ಮುಳುಗಡೆ ನಗರದ ಹಾಕಿ ದಿನಗಳು... ಹೆಚ್ಚು ಹಾಕಿ ಚಟುವಟಿಕೆಗಳು ನಡೆಯುತ್ತಿದ್ದ ಬಾಗಲಕೋಟೆಯಲ್ಲಿ ಈಗ ಆ ಟೂರ್ನಿಗಳೆಲ್ಲಾ ನೆನಪು ಮಾತ್ರ. ಆಗಿನ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇದರ ಬಗ್ಗೆ ಬಸವರಾಜ್‌ ಸಂಪಳ್ಳಿ ಬರೆದಿದ್ದಾರೆ. ರಾಷ್ಟ್ರೀಯ ಕ್ರೀಡೆ ಹಾಕಿ ಎಂದಾಕ್ಷಣ ತಟ್ಟನೆ ನೆನಪಾಗುವುದು ರಾಜ್ಯದ ಬೆಂಗಳೂರು ನಗರ, ಕೊಡಗು, ಬೆಳಗಾವಿ, ಗದಗ ಮತ್ತು ಬಾಗಲಕೋಟೆ. ಬಾಗಲಕೋಟೆಯಲ್ಲಿ ಸದ್ಯ ರಾಷ್ಟ್ರೀಯ ಕ್ರೀಡೆ ಹಾಕಿ ಹೊಳಪು ಕಳೆದುಕೊಂಡಿದೆ, ನಿಜ. ಆದರೆ, ಹಿಂದೊಮ್ಮೆ ಇಲ್ಲಿನ ನೂರಾರು ಹಾಕಿ ಪಟುಗಳ ತೋಳಿನಲ್ಲಿ ಸ್ಟಿಕ್ ತಿರುಗಿಸುವ ಮಾಂತ್ರಿಕ ಶಕ್ತಿ ತುಂಬಿತ್ತು. ಹೌದು, ಹಿಂದೊಮ್ಮೆ ಪ್ರಸಿದ್ಧ ಹಾಕಿ ಆಟಗಾರರಿಂದಾಗಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದ ಬಾಗಲಕೋಟೆಯಲ್ಲಿನ ಆಗಿನ ದಿನಗಳು ಈಗ ನೆನಪುಗಳು ಮಾತ್ರ. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ಸಿಟಿ ಸ್ಪೋರ್ಟ್‌ ಕ್ಲಬ್‌ ನಗರದಲ್ಲಿ ಹಾಕಿಯನ್ನು ಪೋಷಿಸುತ್ತಾ ಬಂದಿದೆ. ದೇಶಿ ಕ್ರೀಡೆ ಹಾಕಿಗೆ ಅನನ್ಯ ಪ್ರೋತ್ಸಾಹ ನೀಡುತ್ತಾ, ರಾಜ್ಯ, ರಾಷ್ಟ್ರಮಟ್ಟದ ನೂರಾರು ಕ್ರೀಡಾಪಟುಗಳನ್ನು ಹುಟ್ಟುಹಾಕಿದ ಕೀರ್ತಿ ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ದಕ ಸಂಘದ ‘ಸಿಟಿ ಸ್ಪೋರ್ಟ್ಸ್‌ ಕ್ಲಬ್‌’ಗೆ ಸಲ್ಲುತ್ತದೆ. 1939ರಲ್ಲಿ ಪ್ರಾರಂಭವಾದ ಸಿಟಿ ಸ್ಪೋರ್ಟ್ಸ್‌ ಕ್ಲಬ್‌ ಇಂದಿಗೂ ಹಾಕಿ, ವಾಲಿಬಾಲ್‌, ಕೊಕ್ಕೊ, ಕ್ರಿಕೆಟ್‌ ಸೇರಿದಂತೆ ಕೆಲವು ಕ್ರೀಡಾ ತರಬೇತಿ ಮತ್ತು ಟೂರ್ನಿಗಳನ್ನು ಆಯೋಜಿಸುವ ಮೂಲಕ ಮುಳುಗಡೆ ನಗರದಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವ ಜತೆಗೆ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದೆ. 70 ಮತ್ತು 80 ರ ದಶಕದಲ್ಲಿ ಸಿಟಿ ಸ್ಪೋರ್ಟ್ಸ್‌ ಕ್ಲಬ್‌ ಪ್ರತಿ ಎರಡು ವರ್ಷಕ್ಕೊಮ್ಮೆ ರಾಷ್ಟ್ರಮಟ್ಟದ ಹಾಕಿ ಟೂರ್ನಿಯನ್ನು ಆಯೋಜಿಸುತ್ತಿತ್ತು. ದಕ್ಷಿಣ ಭಾರತದ ಪ್ರಮುಖ ತಂಡಗಳು ಬಾಗಲಕೋಟೆಯಲ್ಲಿ ಆಯೋಜನೆಯಾಗುವ ರಾಷ್ಟ್ರೀಯ ಟೂರ್ನಿಗೆ ತಪ್ಪದೇ ಹಾಜರಾಗುವ ಮೂಲಕ ‘ಬಾಗಲಕೋಟೆ ಕಪ್‌’ಗಾಗಿ ತೀವ್ರ ಸೆಣಸಾಟ ನಡೆಸುತ್ತಿದ್ದವು ಎಂಬುದು ಈಗ ಇತಿಹಾಸ. ಬಾಗಲಕೋಟೆಯಲ್ಲಿ ಹಾಕಿ ವೈಭವದ ದಿನಗಳನ್ನು ಮೆಲುಕು ಹಾಕಿದ ಹಾಕಿ ತರಬೇತುದಾರ ಶರಣ್‌ ನಾವಲಗಿ, ‘ಬಸವೇಶ್ವರ ಮೈದಾನ ಹಾಕಿಯ ಕೇಂದ್ರ ಬಿಂದುವಾಗಿತ್ತು, ಸಿಟಿ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ 10 ರಿಂದ 15 ದಿನಗಳ ಕಾಲ ಹಾಕಿ ಟೂರ್ನಿ ನಗರದಲ್ಲಿ ನಡೆಯುತ್ತಿತ್ತು. ನಗರದ ಗೋಡೆಗಳ ಮೇಲೆ ಹಾಕಿ ಟೂರ್ನಿಗಳ ಬಗ್ಗೆ ಬರಹ ಎದ್ದು ಕಾಣುತ್ತಿತ್ತು, ಊರಿನ ಅಲ್ಲಲ್ಲಿ ಬ್ಯಾನರ್‌ ಕಟ್ಟಲಾಗುತ್ತಿತ್ತು, ಹೆಸರಾಂತ ಆಟಗಾರರ ಹೆಸರನ್ನು ಪ್ರಚಾರ ಮಾಡಲಾಗುತ್ತಿತ್ತು’ ಎನ್ನುತ್ತಾರೆ. ‘ಹಾಕಿ ಟೂರ್ನಿ ಕುರಿತು ಜನರಿಗೆ ತಿಳಿಸಲು ಆ ದಿನಗಳಲ್ಲಿ ಟಾಂಗಾ ಗಾಡಿಗೆ ಮೈಕ್ ಕಟ್ಟಿಕೊಂಡು ನಗರದಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಸಂಬಂಧಪಟ್ಟ ದಿನ ಯಾವ ಯಾವ ತಂಡಗಳ ನಡುವೆ ಹಾಕಿ ಸ್ಪರ್ಧೆ ನಡೆಯಲಿದೆ, ಆ ತಂಡಗಳ ಪ್ರಮುಖ ಆಟಗಾರರು ಯಾರು ಎಂಬುದನ್ನು ಪ್ರಚಾರ ಮಾಡಲಾಗುತ್ತಿತ್ತು’ ಎಂಬುದನ್ನೂ ಅವರು ನೆನಪಿಸಿಕೊಂಡರು. ‘ಪ್ರತಿ ದಿನ ಮಧ್ಯಾಹ್ನ 3 ಕ್ಕೆ ಆರಂಭವಾಗುವ ಪಂದ್ಯಗಳು ಸಂಜೆ 6ರ ವರೆಗೆ ನಡೆಯುತ್ತಿದ್ದವು. ಹಾಕಿ ಪಂದ್ಯಾವಳಿ ವೀಕ್ಷಿಸಲು ಸುತ್ತಮುತ್ತಲಿನ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ಕ್ರೀಡಾಪ್ರೇಮಿಗಳು ತುದಿಗಾಲ ಮೇಲೆ ನಿಲ್ಲುತ್ತಿದ್ದರು. ಜಾತ್ರೆಗೆ ಜನ ಬರುವಂತೆ ಹಾಕಿ ಟೂರ್ನಿ ವೀಕ್ಷಿಸಲು ಕ್ರೀಡಾಪ್ರೇಮಿಗಳು ಭಾರಿ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದರು. ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿ, ಪಂದ್ಯಾವಳಿ ವೀಕ್ಷಿಸುತ್ತಿದ್ದರು’ ಎಂದೂ ಅವರು ಹೇಳಿದರು. ‘ಬಾಗಲಕೋಟೆ ಸಿಮೆಂಟ್‌ ಕಾರ್ಖಾನೆ ಮಾಲೀಕರು, ಕಾರ್ಮಿಕರು, ಅಡತಿ ಬಜಾರ್‌ ವ್ಯಾಪಾರಸ್ಥರು, ದಲಾಲರು, ಬಾಗವಾನರು, ಮಾರ್ವಾಡಿ ಮಂದಿ ಟೂರ್ನಿಗೆ ದೇಣಿಗೆ ನೀಡುತ್ತಿದ್ದರು. ಪಂದ್ಯಾವಳಿ ವೀಕ್ಷಣೆಗಾಗಿ ಬರುವ ಜನರು ಕೂರಲು ಚಾಪೆ ಮತ್ತು ಬಸವೇಶ್ವರ ವಿದ್ಯಾವರ್ದಕ ಸಂಘದ ಶಾಲೆಯ ಡೆಸ್ಕ್‌ಗಳನ್ನು ಮೈದಾನದಲ್ಲಿ ಹಾಕಲಾಗುತ್ತಿತ್ತು. ಗದಗ, ಬೆಟಗೇರಿ, ಹುಬ್ಬಳ್ಳಿ, ವಿಜಯಪುರದಿಂದ ಜನ ಪಂದ್ಯಗಳನ್ನು ವೀಕ್ಷಣೆಗೆ ಬರುತ್ತಿದ್ದರು. ದೂರದ ನಗರಗಳಿಂದ ಬರುವ ಆಟಗಾರರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು’ ಎಂದೂ ಅವರು ನೆನಪಿಸಿಕೊಂಡರು. ‘ಹೈದರಾಬಾದ್‌, ಪುಣೆ, ಕೋವಿಲ್‌ಪಟ್ಟಿ, ಮುಂಬೈ, ಗದಗ, ಚೆನ್ಹೈ ತಂಡಗಳು ಬಾಗಲಕೋಟೆ ಹಾಕಿ ಟೂರ್ನಿಯಲ್ಲಿ ಭಾಗವಹಿಸಿರುವ ಇತಿಹಾಸ ಇದೆ. ಇದರ ಜತೆಗೆ ಶ್ರೀಲಂಕಾ ತಂಡದ ವಿರುದ್ಧ ಪ್ರದರ್ಶನ ಪಂದ್ಯ ನಡೆದಿತ್ತು. ಒಲಿಂಪಿಕ್‌ ಆಟಗಾರರಾದ ಬೆಳಗಾವಿಯ ಶಂಕರ್‌ ಲಕ್ಷ್ಮಣ, ಬಂಡು ಪಾಟೀಲ, ಸಿಕಂದರಾಬಾದ್‌ನ ಮದನ್‌ಲಾಲ್‌ ಇಲ್ಲಿ ಹಾಕಿ ಆಡಿದ್ದಾರೆ’ ಎಂದೂ ಅವರು ಹಳೆಯ ನೆನಪುಗಳಿಗೆ ಜಾರಿದರು. ‘ಬಾಗಲಕೋಟೆ ಮಂದಿಗೆ ಹಾಕಿ ಎಷ್ಟು ಹುಚ್ಚು ಹಿಡಿಸಿತ್ತು ಎಂದರೇ, ಪಟ್ಟಣದ ಗಲ್ಲಿ ಗಲ್ಲಿಯಲ್ಲಿ ಹುಡುಗರು ಕಟ್ಟಿಗೆ ತುಂಡುಗಳನ್ನು ಹಾಕಿ ಸ್ಟಿಕ್‌ ರೀತಿ ಬಳಸಿಕೊಂಡು ನಿತ್ಯ ಆಟವಾಡುತ್ತಿದ್ದರು. ಅಲ್ಲದೇ, ಸಿಟಿ ಸ್ಪೋರ್ಟ್ಸ್‌ ಕ್ಲಬ್‌ ಹಳೆಯ ಹಾಕಿ ಸ್ಟಿಕ್‌ಗಳನ್ನು ಹರಾಜು ಹಾಕುತ್ತಿತ್ತು. ನಾಲ್ಕಾಣೆ, ಎಂಟಾಣೆಗೆ ಸ್ಟಿಕ್‌ಗಳನ್ನು ಹರಾಜಿನಲ್ಲಿ ಸವಾಲು ಕೂಗಿ ತೆಗೆದುಕೊಂಡು, ಆ ಸ್ಟಿಕ್‌ಗಳಿಗೆ ತೆಳುವಾದ ಬಟ್ಟೆಯನ್ನು ಸುತ್ತಿ ಅವುಗಳನ್ನೇ ಹೊಸ ಸ್ಟಿಕ್‌ ರೀತಿ ಬಳಸಿಕೊಳ್ಳುತ್ತಿದ್ದರು’ ಎಂದರು. ‘ಬಾಗಲಕೋಟೆ ಪಟ್ಟಣದ ಕೌಲ್‌ಪೇಟೆ, ಹೊಸಪೇಟೆ, ಹಳೆಪೇಟೆ, ಜೈನ್‌ಪೇಟೆ ಸೇರಿದಂತೆ ಗಲ್ಲಿ ಗಲ್ಲಿಗಳ ಪ್ರತಿಯೊಂದು ಮನೆಯಲ್ಲೂ ಒಬ್ಬನಾದರೂ ಹಾಕಿ ಆಡುವುದು ಸಾಮಾನ್ಯವಾಗಿತ್ತು. ಆದರೆ ಇಂದು ಹಾಕಿ ಆಟದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ, ಓದಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಜತೆಗೆ ಕ್ರಿಕೆಟ್‌ಗೆ ಪ್ರಾಶಸ್ತ್ಯ ಸಿಕ್ಕಿದೆ’ ಎನ್ನುತ್ತಾರೆ ಅವರು. ‘ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರೀಯ ಹಾಕಿ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಕಾರಣ ದೂರದಿಂದ ಬರುವ ತಂಡಗಳ ಖರ್ಚು, ವೆಚ್ಚ ಭರಿಸಲು ‘ಸಿಟಿ ಸ್ಪೋರ್ಟ್ ಕ್ಲಬ್‌’ಗೆ ಸಾಧ್ಯವಾಗುತ್ತಿಲ್ಲ’ ಎಂಬುದು ಅವರ ಅಭಿಪ್ರಾಯ. ‘ಬಾಗಲಕೋಟೆ ನಗರದ ಬಡ, ಕೂಲಿಕಾರ್ಮಿಕ ಮತ್ತು ಮಧ್ಯಮ ವರ್ಗದವರ ಮಕ್ಕಳು ಹೆಚ್ಚಾಗಿ ಹಾಕಿ ಆಟದ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. ಆ ವೈಭವ ಮತ್ತೆ ಬರುವುದು ಅನುಮಾನ’ ಎಂದೂ ಅವರು ನಿರಾಸೆ ವ್ಯಕ್ತಪಡಿಸಿದರು. ತರಬೇತುದಾರರು ಬಾಗಲಕೋಟೆಯ ಶರಣ್‌ ನಾವಲಗಿ, ಗಂಗಾಧರ ತಪಶೆಟ್ಟಿ, ಶಂಕರ ತೋಳಮಟ್ಟಿ, ಪ್ರಭಾಕರ ದೇವಣಗಾವಿ, ಲಾಲ್‌ಸಾಬ್‌ ಮುದ್ದೇಬಿಹಾಳ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ರವಿ ನಾಯ್ಕರ್‌ ಭಾರತ ತಂಡವನ್ನು ಪ್ರತಿನಿಧಿಸಿದ ಬಾಗಲಕೋಟೆಯ ಹಾಕಿ ಆಟಗಾರರಾಗಿದ್ದಾರೆ. ಶರಣ್‌ ನಾವಲಗಿ ಅವರು ನಿವೃತ್ತಿಯ ಬಳಿಕ ಬಾಗಲಕೋಟೆಯಲ್ಲಿ ಕಿರಿಯರಿಗೆ ತರಬೇತಿ ನೀಡುತ್ತಿದ್ದಾರೆ. ಪರಮೇಶ್ವರ ಮದುರ್‌ ಅವರು ಕೂಡ ಇಲ್ಲಿಯ ಇನ್ನೊಬ್ಬ ಶ್ರೇಷ್ಠ ಹಾಕಿ ತರಬೇತುದಾರಾಗಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಹಾಸ್ಟೆಲ್‌ನಲ್ಲಿ ಸದ್ಯ ಬಾಗಲಕೋಟೆಯ ಹಾಕಿ ಆಟಗಾರರಾದ ಈರಣ್ಣ ಪಾಟೀಲ, ಶರಣ ಅಂಬಿಗೇರ ಹಾಗೂ ಬೆಂಗಳೂರಿನ ಡಿವೈಎಸ್‌ಒ ಆಟಗಾರರಾಗಿ ಆಂಜನೇಯ ಅಂಬಿಗೇರ ಇದ್ದಾರೆ. ಪ್ರತಿಭಾವಂತ ಹಾಕಿ ಆಟಗಾರರು 1996ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಬಾಗಲಕೋಟೆಯ ಹಾಕಿ ಆಟಗಾರ ರವಿ ನಾಯ್ಕರ್‌ ಆಡಿದ್ದಾರೆ. ಸದ್ಯ ಅವರು ಭಾರತ್‌ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಎಂಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ರವಿ ನಾವಲಗಿ ಅವರು ಇನ್ನೊಬ್ಬ ಪ್ರಸಿದ್ಧ ಹಾಕಿ ಆಟಗಾರರಾಗಿದ್ದಾರೆ. ಇವರು ಐದು ಅಂತರರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿದ್ದಾರೆ. ಹಿಂದೊಮ್ಮೆ ಕರ್ನಾಟಕ ತಂಡದ ನೇತೃತ್ವ ವಹಿಸಿದ್ದ ಅನುಭವಿ. ಸದ್ಯ ಬೆಂಗಳೂರಿನ ಎಸ್‌ಬಿಐ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಮಹಿಳಾ ತಂಡದಲ್ಲಿ ಆಡಿರುವ ಬಾಗಲಕೋಟೆಯ ಪ್ರಮುಖ ಆಟಗಾರರೆಂದರೇ ಜ್ಯೋತಿ ಪರೂತಿ, ಆಶಾ ಡಿಗ್ಗಿ, ರೂಪ ಚೌಡಿ, ಶಾಲಿನಿ ಹಂದ್ರಾಳ, ನಿಹಾರಿಕಾ ತಳವಾಡ, ಸರಸ್ವತಿ ಪಾಟೀಲ, ಯಲ್ಲಮ್ಮ ಅಂಬಿಗೇರ, ದೀಪಿಕಾ ಅಂಬಿಗೇರ, ಮೀನಾಕ್ಷಿ ಪ್ರಮುಖರಾಗಿದ್ದಾರೆ. ರಾಜ್ಯ ಪುರುಷರ ತಂಡದಲ್ಲಿ ಆಡಿದ ಬಾಗಲಕೋಟೆಯ ಪ್ರಮುಖ ಆಟಗಾರರಲ್ಲಿ ಬಸವರಾಜಪ್ಪ ಚನ್ನಪ್ಪಗೋಳ, ರಾಜಶೇಖರ ಶಿವನಗುತ್ತಿ, ವಿಜಯ ನಾಯ್ಕ, ಫಿರೋಜ್‌ ಕುಂಟೋಜಿ, ನಾಗೇಶ್‌ ಜಾಲಗಾರ, ಮಲ್ಲಿಕಾರ್ಜುನ ಅಂಬಿಗೇರ, ಪ್ರದೀಪ್‌ ಬಂಡಿ ಸೇರಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದ ಬಾಗಲಕೋಟೆಯ ಪ್ರಮುಖ ತರಬೇತುದಾರರೆಂದರೆ ಶರಣ ನಾವಲಗಿ, ಪ್ರಭಾಕರ ದೇವಣಗಾವಿ, ಗಂಗಾಧರ ತಪಶೆಟ್ಟಿ, ಶಂಕರ ತೋಳಮಟ್ಟಿ, ಲಾಲ್‌ಸಾಬ್‌ ಗುಂಡು ಮುದ್ದೇಬಿಹಾಳ, ರಾಜು ಅಂಕಲಗಿ ಅವರು ಎನ್‌ಎಸ್‌ಎನ್‌ಐಸಿ ಅರ್ಹತೆ ಪಡೆದಿರುವ ತರಬೇತುದಾರರಾಗಿದ್ದಾರೆ. ಬಾಗಲಕೋಟೆ ಸ್ಪೋರ್ಟ್ಸ್‌ ಕ್ಲಬ್‌ ಜಲಂಧರ್‌ನಿಂದ ಹಾಕಿ ಸ್ಟಿಕ್‌ ಮತ್ತಿತರರ ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಿ ತಂದು ಇಲ್ಲಿನ ಆಟಗಾರರಿಗೆ ನೀಡುತ್ತಿದೆ. 1995 ರಿಂದ ಇದುವರೆಗೂ ನಿತ್ಯ ನಗರದಲ್ಲಿ ಉಚಿತವಾಗಿ ಹಾಕಿ ತರಬೇತಿ ನೀಡುತ್ತಿದೆ. ಸಿಟಿ ಸ್ಪೋರ್ಟ್ಸ್‌ ಹಾಕಿ ತರಬೇತುದಾರರಾದ ಪರಮೇಶ್ವರ ಮುದೂರ್‌ ಅವರು ಸದ್ಯ 115 ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ‘ಹಾಕಿಗೆ ಬಾಗಲಕೋಟೆಯಲ್ಲಿ ಉತ್ತೇಜನ ನೀಡಬೇಕಾದ ಅಗತ್ಯವಿದ್ದು, ಟರ್ಫ್‌ ಮೈದಾನದ ಅಗತ್ಯವಿದೆ, ಜತೆಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ತರಬೇತುದಾರರು ಅಗತ್ಯವಿದೆ, ಹಾಕಿ ಪಟುಗಳಿಗೆ ಅವಕಾಶ ಒದಗಿಸಬೇಕಾಗಿದೆ’ ಎಂದು ಬಸವೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಈರಣ್ಣ ಗಣಾಚಾರಿ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.