ಕಲಬುರ್ಗಿಯಲ್ಲಿ ಐಟಿಎಫ್ ಕಲರವ ಕಲಬುರ್ಗಿಯಲ್ಲಿ ಈಗ ಭೀಕರ ಬರ. ಈ ಸೂರ್ಯನಗರಿಯಲ್ಲಿ ಬಿಸಿಲಿದೇ ಆಟ. ಇಂತಹ ಬರ, ಬಿಸಿಲಿನ ನಡುವೆಯೂ ಹೈದರಾಬಾದ್‌ ಕರ್ನಾಟಕದ ಜನರ ಕ್ರೀಡಾ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇದೀಗ ನಾಲ್ಕನೇ ಬಾರಿಗೆ ಐಟಿಎಫ್‌ ಟೂರ್ನಿಯ ಆತಿಥ್ಯವನ್ನು ಕಲಬುರ್ಗಿ ವಹಿಸಿಕೊಂಡಿದೆ. ನಗರದ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಗುಲ್ಬರ್ಗ ಲಾನ್ ಟೆನಿಸ್‌ ಸಂಸ್ಥೆಗಳು ನವೆಂಬರ್‌ 16 ರಿಂದ 21ರವರೆಗೆ 10 ಸಾವಿರ ಡಾಲರ್‌ ಬಹುಮಾನ ಮೊತ್ತದ ‘ಐಟಿಎಫ್‌ ಟೂರ್ನಿ’ಯನ್ನು ಆಯೋಜಿಸಿದೆ. ಟೆನಿಸ್‌ ಬೆಳವಣಿಗೆ: ದೇಸಿ ಆಟಗಳೇ ಮನೆಮಾತಾದ ಈ ನೆಲದಲ್ಲಿ ಟೆನಿಸ್‌ ಹೆಚ್ಚು ಪರಿಚಿತವಾಗಿರಲಿಲ್ಲ. 1956ರಲ್ಲಿ ‘ಪೊಲೀಸ್‌ ಟೆನಿಸ್‌ ಕ್ಲಬ್‌’ ಅಸ್ತಿತ್ವಕ್ಕೆ ಬಂದಿತು. ಕಲ್ಬುರ್ಗಿಯಲ್ಲಿ ರಾಜ್ಯ ಸರ್ಕಾರ 1984ರಲ್ಲಿ ಚಂದ್ರಶೇಖರ ಪಾಟೀಲ್‌ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿ ಹೈದರಾಬಾದ್‌ ಕರ್ನಾಟಕ ಭಾಗದ ಕ್ರೀಡಾಪ್ರೇಮಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿತು. 2002 ರ ಆಗಸ್ಟ್‌ 24ರಂದು ‘ಗುಲ್ಬರ್ಗ ಲಾನ್‌ ಟೆನಿಸ್‌ ಕ್ಲಬ್‌ನ ಸಿಂಥೆಟಿಕ್ ಹಾರ್ಡ್‌ ಕೋರ್ಟ್’ ಸಿದ್ಧಗೊಂಡಿತು. ಉದ್ಘಾಟನೆಗೊಂಡ ಮೊದಲ ವರ್ಷವೇ ಪುರುಷರ ಐಟಿಎಫ್‌ ಟೂರ್ನಿ ನಡೆಯಿತು. ಸ್ಲೊವಾಕಿಯ ಗಣರಾಜ್ಯದ ವಿಕ್ಟರ್ ಬ್ರೂಥಾನ್ಸ್‌ ‘ಇಂಡಿಯಾ ಎಫ್‌ 4 ಫ್ಯೂಚರ್ಸ್‌’ ಕಪ್‌ ಗೆದ್ದರು. ಮತ್ತೆ 2007ರಲ್ಲಿ ನಡೆದ ‘ಇಂಡಿಯಾ ಎಫ್‌10 ಫ್ಯೂಚರ್ಸ್‌’ ಪ್ರಶಸ್ತಿ ಕ್ರೊವೇಷ್ಯಾದ ಐವಾನ್‌ ಸೆರೋವಿಕ್‌ ಗೆದ್ದರು. ಭಾರತದ ‘ಪ್ರೇರಣೆ’ ಎರಡೂ ಪುರುಷರ ಟೂರ್ನಿಯಲ್ಲಿ ಭಾರತೀಯರು ಗೆದ್ದಿರಲಿಲ್ಲ. ಆದರೆ, 2012ರಲ್ಲಿ ಐಟಿಎಫ್‌ ಗುಲ್ಬರ್ಗ ಓಪನ್‌ ಮಹಿಳಾ ಫ್ಯೂಚರ್ಸ್‌ ಟೂರ್ನಿ ನಡೆಯಿತು. ಆಗ ಪ್ರೇರಣಾ ಭಾಂಬ್ರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಬಾರಿಯ ಟೂರ್ನಿಯಲ್ಲಿ ಎರಡನೆ ಶ್ರೇಯಾಂಕಿತೆಯಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಅವರೊಂದಿಗೆ ಪ್ರತಿಭಾನ್ವಿತ ಆಟಗಾರ್ತಿ ಸ್ನೇಹದೇವಿ ರೆಡ್ಡಿ ಅಗ್ರಶ್ರೇಯಾಂಕಿತೆಯಾಗಿ ಕಣದಲ್ಲಿದ್ದಾರೆ. ಇವರೊಂದಿಗೆ ನತಾಶ ಪಲ್ಹಾ, ಟಿ. ವಿ. ಧೃತಿ ಭಾರತದ ಪರವಾಗಿ ಹೋರಾಟ ನಡೆಸಲಿದ್ದಾರೆ. ಇವರಿಗೆ ಶಕ್ತಿಯುತವಾದ ಪ್ರತಿರೋಧ ಒಡ್ಡಲು ಚೀನಾ ಹಾಗೂ ಥಾಯ್ಲೆಂಡ್‌ ಆಟಗಾರರು ಪ್ರಮುಖ ಘಟ್ಟಕ್ಕೆ ತಮ್ಮ ಭಾಗವಹಿಸುವಿಕೆಯನ್ನು ಖಚಿತ ಪಡಿಸಿದ್ದಾರೆ. ಅರ್ಹತಾ ಹಂತದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿದೆ. ಟೆನಿಸ್‌ ಕಡೆ ಹೆಚ್ಚಿದ ಒಲವು: 2002ರ ನಂತರ ಕಲಬುರ್ಗಿ ಭಾಗದಲ್ಲಿ ಟೆನಿಸ್‌ ಕಡೆ ಕ್ರೀಡಾಪಟುಗಳು ತಮ್ಮ ಒಲವು ತೋರಿಸಲಾರಂಭಿಸಿದ್ದಾರೆ. ಕಳೆದ ವರ್ಷ ನಡೆದ ರಾಷ್ಟ್ರಮಟ್ಟದ 14 ವರ್ಷ ವಯೋಮಿತಿಯ ಟೂರ್ನಿಯಲ್ಲಿ ಕರ್ನಾಟಕ ರಾಜ್ಯವನ್ನು ಕಲಬುರ್ಗಿಯ ಆಕಾಶ್‌, ವಿಠಲ್, ಅಮುಲ್‌ ಹಾಗೂ ಮೈಕೆಲ್‌ ಪ್ರತಿನಿಧಿಸಿದ್ದಾರೆ. ಈ ಮೂಲಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿರುವ ಕಲಬುರ್ಗಿ ಟೆನಿಸ್‌ ಕ್ರೀಡಾ ರಂಗದಲ್ಲಿ ತನ್ನ ಇರುವಿಕೆಯನ್ನು ತೋರಿಸಲು ಆರಂಭಿಸಿದೆ. ‘ಕಲಬುರ್ಗಿಯ ಪ್ರತಿಭೆ ದೀಪಕ್‌ 2009ರಲ್ಲಿ 17 ವರ್ಷ ವಯೋಮಿತಿಯ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿರುವುದು ಸದ್ಯದ ಅತೀ ದೊಡ್ಡ ಸಾಧನೆ. ಮೇಲಿಂದ ಮೇಲೆ ನಡೆಯುತ್ತಿರುವ ಟೂರ್ನಿಗಳು, ಹೆಚ್ಚಿನ ಮೂಲ ಸೌಕರ್ಯಗಳ ಕಾರಣ ಪೋಷಕರು ತಮ್ಮ ಮಕ್ಕಳನ್ನು ಟೆನಿಸ್‌ ಅಂಗಣಕ್ಕೆ ಕಳುಹಿಸಲು ತೊಡಗಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ’ ಎಂದು ಟೆನಿಸ್‌ ತರಬೇತದಾರರಾದ ಕೆ. ವಿಶ್ವನಾಥ್‌ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.