ಇತಿಹಾಸದ ಪುಟಗಳಲ್ಲಿ ಕರ್ನಾಟಕ... ರಣಜಿ ಟೂರ್ನಿಯಲ್ಲಿ 1942ರಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ರಾಜ್ಯ ತಂಡ, 1960ರಲ್ಲಿಯೂ ಎರಡನೇ ಸ್ಥಾನ ಪಡೆದಿತ್ತು. ಎರಡೂ ಬಾರಿ ಮುಂಬೈಗೆ ಶರಣಾಗಿತ್ತು. 1974ರಲ್ಲಿ ರಾಜಸ್ತಾನದ ಎದುರು ಮತ್ತು 1978ರಲ್ಲಿ ಉತ್ತರ ಪ್ರದೇಶದ ವಿರುದ್ಧ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಆಗಿದ್ದ ಕರ್ನಾಟಕ ದೇಸಿ ಕ್ರಿಕೆಟ್‌ನ ಸಾರ್ವಭೌಮನಾಗಿ ಮೆರೆದಾಡಿತ್ತು. 1982–83ರಲ್ಲಿ ಪ್ರಶಸ್ತಿ ಜಯಿಸಿತ್ತು. ಆ ಬಳಿಕ ಹಲವು ವರ್ಷ ಕಾಡಿದ್ದು ನಿರಾಸೆ. ಹಲವು ಏಳು-ಬೀಳುಗಳನ್ನು ಕಂಡಿದ್ದ ತಂಡಕ್ಕೆ ಚಿನ್ನದ ದಿನಗಳು ಎನಿಸಿದ್ದು 90ರ ದಶಕ. ಪ್ರತಿಭೆಗಳ ಸಮೃದ್ಧ ಬೆಳೆಯಿಂದ ಆಗ ತಂಡ ಕಂಗೊಳಿಸುತ್ತಿತ್ತು. ಯಾರನ್ನು ಆಡಿಸುವುದು? ಯಾರನ್ನು ಹೊರಗೆ ಕೂರಿಸುವುದು? ಎಂಬ ಸಮಸ್ಯೆ ಪ್ರತಿ ಪಂದ್ಯದಲ್ಲೂ ಕಾಡುತಿತ್ತು. ಬ್ಯಾಟಿಂಗ್‌ನಲ್ಲಿ ರಾಹುಲ್ ದ್ರಾವಿಡ್, ಜೆ. ಅರುಣ್‌ ಕುಮಾರ್, ಸುಜಿತ್ ಸೋಮಸುಂದರ್, ಕೆ. ಜಸ್ವಂತ್, ಪಿ.ವಿ. ಶಶಿಕಾಂತ್, ವಿಜಯ್ ಭಾರದ್ವಾಜ್ ಅವರಂತಹ ಘಟಾನುಘಟಿಗಳು ಸಿಕ್ಕರು. ಬೌಲಿಂಗ್‌ನಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್‌ ಪ್ರಸಾದ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ, ದೊಡ್ಡ ಗಣೇಶ್‌, ಡೇವಿಡ್ ಜಾನ್ಸನ್, ಆರ್. ಅನಂತ್, ಟಿ. ನಾಸಿರುದ್ದೀನ್, ಮನ್ಸೂರ್ ಅಲಿ ಖಾನ್ ಅವರಂಥ ಅಸ್ತ್ರಗಳು ಬಂದು ಸೇರಿದವು. 1995ರಿಂದ 99ರ ಅವಧಿಯಲ್ಲಿ ರಾಜ್ಯ ತಂಡ ಮೂರು ಬಾರಿ ರಣಜಿ ಟ್ರೋಫಿ ಮತ್ತು ಎರಡು ಸಲ ಇರಾನಿ ಕಪ್‌ ಗೆದ್ದುಕೊಂಡಿತು. ಯಾವೊಬ್ಬ ಸದಸ್ಯನನ್ನು ನೆಚ್ಚಿಕೊಳ್ಳದೆ, ತಂಡ ಈ ಸಾಧನೆ ಮಾಡಿದ್ದು ವಿಶೇಷ. ಒಬ್ಬ ವಿಫಲನಾದರೆ ಮತ್ತೊಬ್ಬ ಆಟಗಾರ ತಂಡದ ನೆರವಿಗೆ ಧಾವಿಸುತ್ತಿದ್ದರು. ಅಷ್ಟೇ ಅಲ್ಲ; ಆಗ ಸುಮಾರು ಏಳು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಅವು ಕರ್ನಾಟಕ ಕ್ರಿಕೆಟ್‌ ಇತಿಹಾಸದ ವೈಭವದ ದಿನಗಳು. 1999ರಲ್ಲಿ ಸುನಿಲ್ ಜೋಶಿ ನಾಯಕತ್ವದಲ್ಲಿ ಕೊನೆಯ ಬಾರಿ ಟ್ರೋಫಿ ಜಯಿಸಿದ ನಂತರ ರಾಜ್ಯ ತಂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. 2003–04ರ ಹೊತ್ತಿಗೆ ತಂಡ ‘ಎಲೈಟ್’ ಗುಂಪಿನಿಂದ ‘ಪ್ಲೇಟ್’ ಗುಂಪಿಗೆ ಹಿಂಬಡ್ತಿ ಪಡೆಯಿತು. ರಾಜ್ಯ ರಣಜಿ ತಂಡ ಕಂಡ ಅತ್ಯಂತ ಕೆಟ್ಟ ದಿನಗಳವು. ಆದರೀಗ ಮತ್ತೆ ಆ ವೈಭವದ ದಿನಗಳು ಮರುಕಳಿಸಿವೆ. 90ರ ದಶಕದ ನಂತರ ಹಿಮ್ಮುಖವಾಗಿ ಚಲಿಸಿದ್ದ ರಾಜ್ಯ ತಂಡ ಕೆಲ ವರ್ಷಗಳಿಂದ ಮತ್ತೆ ಮುಂದಕ್ಕೆ ಓಡುತ್ತಿದೆ. 2008ರಲ್ಲಿ ತಂಡಕ್ಕೆ ಹೊಸರಕ್ತ ಹರಿದುಬರಲು ಆರಂಭಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರಿನಲ್ಲಿ ಮುಂಬೈ ಎದುರು ಒಲಿದ ಗೆಲುವನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ 40 ಬಾರಿ ರಣಜಿ ಚಾಂಪಿಯನ್‌ ಆಗಿರುವ ಆ ತಂಡವನ್ನು ಕರ್ನಾಟಕ ಯಾವತ್ತೂ ಸೋಲಿಸಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ 2013ರಲ್ಲಿ ನಡೆದ ಆ ಪಂದ್ಯದಲ್ಲಿ ಗೆದ್ದು ಇತಿಹಾಸ ಬರೆಯಿತು. ಆ ಗೆಲುವಿನ ಸ್ಫೂರ್ತಿ ಇಂದಿಗೂ ಮುಂದುವರಿದಿದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿನ ವಾತಾವರಣವೂ ಹಿತಕರವಾಗಿದೆ. ಕಾಲೆಳೆಯುವ ಬುದ್ಧಿಗೆ ಅಲ್ಲಿ ಜಾಗವೇ ಇಲ್ಲ. ಪ್ರೋತ್ಸಾಹ, ಉತ್ಸಾಹ, ತಮಾಷೆಯೇ ಮನೆಮಾಡಿವೆ. ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಮಂಗಳೂರು, ಬೆಂಗಳೂರಿನ ಆಟಗಾರರು ತಂಡದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.