ಉಪಖಂಡದ ಸ್ಪಿನ್‌ ಮೋಡಿ 1933 ರಲ್ಲಿ ಭಾರತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ. ಅದರಲ್ಲಿ ಆಡಿದ್ದ ಸ್ಪಿನ್ ಬೌಲರ್ ರುಸ್ತುಮಜೀ ಜೆಮ್‌ಶೆಡಜೀ ಅವರಿಗೆ 41 ವರ್ಷ ವಯಸ್ಸು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ಅದು ಅವರ ಕೊನೆಯ ಪಂದ್ಯವೂ ಆಗಿದ್ದು ಇತಿಹಾಸ. ಆಗ ಇಂಗ್ಲೆಂಡ್ ಆಟಗಾರನಾಗಿದ್ದ ವಿಲ್‌ಫ್ರೆಡ್ ರೋಡ್ಸ್, ‘ಜೆಮ್‌ಶೆಡಜೀ ಭಾರತದ ಸ್ಪಿನ್ ಸಾರಥ್ಯವನ್ನು ದೀರ್ಘ ಕಾಲಕ್ಕೆ ವಹಿಸಿದ್ದರೆ, ಆಗಿನ ಯಾವ ತಂಡವು 100 ರನ್‌ ಗಳಿಸುವುದೇ ದುಸ್ತರವಾಗುತ್ತಿತ್ತು’ ಎಂದಿದ್ದರು. ಆ ಘಟನೆ ನಡೆದು 82 ವರ್ಷಗಳು ಕಳೆದಿವೆ. ಕ್ರಿಕೆಟ್‌ ರಂಗವೂ ಹಲವು ಮಗ್ಗಲುಗಳನ್ನು ಬದಲಿಸಿದೆ. ಆದರೆ, ಭಾರತದ ಸ್ಪಿನ್ ಬೌಲಿಂಗ್ ಬಗ್ಗೆ ಬೇರೆ ದೇಶಗಳ ಮನದಲ್ಲಿ ಇರುವ ಭಯ ಮಾತ್ರ ಕಡಿಮೆಯಾಗಿಲ್ಲ. ‘ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಎಸೆತ ಗಳನ್ನು ಎದುರಿಸುವುದು ನಮ್ಮ ಮುಂದಿರುವ ಅತಿ ದೊಡ್ಡ ಸವಾಲು. ಅವರ ಮೊನಚಾದ ದಾಳಿಯನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬ ಬಗ್ಗೆ ಆಳವಾದ ಅಭ್ಯಾಸ ಮಾಡುತ್ತಿದ್ದೇವೆ’ ಎಂದು ದಕ್ಷಿಣ ಆಫ್ರಿಕಾ ತಂಡದ ಎ.ಬಿ. ಡಿವಿಲಿಯರ್ಸ್ ಮೊಹಾಲಿ ಟೆಸ್ಟ್‌ ಪಂದ್ಯಕ್ಕೂ ಮೂರು ದಿನ ಮುನ್ನ ಹೇಳಿದ್ದರು. ಅವರ ಭಯ ಟೆಸ್ಟ್‌ ಪಂದ್ಯದಲ್ಲಿ ನಿಜವಾಯಿತು. ಮೊದಲ ಇನಿಂಗ್ಸ್‌ನಲ್ಲಿಯೇ ಅಶ್ವಿನ್ ಐದು ವಿಕೆಟ್‌ ಗಳಿಸಿ ಚಮತ್ಕಾರ ತೋರಿಸಿದರು. ಸುಮಾರು ಎಂಟು ದಶಕಗಳಿಂದಲೂ ಭಾರತ ಕ್ರಿಕೆ ಟ್‌ನ ಶಕ್ತಿ ಸ್ಪಿನ್. ಇಲ್ಲಿ ನಡೆದ ಬಹುತೇಕ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ಮತ್ತು ಪ್ರವಾಸಿ ತಂಡಗಳ ಸ್ಪಿನ್ನರ್‌ಗಳು ಹೆಚ್ಚು ವಿಕೆಟ್ ಗಳಿಸಿದ್ದಾರೆ. ಇದು ಈ ದೇಶದ ನೆಲದ ಗುಣ. ಸ್ಪಿನ್ ಪರಂಪರೆ ಕ್ರಿಕೆಟ್ ಆಡುವ ಪ್ರತಿಯೊಂದು ದೇಶ ತನ್ನದೇ ಆದ ಸಾಂಪ್ರದಾಯಿಕ ಸಾಮರ್ಥ್ಯ ಹೊಂದಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ವೇಗದ ಬೌಲರ್‌ಗಳ ವಿಶೇಷತೆ ಹೊಂದಿವೆ. ಅಲ್ಲಿಯ ಪಿಚ್‌ಗಳೂ ವೇಗಿಗಳ ಅನುಕೂಲಕ್ಕಾಗಿಯೇ ಸಿದ್ಧಗೊಳ್ಳುತ್ತವೆ. ಟೆಸ್ಟ್ ಪಂದ್ಯದ ನಾಲ್ಕನೇ ದಿನವೂ ಹಸಿರು ಗರಿಕೆಗಳು ಇರುವ ಪಿಚ್‌ಗಳನ್ನು ಅಲ್ಲಿ ನೋಡಬಹುದು. ಆದರೆ, ಉಪಖಂಡದ ಪಿಚ್‌ಗಳ ವಿಶೇ ಷತೆಯೇ ಬೇರೆ. ಉಷ್ಣತೆ ಹೆಚ್ಚಿರುವ ಈ ದೇಶಗಳಲ್ಲಿ ಪಂದ್ಯದ ಎರಡನೇ ದಿನವೇ ಅಂಗಳದಲ್ಲಿ ಬಿರುಕುಗಳು ಕಾಣಿಸುತ್ತವೆ. ಆದ್ದ ರಿಂದ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ದುಬೈನಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲು ಕಾರಣವಾಗಿದ್ದು ಯಾಶಿರ್‌ ಶಾ ಸ್ಪಿನ್ ಬೌಲಿಂಗ್ ತಂತ್ರ. ಸ್ಪಿನ್ ಬೌಲಿಂಗ್‌ನಲ್ಲಿ ತೋಳ್ಬಲ ಮತ್ತು ವೇಗಕ್ಕಿಂತ ಕೈಬೆರಳುಗಳ ಚಲನೆ, ಚೆಂಡಿನ ಸೀಮ್ (ದಾರದ ಹೊಲಿಗೆ) ಬಳಸಿ ಎಸೆತಗಳನ್ನು ಹಾಕುವುದು ಒಂದು ಕಲೆ. ಗಾಳಿಯಲ್ಲಿ ಪ್ರತಿ ಗಂಟೆಗೆ 110 ರಿಂದ 125 ಕಿಲೋಮೀಟರ್ಸ್ ವೇಗದಲ್ಲಿ ತೇಲಿ ಬಂದ ಚೆಂಡು ಪುಟಿತ ಕಂಡ ಜಾಗದಿಂದ ಎಡ ಅಥವಾ ಬಲಕ್ಕೆ ಹೊರಳುವುದು,ಕಣ್ಣೆವೆ ತೆರೆದು ಮುಚ್ಚುವುದರೊಳಗೆ ಚಕ್ಕನೆ ಒಳನುಗ್ಗಿ ಬೇಲ್ಸ್ ಎಗರಿಸುವ ಕ್ವಿಕರ್‌ಗಳು ಹೀಗೆ ಹಲವು ಕೌಶಲಗಳ ಪಟ್ಟಿ ಬೆಳೆಯುತ್ತದೆ. ಈ ಕೌಶಲಗಳನ್ನು ಕರಗತ ಮಾಡಿಕೊಳ್ಳುವುದರಲ್ಲಿ ಉಪಖಂಡದ ಆಟಗಾರರು ಸಿದ್ಧಹಸ್ತರು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ದೊಡ್ಡ ಪಟ್ಟಿಯೇ ಗಮನ ಸೆಳೆಯುತ್ತದೆ. ಅದರಲ್ಲೂ ಭಾರತದ್ದು ಸಿಂಹಪಾಲು. ಬಿ.ಎಸ್. ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ, ವೆಂಕಟರಾಘವನ್, ವೆಂಕಟಪತಿ ರಾಜು, ಮಣಿಂದರ್ ಸಿಂಗ್, ನರೇಂದ್ರ ಹಿರ್ವಾನಿ, 90ರ ದಶಕದಲ್ಲಿ ಅನಿಲ್ ಕುಂಬ್ಳೆ ದರ್ಬಾರು ಪ್ರಮುಖ ಘಟ್ಟಗಳು. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡದ ಹತ್ತೂ ವಿಕೆಟ್‌ಗಳನ್ನು ಎಗರಿಸಿದ ಕುಂಬ್ಳೆ ಭಾರತದ ಸ್ಪಿನ್ ಶಕ್ತಿಯ ವಿರಾಟ ರೂಪ ಪ್ರದರ್ಶಿಸಿದ್ದರು. ಅವರೊಂದಿಗೆ ಹರಭಜನ್ ಸಿಂಗ್ ಸಾಧನೆಯೂ ಕಡಿಮೆ ಯೇನಲ್ಲ. 417 ವಿಕೆಟ್‌ಗಳು ಅವರ ಖಾತೆಯಲ್ಲಿವೆ. ಲೆಗ್‌ಸ್ಪಿನ್ನರ್ ಕುಂಬ್ಳೆ ತಮ್ಮ ಗೂಗ್ಲಿಗಳ ಮೂಲಕ ಎದುರಾಳಿ ಬ್ಯಾಟಿಂಗ್‌ ಬೆನ್ನೆ ಲುಬು ಮುರಿದರೆ, ಆಫ್‌ಸ್ಪಿನ್ನರ್ ಹರಭಜನ್ ತಮ್ಮ ವಿಶೇಷ ಅಸ್ತ್ರ ‘ದೂಸ್ರಾ’ದ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಚಳಿ ಬಿಡಿಸುವ ಕಲೆ ರೂಢಿಸಿಕೊಂಡಿದ್ದಾರೆ. ಇದೀಗ ಅಶ್ವಿನ್ ತಮ್ಮ ವಿಶಿಷ್ಟವಾದ ಕೇರಂ ಎಸೆತಗಳ ಮೂಲಕ ವಿಕೆಟ್ ಬೇಟೆ ಆಡುತ್ತಿದ್ದಾರೆ. ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ ಕ್ರಿಕೆಟ್‌ ತಂಡ ಗಳೂ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳನ್ನು ಜಗತ್ತಿಗೆ ಕಾಣಿಕೆ ನೀಡಿವೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಅವರಲ್ಲಿ ಪ್ರಮುಖರು. ಉಪಖಂಡದಲ್ಲಿ ಸರಣಿ ಆಡಿ ಗೆಲ್ಲುವ ಸಲುವಾಗಿಯೇ ಬೇರೆ ದೇಶಗಳು ಸ್ಪಿನ್ನರ್‌ಗಳನ್ನು ಸಿದ್ಧಗೊಳಿಸುವ ಕಾರ್ಯಕ್ಕೆ ಕೈ ಹಾಕಿ ದವು. ಆದರೆ ಸಿಕ್ಕ ಪ್ರತಿಫಲ ದೊಡ್ಡದಲ್ಲದಿದ್ದರೂ ನಗಣ್ಯವೇನಲ್ಲ. ಆಸ್ಟ್ರೇಲಿಯಾದ ಶೇನ್ ವಾರ್ನ್, ಇಂಗ್ಲೆಂಡ್‌ನ ಗ್ರೇಮ್ ಸ್ವಾನ್, ದಕ್ಷಿಣ ಆಫ್ರಿಕಾದ ಪಾಲ್ ಆ್ಯಡಮ್ಸ್ ಸಾಧನೆ ಗಮನಾರ್ಹವಾ ದದ್ದು. ವಿಶ್ವದ ಯಾವುದೇ ಅಂಗಳದಲ್ಲಿಯೂ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಸಮರ್ಥರು. ‘ಕಣ್ಣು ಮುಚ್ಚಿದರೆ ಸಚಿನ್ ಬ್ಯಾಟಿಂಗ್ ಆರ್ಭಟವೇ ಕಾಡುತ್ತದೆ’ ಎಂದು ಶೇನ್ ವಾರ್ನ್ ಹೇಳಿದ್ದು ಇದಕ್ಕೆ ಸಾಕ್ಷಿ. ಮುಂದಿನ ಹಾದಿ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದ ಮೊದಲ ಸ್ಪಿನ್ನರ್ ಜೆಮ್‌ಶೆಡಜೀ ಅವರಿಂದ ಇಂದಿನ ಪ್ರಗ್ಯಾನ್ ಓಜಾವರೆಗೆ ಇಲ್ಲಿಯ ಸ್ಪಿನ್ ಪರಂಪರೆಯ ತೊಟ್ಟಿಲು ತೂಗುತ್ತಿದೆ. ಆದರೆ, ಪ್ರತಿ ಬಾರಿಯೂ ಇಬ್ಬರು ಅಥವಾ ಮೂವರು ಸ್ಪಿನ್ನರ್‌ಗಳು ಪಂದ್ಯ ಗೆಲ್ಲಿಸುವ ಶಕ್ತಿಯಾಗಿದ್ದರು. ಮುಂದಿನ ದಿನಗಳಲ್ಲಿಯೂ ಅದೇ ಶಕ್ತಿ ಮುಂದುವರಿಯುವುದೇ ಎಂಬ ಸಂಶಯ ಹರಿದಾಡುತ್ತಿದೆ. ಏಕೆಂದರೆ ಈಗಿನ ಕ್ರಿಕೆಟ್‌ನಲ್ಲಿ ವೇಗಕ್ಕೆ ಮಹತ್ವ ಹೆಚ್ಚಿದೆ. ಹಲವಾರು ಟೆಸ್ಟ್‌ ಪಂದ್ಯಗಳು ಮೂರು ದಿನಗಳಲ್ಲಿ ಮುಕ್ತಾ ಯವಾಗುತ್ತಿವೆ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹೆಚ್ಚು ದಂಡನೆಗೆ ಒಳಗಾಗುವ ಭೀತಿಯಿಂದ ಸ್ಪಿನ್‌ ಬೌಲಿಂಗ್‌ನತ್ತ ಹೆಚ್ಚು ಆಟ ಗಾರರು ಚಿತ್ತ ಹರಿಸುತ್ತಿಲ್ಲ ಎನ್ನುವುದು ಬಹಳಷ್ಟು ಕೋಚ್‌ಗಳ ದೂರು. ‘ಭಾರತಕ್ಕೆ ಸ್ಪಿನ್ ಬೌಲಿಂಗ್ ದೊಡ್ಡ ಶಕ್ತಿ. ಅದನ್ನು ಕಳೆದುಕೊಳ್ಳಬಾರದು. ಬಿಸಿಸಿಐ ವಿಶೇಷ ತರಬೇತಿ ಮತ್ತು ನೂತನ ತಂತ್ರಜ್ಞಾನ ಪರಿಚಯಿಸಬೇಕು’ ಎಂದು ಕೆಲವು ದಿನಗಳ ಹಿಂದೆ ಬಿಷನ್ ಸಿಂಗ್ ಬೇಡಿ ಹೇಳಿದ್ದು ಇದೇ ಕಾರಣಕ್ಕೆ. ವಿದೇಶಿ ಪಿಚ್‌ಗಳಲ್ಲಿ ಆಡಲು ಹೋಗುವಾಗ ವೇಗದ ಬೌಲರ್‌ಗಳು ಇಲ್ಲ ಎನ್ನುವ ಕಳವಳ ವನ್ನು ನಿವಾರಿಸುವತ್ತ ಎಂಆರ್‌ಎಫ್ ಪೇಸ್ ಅಕಾಡೆಮಿ ಕೆಲಸ ಮಾಡುತ್ತಿದೆ. ಅದೇ ರೀತಿ ಸ್ಪಿನ್ ಶಕ್ತಿ ಉಳಿಸಲು ಎನ್‌ಸಿಎ ಕೂಡ ಅಕಾಡೆಮಿ ನಡೆಸುತ್ತಿದೆ. ಕ್ರಿಕೆಟ್ ಬೆಳೆದಂತೆ ಹೊಸತನದ ಹುಡು ಕಾಟದಲ್ಲಿ ಸಾಂಪ್ರದಾಯಿಕ ಶೈಲಿ, ಸ್ಪಿನ್ ಮೋಡಿ ಕಳೆದು ಹೋಗಬಾರದು. ಕ್ರಿಕೆಟ್‌ ರಾಷ್ಟ್ರಗಳಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಥೆ ಬಿಸಿಸಿಐ. ಅದೇ ರೀತಿ ಸ್ಪಿನ್ ಖಜಾ ನೆಯನ್ನೂ ಉಳಿಸಿಕೊಂಡು ಕ್ರಿಕೆಟ್ ಸೌಂದರ್ಯ ಉಳಿಸುವತ್ತಲೂ ಗಮನ ಹರಿಸಬೇಕಿದೆ. *** ವಿಕೆಟ್ಕೀ ಪಿಂಗ್‌ಗೂ ಸವಾಲು ಸಮರ್ಥ ಸ್ಪಿನ್ ಬೌಲರ್ ಕೇವಲ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರವಲ್ಲದೇ ತನ್ನ ತಂಡದ ವಿಕೆಟ್‌ಕೀಪರ್‌ಗೂ ದೊಡ್ಡ ಸವಾಲಾಗಬಲ್ಲ. ಪ್ರತಿಯೊಂದು ಚೆಂಡು ತಿರುವು ಪಡೆದು ಹೋಗುವ ದಿಕ್ಕನ್ನು ಕರಾರುವಾಕ್ಕಾಗಿ ಗುರುತಿಸಬೇಕು. ಒಂದೊಮ್ಮೆ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಹೊರಹೋಗಿ ಆಡಲು ಪ್ರಯತ್ನಿಸಿ ವಿಫಲವಾದಾಗ ಚುರುಕಾಗಿ ಸ್ಟಂಪ್ ಮಾಡುವುದು ಸವಾಲಿನ ಕೆಲಸ. ಬಿ.ಎಸ್. ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಅವರಿಗೆ ವಿಕೆಟ್ ಕೀಪಿಂಗ್ ಮಾಡಿದ ಸೈಯದ್ ಕಿರ್ಮಾನಿ, ಅನಿಲ್ ಕುಂಬ್ಳೆ, ಅಶ್ವಿನ್ ಬೌಲಿಂಗ್‌ಗೆ ವಿಕೆಟ್ ಹಿಂದೆ ಇದ್ದ ಕಿರಣ್ ಮೋರೆ, ಮಹೇಂದ್ರಸಿಂಗ್ ದೋನಿ ಅವರ ಅನುಭವ ಒಂದೇ ತರಹದ್ದು. ಅದರಲ್ಲೂ ಸ್ಪಿನ್ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಚೆಂಡಿನ ವೇಗವನ್ನು ಹೆಚ್ಚಿಸುವ ವಿಶೇಷ ಕಲೆ ರೂಢಿಸಿಕೊಂಡಿದ್ದ ಕುಂಬ್ಳೆ ಕಾಲದಲ್ಲಿ ವಿಕೆಟ್‌ ಕೀಪಿಂಗ್ ಮಾಡುವುದು ಸವಾಲಿನ ಕೆಲಸವಾಗಿತ್ತು. *** ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸುವುದು ಬೌಲರ್‌ಗಳು. ಅಪರೂಪಕ್ಕೊಮ್ಮೆ ಬ್ಯಾಟ್ಸ್‌ಮನ್‌ಗಳು ಮ್ಯಾಚ್ ವಿನ್ನರ್ ಆಗಬಹುದು. ಆದರೆ, ಎರಡೂ ಇನಿಂಗ್ಸ್‌ಗಳಲ್ಲಿ ಗೆಲ್ಲಿಸುವುದು ಬೌಲರ್‌ಗಳೇ. ಅದರಲ್ಲೂ ಭಾರತದ ವಾತಾವರಣದಲ್ಲಿ ಸ್ಪಿನ್ನರ್‌ಗಳ ಪಾತ್ರ ದೊಡ್ಡದು - ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕ *** ಸ್ಪಿನ್ ಭಾರತದ ಸಾಂಪ್ರದಾಯಿಕ ಶಕ್ತಿ. ಆದರೆ, ಬಿಳಿಯರ (ವಿದೇಶ) ಪ್ರಭಾವದಿಂದಾಗಿ ವೇಗದ ಬೌಲಿಂಗ್‌ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ಎರಡೂ ವಿಭಾಗಗಳಲ್ಲಿ ಸಮತೋಲನ ಅಗತ್ಯ. ಅಲ್ಲದೆ ನಮ್ಮ ಹಿರಿಯ ಸ್ಪಿನ್ನರ್‌ಗಳ ಜ್ಞಾನ, ಅನುಭವವನ್ನು ಬಳಸಿಕೊಂಡು ಹೊಸ ಪ್ರತಿಭೆಗಳನ್ನು ಬೆಳೆಸಬೇಕು. ನಮ್ಮ ಮಹತ್ವವನ್ನು ನಾವು ಅರಿಯುವುದು ಮುಖ್ಯ. - ಸಂಜಯ್ ಪಾಟೀಲ, ಮುಂಬೈನ ಮಾಜಿ ಸ್ಪಿನ್ನರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.