ಬೆಂಗಳೂರು ಮತ್ತು ಡಿವಿಲಿಯರ್ಸ್ ನೂರು ‘ಬೆಂಗಳೂರು ನನಗೆ ಎರಡನೇ ತವರು’ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಅಬ್ರಹಾಂ ಡಿವಿಲಿಯರ್ಸ್ ಅಭಿಮಾನದ ನುಡಿಯಿದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಬ್ಬರದ ಆಟಗಾರ ಡಿವಿಲಿಯರ್ಸ್‌ ತಮ್ಮ ಎರಡನೇ ಮನೆಯಲ್ಲಿಯೇ 100ನೇ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಇದನ್ನು ಕಾಕತಾಳೀಯ ಎಂದು ಎಲ್ಲರೂ ಅಂದುಕೊಂಡರೆ, ಎಬಿಡಿ ಇದನ್ನು ಸುದೈವ ಎನ್ನುತ್ತಾರೆ. ತಮ್ಮ ಟೆಸ್ಟ್ ಕ್ರಿಕೆಟ್‌ ಜೀವನದ ಮಹತ್ವದ ಹೆಜ್ಜೆಗುರುತನ್ನು ಬೆಂಗಳೂರಿನಲ್ಲಿ ಮೂಡಿಸಿದ್ದಾರೆ. ನವೆಂಬರ್ 14ರಿಂದ ನಡೆಯುತ್ತಿರುವ ಟೆಸ್ಟ್‌ ಅವರಿಗೆ ನೂರನೇಯದ್ದು. ಒಬ್ಬ ಕ್ರಿಕೆಟ್ ಆಟಗಾರನ ಜೀವನದಲ್ಲಿ ‘100’ ಎಂಬುದು ಅತ್ಯಂತ ಅಪ್ಯಾಯಮಾನ ಮತ್ತು ಮಹತ್ವದ ಸಂಖ್ಯೆ. ಅದು ಬ್ಯಾಟಿಂಗ್‌ನಲ್ಲಿ ಗಳಿಸುವ ಶತಕವಿರಬಹುದು, ಬೌಲರ್ ಗಳಿಸುವ ವಿಕೆಟ್‌ ಇರಬಹುದು, ಫೀಲ್ಡರ್ ಪಡೆಯುವ ಕ್ಯಾಚ್ ಇರಬಹುದು. ಆಡುವ ಪಂದ್ಯವೇ ಆಗಿರಬಹುದು. ನೂರಕ್ಕೆ ವಿಶೇಷ ಮಹತ್ವವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಇರುವ ಪೈಪೋಟಿ ಮತ್ತು ಒತ್ತಡದಲ್ಲಿ ಹೀಗೆ ಬಂದು ಹಾಗೆ ಹೋಗುವ ಕ್ರಿಕೆಟಿಗರು ಎಷ್ಟೋ ಜನ ಇದ್ದಾರೆ. ಆದರೆ, ಸುದೀರ್ಘ ಕಾಲದವರೆಗೆ ಗಟ್ಟಿ ಹೆಜ್ಜೆಯೂರಲು ಸಾಮರ್ಥ್ಯ ಇರುವ ಕೆಲವೇ ಕೆಲವು ಕ್ರಿಕೆಟಿಗರು ನಮ್ಮಲ್ಲಿದ್ದಾರೆ. ಜಗತ್ತಿನ ಯಾವುದೇ ಮೈದಾನದಲ್ಲಿ, ಸ್ಪಿನ್, ವೇಗದ ಎಸೆತಗಳನ್ನು ಎದುರಿಸಿ ರನ್ ಕಲೆ ಹಾಕುವ ಸಮರ್ಥರಲ್ಲಿ ಎ.ಬಿ. ಡಿವಿಲಿಯರ್ಸ್ ಪ್ರಮುಖರು. ನಾಲ್ಕೈದು ವರ್ಷಗಳ ಹಿಂದಿನ ಕ್ರಿಕೆಟ್‌ ಅಂಗಳದತ್ತ ಕಣ್ಣು ಹಾಯಿಸಿದರೆ ಎಲ್ಲ ದೇಶಗಳ ತಂಡದಲ್ಲಿಯೂ ನೂರು ಪಂದ್ಯ ಆಡಿದ ಅನುಭವಿಗಳು ಹಲವರು ಕಾಣುತ್ತಿದ್ದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಯೂನಿಸ್ ಖಾನ್, ವಿ.ವಿ.ಎಸ್. ಲಕ್ಷ್ಮಣ್. ರಾಹುಲ್ ದ್ರಾವಿಡ್ ಹೀಗೆ ಹಲವು ತಾರೆಗಳ ಮುಖಗಳು ಮನದಲ್ಲಿ ಆಹ್ಲಾದ ಅನುಭವ ಉಂಟು ಮಾಡುತ್ತವೆ. ಈಗ ಬಹುತೇಕ ಎಲ್ಲ ತಂಡಗಳಲ್ಲಿಯೂ ಹೊಸ ಚಿಗುರು ಕಾಣುತ್ತಿದೆ. ತಾರೆಗಳಾಗುವ ಹಾದಿಯಲ್ಲಿ ಹಲವು ಮಿಂಚು ಹರಿಸುತ್ತಿದ್ದಾರೆ. ಅದರಲ್ಲಿ ನಮ್ಮ ದೇಶದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟಿವನ್ ಸ್ಮಿತ್, ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ ಸೇರಿದಂತೆ ಹಲವರಿದ್ದಾರೆ. ಇವರೆಲ್ಲರಲ್ಲೂ ಈಗ ಪ್ವಜ್ವಲಿಸುತ್ತಿರುವವರು ಎಬಿಡಿ. ಐಸಿಸಿ ರ್‌್ಯಾಂಕಿಂಗ್‌ನಲ್ಲಿಯೂ ಅವರೇ ಅಗ್ರಸ್ಥಾನದಲ್ಲಿದ್ದಾರೆ. ವಿವಿಧ ಆಟಗಳ ಸೊಗಸು ಮಹಾತ್ಮ ಗಾಂಧಿ–ನೆಲ್ಸನ್ ಮಂಡೇಲಾ ಕ್ರಿಕೆಟ್‌ ಟೂರ್ನಿಯ ಟ್ವೆಂಟಿ–20 ಮತ್ತು ಏಕದಿನ ಸರಣಿಗಳಲ್ಲಿ ಭಾರತದ ಬೌಲರ್‌ಗಳು ಅತಿ ಹೆಚ್ಚು ತಲೆಕೆಡಿಸಿಕೊಂಡಿದ್ದು ಎ.ಬಿ. ಡಿವಿಲಿಯರ್ಸ್ ಬಗ್ಗೆಯೇ. ದಕ್ಷಿಣ ಆಫ್ರಿಕಾ ಅತ್ಯುತ್ತಮ ಪ್ರವಾಸಿ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಎಬಿಡಿ ಕೊಡುಗೆ ಮಹತ್ವದ್ದು. ಅದರಲ್ಲೂ ಏಕದಿನ ತಂಡದ ನಾಯಕನಾಗಿ ಅವರ ಕಾಣಿಕೆ ಹೆಚ್ಚು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸಾಧನೆ ಸಣ್ಣದಲ್ಲ. ಈ ಸಾಧನೆಗಳ ಹಿಂದೆ ತಾವು ಬಾಲ್ಯದಲ್ಲಿ ಆಡಿದ ಬೇರೆ ಆಟಗಳ ಕೊಡುಗೆ ಇದೆ ಎನ್ನುತ್ತಾರೆ ಅವರು. ‘ನಾನು ಇವತ್ತು ಒಳ್ಳೆಯ ಕ್ರಿಕೆಟಿಗನಾಗಲು ನನ್ನ ಇಬ್ಬರು ಸಹೋದರರು ಮತ್ತು ತಂದೆ–ತಾಯಿಯ ನೆರವಿನಿಂದ ಬೇರೆ ಬೇರೆ ಆಟಗಳಲ್ಲಿ ತೊಡಗಿಸಿಕೊಂಡಿದ್ದೆ. ಹಾಕಿ, ಬ್ಯಾಡ್ಮಿಂಟನ್, ಗಾಲ್ಫ್ ಆಟಗಳನ್ನು ಚೆನ್ನಾಗಿ ಆಡುತ್ತಿದ್ದೆ’ ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ವಿಶಿಷ್ಟ ಶೈಲಿಯ ಬ್ಯಾಟಿಂಗ್‌ ನೋಡಿದವರಿಗೆ ಈ ಎಲ್ಲ ಆಟಗಳ ಝಲಕ್ ಸಿಗುವುದಂತೂ ಖಂಡಿತ. ಅವರೇ ಕಂಡುಹಿಡಿದಿರುವ ವಿಶೇಷ ಶೈಲಿಯ ಹೊಡೆತಗಳಲ್ಲಿ ಹಾಕಿಯ ಫ್ಲಿಕ್, ಬ್ಯಾಡ್ಮಿಂಟನ್‌ ಆಟದ ಬ್ಯಾಕ್‌ ಹ್ಯಾಂಡ್, ಗಾಲ್ಫ್‌ ಶೈಲಿಯ ಲಾಫ್ಟ್‌ಗಳು ಅವರ ಆಟದಲ್ಲಿ ಇಣುಕುತ್ತವೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕವನ್ನು (149; 31ಎ, 16ಸಿ,9ಬೌಂ) ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೋದ ಜನವರಿಯಲ್ಲಿ ದಾಖಲಿಸಿದ್ದರು. ಅದೇ ಸಂದರ್ಭದಲ್ಲಿ 16 ಎಸೆತಗಳಲ್ಲಿ 50ರ ಗಡಿ ದಾಟಿ ಅತಿವೇಗದ ಅರ್ಧಶತಕವನ್ನು ದಾಖಲಿಸಿದ್ದರು. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಶತಕ ಬಾರಿಸಿ ದಕ್ಷಿಣ ಆಫ್ರಿಕಾ ಕೊರಳಿಗೆ ಸರಣಿ ವಿಜಯ ಮಾಲೆ ತೊಡಿಸಿದ್ದರು. ಮೊಹಾಲಿ ಟೆಸ್ಟ್‌ನಲ್ಲಿ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ಗಟ್ಟಿಯಾಗಿ ನಿಂತು ಅರ್ಧಶತಕ ಗಳಿಸಿದ್ದರು. ಮೈದಾನದಲ್ಲಿ ಕಠಿಣ ಹೊರಗೆ ಸಭ್ಯ ಆಟವಾಡಲು ಅಂಗಳಕ್ಕೆ ಇಳಿದರೆ, ಎದುರಾಳಿಗೆಳಿಗೆ ಅತ್ಯಂತ ಕಠಿಣ ಸವಾಲಾಗುವ ಡಿವಿಲಿಯರ್ಸ್ ಮೈದಾನದ ಹೊರಗೆ ಸಭ್ಯ ವ್ಯಕ್ತಿ ಎಂದು ತಮ್ಮ ನೂರನೇ ಪಂದ್ಯಕ್ಕೂ ಮುನ್ನ ಅವರೇ ಈ ಮಾತು ಹೇಳಿದ್ದಾರೆ. ‘ಹೇಗಾದರೂ ಆಗಲಿ, ಪಂದ್ಯ ಗೆಲ್ಲುವುದೊಂದೇ ನನ್ನ ಗುರಿಯಾಗಿರುತ್ತದೆ. ಅದಕ್ಕೆ ತಕ್ಕಂತೆ ಏನು ಮಾಡಲೂ ನಾನು ಸಿದ್ಧ. ಎದುರಾಳಿ ಆಟಗಾರರನ್ನು ನಿಂದಿಸಲೂ ಹಿಂಜರಿಯುವುದಿಲ್ಲ. ಆದರೆ, ಆಟ ಮುಗಿದ ಮೇಲೆ ಎಲ್ಲರೂ ನನಗೆ ಒಳ್ಳೆಯ ಸ್ನೇಹಿತರು. ಅವರು ಯಾವುದೇ ದೇಶದವರು ಇರಲಿ. ಉತ್ತಮ ಬಾಂಧವ್ಯದಿಂದ ಇರುತ್ತೇನೆ’ ಎಂದಿದ್ದಾರೆ. ವಿಕೆಟ್‌ಕೀಪಿಂಗ್, ಬೌಲಿಂಗ್, ಬ್ಯಾಟಿಂಗ್‌ ವಿಭಾಗಗಳಲ್ಲಿ ಯಾವುದೇ ಸಂದರ್ಭದಲ್ಲಿಯೂ ತಂಡಕ್ಕೆ ನೆರವಾಗಲು ಸದಾ ಸಿದ್ಧನಾಗಿರುವ ವಿಶ್ವದ ಅಪರೂಪದ ಆಲ್‌ರೌಂಡರ್ ಎಬಿಡಿ. ಅವರ ನೂರನೇ ಟೆಸ್ಟ್‌ಗೆ ಬೆಂಗಳೂರು ವೇದಿಕೆಯಾಗುತ್ತಿದೆ. ಐಪಿಎಲ್‌ನ ಅಬ್ಬರದ ಪ್ರದರ್ಶನದ ಮೂಲಕ ಇಲ್ಲಿಯೂ ಅವರಿಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಪಂದ್ಯಕ್ಕೂ ಮುನ್ನ ಅವರ ಹಸ್ತಾಕ್ಷರಕ್ಕಾಗಿ ಮುಗಿಬಿದ್ದ ಜನರೇ ಇದಕ್ಕೆ ಸಾಕ್ಷಿ. ಅವರೆಲ್ಲರೂ ಎಬಿಡಿಯ ನೂರನೇ ಪಂದ್ಯಕ್ಕೆ ರುಜು ಹಾಕಲಿದ್ದಾರೆ. * ಐಪಿಎಲ್ ನಂಟು ಡಿವಿಲಿಯರ್ಸ್ 2008ರಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡುತ್ತಿದ್ದಾರೆ. ಮೊದಲ ಮೂರು ಆವೃತ್ತಿಗಳಲ್ಲಿ ದೆಹಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು. 2011ರಿಂದ ಆರ್‌ಸಿಬಿಯ ಪ್ರಮುಖ ಆಟಗಾರನಾಗಿದ್ದಾರೆ. 2015ರ ಆವೃತ್ತಿಯಲ್ಲಿ ಆರ್‌ಸಿಬಿಗೆ 16 ಪಂದ್ಯಗಳನ್ನು ಆಡಿದ್ದ ಅವರು 513 ರನ್ ಕಲೆಹಾಕಿದ್ದರು ಅವರು ಪಂದ್ಯವೊಂದರಲ್ಲಿ ಅಜೇಯ ಶತಕ (133) ಗಳಿಸಿ ದಾಖಲೆ ಬರೆದಿದ್ದರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.