ಅಮೆರಿಕದಲ್ಲೂ ಕ್ರಿಕೆಟ್‌ ಕಂಪು... ಆ ದೇಶದಲ್ಲಿ ಸ್ಪರ್ಧಾತ್ಮಕ ಪಂದ್ಯಗಳನ್ನು ನಡೆಸಲು ಸುಸಜ್ಜಿತ ಕ್ರೀಡಾಂಗಣವಿಲ್ಲ. ಆದರೂ ಕ್ರಿಕೆಟ್‌ ಪ್ರೀತಿಗೆ ಏನೂ ಕಡಿಮೆಯಿಲ್ಲ... ಈ ಮಾತನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಅದು ಯಾವ ದೇಶ ಎನ್ನುವ ಕುತೂಹಲ ಮೂಡಬಹುದು. ಅದು ಅಮೆರಿಕ. ಹಲವಾರು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಅಮೆರಿಕದಲ್ಲಿ ಕ್ರಿಕೆಟ್‌ ಖ್ಯಾತಿ ಹೊಂದಿಲ್ಲ. ಅಮೆರಿಕ ಎಂದಾಕ್ಷಣ ಮೊದಲು ನೆನಪಾಗುವುದು ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಬೇಸಬಾಲ್‌. ಈ ಕ್ರೀಡೆಗಳ ನಡುವೆಯೂ ಈಗ ಕ್ರಿಕೆಟ್‌ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಲು ಸಜ್ಜಾಗುತ್ತಿದೆ. ಈ ದೇಶದಲ್ಲಿ ಕ್ರಿಕೆಟ್‌ ಬಿಗ್‌ ಲೀಗ್‌ ನಡೆಯಲಿದೆ. ಈ ಲೀಗ್‌ನಲ್ಲಿ ಖ್ಯಾತನಾಮ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಶೇನ್‌ ವಾರ್ನ್‌, ವಾಸಿಮ್‌ ಅಕ್ರಮ್‌, ಬ್ರಯಾನ್‌ ಲಾರಾ, ಮೈಕಲ್ ವಾನ್‌ ಮತ್ತು ಮಾಹೇಲ ಜಯವರ್ಧನೆ ಸೇರಿದಂತೆ ಇನ್ನಿತರ ದಿಗ್ಗಜರು ಆಡಲಿದ್ದಾರೆ. ಮುಂದಿನ ತಿಂಗಳು 7, 11 ಮತ್ತು 14ರಂದು ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ. ಅಮೆರಿಕದಲ್ಲಿ ನೆಲೆಸಿರುವ ಕ್ರಿಕೆಟ್ ಆಡುವ ರಾಷ್ಟ್ರಗಳ ಜನರನ್ನು ಗುರಿಯಾಗಿರಿಸಿಕೊಂಡು ಟೂರ್ನಿ ಆಯೋಜಿಸಲಾಗಿದೆ. ಅವರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ಈ ಲೀಗ್ ನಡೆಯಲಿದೆ. ಇದು ಅಮೆರಿಕದಲ್ಲಿ ಕ್ರಿಕೆಟ್‌ ಬೆಳವಣಿಗೆಗೂ ಪೂರಕವಾಗಲಿದೆ. ಅಚ್ಚರಿಯೆಂದರೆ ಕ್ರಿಕೆಟ್‌ ಪಂದ್ಯಗಳು ನಡೆಯುವುದು ಬೇಸ್‌ಬಾಲ್‌ ಕ್ರೀಡಾಂಗಣದಲ್ಲಿ! ಹಾಗಂದ ಮಾತ್ರಕ್ಕೆ ಅಮೆರಿಕ ಇದುವರೆಗೂ ಕ್ರಿಕೆಟ್ ಆಡಿಯೇ ಇಲ್ಲ ಎಂದರ್ಥವಲ್ಲ. ಈ ತಂಡ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಮಾನ್ಯತೆ ಹೊಂದಿದೆ. 2004ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಇಂಟರ್‌ ನ್ಯಾಷನಲ್‌ ಕಪ್‌ ಮತ್ತು ವಿಶ್ವ ಕ್ರಿಕೆಟ್‌ ಲೀಗ್‌ ವಿವಿಧ ಡಿವಿಷನ್‌ ಪಂದ್ಯಗಳಲ್ಲಿ ಆಡಿದೆ. ಅಮೆರಿಕ 1965ರಲ್ಲಿಯೇ ಐಸಿಸಿಯಿಂದ ಮಾನ್ಯತೆ ಪಡೆದಿದೆಯಾದರೂ ಕ್ರಿಕೆಟ್‌ ಹೆಚ್ಚು ಬೆಳವಣಿಗೆ ಆಗಿಲ್ಲ. ಅಲ್ಲಿನ ದೇಶಿ ಟೂರ್ನಿಗಳಾದ ಅಮೆರಿಕ ಟ್ವೆಂಟಿ–20 ಚಾಂಪಿಯನ್‌ಷಿಪ್‌, ಮೇಜರ್‌ ಲೀಗ್‌ ಟೂರ್ನಿ ನಡೆದಿದ್ದವು. ಐಸಿಸಿ ನಡೆಸುವ ಟ್ವೆಂಟಿ–20 ಚಾಂಪಿಯನ್‌ಷಿಪ್‌ನ ವಿವಿಧ ಡಿವಿಷನ್‌ಗಳ ಪಂದ್ಯದಲ್ಲಿ ಅಮೆರಿಕ 2010ರಲ್ಲಿ ಪ್ರಶಸ್ತಿ ಜಯಿಸಿತ್ತು. 2013ರಲ್ಲೂ ಚಾಂಪಿಯನ್‌ ಆಗಿತ್ತು. ಅಷ್ಟೇ ಏಕೆ, ಭಾರತದಲ್ಲಿ ಆರಂಭವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅನುಕರಿಸಿ ಅಮೆರಿಕ ಪ್ರೀಮಿಯರ್‌ ಲೀಗ್‌ ನಡೆಸಲು ಸಾಕಷ್ಟು ತಯಾರಿ ನಡೆದಿತ್ತು. ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಲೆಕ್ಕಾಚಾರದಂತೆ 2009ರಲ್ಲಿ ಪ್ರೀಮಿಯರ್‌ ಲೀಗ್ ಆರಂಭವಾಗಬೇಕಿತ್ತು. ಆದರೆ, ಕ್ರೀಡಾಂಗಣ ಲಭಿಸಲಿಲ್ಲ. ದೇಶಿ ಪಂದ್ಯಗಳನ್ನೆಲ್ಲಾ ವಿವಿಧ ಕಾಲೇಜುಗಳ ಕ್ರೀಡಾಂಗಣಗಳಲ್ಲಿಯೇ ಆಯೋಜಿಸಲಾಗುತ್ತದೆ. ಇತ್ತೀಚಿನ ಹಲವು ವರ್ಷಗಳಿಂದ ಕ್ರಿಕೆಟ್‌ ಆಡುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆಶ್ರಯದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಫ್ಘಾನಿಸ್ತಾನ ಪಾಲ್ಗೊಂಡಿತ್ತು. ಕೆನ್ಯಾ, ಬರ್ಮುಡಾ, ಕೆನಡಾ, ಐರ್ಲೆಂಡ್, ನಮೀಬಿಯಾ, ಯುಎಇ ರಾಷ್ಟ್ರಗಳು ಕ್ರಿಕೆಟ್‌ ಅಂಗಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅಮೆರಿಕ ಕೂಡ ಇದೇ ರೀತಿಯ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ವಿಶ್ವದ ಶ್ರೇಷ್ಠ ಆಟಗಾರರು ಮುಂದಿನ ತಿಂಗಳು ಅಮೆರಿಕದಲ್ಲಿ ಆಡಲಿರುವ ಕ್ರಿಕೆಟ್‌ ಟೂರ್ನಿಯಿಂದಾಗಿ ಆ ದೇಶದಲ್ಲಿ ಕ್ರಿಕೆಟ್‌ ಬಗ್ಗೆ ಹೊಸ ಹುಮ್ಮಸ್ಸು ಮೂಡಬಹುದು ಎಂದು ನಿರೀಕ್ಷಿಸಲಾಗಿದೆ. ಅಮೆರಿಕ, ರಷ್ಯಾದಂತ ರಾಷ್ಟ್ರಗಳಲ್ಲಿ ಟೆನಿಸ್ ಕೂಡ ಹೆಚ್ಚು ಖ್ಯಾತಿ ಹೊಂದಿದೆ. ಈ ಕ್ರೀಡೆಗಳ ನಡುವೆ ಅಭಿಮಾನಿಗಳನ್ನು ಕ್ರಿಕೆಟ್‌ ಹೇಗೆ ಆಕರ್ಷಿಸಲಿದೆ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ. ಅದೆಷ್ಟೋ ಖ್ಯಾತ ಕ್ರಿಕೆಟಿಗರು ಈ ದೇಶದವರಿಗೆ ಹೆಚ್ಚು ಗೊತ್ತಿಲ್ಲ. ಅಷ್ಟೇ ಏಕೆ ಐದು ಟೆನಿಸ್‌ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳ ಒಡತಿ ರಷ್ಯಾದ ಮರಿಯಾ ಶರಪೋವಾ ಅದೊಮ್ಮೆ ‘ಸಚಿನ್‌ ತೆಂಡೂಲ್ಕರ್‌ ಎಂದರೆ ಯಾರು ಎಂಬುದು ಗೊತ್ತೇ ಇಲ್ಲ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದ್ದರಿಂದ ಅಮೆರಿಕದಲ್ಲಿ ಕ್ರಿಕೆಟ್‌ ಮುಂಚೂಣಿಗೆ ಬರಲು ದಿಗ್ಗಜ ಆಟಗಾರರ ನಡುವಿನ ಪಂದ್ಯ ವೇದಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಭವಿಷ್ಯದಲ್ಲಿ ಬೇಸ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗಳಿಗೆ ಕ್ರಿಕೆಟ್‌ ಕೂಡ ಪೈಪೋಟಿ ಒಡ್ಡಬಹುದು. ಅಮೆರಿಕ ಮೂಲದ ಕ್ರಿಕೆಟಿಗರು ಅಮೆರಿಕದಲ್ಲಿ ಹುಟ್ಟಿ ವಿವಿಧ ದೇಶಗಳಲ್ಲಿ ಕ್ರಿಕೆಟ್‌ ಆಡಿದ ಹಲವು ಪ್ರತಿಭಾವಂತ ಆಟಗಾರರು ಇದ್ದಾರೆ. ಅಮೆರಿಕ ಮೂಲದ ಕೇನ್‌ ವೀಕಿನ್ಸ್‌ ವೆಸ್ಟ್‌ ಇಂಡೀಸ್‌ ಪರ ಎರಡು ಟೆಸ್ಟ್ ಆಡಿದ್ದರು. 1939ರಲ್ಲಿ ವಿಂಡೀಸ್ ತಂಡ ಇಂಗ್ಲೆಂಡ್‌ ಎದುರು ಸರಣಿ ಆಡಿದ್ದಾಗ ಕೇನ್‌ ತಂಡದಲ್ಲಿದ್ದರು. ಬಾಸ್ಟನ್‌ನಲ್ಲಿ ಜನಿಸಿರುವ ಕೇನ್‌ ದಿ ಓವಲ್‌ನಲ್ಲಿ ಆಡಿದ ಕೊನೆಯ ಟೆಸ್ಟ್‌ನಲ್ಲಿ 137 ರನ್‌ ಬಾರಿಸಿದ್ದರು. ವಾಷಿಂಗ್ಟನ್‌ನಲ್ಲಿ ಜನಿಸಿದ್ದ ಜೆಹಾನ್‌ ಮುಬಾರಕ್‌ ಈಗ ಶ್ರೀಲಂಕಾ ತಂಡದಲ್ಲಿದ್ದಾರೆ. ಲಂಕಾ ಪರ ಅವರು 13 ಟೆಸ್ಟ್‌, 40 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2002ರಲ್ಲಿ ಮುಬಾರಕ್‌ ಲಂಕಾ ತಂಡದ ಪರ ಮೊದಲ ಪಂದ್ಯ ಆಡಿದ್ದರು. ಇದೇ ವರ್ಷದ ಆಗಸ್ಟ್‌ನಲ್ಲಿ ಭಾರತದ ಎದುರು ನಡೆದ ಟೆಸ್ಟ್‌ ಸರಣಿಯಲ್ಲೂ ಮುಬಾರಕ್‌ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.