ಖಾಲಿ ಬಾಟಲಿಗಳ ಸುತ್ತ... ಹೋದ ಸೋಮವಾರ ಕಟಕ್‌ನ ಬಾರಾಬಾತಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಮೈದಾನಕ್ಕೆ ಖಾಲಿ ಬಾಟಲಿ ಎಸೆದು ಗದ್ದಲ ಎಬ್ಬಿಸಿದರಲ್ಲ ಅದರಿಂದ ಯಾರಿಗೆ ಲಾಭವಾಯಿತು? ಪ್ರೇಕ್ಷಕರ ಗಲಾಟೆಯಿಂದಾಗಿ ಭಾರತ ಗೆದ್ದುಬಿಟ್ಟಿತಾ? ಶಾಂತಿದೂತರಾದ ಮಹಾತ್ಮಾ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ಅವರ ಹೆಸರಿನ ಈ ಟೂರ್ನಿಯ ಘನತೆ ಹೆಚ್ಚಿತಾ? ಪಂದ್ಯದ ಆತಿಥ್ಯ ವಹಿಸಿದ್ದ ಒಡಿಶಾ ಕ್ರಿಕೆಟ್ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಲಾಭವೇ? ಈ ಗಲಾಟೆಗೆ ಕೇವಲ ಪ್ರೇಕ್ಷಕರು ಮಾತ್ರ ಕಾರಣರೇ, ಅವರನ್ನು ಸುಮ್ಮನೆ ನೋಡುತ್ತ ನಿಂತಿದ್ದ ಪೊಲೀಸರೆ? ತಪ್ಪಿತಸ್ಥರನ್ನು ಕೂಡಲೇ ಬಂಧಿಸಲು ಸೂಕ್ತ ನಿರ್ದೇಶನ ನೀಡದ ಮತ್ತು ಅವರು ಪ್ರೇಕ್ಷಕರ ನಡುವೆ ಚಲಿಸಲು ವ್ಯವಸ್ಥೆ ಮಾಡಿರದ ಆಯೋಜಕ ಸಂಸ್ಥೆಯೇ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಈ ಘಟನೆಯು ಹುಟ್ಟುಹಾಕಿದೆ. ಇವತ್ತು ಟಿವಿ, ವೆಬ್‌ಸೈಟ್, ಯೂಟೂಬ್‌, ಮೊಬೈಲ್‌ಗಳಲ್ಲಿ ಕ್ರಿಕೆಟ್ ನೇರಪ್ರಸಾರವನ್ನು ಅರಾಮವಾಗಿ ನೋಡಬಹುದು. ಆದರೂ ಕ್ರಿಕೆಟ್ ತಾರೆಗಳನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ನೂರಾರು ರೂಪಾಯಿ ತೆತ್ತು ಕ್ರೀಡಾಂಗಣಕ್ಕೆ ಬರುವ ಸಾವಿರಾರು ಜನರ ರಕ್ಷಣೆಯ ವಿಷಯವೂ ಇಲ್ಲಿ ಪ್ರಮುಖವಾಗುತ್ತದೆ. ಕೆಲವೇ ಕೆಲವು ಪುಂಡರ ಅತಿರೇಕದ ವರ್ತನೆ ಇಡೀ ಜನಸಮುದಾಯದ ತೊಂದರೆಗೆ ಕಾರಣವಾಗುತ್ತದೆ. ಆದರೆ ಅಂತಹ ತಪ್ಪಿತಸ್ಥರಿಗೆ ಶಿಕ್ಷೆಯೇ ಆಗುವುದಿಲ್ಲ. ಬದಲಿಗೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಹೊಸದೊಂದು ನಿಯಮ ಮಾಡಲು ಕೂತು ಬಿಡುತ್ತವೆ. ಆ ಮೂಲಕ ತನ್ನ ಲೋಪಗಳನ್ನು ಮುಚ್ಚಿ ಹಾಕಿ ಕೈತೊಳೆದುಕೊಳ್ಳುತ್ತದೆ. ಇದೆಲ್ಲವನ್ನು ನೋಡಿದಾಗ ಸುನಿಲ್ ಗಾವಸ್ಕರ್ ನೀಡಿರುವ ಹೇಳಿಕೆಯು ಸರಿಯಾಗಿಯೇ ಇದೆ. ‘ಕಟಕ್‌ನಲ್ಲಿ ಎರಡು ವರ್ಷ ಅಂತರರಾಷ್ಟ್ರೀಯ ಪಂದ್ಯ ನಡೆಸಬಾರದು, ಒಸಿಎಗೆ ಬಿಸಿಸಿಐ ಅನುದಾನವನ್ನು ಕಡಿತಗೊಳಿಸಬೇಕು’ ಎಂದು ಭಾರತ ತಂಡದ ಮಾಜಿ ನಾಯಕ ಗಾವಸ್ಕರ್ ಹೇಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಆದರೆ, ಪ್ರತಿಬಾರಿಯೂ ಹೊಸ ನಿಯಮಗಳ ಹೇರಿಕೆಯಾಗುತ್ತಲೇ ಇದೆ. ಇದೇ ಮೊದಲ ಬಾರಿಗೆ ಲಿಟಲ್ ಮಾಸ್ಟರ್‌ ಸಮಸ್ಯೆಯ ಮೂಲಕ್ಕೆ ಚಿಕಿತ್ಸೆ ನೀಡುವ ಮಾತನಾಡಿದ್ದಾರೆ. ಪಂದ್ಯ ಆಯೋಜಿಸುವ ರಾಜ್ಯ ಸಂಸ್ಥೆಗಳು ಇಂತಹ ಘಟನೆಗಳ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎನ್ನುವ ಒಳಾರ್ಥ ಅವರ ಹೇಳಿಕೆಯಲ್ಲಿದೆ. ಹೆಜ್ಜೆ ಹೆಜ್ಜೆಗೂ ನಿರ್ಬಂಧಗಳು ಭಾರತದ ಯಾವುದೇ ಊರಿನಲ್ಲಿ ಅಂತರರಾಷ್ಟ್ರೀಯ ಪಂದ್ಯ ವೀಕ್ಷಿಸಲು ಹೋಗುವುದು ಸುಲಭದ ವಿಷಯವಾಗಿ ಉಳಿದಿಲ್ಲ. ಹತ್ತಾರು ಕಿಡಿಗೇಡಿಗಳು ಮಾಡುವ ಕುಕೃತ್ಯಕ್ಕೆ ಜನ ತೊಂದರೆ ಪಡುವಂತಹ ನಿಯಮಗಳು ರೂಪುಗೊಂಡಿವೆ. ಆಹಾರದ ಪೊಟ್ಟಣ, ಮೊಬೈಲ್, ಚಿಲ್ಲರೆ ನಾಣ್ಯಗಳು, ಕ್ಯಾಮೆರಾ, ಗಾಜಿನ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಕ್ರಿಕೆಟ್ ಮೈದಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಪಂದ್ಯ ಆರಂಭವಾಗುವ ಎರಡು ತಾಸು ಮುನ್ನವೇ ಮೈದಾನದ ಗೇಟ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕು. ಲೋಹಶೋಧಕ ಸ್ಕ್ಯಾನರ್ ಮೂಲಕ ಹಾದು, ಪೊಲೀಸರು, ಭದ್ರತಾ ಸಿಬ್ಬಂದಿಯ ಕೈಗಳಿಂದ ತಪಾಸಣೆ ಮಾಡಿಕೊಂಡು ಒಳಗೆ ಹೋಗಬೇಕು. ಅಲ್ಲಿಯೇ ನೀರು ಕುರುಕಲು ತಿಂಡಿ ಖರೀದಿ ಮಾಡಬೇಕು. ಹೊರಗಿನಿಂದ ಧ್ವಜ, ರಟ್ಟಿನ ಫಲಕಗಳನ್ನು ತರುವ ಅವಕಾಶ ನೀಡಲಾಗಿದೆ. ಇಷ್ಟೆಲ್ಲ ತೊಂದರೆಪಟ್ಟು ಒಳಹೋಗುವ ಅಭಿಮಾನಿಗೆ ತನ್ನ ತಂಡ ಗೆಲ್ಲಲೇಬೇಕು ಎಂಬ ಆಸೆ ಇರದೇ? ಆದರೆ, ಇದೆಲ್ಲವನ್ನೂ ಗಮನಿಸದ ಒಡಿಶಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ನೀಡುವ ಹೇಳಿಕೆಗಳನ್ನೂ ನೋಡಿ; ‘ನಾವು ನೀರಿನ ಪೊಟ್ಟಣ ಮತ್ತು ಚಿಕ್ಕ ಬಾಟಲಿಗಳನ್ನು ನಿರ್ಬಂಧಿಸಿದ್ದೆವು. ಅವುಗಳು ದೊಡ್ಡ ಬಾಟಲಿಗಿಂತ ವೇಗವಾಗಿ ತೂರಿಬಂದು ಹಾನಿ ಮಾಡುವ ಸಂಭವವಿರುತ್ತದೆ. ಅದಕ್ಕೆ ದೊಡ್ಡ ಬಾಟಲಿ (ಒಂದು ಲೀಟರ್ ಖನಿಜಯುಕ್ತ ನೀರಿನ ಪ್ಲಾಸ್ಟಿಕ್ ಬಾಟಲ್) ತೆಗೆದುಕೊಂಡು ಬರಲು ಅನುಮತಿ ಕೊಡಲಾಗಿತ್ತು’ ಎಂದು ಹೇಳಿದೆ. ಆದರೆ, ನೂರಾರು ರೂಪಾಯಿ ತೆತ್ತು ಬರುವ ಪ್ರೇಕ್ಷಕರಿಗೆ ಅವರ ಗ್ಯಾಲರಿಗಳಲ್ಲಿ ಉಚಿತವಾದ ಶುದ್ಧ ಕುಡಿಯುವ ನೀರು ನೀಡಲಾರದಷ್ಟು ಬಡತನ ಕ್ರಿಕೆಟ್‌ ಸಂಸ್ಥೆಗಳಿಗೆ ಇದೆಯೇ? ಅಭಿಮಾನಿಗಳು ಬಳಸಿದ ಖಾಲಿ ಬಾಟಲಿಗಳನ್ನು ತಕ್ಷಣ ಸಂಗ್ರಹಿಸಿ ವಿಲೇವಾರಿ ಮಾಡುವಷ್ಟು ಸಿಬ್ಬಂದಿ ಸೌಲಭ್ಯ ಏಕಿಲ್ಲ? ತೀರಾ ಸಣ್ಣ ವಿಷಯ ಎನಿಸಿದರೂ ಅಂತಹದೊಂದು ವ್ಯವಸ್ಥೆ ಇದ್ದಿದ್ದರೆ, ಕಟಕ್ ಕೋಟಲೆ ತಪ್ಪಿಸಬಹುದಿತ್ತಲ್ಲವೇ? ಭದ್ರತಾ ವೈಫಲ್ಯ? ಕಟಕ್‌ನಲ್ಲಿ ಅಭಿಮಾನಿಗಳು ಬಾಟಲಿ ಎಸೆಯುತ್ತಿದ್ದಾಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಸುಮ್ಮನೆ ನೋಡುತ್ತ ನಿಂತಿದ್ದು ಟಿವಿಯಲ್ಲಿ ಜಗಜ್ಜಾಹೀರಾಯಿತು. 2007ರಲ್ಲಿ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಆಗಿನ ಭಾರತ ತಂಡದ ಕೋಚ್ ಗ್ರೇಗ್ ಚಾಪೆಲ್‌ಗೆ ಅಭಿಮಾನಿಯೊಬ್ಬ ಕಪಾಳಮೋಕ್ಷ ಮಾಡಿದ್ದ. ಅಂತಹ ಘಟನೆ ನಡೆದ ಮೇಲೂ ಇಲ್ಲಿಯ ಪೊಲೀಸರು ಎಚ್ಚೆತ್ತುಕೊಂಡಿಲ್ಲ ಎನ್ನುವುದಕ್ಕೆ ಕಟಕ್ ಪಂದ್ಯ ಸಾಕ್ಷಿಯಾಯಿತು. ಈ ಮೈದಾನದಲ್ಲಿ ಗದ್ದಲ ಮಾಡುತ್ತಿದ್ದ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಕಿಡಿಗೇಡಿಗಳ ಕೊರಳುಪಟ್ಟಿ ಹಿಡಿದು ಹೊರತರಲು ಪೊಲೀಸರಿಗೆ ಸೂಕ್ತ ಪಾದಚಾರಿ ಮಾರ್ಗವೂ ಇರಲಿಲ್ಲ ಎಂದು ವರದಿಯಾಗಿದೆ. ಆದರ, ವಿದೇಶದ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರ ನಡುವೆ ಪೊಲೀಸರು, ಭದ್ರತಾ ಸಿಬ್ಬಂದಿ ಓಡಾಡಲು ಸ್ಥಳಾವಕಾಶ ಇರುತ್ತದೆ. ಅಲ್ಲಿಯ ಎಲ್ಲ ಕ್ರೀಡಾಕೂಟಗಳಲ್ಲಿಯೂ ಇಂತಹ ವ್ಯವಸ್ಥೆಯನ್ನು ಕಾಣಬಹುದು. ಬೌಂಡರಿ ಲೈನ್‌ನಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಯು ಪ್ರೇಕ್ಷಕರಿಗೆ ಮುಖಾಮುಖಿಯಾಗಿ ನಿಂತು ಪಹರೆ ನಡೆಸಬೇಕು. ಆದರೆ, ಅವರು ಪಂದ್ಯ ನೋಡುತ್ತ, ಪ್ರೇಕ್ಷಕರ ಗ್ಯಾಲರಿಗೆ ಬೆನ್ನು ತೋರಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಇತ್ತೀಚೆಗೆ ಬೀಜಿಂಗ್‌ ವಿಶ್ವ ಅಥ್ಲೆಟಿಕ್ಸ್‌ ನಲ್ಲಿ ಉಸೇನ್ ಬೋಲ್ಟ್‌ ಓಡುವಾಗಲೂ ಅಲ್ಲಿಯ ಭದ್ರತಾ ಸಿಬ್ಬಂದಿ ಟ್ರ್ಯಾಕ್‌ಗೆ ಬೆನ್ನು ಮಾಡಿ ಅಭಿಮಾನಿಗಳ ಮೇಲೆ ಕಣ್ಣಿಟ್ಟಿದ್ದರು. ಮಿಲಿಯನ್ ಡಾಲರ್ ಗೇಮ್‌ ಇವತ್ತು ಕ್ರಿಕೆಟ್ ಬರೀ ಕ್ರೀಡೆಯಾಗಿ ಉಳಿದಿಲ್ಲ. ರಾಜಕೀಯ, ವಾಣಿಜ್ಯ, ಆರ್ಥಿಕ ವ್ಯವಹಾರವಾಗಿಯೂ ವ್ಯಾಪಿಸಿದೆ. ಅದು ಕ್ರಿಕೆಟ್ ಆಟಗಾರರು ಮತ್ತು ಆಯೋಜಕ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರೇಕ್ಷಕ ವಲಯಕ್ಕೂ ವ್ಯಾಪಿಸಿದೆ. ತನ್ನ ನೆಚ್ಚಿನ ತಂಡವು ಮನರಂಜನೆ ನೀಡುವದಷ್ಟೇ ಅಲ್ಲ. ಗೆಲ್ಲಲೇಬೇಕು ಎಂಬ ಅತಿಯಾಸೆಯೂ ಈಗ ಬೆಳೆಯುತ್ತಿದೆ. ಇನ್ನು ಬೆಟ್ಟಿಂಗ್ ಎಂಬ ಭೂತಕ್ಕೆ ಜೋತುಬಿದ್ದು ಹಣ ಕಳೆದುಕೊಳ್ಳುವ ಅಭಿಮಾನಿಗಳೂ ಇಂತಹ ಅತಿರೇಕಗಳಿಗೆ ಕೈಹಾಕುವುದು ಹೆಚ್ಚು. ಇನ್ನು ಆಯೋಜಕರ ಬಗ್ಗೆ ಹೇಳುವುದಾದರೆ; ಇವತ್ತು ಒಂದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದು ಬರೀ ಪ್ರತಿಷ್ಠೆಯ ವಿಷಯವಲ್ಲ. ಅದರ ಹಿಂದೆ ಬೇರೆ ಬೇರೆ ಲೆಕ್ಕಾಚಾರಗಳು ಅಡಗಿಕೊಂಡಿವೆ. ದೇಶದ ಬಹುತೇಕ ಕ್ರಿಕೆಟ್ ಸಂಸ್ಥೆಗಳ ಅಧಿಕಾರ ಚುಕ್ಕಾಣಿ ರಾಜಕಾರಣಿಗಳ ಕೈಗಳಲ್ಲಿಯೇ ಇದೆ. ಅವರ ವರ್ಚಸ್ಸು, ಅಧಿಕಾರ, ಮಹತ್ವಾಕಾಂಕ್ಷೆಯ ಬೇಳೆ ಬೇಯಿಸಿಕೊಳ್ಳಲು ಕ್ರಿಕೆಟ್‌ ವೇದಿಕೆಯಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದ್ದರಿಂದ ಇಂತಹ ಘಟನೆಗಳು ಅವರಿಗೆ ಕೆಟ್ಟ ಹೆಸರನ್ನು ಮಾತ್ರ ತರಬಲ್ಲವು. ಅವುಗಳನ್ನು ನಿಯಂತ್ರಿಸಲು ಅವರು ಮತ್ತು ಅವರ ಅಧೀನ ಸಂಸ್ಥೆಗಳೇ ಮುಂದಾಗಬೇಕು. ಬರೀ ಖಾಲಿ ಬಾಟಲಿ ಬಗ್ಗೆ ಮಾತನಾಡುವ ಬದಲು ಆ ಬಾಟಲು ಪ್ರತಿಬಿಂಬಿಸಿರುವ ಸಮಸ್ಯೆಯ ಮೂಲಗಳನ್ನು ಪರಿಹರಿಸುವುದು ಸೂಕ್ತ. ಅಂದಹಾಗೆ, ಮೊದಲಿನ ಪ್ರಶ್ನೆಗೆ ಬರೋಣ. ಕಟಕ್ ಗಲಾಟೆಯಿಂದ ಲಾಭವಾಗಿದ್ದು ಭಾರತ ತಂಡದ ಆಟಗಾರರಿಗೆ! ಏಕೆಂದರೆ, ತಂಡದ ನಾಯಕ ದೋನಿ ಬಿಟ್ಟರೆ ಉಳಿದವರಾರೂ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಎಲ್ಲ ಮಾಧ್ಯಮಗಳು, ಚಿಂತಕರ ಮಾತುಕತೆ ಖಾಲಿ ಬಾಟಲಿ ಕ್ರಿಕೆಟ್‌ನ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.