದರಲ್ಲಿ ಕೈಗಳು ಯಶಸ್ಸುಗಳಿಸುತ್ತವೆ ಎಂಬುದು ಪ್ರಸಿದ್ಧ ಮನಶಾಸ್ತ್ರಜ್ಞ ಸಿ.ಜಿ. ಯೂಂಗ್ ಹೇಳಿದ ಮಾತು. ಅಂತೆಯೇ ಮನಸ್ಸಿನ ಒಳಪದರದಲ್ಲಿ ಹುದುಗಿರುವ ಅನೇಕ ರಹಸ್ಯಗಳು, ಈ ಹಿಂದೆ ನಡೆದಿರುವ ಘಟನೆಗಳು ಈ ಮರಳಾಟದಿಂದ ಹೊರಹೊಮ್ಮಲು ಸಾಧ್ಯವಿದೆ. 3-4 ವರ್ಷಗಳ ಚಿಕ್ಕ ಮಕ್ಕಳಿಂದ ವಯಸ್ಕರ ತನಕ ಎಲ್ಲರಲ್ಲೂ ಇದನ್ನು ಒಂದು ರೀತಿಯ ‘ಮಾನಸಿಕ ಪರೀಕ್ಷೆ’ ( ) ಆಗಿ ಮತ್ತು ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಮರಳಾಟ/ ‘ ’ ಪರಿಕರಗಳೇನು? ಡೋರಾ ಕಾಲ್ಫ್ ರೂಪಿಸಿದ ‘ಮರಳಾಟ’ ಮಾದರಿಯಲ್ಲಿ 19.5 28.5 3 ಇಂಚುಗಳ ಅಳತೆಯ ಎರಡು ಟ್ರೇಗಳಲ್ಲಿ ಮರಳನ್ನು ಇಡಲಾಗುತ್ತದೆ. ಒಂದು ನೀರನ್ನು ಎರೆದುಕೊಂಡು ಒದ್ದೆ ಮಾಡಿ ಆಡಲು, ಮತ್ತೊಂದು ತೇವಾಂಶವಿಲ್ಲದೆ ಆಡುವುದಕ್ಕೆ. ಈ ಟ್ರೇಯ ಪಕ್ಕೆಗಳಿಗೆ ಮತ್ತು ಮೇಲ್ಮೈಗೆ ನೀಲಿಯ ಬಣ್ಣ ಹಚ್ಚಿರುತ್ತಾರೆ. ಈ ನೀಲಿ ಬಣ್ಣ ಆಕಾಶ ಹಾಗೂ ಸಮುದ್ರವನ್ನು ಸೂಚಿಸುತ್ತದೆ. ಬೇಕಾದಾಗ ಉಪಯೋಗಿಸಲು ನೀರನ್ನು ಹತ್ತಿರದಲ್ಲಿ ಇಡಲಾಗುತ್ತದೆ. ಜೀವನದ/ಪ್ರಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಚಿಕ್ಕ ಚಿಕ್ಕ ಆಟಿಕೆಗಳನ್ನು/ವಿವಿಧ ಆಕೃತಿಯ ಅಚ್ಚು ಮಾಡಲು ವಸ್ತುಗಳನ್ನು ಕೊಡಲಾಗುತ್ತದೆ. ‘ಮರಳಾಟ’ ದ ಪ್ರಕ್ರಿಯೆ ಮಗುವಿಗೆ ಈ ಕೊಠಡಿಯಲ್ಲಿ ಆಟವಾಡಲು ಬಿಡುತ್ತಾರೆ. ಮನಶಾಸ್ತ್ರಜ್ಞ ಕೇವಲ ಜೊತೆಯಲ್ಲಿದ್ದು, ಮಗು ಮಾಡುವ ಮರಳಿನ ಆಕೃತಿಗಳನ್ನು ಗಮನಿಸುತ್ತಾ ಒಂದು ಪುಸ್ತಕದಲ್ಲಿ ಬರೆದುಕೊಳ್ಳುತ್ತಾನೆ. ಯಾವುದೇ ರೀತಿಯ ಸಲಹೆಗಳನ್ನು ಅಥವಾ ‘ಹೀಗೆ ಮಾಡು/ಹಾಗೆ ಮಾಡು’ ಎಂದು ಸೂಚಿಸುವುದಿಲ್ಲ. ನಂತರದಲ್ಲಿ ಈ ಆಕೃತಿಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಿದಾಗ ಸಮಸ್ಯೆಗಳನ್ನು ತಿಳಿಯಬಹುದು. ಇದನ್ನೇ ಹೆಚ್ಚಿನ ಪರಿಣತಿ ಹೊಂದಿದವರು ಚಿಕಿತ್ಸೆಯಾಗಿ ಕೂಡ ಬಳಸಲು ಸಾಧ್ಯ. ಹೇಳಿಕೊಳ್ಳಲಾಗದ, ಮನದಾಳದಲ್ಲಿ ಹುದುಗಿದ ಹಲವಾರು ಮಾನಸಿಕ ಸಮಸ್ಯೆಗಳು ಈ ಮರಳಾಟದ ಮೂಲಕ ಹೊರಬರಲು ಸಾಧ್ಯವಿದೆ. ಆಟ-ಪಾಠ ಎಲ್ಲಾ ಮಕ್ಕಳಿಗೂ ಮಾನಸಿಕ ಸಮಸ್ಯೆಗಳಿರುವುದಿಲ್ಲ. ಎಲ್ಲಾ ಮನೆಗಳಲ್ಲೂ ಮನಶಾಸ್ತ್ರಜ್ಞರಿರುವುದಿಲ್ಲ. ಈ ಮರಳಾಟವನ್ನು ಕೇವಲ ಆಟವಾಗಿ ಉಪಯೋಗಿಸಿ, ಇದರಿಂದ ಮಕ್ಕಳು ಪಾಠ ಕಲಿಯುವಂತೆ ಮಾಡಬಹುದೇ? ಹೌದು. ಖಂಡಿತ ಸಾಧ್ಯವಿದೆ. ಮುಗ್ಧ ಮಕ್ಕಳ ಮನಸ್ಸಿಗೆ ಸಾವಿರಾರು ರೂಪಾಯಿ ಕೊಟ್ಟು ಕೊಂಡು ತಂದ ಆಟದ ಸಾಮಾನುಗಳೂ ಒಂದೇ, ದಾರಿ ಬದಿಯಲ್ಲಿ ಸಿಗುವ ಮರಳೂ/ಮನೆಯ ಹಳೆಯ ಡಬ್ಬಿಗಳೂ ಒಂದೇ. ಆಟವನ್ನು ಕುತೂಹಲಕಾರಿಯಾಗಿ/ಮನೋರಂಜಕವಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಅದಕ್ಕಾಗಿ ಕೆಲವು ಸಲಹೆಗಳು. *ಮನೆಯ ಹೊರಾಂಗಣದಲ್ಲೇ ಒಂದು ಗುಡ್ಡೆ ಮರಳನ್ನು ಹಾಕಿಕೊಂಡು, ಮನೆಯಲ್ಲೇ ಸಿಗುವ ಹಳೆಯ ಡಬ್ಬಿಗಳು/ ಮುಚ್ಚಳಗಳು, ಬೇರೆ ಬೇರೆಯ ಆಕಾರಗಳನ್ನು ತೆಗೆದುಕೊಳ್ಳಬೇಕು. *ನೀರನ್ನು ಉಪಯೋಗಿಸಿ ಈ ಮೇಲೆ ಹೇಳಿದ ಪರಿಕರಗಳನ್ನು ತೆಗೆದುಕೊಂಡು, ಮಕ್ಕಳಿಗೆ ಆಟವಾಡಲು ಬಿಡಿ. *ಅವರ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳನ್ನು / ಊಹೆಗಳನ್ನು ಮರಳಿನಲ್ಲಿ ಮಾಡಿ ಪರೀಕ್ಷಿಸಲು ಅವಕಾಶ ನೀಡಿ. *ಕೇವಲ ಮುಕ್ತ ಪ್ರಶ್ನೆಗಳನ್ನು ( ) ಕೇಳಿ. ಉದಾಹರಣೆಗೆ ‘ಹೀಗೆ ಮಾಡಿದರೆ ಏನಾಗಬಹುದು?. ‘ಅದರ ಬಗ್ಗೆ ನಿನಗೇನನ್ನಿಸುತ್ತದೆ?’ ಇತ್ಯಾದಿ. ಏನು ಕಲಿಸಬಹುದು? *ಮರಳಾಟದಿಂದ ಮಕ್ಕಳ ದೈಹಿಕ ಕೌಶಲಗಳು ಹೆಚ್ಚಿ, ಸ್ನಾಯುಗಳು ಬಲಯುತವಾಗುತ್ತದೆ. ಕಣ್ಣು-ಕೈ ನಿಯಂತ್ರಣ ಉತ್ತಮಗೊಳ್ಳುತ್ತದೆ. *ಎರಡು ಮೂರು ಮಕ್ಕಳು ಸೇರಿ ಆಡಿದಾಗ ಅವರ ಸಾಮಾಜಿಕ ಕೌಶಲಗಳು ಹೆಚ್ಚಲು ಸಹಕಾರಿ. *ಮಕ್ಕಳ ಮೆದುಳು / ಬುದ್ಧಿಶಕ್ತಿ ಚುರುಕಾಗುತ್ತದೆ. *ಏಕಾಗ್ರತೆ ಉತ್ತಮಗೊಳ್ಳುತ್ತದೆ. *ಹೆಚ್ಚು/ ಕಡಿಮೆ, ಭಾರ/ ಹಗುರ, ಸಂಖ್ಯೆ ಎಣಿಸುವುದು ಈ ಎಲ್ಲಾ ಗಣಿತದ ತತ್ವಗಳನ್ನು ಇದರ ಮೂಲಕ ಕಲಿಸಬಹುದು. *ಉಪಯೋಗಿಸುವ ಆಟಿಕೆಗಳನ್ನು ಬೇರೆ ಬೇರೆ ವಿಷಯಕ್ಕೆ ತಕ್ಕಂತೆ ಬದಲಾಯಿಸಿದರೆ, ಅದರ ಆಧಾರದ ಮೇಲೆ ಮಕ್ಕಳಿಗೆ ಕಲಿಸಬಹುದು. *ಮಕ್ಕಳ ಸೃಜನಶೀಲತೆ ಹೊರಹೊಮ್ಮಲು ಇದೊಂದು ಅಪೂರ್ವ ಅವಕಾಶ. *ಈ ಆಟ ಒಂದು ಪ್ರಕ್ರಿಯೆಯಾಗಬೇಕು. ಮಕ್ಕಳು ಆನಂದಿಸಬೇಕು. ಮತ್ತೊಂದು ಹೋಂವರ್ಕ್ ಮಾಡುವ ಅವಧಿಯಾಗಬಾರದು. ಪ್ರೀತಿಯಿಂದ ಎದುರುನೋಡುವ ಸಮಯವಾಗಬೇಕು. *21ನೇಯ ಶತಮಾನದ ತಂತ್ರಜ್ಞಾನದ ಯುಗದಲ್ಲಿ ಮಕ್ಕಳ ಸೃಜನಶೀಲತೆ ಎಲ್ಲೋ ಕಳೆದುಹೋಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮರಳಾಟದ ಲಾಭ ಸಿಕ್ಕರೆ, ಅವರ ಸೃಜನಶೀಲತೆ, ಕಲ್ಪನಾ ಶಕ್ತಿ ಹೊರಹೊಮ್ಮಿ, ಅವರ ಬೆಳವಣಿಗೆ ಉತ್ತಮಗೊಳ್ಳುವಲ್ಲಿ ಸಂಶಯವಿಲ್ಲ. ಮನದ ಮೈದಾನದಲ್ಲಿ ನಡೆಯುವ ಆಟ ಮರಳಲ್ಲಿ ಮೂಡಿ ಜೀವನ ಪಾಠವಾಗುವುದು ಖಂಡಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.