ರಾಷ್ಟ್ರೀಯ ತಂಡಕ್ಕಿಂತ ಕ್ಲಬ್‌ ಮುಖ್ಯವೇ? ಸತತ ನಾಲ್ಕು ಸೋಲು... 2018ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ಭಾರತ ತಂಡದ ‘ಸಾಧನೆ’ ಇದು. ಏಷ್ಯಾ ವಲಯದ ಎರಡನೇ ಸುತ್ತಿನ ‘ಡಿ’ ಗುಂಪಿನಲ್ಲಿರುವ ಭಾರತ ಆಡಿದ ಎಲ್ಲ ನಾಲ್ಕೂ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಹೋದ ಗುರುವಾರ (ಅ. 8 ರಂದು) ನಡೆದ ಪಂದ್ಯದಲ್ಲಿ ಭಾರತ ತಂಡ ತುರ್ಕಮೇನಿಸ್ತಾನ ಎದುರು ಅವರದ್ದೇ ನೆಲದಲ್ಲಿ 1–2 ಗೋಲುಗಳ ಸೋಲು ಅನುಭವಿಸಿತ್ತು. ಈ ಹಿಂದಿನ ಪಂದ್ಯಗಳಲ್ಲಿ ಭಾರತ ತಂಡ ಇರಾನ್‌ (0–3), ಒಮನ್‌ (1–2) ಮತ್ತು ಗ್ವಾಮ್‌ (1–2) ತಂಡಗಳ ಕೈಯಲ್ಲಿ ಪರಾಭವಗೊಂಡಿತ್ತು. ಅಷ್ಟೇನೂ ಪ್ರಬಲ ತಂಡ ಆಗಿರದ ಗ್ವಾಮ್‌ ಎದುರು ಸೋತಾಗ ಭಾರತ ತಂಡ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ತುರ್ಕಮೇನಿಸ್ತಾನ ಎದುರಿನ ಸೋಲು ಕೂಡಾ ಚರ್ಚೆಗೆ ಕಾರಣವಾಗಿದೆ. ತುರ್ಕಮೇನಿಸ್ತಾನ ತಂಡ (155) ಫಿಫಾ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತಕ್ಕಿಂತ (167) ಮೇಲಿನ ಸ್ಥಾನದಲ್ಲಿದೆ. ಮಾತ್ರವಲ್ಲ, ತವರು ನೆಲದಲ್ಲಿ ಆ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಮಹತ್ವದ ಪಂದ್ಯಕ್ಕೆ ಭಾರತ ಸಿದ್ಧಗೊಂಡ ರೀತಿ ಟೀಕೆಗೆ ಎಡೆಮಾಡಿಕೊಟ್ಟಿದೆ. ಅಭ್ಯಾಸ ಶಿಬಿರ ಇರಲಿಲ್ಲ ವಿಶ್ವಕಪ್‌ ಟೂರ್ನಿಯ ಅರ್ಹತಾ ಪಂದ್ಯಗಳನ್ನು ಎಲ್ಲ ದೇಶಗಳು ಗಂಭೀರವಾಗಿ ಪರಿಗಣಿಸುತ್ತವೆ. ಏಕೆಂದರೆ ವಿಶ್ವಕಪ್‌ನಲ್ಲಿ ಆಡಬೇಕೆಂಬ ಕನಸು ಎಲ್ಲ ತಂಡಗಳಿಗೂ ಇರುತ್ತವೆ. ತುರ್ಕಮೇನಿಸ್ತಾನ ಎದುರಿನ ಪಂದ್ಯವನ್ನು ಭಾರತ ಗಂಭೀರವಾಗಿ ಪರಿಗಣಿಸದ್ದು ಹಲವರಿಗೆ ಅಚ್ಚರಿ ಉಂಟುಮಾಡಿದೆ. ಸರಿಯಾದ ಸಿದ್ಧತೆ ಇಲ್ಲದೆಯೇ ಈ ಪಂದ್ಯ ಆಡಿದೆ. ರಾಷ್ಟ್ರೀಯ ತಂಡದ ಕೆಲವು ಆಟಗಾರರು ಈಗ ನಡೆಯುತ್ತಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡುತ್ತಿದ್ದಾರೆ. ತುರ್ಕಮೇನಿಸ್ತಾನ ಎದುರಿನ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳಿರುವಾಗ ಈ ಆಟಗಾರರನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಬಿಡುಗಡೆ ಮಾಡಿತ್ತು. ಭಾನುವಾರ (ಅ. 4) ಸಂಜೆ ಯೊಳಗೆ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟಂಟೈನ್‌ ಅವರ ಬಳಿ ಹೆಸರು ನೋಂದಾಯಿಸುವಂತೆ ಆಟಗಾರರಿಗೆ ಎಐಎಫ್‌ಎಫ್‌ ಸೂಚಿಸಿತ್ತು. ಆದರೆ ಡೆಲ್ಲಿ ಡೈನಾಮೋಸ್‌ ತಂಡ ತನ್ನ ಮೂವರು ಆಟಗಾರರನ್ನು (ರಾಬಿನ್‌ ಸಿಂಗ್‌, ಫ್ರಾನ್ಸಿಸ್‌ ಫೆರ್ನಾಂಡಿಸ್‌ ಮತ್ತು ಸೆಹನಜ್‌ ಸಿಂಗ್‌) ಈ ಅವಧಿಯೊಳಗೆ ಬಿಟ್ಟುಕೊಟ್ಟಿರಲಿಲ್ಲ. ಡೆಲ್ಲಿ ತಂಡಕ್ಕೆ ಅ. 4 ರಂದು ಎಫ್‌ಸಿ ಗೋವಾ ವಿರುದ್ಧ ಪಂದ್ಯ ಇದ್ದದ್ದೇ ಇದಕ್ಕೆ ಕಾರಣ. ಭಾರತ ತಂಡ ಸೋಮವಾರ (ಅ.5) ತುರ್ಕಮೇನಿಸ್ತಾನಕ್ಕೆ ಪ್ರಯಾಣ ಬೆಳೆಸಿತ್ತು. ಈ ಮೂವರು ಆಟಗಾರರು ದುಬೈನಲ್ಲಿ ತಂಡವನ್ನು ಸೇರಿಕೊಂಡಿದ್ದರು. ಅಂತರರಾಷ್ಟ್ರೀಯ ಪಂದ್ಯಕ್ಕೆ ಮುನ್ನ 5–6 ದಿನಗಳ ಅಭ್ಯಾಸ ಶಿಬಿರ ನಡೆಸುವುದು ಸಾಮಾನ್ಯ. ಭಾರತ ತಂಡಕ್ಕೆ ಅದಕ್ಕೂ ಸಮಯ ಇಲ್ಲದಾಯಿತು. ಆಟಗಾರರು ತರಾತುರಿಯಲ್ಲಿ ಈ ಪಂದ್ಯದಲ್ಲಿ ಆಡಿದ್ದಾರೆ. ಪಂದ್ಯಕ್ಕೆ ಎರಡು ದಿನಗಳಿರುವಾಗ ಅಲ್ಪ ಹೊತ್ತು ಅಭ್ಯಾಸ ನಡೆಸಿದ್ದಾರೆ. ಇಂತಹ ತಂಡದಿಂದ ಗೆಲುವು ನಿರೀಕ್ಷಿಸುವುದು ಹೇಗೆ? ಭಾರತ– ಇರಾನ್‌ ನಡುವಿನ ಅರ್ಹತಾ ಪಂದ್ಯ ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 8 ರಂದು ನಡೆದಿತ್ತು. ತುರ್ಕಮೇನಿಸ್ತಾನ ವಿರುದ್ಧದ ಪಂದ್ಯಕ್ಕೆ ಆ ಬಳಿಕ ಒಂದು ತಿಂಗಳ ಕಾಲಾವಕಾಶವಿದ್ದರೂ ಎಐಎಫ್‌ಎಫ್‌ ರಾಷ್ಟ್ರೀಯ ತಂಡದ ತರಬೇತಿ ಶಿಬಿರ ಆಯೋಜಿಸದೇ ಇದ್ದದ್ದು ವಿಪರ್ಯಾಸ ಎನ್ನಬೇಕು. ಪರಿಹಾರ ಕಂಡುಕೊಳ್ಳುವುದು ಅಗತ್ಯ ಐಎಸ್‌ಎಲ್‌ ಟೂರ್ನಿ ದೇಶದ ಫುಟ್‌ಬಾಲ್‌ ಕ್ರೀಡೆಗೆ ಹೊಸ ಜೀವ ತುಂಬಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಭಾರತ ಆಡುವ ಅಂತರರಾಷ್ಟ್ರೀಯ ಪಂದ್ಯಗಳ ಮೇಲೆ ಈ ಲೀಗ್‌ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಐಎಫ್‌ಎಫ್‌ ಮೇಲಿದೆ. ರಾಷ್ಟ್ರೀಯ ತಂಡದ ಆಟಗಾರರು ಅಂತರರಾಷ್ಟ್ರೀಯ ಪಂದ್ಯಕ್ಕೆ ಸಾಕಷ್ಟು ಮುನ್ನವೇ ತಮ್ಮ ಕ್ಲಬ್‌ನಿಂದ ಹೊರಬರುವಂತೆ ಮಾಡಲು ಎಐಎಫ್‌ಎಫ್‌ ಕ್ರಮ ಕೈಗೊಳ್ಳಬೇಕು. ಅಥವಾ ಅಂತರರಾಷ್ಟ್ರೀಯ ಪಂದ್ಯಗಳು ಇದ್ದರೆ ಈ ಆಟಗಾರರು ಐಎಸ್‌ಎಲ್‌ನಲ್ಲಿ ಪಾಲ್ಗೊಳ್ಳುವುದನ್ನು ತಡೆಯಬೇಕು. ಕ್ಲಬ್‌ಗಿಂತ ದೇಶ ಮುಖ್ಯ ಎಂಬುದನ್ನು ಆಟಗಾರರಿಗೆ ತಿಳಿಸುವುದು ಅಗತ್ಯ. ಐಎಸ್‌ಎಲ್‌ನ ವೇಳಾಪಟ್ಟಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಅವಕಾಶ ಎಐಎಫ್‌ಎಫ್‌ಗೆ ಇದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಟೂರ್ನಿಯ ವೇಳಾಪಟ್ಟಿಯು ಭಾರತ ಕ್ರಿಕೆಟ್‌ ತಂಡದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಡ್ಡಿಯಾಗದ ರೀತಿಯಲ್ಲಿರುತ್ತದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇದಕ್ಕಾಗಿ ಸ್ಪಷ್ಟ ಯೋಜನೆಯನ್ನು ರೂಪಿಸಿದೆ. ಇದರಿಂದ ಆಟಗಾರರಿಗೆ ಐಪಿಎಲ್‌ನಲ್ಲಿ ಪೂರ್ಣವಾಗಿ ಆಡುವ ಅವಕಾಶ ದೊರೆಯುತ್ತದೆ. ಇಲ್ಲೊಂದು ಅಂಶವನ್ನು ಗಮನಿಸಬೇಕು. ಬಿಸಿಸಿಐಗೆ ಹೆಚ್ಚಿನ ಬಲ ಇದೆ. ಅದು ತನ್ನ ಪ್ರಭಾವ ಬಳಸಿಕೊಂಡು ಐಪಿಎಲ್‌ ಅವಧಿಯಲ್ಲಿ ಭಾರತಕ್ಕೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲದಂತೆ ನೋಡಿಕೊಳ್ಳುತ್ತದೆ. ಆದರೆ ಎಐಎಫ್‌ಎಫ್‌ಗೆ ಅದು ಸಾಧ್ಯವಿಲ್ಲ. ಏಕೆಂದರೆ ಫುಟ್‌ಬಾಲ್‌ನಲ್ಲಿ ಭಾರತ ಪ್ರಬಲ ಶಕ್ತಿಯಾಗಿ ಬೆಳೆದಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಫಿಫಾ ಮತ್ತು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಸಿದ್ಧಪಡಿಸುತ್ತದೆ. ತನ್ನ ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಬದಲಿಸುವಂತೆ ಫಿಫಾ ಮತ್ತು ಎಎಫ್‌ಸಿ ಮೇಲೆ ಒತ್ತಡ ಹೇರಲು ಎಐಎಫ್‌ಎಫ್‌ಗೆ ಅಸಾಧ್ಯ. ಆದ್ದರಿಂದ ಐಎಸ್‌ಎಲ್‌ನ ವೇಳಾಪಟ್ಟಿ ಬದಲಾಯಿಸಿ ಭಾರತದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಅವಕಾಶ ಮಾತ್ರ ಎಐಎಫ್‌ಎಫ್‌ಗೆ ಮುಂದಿದೆ. ಹಾಗಾದಲ್ಲಿ ಹಣದ ಹೊಳೆ ಹರಿಸುವ ಐಎಸ್‌ಎಲ್‌ನಲ್ಲಿ ನಿರಾತಂಕವಾಗಿ ಆಡುವ ಅವಕಾಶ ರಾಷ್ಟ್ರೀಯ ತಂಡದ ಎಲ್ಲ ಆಟಗಾರರಿಗೆ ಲಭಿಸಲಿದೆ. ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತ ಆಡಿದ ಎಲ್ಲ ನಾಲ್ಕೂ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಕೊನೆಯ ಸ್ಥಾನದಲ್ಲಿ ಭಾರತ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಏಷ್ಯಾ ವಲಯದ ಎರಡನೇ ಸುತ್ತಿನಲ್ಲಿ ಆಡುತ್ತಿರುವ ಭಾರತ ಇದೀಗ ‘ಡಿ’ ಗುಂಪಿನಲ್ಲಿ ಐದನೇ ಹಾಗೂ ಕೊನೆಯ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳನ್ನು ಆಡಿದರೂ ಪಾಯಿಂಟ್‌ ಖಾತೆ ತೆರೆದಿಲ್ಲ. ಅರ್ಹತಾ ಹಂತದ ಮೂರನೇ ಸುತ್ತು ಪ್ರವೇಶಿಸುವ ಅವಕಾಶ ಕ್ಷೀಣಿಸಿದೆ. ಭಾರತ ಇನ್ನು ನಾಲ್ಕು ಪಂದ್ಯಗಳನ್ನು ಆಡಲಿದೆ. ಎಲ್ಲದರಲ್ಲಿ ಗೆದ್ದರೂ ಮುಂದಿನ ಹಂತ ಪ್ರವೇಶಿಸುವುದು ಕಷ್ಟ. ಅದೇ ರೀತಿ, ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯುವ ಹಾದಿ ಕೂಡಾ ಕಠಿಣವಾಗಿದೆ. ಏಷ್ಯನ್‌ ಕಪ್‌ಗೆ ಅವಕಾಶ ಪಡೆಯಬೇಕಾ ದರೆ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವುದು ಅಗತ್ಯ. ಇರಾನ್‌, ಒಮನ್‌ (ತಲಾ 8 ಪಾಯಿಂಟ್‌), ಗ್ವಾಮ್‌ (7) ಮತ್ತು ತುರ್ಕಮೇನಿಸ್ತಾನ (4) ತಂಡಗಳು ‘ಡಿ’ ಗುಂಪಿನಲ್ಲಿ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.