ರಾಜ್ಯ ಕ್ರಿಕೆಟ್‌ನಲ್ಲಿ ಎಳೆಯ ಸಿರಿ... ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ರಾಜ್ಯ ತಂಡದಲ್ಲಿ ಅಭಿಷೇಕ್ ರೆಡ್ಡಿ ಹೆಸರು ಕಂಡಾಗ ಅನೇಕ ಮಂದಿ ಅಚ್ಚರಿಗೊಂಡಿದ್ದರು. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಗೆ ಹೋದ ವರ್ಷ ಪದಾರ್ಪಣೆ ಮಾಡಿದ್ದ ಅವರು ಎಂಟು ಪಂದ್ಯಗಳಲ್ಲಿ ಎರಡು ಅರ್ಧ ಶತಕ ಬಾರಿಸಿದ್ದರು. ಬಲಿಷ್ಠ ಆಟಗಾರರನ್ನು ಹೊಂದಿರುವ ರಣಜಿಗೆ ರೆಡ್ಡಿ ಆಯ್ಕೆಯಾಗಲು ಇದುವೇ ಮಾನದಂಡವಾಯಿತೇ ಎಂಬುದು ಈ ಅಚ್ಚರಿಯ ಹಿನ್ನೆಲೆ. ವಯೋಮಿತಿ ವಿಭಾಗದ ಕ್ರಿಕೆಟ್‌ನಲ್ಲಿ ಬೀದರ್‌ನ ಈ ಆಟಗಾರ ಮಾಡಿರುವ ಸಾಧನೆಯ ಬಗ್ಗೆ ತಿಳಿಯದಿರುವುದೇ ಇದಕ್ಕೆ ಕಾರಣ. ಐಪಿಎಲ್‌ ಮತ್ತು ಕೆಪಿಎಲ್‌ನಲ್ಲಿ ಹೆಸರು ಮಾಡಿ ಈ ಬಾರಿ ರಣಜಿ ತಂಡದಲ್ಲಿ ಕಾಣಿಸಿಕೊಂಡ ಮೈಸೂರಿನ ಜಗದೀಶ ಸುಚಿತ್‌, ರಣಜಿ ಆಡುವ ಕನಸನ್ನು ಕಳೆದ ಋತುವಿನಲ್ಲಿ ನನಸಾಗಿಸಿಕೊಂಡ ಶಿಶಿರ್ ಭವಾನೆ ಮುಂತಾದವರದ್ದು ಕೂಡ ಇದೇ ಕಥೆ. ಬೆಳಗಾವಿಯ ರೋನಿತ್ ಮೋರೆ, ಕೆಪಿಎಲ್‌ನಲ್ಲಿ ಆಡುತ್ತಿರುವ ಜೀಶನ್ ಅಲಿ ಸೈಯದ್‌, ಧಾರವಾಡದ ಲಿಖಿತ್ ಬನ್ನೂರು, ಬಾಗಲಕೋಟೆಯ ಆನಂದ ದೊಡ್ಡಮನಿ, ಮೈಸೂರಿನ ನಿಕಿನ್ ಜೋಸ್‌ ಮುಂತಾದವರು ಕೂಡ ವಿವಿಧ ವಯೋಮಾನದವರ ಕ್ರಿಕೆಟ್‌ನಲ್ಲಿ ಮಿಂಚಿ ‘ಮುಖ್ಯ ವೇದಿಕೆ’ಗೆ ಬಂದವರು. ರಣಜಿ ಟೂರ್ನಿ ನಡೆಯುತ್ತಿರುವಾಗಲೇ ಈಗ 23 ವರ್ಷದೊಳಗಿನವರ ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿ ನಡೆಯುತ್ತಿದೆ. 19 ವರ್ಷದೊಳಗಿನವರ ಕೂಚ್ ಬಿಹಾರಿ ಟೂರ್ನಿ ಕೂಡ ಆರಂಭಗೊಂಡಿದೆ. ಈ ಎರಡು ಟೂರ್ನಿಗಳು ರಣಜಿ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಕನಸಿನ ಹೆಬ್ಬಾಗಿಲು ಇದ್ದಂತೆ. ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ, ಮೈಸೂರಿನಂಥ ಸ್ಥಳಗಳಲ್ಲಿ ಆಯೋಜಿಸುತ್ತಿರುವ ವಯೋಮಾನದವರ ವಿಭಾಗದ ಟೂರ್ನಿಗಳು ಕ್ರಿಕೆಟ್‌ನಲ್ಲಿ ಹೊಸ ತಲೆಮಾರಿನ ಪ್ರೇರಕ ಶಕ್ತಿಯಾಗಿ ಪರಿಣಮಿಸುತ್ತಿದೆ. ಹುಬ್ಬಳ್ಳಿಯಲ್ಲಿ ರಾಜನಗರದ ಕೆ.ಎಸ್‌.ಸಿ.ಎ. ಕ್ರಿಕೆಟ್ ಮೈದಾನ ಸಿದ್ಧಗೊಂಡ ನಂತರ 2012ರಿಂದ ನಡೆದ ರಣಜಿ ಪಂದ್ಯಗಳ ಜೊತೆಯಲ್ಲಿ ವಯೋಮಾನದವರ ಟೂರ್ನಿಗಳು ಕೂಡ ನಡೆಯುತ್ತಿವೆ. ನಾಲ್ಕು ದಿನಗಳ ಪಂದ್ಯದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್‌ ಮಾಡುವುದು, ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯುವುದು, ಕೆಟ್ಟ ಎಸೆತಗಳನ್ನು ದಂಡಿಸುವುದು ಮುಂತಾದ ಕಲೆಯನ್ನು ಕರಗತ ಮಾಡಿಕೊಂಡು ಆಡುವ ಎಳೆಯ ವಯಸ್ಸಿನವರು ಈಗಷ್ಟೇ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಕಿರಿಯ ಕ್ರಿಕೆಟಿಗರಿಗೂ ಪ್ರೇರಣೆಯಾಗುತ್ತಾರೆ. ವರ್ಷಗಳ ಪರಿಶ್ರಮ ವಿವಿಧ ವಯೋಮಾನದವರ ಕ್ರಿಕೆಟ್‌ನಲ್ಲಿ ಒಂದು ದಶಕದಷ್ಟು ಕಾಲ ಆಡಿದ ಶಿಶಿರ್ ಭವಾನೆ ಸಿ,ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ನಲ್ಲಿ ರಾಜ್ಯ ತಂಡದ ನಾಯಕತ್ವವನ್ನೂ ವಹಿಸಿದ್ದರು. ಶತಕಗಳ ಸರದಾರ ಎಂದೇ ಹೆಸರು ಮಾಡಿದ್ದರು. ರಣಜಿ ವರೆಗಿನ ಅವರ ಹೆಜ್ಜೆಗಳು ಪರಿಶ್ರಮದಿಂದ ಕೂಡಿದ್ದವು. ಕಳೆದ ವರ್ಷ ಕೂಚ್‌ ಬಿಹಾರಿ ಟೂರ್ನಿಯಲ್ಲಿ ನಾಲ್ಕು ಶತಕ ಸಿಡಿಸಿದ್ದ ಅಭಿಷೇಕ್ ರೆಡ್ಡಿ ಒಂಬತ್ತು ಇನಿಂಗ್ಸ್‌ಗಳಲ್ಲಿ ಒಟ್ಟು 612 ರನ್‌ ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದರು. ಶಿಶಿರ್‌ ಭವಾನೆ ಒಂಬತ್ತು ಇನಿಂಗ್ಸ್‌ಗಳಲ್ಲಿ 403 ರನ್‌ ಸೇರಿಸಿದ್ದರು. ಸುಚಿತ್‌ 10 ಇನಿಂಗ್ಸ್‌ಗಳಲ್ಲಿ ಒಟ್ಟು 28 ವಿಕೆಟ್‌ ಕಬಳಿಸಿದ್ದರು. ಮೂರು ಬಾರಿ ಐದು ವಿಕೆಟ್ ಗೊಂಚಲು ಕೂಡ ಬುಟ್ಟಿಗೆ ಹಾಕಿಕೊಂಡಿದ್ದರು. ಈ ಬಾರಿ ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಅಭಿಷೇಕ್ ರೆಡ್ಡಿ ಬಂಗಾಳ ವಿರುದ್ಧ 55 ರನ್‌ ಗಳಿಸಿದರೆ ಮುಂಬೈ ವಿರುದ್ಧ 151 ರನ್‌ ಚಚ್ಚಿದ್ದರು. ಇವರೊಂದಿಗೆ ಕೆ.ವಿ.ಸಿದ್ಧಾರ್ಥ, ಸಿ.ಎ.ಕಾರ್ತಿಕ್‌, ಡಿ.ನಿಶ್ಚಲ್‌ ಮುಂತಾದವರು ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಕೆಪಿಎಲ್‌ ಮೂಲಕ ಐಪಿಎಲ್‌ಗೆ ಹಾದಿ ಕಂಡುಕೊಂಡ ಕೆ.ಸಿ.ಕಾರ್ಯಪ್ಪ, ಈ ಬಾರಿಯ ಕೆಪಿಎಲ್‌ನಲ್ಲಿ ಹೆಸರು ಮಾಡಿದ ಪ್ರಸಿದ್ಧ ಕೃಷ್ಣ, ಪ್ರತೀಕ್ ಜೈನ್ ಮುಂತಾದವರು ಬೌಲಿಂಗ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಸವಾಲು ಬಹುತೇಕ ಮುಗಿಯುತ್ತ ಬಂದಿದ್ದು ಕೂಚ್‌ ಬಿಹಾರಿ ಟ್ರೋಫಿಯಲ್ಲಿ ಯಾವ ಪ್ರತಿಭೆ ಬೆಳಕಿಗೆ ಬರುತ್ತದೆ ಎಂಬುದು ಈಗಿನ ಕುತೂಹಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.