ಬತ್ತಿ ಹೋಯಿತೇ ವಿ.ವಿಯ ಕ್ರೀಡಾ ಸೆಲೆ? ‘ಕ್ರೀಡಾ ಕೋಟಾದಲ್ಲಿ ಪ್ರತಿ ವರ್ಷ 91 ಪ್ರತಿಭಾವಂತ ಕ್ರೀಡಾಪಟುಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಅವಕಾಶ ಸಿಗುತ್ತಿದೆ. ಆದರೆ, ಕೋರ್ಸ್‌ಗೆ ಸೇರಿದ ಮೇಲೆ ಇವರೆಲ್ಲಾ ಕ್ರೀಡೆಯಿಂದ ದೂರವಾಗುತ್ತಿದ್ದಾರೆ. ಹಾಗಾಗಿ, ಕ್ರೀಡೆಯಲ್ಲಿ ಮುಂದುವರಿಯುವ ರೀತಿ ನಿಯಮವನ್ನು ರೂಪಿಸಬೇಕು. ಆಗ ಮಾತ್ರ ಪ್ರತಿಭಾವಂತ ಕ್ರೀಡಾಪಟುಗಳ ಸೇವೆ ಲಭ್ಯವಾಗುತ್ತದೆ. ಇಲ್ಲವಾದಲ್ಲಿ ಅವರೆಲ್ಲಾ ಓದಿನಲ್ಲಿ ಕಳೆದು ಹೋಗಿಬಿಡುತ್ತಾರೆ’ –‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತಾ ಈ ರೀತಿ ಆತಂಕ ವ್ಯಕ್ತಪಡಿಸಿದ್ದು ಒಲಿಂಪಿಯನ್‌ ಹಾಕಿ ಆಟಗಾರ ಎಂ.ಪಿ. ಗಣೇಶ್‌. ಮೈಸೂರು ವಿಶ್ವವಿದ್ಯಾನಿಲಯ ಹೋದ ವಾರ ಆಯೋಜಿಸಿದ್ದ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಹಾಕಿ ಟೂರ್ನಿ ಉದ್ಘಾಟಿಸಲು ಅವರು ಅರಮನೆಗಳ ನಗರಿಗೆ ಬಂದಿದ್ದರು. ನಿಜ, ಕ್ರೀಡಾ ಕೋಟಾದಲ್ಲಿ ಪ್ರವೇಶಾತಿ ಗಿಟ್ಟಿಸಿ ವಿಜ್ಞಾನ, ವಾಣಿಜ್ಯ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಚ್ಚಿನವರು ಕ್ರೀಡೆ ತೊರೆಯುತ್ತಿದ್ದಾರೆ. ಸೆಮಿಸ್ಟರ್‌ ಪದ್ಧತಿ ಬಂದ ಮೇಲಂತೂ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಮಯವೂ ಇಲ್ಲದಂತಾಗಿದೆ. ಕೆಲ ವಿ.ವಿಗಳಲ್ಲಿ ಕ್ರೀಡೆ ಎಂಬುದು ಕೇವಲ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಅಥವಾ ಕ್ರೀಡಾ ಹಾಸ್ಟೆಲ್‌ನಲ್ಲಿ ಇರುವವರಿಗೆ ಸೀಮಿತವಾಗುತ್ತಿರುವಂತಿದೆ. ಇನ್ನು ಕೆಲ ವಿ.ವಿಗಳಲ್ಲಿ ಹಾಕಿ, ಫುಟ್‌ಬಾಲ್‌ ತಂಡಗಳೇ ಇಲ್ಲ. ಇನ್ನೆಲ್ಲಿ ವಿ.ವಿಗಳಿಂದ ಕ್ರೀಡಾಪಟುಗಳು ಬಂದಾರು? ಇದೇ ಕಾರಣದಿಂದಾಗಿ ಹೆಚ್ಚಿನ ಕ್ರೀಡೆಗಳಲ್ಲಿ ಯುವ ಪ್ರತಿಭೆಗಳ ಕೊರತೆ ಎದ್ದು ಕಾಣುತ್ತಿದೆ. ಉದಾಹರಣೆಗೆ ಹಾಕಿಯನ್ನೇ ತೆಗೆದುಕೊಳ್ಳಿ. ಭಾರತ ಮಹಿಳಾ ಹಾಕಿ ತಂಡದಲ್ಲಿ ರಾಜ್ಯದ ಒಬ್ಬರೂ ಇಲ್ಲ. ಕೊಡಗಿನ ಹುಡುಗಿ ಪೊನ್ನಮ್ಮ ಅಪರೂಪಕ್ಕೆ ಎಂಬಂತೆ ಸ್ಥಾನ ಪಡೆಯುತ್ತಿರುತ್ತಾರೆ. ಅವರನ್ನು ಹೊರತುಪಡಿಸಿ ರಾಷ್ಟ್ರ ತಂಡದಲ್ಲಿ ಆಡಬಹುದು ಎಂಬ ಭರವಸೆ ಮೂಡಿಸಿರುವ ಮತ್ತೊಬ್ಬ ಆಟಗಾರ್ತಿ ರಾಜ್ಯದಲ್ಲಿ ಕಂಡುಬರುತ್ತಿಲ್ಲ. ಪದಕ ಇಟ್ಟುಕೊಂಡು ಏನು ಮಾಡುವುದು? ‘ಅಂತರ ವಿ.ವಿ ಟೂರ್ನಿಗಳಲ್ಲಿ ನಾನು ಐದು ಬಾರಿ ಪಾಲ್ಗೊಂಡಿದ್ದೇನೆ. ನಾನಿದ್ದ ತಂಡ ನಾಲ್ಕು ಬಾರಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಜಯಿಸಿದೆ. ಆದರೆ, ಇದರಿಂದ ಏನು ಪ್ರಯೋಜನ? ಒಂದು ಸಣ್ಣ ಉದ್ಯೋಗ ಗಿಟ್ಟಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಆಟ ಬಿಟ್ಟು ಓದಿದ್ದರೆ ಜ್ಞಾನವನ್ನಾದರೂ ಸಂಪಾದಿಸ ಬಹುದಾಗಿತ್ತು. ದುರದೃಷ್ಟವೆಂದರೆ ಕ್ರೀಡೆಗೆ ಒತ್ತುಕೊಡಲು ಕಲಾ ಪದವಿ ಆರಿಸಿಕೊಂಡಿದ್ದು’ ಎಂದು ವಿಶ್ವವಿದ್ಯಾಲಯದ ಕ್ರೀಡಾಪಟು ಸ್ವಾತಿ ಅವರು ಬಿಚ್ಚಿಟ್ಟ ಸಂಕಟದಲ್ಲೂ ಅರ್ಥವಿದೆ. ಪದವಿ ಮುಗಿಸಿ ಐದು ವರ್ಷವಾದರೂ ಅವರಿಗೆ ಯಾವುದೇ ಉದ್ಯೋಗ ಸಿಕ್ಕಿಲ್ಲ. ಅವರೀಗ ಕಡಿಮೆ ಅಂಕಗಳ ಪದವಿ ಅಂಕಪಟ್ಟಿ ಜೊತೆಗೆ ಮನೆಯಲ್ಲಿದ್ದಾರೆ. ಸಾಧನೆಯ ಪ್ರಮಾಣಪತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ! ಇದೇ ಕಾರಣಕ್ಕೇನೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈಚೆಗೆ ಕ್ರೀಡಾ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ. ಕ್ರೀಡೆಯಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟವೆಂದು ಓದಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿಸಿಕೊಂಡು ವ್ಯಾಸಂಗ ನಡೆಸುತ್ತಿದ್ದಾರೆ. ತಮ್ಮ ಮಕ್ಕಳು ಕ್ರೀಡಾಪಟುಗಳಾಗಬೇಕು ಎಂದು ಪೋಷಕರೂ ಬಯಸುತ್ತಿಲ್ಲ. ‘ಕೇವಲ ಕ್ರೀಡೆಯಿಂದಲೇ ಬದುಕು ಕಟ್ಟಿಕೊಳ್ಳುವುದು ಕಷ್ಟ. ಹಾಗಾಗಿ ಕ್ರೀಡಾಪಟುಗಳ ಬದುಕಿನಲ್ಲಿ ಶಿಕ್ಷಣ ತುಂಬಾ ಮುಖ್ಯ. ಆದರೆ, ಪ್ರವೇಶಾತಿ ಗಿಟ್ಟಿಸಿಕೊಳ್ಳಲು ಕಾರಣವಾದ ಕ್ರೀಡೆ ಯಿಂದ ದೂರ ಸರಿಯಬಾರದು’ ಎಂದು ಸಲಹೆ ನೀಡುತ್ತಾರೆ ಭಾರತ ತಂಡದ ಮಾಜಿ ನಾಯಕ ಗಣೇಶ್‌. ಮೈಸೂರು ವಿ.ವಿ ಆಶ್ರಯದಲ್ಲಿ ನಡೆದ ಅಂತರ ವಿ.ವಿ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಕೈಬೆರಳೆಣಿಕೆಯಷ್ಟು ತಂಡಗಳು. ಹೆಸರು ನೋಂದಾಯಿಸಿದ್ದ ಕೆಲ ತಂಡಗಳು ಕೈಕೊಟ್ಟವು. ಹಾಗಾಗಿ ಪಾಲ್ಗೊಂಡಿದ್ದ ತಂಡಗಳಿಗೆ ಆಡಲು ಅವಕಾಶ ಸಿಕ್ಕಿದ್ದು ಕೆಲವೇ ಪಂದ್ಯಗಳಲ್ಲಿ. ಇನ್ನುಳಿದ ಪಂದ್ಯಗಳಲ್ಲಿ ವಾಕ್ಓವರ್‌ ಲಭಿಸಿತು. ಅದೇನೇ ಇರಲಿ, ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಮೈಸೂರು ವಿ.ವಿಯು ಸುಮಾರು 15 ವರ್ಷಗಳ ಬಳಿಕ ದೊಡ್ಡ ಮಟ್ಟದ ಟೂರ್ನಿಗೆ ವೇದಿಕೆ ಒದಗಿಸಿತ್ತು. ‘ಹಲವು ವರ್ಷಗಳ ಬಳಿಕ ದಕ್ಷಿಣ ಭಾರತ ಅಂತರ ವಿ.ವಿ ಟೂರ್ನಿಯೊಂದು ಮೈಸೂರಿನಲ್ಲಿ ಜರುಗಿದ್ದು ವಿಶೇಷ. ಇದಲ್ಲದೆ, ಜನವರಿಯಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗೂ ಮೈಸೂರು ವಿ.ವಿ ಆತಿಥ್ಯ ವಹಿಸುತ್ತಿದೆ. ನಮ್ಮೆಲ್ಲರ ಪಾಲಿಗಿದು ಕ್ರೀಡಾಪರ್ವ’ ಎಂದಿದ್ದು ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಪಿ. ಕೃಷ್ಣಯ್ಯ. ಈ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು ಮೈಸೂರು ಹಾಗೂ ಮಂಗಳೂರು ವಿ.ವಿ ತಂಡಗಳು. ಮಂಗಳೂರು ತಂಡದವರು ಹಿಂದಿನ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದವರು. 2013–14ರಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೈಸೂರು ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಮೈಸೂರು ವಿ.ವಿ ತಂಡದಲ್ಲಿ ಆಡಿದವರೆಲ್ಲಾ ಚಾಮುಂಡಿ ವಿಹಾರದ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿನಿಯರು. ಇವರಲ್ಲಿ 9 ಆಟಗಾರ್ತಿಯರು ಟೆರೇಷಿಯನ್‌ ಕಾಲೇಜಿನವರು ಎಂಬುದು ವಿಶೇಷ. ಸೇಂಟ್‌ ಫಿಲೋಮಿನಾ ಕಾಲೇಜು ಹಾಗೂ ಹಾಸನದ ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಇದ್ದರು. ಈ ತಂಡದ ಎಚ್‌.ಬಿ. ಸ್ಫೂರ್ತಿ, ಎಚ್‌.ಪಿ. ಸಂಧ್ಯಾ, ವಿ.ಎಂ. ಕೋಮಲಾ, ಎನ್‌. ಚೈತ್ರಾ, ಪಿ.ಪಿ. ರಶ್ಮಿ ಭರವಸೆ ಮೂಡಿಸಿದರು. ಮಂಗಳೂರು ವಿ.ವಿ ತಂಡದ ಕಾವೇರಮ್ಮ, ಸಿ.ಎಂ. ಭಾಗ್ಯಶ್ರೀ, ಕೆ.ಜೆ. ಚೈತ್ರಾ, ಎನ್‌.ಆರ್. ಸ್ವಪ್ನಾ ಗಮನ ಸೆಳೆದರು. ಮೈಸೂರು ಹಾಗೂ ಮಂಗಳೂರು ವಿ.ವಿ ತಂಡಗಳಿಗೆ ಹೋಲಿಸಿದರೆ ಕೇರಳ, ಚೆನ್ನೈ ಹಾಗೂ ತೆಲಂಗಾಣದ ವಿ.ವಿಗಳ ಆಟದ ಗುಣಮಟ್ಟ ಏನೇನೂ ಇಲ್ಲ. ಈ ತಂಡಗಳ ಎದುರು ಕಲ್ಲಿಕೋಟೆ, ಅಣ್ಣಾಮಲೈ ವಿ.ವಿಗಳು ಗೋಲು ಗಳಿಸಲು ಪರದಾಡಿದ ರೀತಿಯೇ ಅದಕ್ಕೆ ಸಾಕ್ಷಿ. *** ಸೌಕರ್ಯವಿದೆ; ದಾಹ ಇಲ್ಲ ‘ಶೂ ಖರೀದಿಸಲೂ ಕಷ್ಟವಿದ್ದ ಕಾಲವದು. ಯಾವುದೇ ಸೌಕರ್ಯವಿರಲಿಲ್ಲ. ಆದರೂ ಅದ್ಭುತ ಪ್ರದರ್ಶನದ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದೆವು. ಈಗ ಎಲ್ಲಾ ಸೌಲಭ್ಯಗಳಿವೆ. ಆದರೆ, ಈಗಿನ ಆಟಗಾರರಲ್ಲಿ ಬದ್ಧತೆ, ತ್ಯಾಗ ಮನೋಭಾವವೇ ಇಲ್ಲ. ಗೆಲುವಿನ ದಾಹವೂ ಇಲ್ಲ. ಬೇಗನೇ ವಿಶ್ವಾಸ ಕಳೆದುಕೊಳ್ಳುತ್ತಾರೆ’ –ಅಂತರರಾಷ್ಟ್ರೀಯ ಹಾಕಿ ಆಟಗಾರ್ತಿ ಸುಜಾತಾ ಕಿಶೋರ್‌ ಅವರ ಮನದಾಳದ ಮಾತಿದು. ಸುಜಾತಾ ಸಾರಥ್ಯದ ಮೈಸೂರು ತಂಡ 1991–92ರಲ್ಲಿ ನಡೆದ ಅಖಿಲ ಭಾರತ ಅಂತರ ವಿ.ವಿ ಮಹಿಳಾ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಚಾಂಪಿಯನ್ ತಂಡದ ಆಟಗಾರ್ತಿಯರಾದ ಬಿ.ಜಿ. ಹೇಮಲತಾ, ಬಿ.ಎಂ. ಗೀತಾ, ಮೈನಾ ಕಾವೇರಪ್ಪ, ಕೆ.ಪಿ. ಪವಿತ್ರಾ, ಕೆ.ಪಿ. ಮಮತಾ, ಕೆ.ಕೆ. ಪ್ರತಿಮಾ, ಕವಿತಾ ಬೋಜಪ್ಪ, ಕೆ.ಪಿ. ಕವಿತಾ, ವಿನೂ ಬೆಳ್ಳಿಯಪ್ಪ, ವಿ.ಎ. ಚತುರಾ, ಕೆ.ಡಿ. ಪದ್ಮಿನಿ, ಎನ್‌.ಜೆ. ಭಾರತಿ, ವರಲಕ್ಷ್ಮಿ, ಶುಭಾ ರಾಮಮೋಹನ್‌ ಅವರನ್ನು ದಕ್ಷಿಣ ಭಾರತ ಅಂತರ ವಿ.ವಿ ಹಾಕಿ ಟೂರ್ನಿ ಉದ್ಘಾಟನೆ ವೇಳೆ ಸನ್ಮಾನಿಸಲಾಯಿತು. ಇವರಲ್ಲಿ ಹೆಚ್ಚಿನವರು ರಾಷ್ಟ್ರ ತಂಡ ಪ್ರತಿನಿಧಿಸಿದ್ದಾರೆ. ಮಣ್ಣಿನಲ್ಲಿ ಆಡಬೇಕೇ? ‘ಮೈಸೂರು ವಿ.ವಿ ಸ್ಪೋರ್ಟ್ಸ್‌ ಪೆವಿಲಿಯನ್ ಕ್ರೀಡಾಂಗಣದಲ್ಲಿ 1963ರಲ್ಲಿ ಮೊದಲ ಬಾರಿ ಆಟವಾಡಿದ್ದೆ. ಆದರೆ, ಈ ಕ್ರೀಡಾಂಗಣದಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ. ಆಗ ಹೇಗಿತ್ತೊ ಈಗಲೂ ಹಾಗೆಯೇ ಇದೆ. ಈ ರೀತಿಯಾದರೆ ಕ್ರೀಡಾಪಟುಗಳ ಪಾಡೇನು?’ ಎಂದು ಪ್ರಶ್ನಿಸಿದ್ದು ಒಲಿಂಪಿಯನ್‌ ಎಂ.ಪಿ. ಗಣೇಶ್‌. ‘ತಂತ್ರಜ್ಞಾನ ಎಷ್ಟೊಂದು ಮುಂದುವರಿದಿದೆ. ಆದರೆ, ವಿ.ವಿ. ಹಾಕಿ ಆಟಗಾರರು ಮಾತ್ರ ಈಗಲೂ ಮಣ್ಣಿನಲ್ಲೇ ಆಡಬೇಕಾದ ಪರಿಸ್ಥಿತಿ ಇದೆ. ಇಷ್ಟು ವರ್ಷವಾದರೂ ಒಂದು ಟರ್ಫ್‌ ಕ್ರೀಡಾಂಗಣ ನಿರ್ಮಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.