ಮೂರನೇ ಮೈಲಿಗಲ್ಲಿನತ್ತ ವಿಜೇಂದರ್ ‘ಅಮೆಚೂರ್ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದೇನೆ. ದೇಶದ ಗೌರವವನ್ನು ಎತ್ತಿ ಹಿಡಿದಿದ್ದೇನೆ. ಆದರೆ ಇದೀಗ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಏನಾದರೂ ಸಾಧಿಸುವ ಸಮಯ. ಅಲ್ಲಿ ಉತ್ತಮ ಪ್ರದರ್ಶನ ತೋರಿದರೆ ಆ ಬಾಕ್ಸರ್ ಭಾರತದವರು ಎಂದು ಜನ ಹೇಳುತ್ತಾರೆ’. ವೃತ್ತಿಪರ ಬಾಕ್ಸಿಂಗ್‌ ಕಣಕ್ಕಿಳಿಯುವ ನಿರ್ಧಾರ ಕೈಗೊಂಡ ಬಳಿಕ ವಿಜೇಂದರ್ ಸಿಂಗ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತಿದು. ವೃತ್ತಿಪರ ಬಾಕ್ಸಿಂಗ್‌ನ ಮೊದಲೆರಡು ಪಂದ್ಯಗಳಲ್ಲಿ ಸಿಕ್ಕ ಜಯ ವಿಜೇಂದರ್ ಅವರ ಮಾತಿಗೆ ಪೂರಕವಾಗಿದೆ. ಅಕ್ಟೋಬರ್‌ 10ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಚೊಚ್ಚಲ ವೃತ್ತಿಪರ ಪಂದ್ಯದಲ್ಲಿ ಸನ್ನಿ ವೈಟಿಂಗ್ ವಿರುದ್ಧ ಗೆದ್ದಿದ್ದರು. ನವೆಂಬರ್‌ 7ರಂದು ಡಬ್ಲಿನ್‌ನಲ್ಲಿ ನಡೆದ ಎರಡನೇ ಸ್ಪರ್ಧೆಯಲ್ಲಿ ಡೀನ್‌ ಗಿಲ್ಲೆನ್ ಅವರನ್ನು ಮಣಿಸಿದ್ದಾರೆ. ಆರಂಭದ ಎರಡು ಪಂದ್ಯಗಳಲ್ಲಿ ವಿಜೇಂದರ್‌ ನೀಡಿದ ಪ್ರದರ್ಶನ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಭವ್ಯ ಭವಿಷ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇವರು ವೃತ್ತಿಪರ ಬಾಕ್ಸಿಂಗ್‌ ಗ್ಲೌಸ್‌ ತೊಡುವ ನಿರ್ಧಾರ ಪ್ರಕಟಿಸಿದಾಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹಲವು ವರ್ಷಗಳ ಕಾಲ ಪ್ರೀತಿ–ಅಭಿಮಾನ ತೋರಿ ಬೆಂಬಲಿಸಿದ್ದ ಬಾಕ್ಸಿಂಗ್ ಪ್ರಿಯರು, ಅಭಿಮಾನಿಗಳು ಸಿಟ್ಟಾಗಿದ್ದರು. ವಿಜೇಂದರ್ ‘ದೇಶ ಬಿಟ್ಟು ಹಣದತ್ತ ಮುಖ ಮಾಡಿದರು’ ಎಂದೆಲ್ಲ ಟೀಕಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೊರೆಯಬಹುದಾಗಿದ್ದ ಸಂಭಾವ್ಯ ಪದಕ ಕೈ ತಪ್ಪಿತಲ್ಲ ಎಂಬ ನಿರಾಸೆ ಅದಕ್ಕೆ ಕಾರಣ ಇರಬಹುದು. ಆದರೆ, ಯಾವುದೇ ಒತ್ತಡ, ಟೀಕೆಗಳಿಗೆ ಜಗ್ಗದೇ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಅವರ ಗೆಲುವುಗಳ ಖುಷಿಯಲ್ಲಿ ಟೀಕೆಗಳ ಕಾರ್ಮೋಡ, ಬೆಂಬಲಿಗರ ಬೇಸರ ನಿಧಾನವಾಗಿ ಕರಗುತ್ತಿದೆ. ಹರಿಯಾಣದ ಭಿವಾನಿ ಜಿಲ್ಲೆಯ ಕುಲುವಾಸ್‌ನವರಾದ ವಿಜೇಂದರ್ ನೇರವಾಗಿ ವೃತ್ತಿಪರ ಬಾಕ್ಸಿಂಗ್‌ ಕ್ಷೇತ್ರಕ್ಕೆ ಧುಮುಕಿದವರಲ್ಲ. ಭಾರತದ ಪರವಾಗಿ ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡವರು. ದೇಶಕ್ಕೆ ಸಾಕಷ್ಟು ಪದಕ ತಂದು ಕೊಟ್ಟವರು. ಪುಟ್ಟದಾದರೂ ದಿಟ್ಟ ಹೆಜ್ಜೆ... ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಭವಿಷ್ಯವನ್ನು ಕೇವಲ ಎರಡು ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧರಿಸುವುದು ಸರಿಯಲ್ಲ. ಆದರೂ, ಉತ್ತಮ ಆರಂಭದ ಮೂಲಕ ದೇಶದ ಯುವ ಬಾಕ್ಸರ್‌ಗಳಿಗೆ ಹೊಸ ಆಶಾಕಿರಣವಾಗಿ ಗೋಚರಿಸಿದ್ದಾರೆ. ಸದ್ಯ ಲೀ ಬಿಯರ್ಡ್ ಅವರ ಗರಡಿಯಲ್ಲಿ ಬೆವರು ಹರಿಸುತ್ತಿರುವ ವಿಜೇಂದರ್, ಜಾಗತಿಕ ಮಟ್ಟದಲ್ಲಿ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಭಾರತದ ಛಾಪು ಮೂಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಗೆಲುವು ಸುಲಭವಲ್ಲ... ವೃತ್ತಿಪರ ಬಾಕ್ಸಿಂಗ್ ಎಂಬುದು ‘ಒಂದರ್ಥದಲ್ಲಿ ಅಕ್ಷರಶಃ ಜೂಜು’. ಇಲ್ಲಿ ಎಲ್ಲವೂ ದುಡ್ಡಿಗಾಗಿಯೇ ನಡೆಯುತ್ತದೆ. ಆದ್ದರಿಂದ ಜಯ ಸುಲಭವಲ್ಲ. ಅಮೆಚೂರ್‌ಗೆ ಹೋಲಿಸಿದರೆ ಬಳಕೆಯಾಗುವ ಗ್ಲೌಸ್ ಗಳು, ರಿಂಗ್, ಪಂಚ್‌ ಶೈಲಿ ಪಂದ್ಯದ ಸುತ್ತುಗಳು.. ಹೀಗೆ ಎಲ್ಲವೂ ಭಿನ್ನ. ಅಮೆಚೂರ್ ಬಾಕ್ಸಿಂಗ್‌ನಲ್ಲಿ ಗೆಲುವು ನಿರ್ಧರಿಸಲು ಮೂರು ನಿಮಿಷಗಳ ಮೂರು ಸುತ್ತುಗಳಿರುತ್ತವಷ್ಟೇ. ಆದರೆ ಇಲ್ಲಿ ಮೂರು ನಿಮಿಷಗಳಂತೆ 12 ಸುತ್ತುಗಳ ತನಕ ಪಂದ್ಯ ನಡೆಯಬಹುದು. ಕನಿಷ್ಠ ನಾಲ್ಕು ಸುತ್ತುಗಳಿರುತ್ತವೆ. ಇದೆಲ್ಲಕ್ಕೂ ಮಿಗಿಲೆಂಬಂತೆ ವೃತ್ತಿಪರ ಬಾಕ್ಸಿಂಗ್‌ನ ತರಬೇತಿ ಕಠೋರ. ‘ಪಂದ್ಯಕ್ಕಿಂತಲೂ ತರಬೇತಿ ಹೆಚ್ಚು ಕಷ್ಟಕರ’ ಎಂಬುದು ವಿಜೇಂದರ್ ಅನುಭವದ ಮಾತು. ಹಳೆಯ ದಾರಿಯಲ್ಲಿ ಹೊಸ ಮಿಂಚು.. ವೃತ್ತಿಪರ ಬಾಕ್ಸಿಂಗ್ ಹಾದಿ ತುಳಿದ ಭಾರತದ ಬಾಕ್ಸರ್‌ಗಳ ಪೈಕಿ ವಿಜೇಂದರ್‌ ಮೊದಲಿಗರಲ್ಲ. 1990ರ ದಶಕ ಹಾಗೂ ಅನಂತರದಲ್ಲಿ ವೆಂಕಟೇಶನ್ ದೇವರಾಜನ್, ಧರ್ಮೇಂದ್ರ ಸಿಂಗ್ ಯಾದವ್, ರಾಜಕುಮಾರ್ ಸಂಗ್ವಾನ್ ಹೀಗೆ ಹಲವರು ವೃತ್ತಿಪರ ಬಾಕ್ಸಿಂಗ್ ಗ್ಲೌಸ್ ತೊಟ್ಟು ಇಂಗ್ಲೆಂಡ್‌ಗೆ ಹೋಗಿದ್ದರು. ಆ ಪೈಕಿ ಧರ್ಮೇಂದ್ರ ಅವರು ಮಾತ್ರ ಸ್ವಲ್ಪ ಯಶಸ್ಸು ಕಂಡರು. ಪಂಜಾಬ್‌ನ ಗುರುಚರಣ್ ಸಿಂಗ್ ಅವರೂ ವೃತ್ತಿಪರ ಬಾಕ್ಸಿಂಗ್ ಕ್ಷೇತ್ರಕ್ಕೆ ಧುಮುಕಿದವರೇ. ಇವರು ಭಾರತದ ಸೇನೆಯಲ್ಲಿದ್ದವರು. ವಿಜೇಂದರ್ ಅವರಂತೆ ಭಾರತ ಬಾಕ್ಸಿಂಗ್ ಫೆಡರೇಷನ್ ಅಥವಾ ಸೇನೆ–ಯಾವೊಂದಕ್ಕೂ ಹೇಳದೇ ವೃತ್ತಿಪರ ಬಾಕ್ಸಿಂಗ್‌ ಕ್ಷೇತ್ರಕ್ಕೆ ಸೇರಿದ್ದರು ಎಂಬುದು ವಿಶೇಷ. ನಂತರದಲ್ಲಿ ಶಿಸ್ತು ಕ್ರಮ ಎದುರಿಸಿದ್ದು ಬೇರೆ ಮಾತು. ಇನ್ನು ಹರಿಯಾಣದ ಪ್ರದೀಪ್ ಸಿಂಗ್ ಸಿಹಾಗ್ 2004ರಲ್ಲಿ ವೃತ್ತಿಪರ ಬಾಕ್ಸಿಂಗ್ ಬೆನ್ನು ಹತ್ತಿ ಆಸ್ಟ್ರೇಲಿಯಾಕ್ಕೆ ಹೋದವರು. ಅಮೋಘ ಪ್ರದರ್ಶನದ ಮೂಲಕ ‘ಇಂಡಿಯನ್‌ ವಾರಿಯರ್‌’ ಎಂದೇ ಗುರುತಿಸಿಕೊಂಡಿದ್ದಾರೆ. ವಿಜೇಂದರ್ ಕೂಡ ಇದೀಗ ಅದೇ ಹಾದಿ ತುಳಿದಿದ್ದಾರೆ. ಪ್ರದೀಪ್‌ ಅವರು ಈ ಕ್ಷೇತ್ರ ಪ್ರವೇಶಿಸಿದಾಗ ಅವರ ವಯಸ್ಸು ಕೇವಲ 18. ಆದರೆ, ವಿಜೇಂದರ್ ಅವರಿಗೀಗ 30 ವರ್ಷ. ಮೊಹಮ್ಮದ್ ಅಲಿ, ಫ್ಲಾಯ್ಡ್‌ ಮೇವೆದರ್, ಮಾನಿ ಪಕಿಯಾವೊ ಅವರಂಥ ದಿಗ್ಗಜರು ಸೆಣಸಿದ ಕಣದಲ್ಲಿ ಜಯದ ‘ಕನಸು’ ಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಾಗಬೇಕಾದ ದಾರಿ, ಎದುರಿಸಬೇಕಾದ ಸವಾಲು ಬೆಟ್ಟದಷ್ಟಿದೆ. ಆದರೆ, ಒಂದು ಹಂತದ ಅನುಭವ ಅವರ ಬೆನ್ನಿಗಿದೆ. ಡಿಸೆಂಬರ್‌ 19ರಂದು ಮ್ಯಾಂಚೆಸ್ಟರ್‌ನಲ್ಲಿ ನಿಗದಿಯಾದ ಮೂರನೇ ಪಂದ್ಯದಲ್ಲೂ ಜಯಿಸಿದರೆ ಅವರ ಮೇಲಿನ ವಿಶ್ವಾಸ ನೂರ್ಮಡಿಗೊಳ್ಳಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.