ಭರವಸೆಯ ಕಿರಣ ಸುಮಿತ್‌ ಸುಮಿತ್‌ ನಗಾಲ್‌... ಈ ವರ್ಷದ ಆರಂಭದಲ್ಲಿ ನಡೆದ ವಿಂಬಲ್ಡನ್‌ ಜೂನಿಯರ್‌ ಟೆನಿಸ್‌ ಟೂರ್ನಿಗೂ ಮುನ್ನ ಬಹುತೇಕ ರಿಗೆ ಈ ಹೆಸರು ಗೊತ್ತಿರಲಿಲ್ಲ. ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಈ ಸಾಧಕ ಸದ್ಯ ಭಾರತದ ಟೆನಿಸ್‌ ಕ್ಷಿತಿಜದಲ್ಲಿ ಭರವಸೆಯಾಗಿ ಪ್ರಜ್ವಲಿಸುತ್ತಿದ್ದಾರೆ. ಹರಿಯಾಣದ ಜಜ್ಜಾರ್‌ನಲ್ಲಿ ಜನಿಸಿದ ಸುಮಿತ್‌ ಎಂಟನೇ ವಯಸ್ಸಿನಲ್ಲೇ ಟೆನಿಸ್‌ ರ್‍ಯಾಕೆಟ್‌ ಹಿಡಿದವರು. ಎಳವೆಯಲ್ಲಿ ಮಗನ ಟೆನಿಸ್‌ ಪ್ರೀತಿ ಕಂಡ ಪೋಷಕರು ಆತನ ಆಸೆಗೆ ಬೆನ್ನೆಲುಬಾಗಿ ನಿಂತರು. 2008ರಲ್ಲಿ ಮಹೇಶ್‌ ಭೂಪತಿ ಆರಂಭಿಸಿದ ಅಪೊಲೊ ಟಯರ್‌ ಮಿಷನ್‌ 2018 ಕಾರ್ಯಕ್ರಮದಲ್ಲಿ ಸುಮಿತ್‌ ತಮ್ಮ ಪ್ರತಿಭೆಯ ಮೂಲಕ ಎಲ್ಲರ ಗಮನಸೆಳೆದರು. ಹೀಗಾಗಿ ಅವರಿಗೆ 2008 ರಿಂದ 2010 ರವರೆಗೆ ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಅವಕಾಶ ಒಲಿಯಿತು. ಬಳಿಕ ಸುಮಿತ್‌ ಕೆನಡಾದ ಟೊರಾಂಟೊದಲ್ಲಿ ಏಳು ವರ್ಷಗಳ (2008–2014ರವರೆಗೆ) ಕಾಲ ಪ್ರಸಿದ್ಧ ಕೋಚ್‌ ಬಾಬಿ ಮಹಲ್‌ ಅವರ ಗರಡಿಯಲ್ಲಿ ಪಳಗಿದರು. ಆ ನಂತರ ಅರ್ಜೆಂಟೀನಾದ ಮರಿಯಾನೊ ಡೆಲ್ಫಿನೊ ಅವರನ್ನು ಕೋಚ್‌ ಆಗಿ ನೇಮಿಸಿಕೊಂಡ ಸುಮಿತ್‌ ವಿಂಬಲ್ಡನ್‌ ಜೂನಿಯರ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದು ಈಗ ಇತಿಹಾಸ. ಹೋದ ವಾರ ನಡೆದ ಏರ್‌ ಏಷ್ಯಾ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಆಡಲು ಉದ್ಯಾನ ನಗರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ ಜತೆಗೆ ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. *ಟೆನಿಸ್‌ ಆಡಲು ನಿಮಗೆ ಸ್ಫೂರ್ತಿ ಯಾರು? ಸ್ಪೇನ್‌ನ ರಫೆಲ್‌ ನಡಾಲ್‌ ನನ್ನ ಮೆಚ್ಚಿನ ಆಟಗಾರ. ಅವರೇ ನನಗೆ ಪ್ರೇರಣೆ. ಚಿಕ್ಕಂದಿನಿಂದಲೂ ಅವರ ಆಟ ನೋಡುತ್ತಾ ಬೆಳೆದೆ. ಮುಂದೊಂದು ದಿನ ಅವರಂತೆ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದೇನೆ. *ನಡಾಲ್‌ ಅವರನ್ನು ಎಂದಾದರೂ ಭೇಟಿಯಾಗಿದ್ದೀರಾ? ವಿಂಬಲ್ಡನ್‌ ಟೂರ್ನಿಯ ವೇಳೆ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಆದರೆ ಭೇಟಿ ಮಾಡಿ ಮಾತನಾಡುವ ಸೌಭಾಗ್ಯ ಇನ್ನೂ ಸಿಕ್ಕಿಲ್ಲ. *ವಿಂಬಲ್ಡನ್‌ ಪಯಣ ಹೇಗಿತ್ತು? ಅದೊಂದು ಸುಂದರ ಅನುಭವ. ಅಲ್ಲಿ ಆಡಿದ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುವಂತಹದ್ದು. ಸಿಂಗಲ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ನೀಡಲು ಆಗಲಿಲ್ಲ ಎಂಬ ನೋವಿತ್ತು. ಆದರೆ ಡಬಲ್ಸ್‌ನಲ್ಲಿ ಸಿಕ್ಕ ಪ್ರಶಸ್ತಿ ಆ ಕೊರಗನ್ನು ಮರೆಸಿದೆ. *ಅಲ್ಲಿ ಸ್ಪರ್ಧೆ ಹೇಗಿತ್ತು? ವಿಶ್ವದ ವಿವಿಧ ರಾಷ್ಟ್ರಗಳ ಬಲಿಷ್ಠ ಆಟಗಾರರು ಭಾಗವಹಿಸಿದ್ದರು. ಹೀಗಾಗಿ ಪ್ರತಿ ಪಂದ್ಯದಲ್ಲೂ ಸವಾಲು ಕಠಿಣವಾಗಿತ್ತು. ಡಬಲ್ಸ್‌ನಲ್ಲಿ ಸಹ ಆಟಗಾರ ವಿಯೆಟ್ನಾಂನ ಲೀ ಹಾವೊಂಗ್‌ ನಾಮ್‌ ಅವರಿಂದ ಸಿಕ್ಕ ಬೆಂಬಲ ಪದಗಳಿಗೆ ನಿಲುಕದ್ದು. ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಹೀಗಾಗಿ ಅಲ್ಲಿ ಪ್ರಶಸ್ತಿ ಜಯಿಸಲು ಸಾಧ್ಯವಾಯಿತು. *ಸಿಂಗಲ್ಸ್‌ ಮತ್ತು ಡಬಲ್ಸ್‌. ಇವೆರಡರಲ್ಲಿ ನಿಮ್ಮ ಮೊದಲ ಪ್ರಾಶಸ್ತ್ಯ? ಸಿಂಗಲ್ಸ್‌ನಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವವನು ನಾನು. ಹೀಗಾಗಿ ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡರು ಸಿಂಗಲ್ಸ್‌ಗೆ ಹೆಚ್ಚು ಒತ್ತುಕೊಟ್ಟು ಆಡುತ್ತೇನೆ. ಡಬಲ್ಸ್‌ ನನ್ನ ಎರಡನೇ ಆಯ್ಕೆ. *ನಿಮ್ಮ ಮೆಚ್ಚಿನ ಹೊಡೆತ ಯಾವುದು? ಬ್ಯಾಕ್‌ ಹ್ಯಾಂಡ್‌ ಹೊಡೆತಗಳನ್ನು ಬಾರಿಸುವು ದೆಂದರೆ ನನಗೆ ಬಲು ಇಷ್ಟ. ಎದುರಾಳಿಗಳ ಮೇಲೆ ಒತ್ತಡ ಹೇರಲು ನಾನು ಇದನ್ನೇ ಅಸ್ತ್ರವನ್ನಾಗಿ ಬಳಸುತ್ತೇನೆ. *ಆಟ ಮತ್ತು ಓದು. ಇವೆರಡಕ್ಕೂ ಹೇಗೆ ಸಮಯ ಮೀಸಲಿಡುತ್ತೀರಿ? ಟೆನಿಸ್‌ ನನ್ನ ಜೀವ ಮತ್ತು ಜೀವನ. ಹೀಗಾಗಿ ಓದಿಗಿಂತಲೂ ಆಟಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ. ಓದಿಗಿಂತಲೂ ಟೆನಿಸ್‌ ಅಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತೇನೆ. ಈಗಿನ್ನು ಪಿಯುಸಿ ಮುಗಿಸಿದ್ದೇನೆ. ಮುಂದೆ ಶಿಕ್ಷಣ ಮುಂದುವರಿಸಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದೇನೆ. *ಭವಿಷ್ಯದ ಯೋಜನೆ? ಸದ್ಯದಲ್ಲಿಯೇ ಪುಣೆಯಲ್ಲಿ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ ನಡೆಯಲಿದೆ. ಅಲ್ಲಿ ಉತ್ತಮ ಸಾಮರ್ಥ್ಯ ನೀಡುವತ್ತಾ ಗಮನ ಹರಿಸಿದ್ದೇನೆ. ಆ ಬಳಿಕ ತರಬೇತಿಗಾಗಿ ಜರ್ಮನಿಗೆ ಹೋಗುತ್ತೇನೆ. *ಜೀವನದ ಹೆಗ್ಗುರಿ ? ಟೆನಿಸ್‌ ಜೀವನ ಈಗಿನ್ನು ಶುರುವಾಗಿದೆ. ದೊಡ್ಡ ಗುರಿ ಅಂತಾ ಏನೂ ಇಲ್ಲ. ಮುಂಬರುವ ಫ್ರೆಂಚ್‌ ಓಪನ್‌ ಅರ್ಹತಾ ಟೂರ್ನಿಯಲ್ಲಿ ಆಡಬೇಕು. ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಅಲ್ಲಿಯವರೆಗೂ ಫಿಟ್ನೆಸ್‌ ಕಾಪಾಡಿಕೊಂಡು ಸಾಗಬೇಕು. ಇದೇ ಈಗ ನನ್ನ ಮುಂದಿರುವ ಏಕೈಕ ಸವಾಲು. *ರ‍್ಯಾಂಕಿಂಗ್‌ ಬಗ್ಗೆ ಹೇಳಿ? ಸದ್ಯ ಎಟಿಪಿ ರ್‍ಯಾಂಕಿಂಗ್‌ನಲ್ಲಿ 500 ರೊಳಗಿನ ಸ್ಥಾನದಲ್ಲಿದ್ದೇನೆ. ಮುಂಬರುವ ಎಟಿಪಿ ಚಾಲೆಂಜರ್‌ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ನೀಡಿ ಇದನ್ನು ಉತ್ತಮಪಡಿಸಿಕೊಳ್ಳಬೇಕು. ಮುಂದಿನ ವರ್ಷದ ಏಪ್ರಿಲ್‌ ಒಳಗೆ 250ರೊಳಗಿನ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.