ಸವಾಲಿನ ಹಾದಿಯಲ್ಲಿ... ಅಂತರರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದ ಹೊರತು ಕ್ರೀಡಾ ಬದುಕು ಪೂರ್ಣ ವಾಗಲಾರದು ಎನ್ನುವ ಗಾಢನಂಬಿಕೆ ಕ್ರೀಡಾ ಪಟುಗಳಲ್ಲಿದೆ. ಇದು ನಿಜವೂ ಹೌದು. ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳ ನಡುವೆ ಹೋರಾಟ ನಡೆಸಿ ದೇಶಕ್ಕೆ ಪದಕ ತಂದುಕೊಡುವ ಸಾಹಸ ಅತ್ಯಂತ ಕಠಿಣ ಹಾದಿಯಿಂದ ಕೂಡಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಾಕಷ್ಟು ಶ್ರಮ ಪಡುತ್ತಾರೆ. ಬಲಿಷ್ಠರ ನಡುವಿನ ಪೈಪೋಟಿಯಲ್ಲಿ ಗೆದ್ದು ವಿಶ್ವಮಟ್ಟದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ಒಂದು ಸಾಹಸವೇ ಸರಿ. ಇದಕ್ಕಾಗಿ ಭಾರತದ ಕ್ರೀಡಾಪಟುಗಳು ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷದ ಆಗಸ್ಟ್‌ನಲ್ಲಿ ನಡೆಯಲಿರುವ 16 ದಿನಗಳ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ. ಹಿಂದಿನ ಸಾಧನೆ ಪ್ರೇರಣೆ: ಭಾರತದ ಸ್ಪರ್ಧಿಗಳು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನ ಕ್ರೀಡಾಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್, ಕುಸ್ತಿಪಟುಗಳಾದ ಯೋಗೇಶ್ವರ್ ದತ್‌, ಸುಶೀಲ್‌ ಕುಮಾರ್‌. ಮತ್ತು ಶೂಟರ್‌ಗಳಾದ ಗಗನ್‌ ನಾರಂಗ್ ಮತ್ತು ವಿಜಯ್‌ ಕುಮಾರ್‌ ಹಿಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದರು. ಆ ಒಲಿಂಪಿಕ್ಸ್‌ನಲ್ಲಿನ ಸಾಧನೆ ಭಾರತದ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿ ಹಾಕಿತ್ತು. ಏಕೆಂದರೆ ಭಾರತ ಒಂದೇ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಜಯಿಸಿದ್ದು ಅದೇ ಮೊದಲು. ಆದ್ದರಿಂದ ಈ ಬಾರಿ ಭಾರತದ ಕ್ರೀಡಾಪಟುಗಳಿಂದ ಪದಕದ ನಿರೀಕ್ಷೆ ದುಪ್ಪಟ್ಟಾಗಿದೆ. ‘ಒಲಿಂಪಿಕ್ಸ್‌ ನಲ್ಲಿ ಭಾರತ ಹತ್ತರಿಂದ ಹನ್ನೆರೆಡು ಪದಕ ಗೆಲ್ಲುವ ವಿಶ್ವಾಸವಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಸರ್ವಾನಂದ ಸೋನೊವಾಲ್‌ ಭವಿಷ್ಯ ನುಡಿದಿದ್ದಾರೆ. ಭವಿಷ್ಯವನ್ನು ನಿಜ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನೂ ಸರ್ಕಾರ ನೀಡಿದೆ. ಸರ್ಕಾರದ ನೆರವು: ಪ್ರತಿ ಒಲಿಂಪಿಕ್ಸ್‌ ಹತ್ತಿರ ಬಂದಾಗ ‘ಆರ್ಥಿಕ ನೆರವು ಹಾಗೂ ವಿದೇಶಿ ಕೋಚ್‌ ಬೇಕು’ ಎಂದು ಭಾರತದ ಕ್ರೀಡಾ ಪಟುಗಳು ಒತ್ತಾಯ ಮಾಡುತ್ತಾರೆ. ಆದ್ದರಿಂದ ಈ ಬಾರಿ ಸರ್ಕಾರ ‘ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ’ ಎನ್ನುವ ವಿಶೇಷ ಯೋಜನೆ ಆರಂಭಿಸಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳನ್ನು ಯೋಜನೆ ಅಡಿ ಸೇರಿಸಿ ಅವರಿಗೆ ಸರ್ಕಾರ ಪ್ರೋತ್ಸಾಹಿಸಿದೆ. ‘ಟಾಪ್‌’ ಯೋಜನೆ ನೆರವಿನಿಂದ 48 ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ಕಾಲು ಭಾಗದಷ್ಟು ಕ್ರೀಡಾಪಟು ಗಳಾದರೂ ಪದಕ ಜಯಿಸಬಹುದು ಎನ್ನುವ ನಿರೀಕ್ಷೆಯಿದೆ. ಹಾಕಿಯಲ್ಲಿ ಭಾರಿ ನಿರೀಕ್ಷೆ: ಒಲಿಂಪಿಕ್ಸ್‌ ಆರಂಭಕ್ಕೂ ಎರಡು ವರ್ಷಗಳ ಮೊದಲೇ ಭಾರತ ಹಾಕಿ ತಂಡ ಅರ್ಹತೆ ಪಡೆದುಕೊಂಡಿದೆ. 2014ರಲ್ಲಿ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿ ಭಾರತ ಈ ಸಾಧನೆ ಮಾಡಿದೆ. ಇದೆಲ್ಲಕ್ಕಿಂತ ಹೆಚ್ಚಿನ ಖುಷಿಯೆಂದರೆ ಮಹಿಳಾ ಹಾಕಿ ತಂಡವೂ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಪಡೆದದ್ದು. ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಯಾವ ಸ್ಥಾನವನ್ನಾದರೂ ಪಡೆಯಲಿ ಅದು ಬೇರೆ ಮಾತು. ಒಟ್ಟಿನಲ್ಲಿ ಅರ್ಹತೆ ಪಡೆದದ್ದು ದೊಡ್ಡ ಸಾಧನೆಯೇ ಸರಿ. ಏಕೆಂದರೆ ಅರ್ಹತೆ ಗಳಿಸಲು ಮಹಿಳಾ ತಂಡಕ್ಕೆ 36 ವರ್ಷಗಳೇ ಬೇಕಾದವು. ಹೋದ ವರ್ಷ ನಡೆದ ಎಫ್‌ಐಎಚ್‌ ಹಾಕಿ ವಿಶ್ವ ಲೀಗ್ ಸೆಮಿಫೈನಲ್ಸ್‌ನಲ್ಲಿ ಐದನೇ ಸ್ಥಾನ ಪಡೆದಿದ್ದ ರಿಂದ ಮಹಿಳಾ ತಂಡಕ್ಕೆ ಅರ್ಹತೆ ಲಭಿಸಿತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಭರವಸೆ ಇರುವುದು ಬ್ಯಾಡ್ಮಿಂಟನ್‌, ಶೂಟಿಂಗ್‌, ಕುಸ್ತಿ, ಬಾಕ್ಸಿಂಗ್ ಮತ್ತು ಆರ್ಚರಿ ಕ್ರೀಡೆಗಳ ಮೇಲೆ. ಕೊನೆಯ ಒಲಿಂಪಿಕ್ಸ್‌: ಯೋಗೇಶ್ವರ ದತ್‌ ಮತ್ತು ಮೇರಿ ಕೋಮ್ ಅವರ ಪಾಲಿಗಂತೂ ಇದು ಅತ್ಯಂತ ಮಹತ್ವದ ಒಲಿಂಪಿಕ್ಸ್‌. ಏಕೆಂದರೆ ಅವರು ಈಗಾಗಲೇ ‘ಇದು ನಮ್ಮ ಕೊನೆಯ ಒಲಿಂಪಿಕ್ಸ್‌. ಆದ್ದರಿಂದ ಚಿನ್ನದ ಪದಕದೊಂದಿಗೆ ವಿದಾಯ ಹೇಳುವ ಗುರಿ ನಮ್ಮದು’ ಎಂದಿದ್ದಾರೆ. ಆದರೆ ಇವರಿನ್ನು ಅರ್ಹತೆ ಪಡೆದಿಲ್ಲ. ಆರ್ಚರಿಯಲ್ಲಿ ದೀಪಿಕಾ ಕುಮಾರಿ (ವೈಯಕ್ತಿಕ ರಿಕರ್ವ್‌), ಲಕ್ಷ್ಮಿರಾಣಿ ಮಾಹಿ (ರಿಕರ್ವ್‌), ರಿಮಿಲ್ ಬುರೇಲಿಯಾ (ರಿಕರ್ವ್‌ ತಂಡ), ಮಂಗಲ್ ಸಿಂಗ್ ಚಂಪಿಯಾ (ಪುರುಷರ ವೈಯಕ್ತಿಯ ರಿಕರ್ವ್‌) ಭರವಸೆ ಮೂಡಿಸಿದ್ದಾರೆ. ಸವಾಲಿನ ಹಾದಿ: ಇದೇ ವರ್ಷ ಸತತ ಐದು ಅಂತರರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆಯ ಇಂದರಜಿತ್ ಸಿಂಗ್‌ (ಶಾಟ್‌ಪಟ್‌), ಲಲಿತಾ ಬಾಬರ್‌ (3000 ಮೀ. ಸ್ಟೀಪಲ್‌ ಚೇಸ್‌), ಟಿಂಟು ಲೂಕಾ (800 ಮೀಟರ್ಸ್‌ ಓಟ), ಕುಶ್ಬೀರ್ ಕೌರ್ (20 ಕಿ.ಮೀ. ನಡಿಗೆ) ಮತ್ತು ವಿಕಾಸ್‌ ಗೌಡ (ಡಿಸ್ಕಸ್‌ ಎಸೆತ) ಅಥ್ಲೆಟಿಕ್ಸ್‌ನಲ್ಲಿ ಭಾರತದ ಸವಾಲನ್ನು ಎತ್ತಿ ಹಿಡಿಯಲಿದ್ದಾರೆ. ಆದರೆ ವಿಶ್ವ ಮಟ್ಟದಲ್ಲಿರುವ ಸವಾಲಿನ ಮುಂದೆ ಭಾರತದ ಅಥ್ಲೀಟ್‌ಗಳ ಹಾದಿ ಸುಗಮ ವಾಗಿಲ್ಲ. 2012ರ ಒಲಿಂಪಿಕ್ಸ್‌ನಲ್ಲಿ ವಿಕಾಸ್ ಗೌಡ 64.79 ಮೀಟರ್‌ ದೂರ ಡಿಸ್ಕ್ ಎಸೆದು ಎಂಟನೇ ಸ್ಥಾನ ಪಡೆದಿದ್ದರು. ಒಲಿಂಪಿಕ್ಸ್ ಬಳಿಕ ಅವರು ಐದು ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಮೂರು ಚಿನ್ನ ಮತ್ತು ಒಂದು ಬಾರಿ ಬೆಳ್ಳಿ ಕೂಡ ಗೆದ್ದಿದ್ದಾರೆ. ಆದರೆ ವಿಕಾಸ್‌ ನಾಲ್ಕು ಚಾಂಪಿಯನ್‌ ಷಿಪ್‌ಗಳಲ್ಲಿ 64 ಮೀಟರ್ಸ್ ಸನಿಹವೂ ಸುಳಿದಿಲ್ಲ. 2013ರಲ್ಲಿ ಪುಣೆಯಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ 64. 90 ಮೀಟರ್ಸ್ ಎಸೆದದ್ದು ಒಲಿಂಪಿಕ್‌ ಬಳಿಕದ ಉತ್ತಮ ಸಾಧನೆ ಎನಿಸಿದೆ. ಕಾಮನ್‌ವೆಲ್ತ್‌ ಕೂಟದಲ್ಲಿ (ದೂರ: 63.64ಮೀ.), ಏಷ್ಯನ್‌ ಗೇಮ್ಸ್‌ (ದೂರ: 62.58ಮೀ.), ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ (ದೂರ: 62.03) ಮತ್ತು ಬೀಜಿಂಗ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ (ದೂರ: 62.24 ಮೀ.) ದೂರವಷ್ಟೇ ಡಿಸ್ಕ್‌ ಎಸೆದಿದ್ದರು. ಹಿಂದಿನ ಒಲಿಂಪಿಕ್ಸ್‌ನಲ್ಲಿ ಮೊದಲ ಏಳು ಸ್ಥಾನ ಪಡೆದಿದ್ದ ಅಥ್ಲೀಟ್‌ಗಳು 65 ಮೀಟರ್‌ ಗಿಂತಲೂ ಹೆಚ್ಚು ದೂರ ಡಿಸ್ಕ್‌ ಎಸೆದಿದ್ದರು. ಮೊದಲ ಮೂರು ಸ್ಥಾನ ಪಡೆದಿದ್ದ ಜರ್ಮನಿಯ ರಾಬರ್ಟ್‌ ಹಾರ್ಟಿಂಗ್‌, ಇರಾನ್‌ನ ಈಶನ್‌ ಹಡಾದಿ ಮತ್ತು ಇಸ್ತೋನಿಯಾದ ಗೆರ್ಡ್‌ ಕಾಂಟೆರ್‌ 68 ಮೀಟರ್ಸ್‌ಗಿಂತ ಕಡಿಮೆ ದೂರ ಎಸೆದಿರಲಿಲ್ಲ. ವಿಕಾಸ್ ವೃತ್ತಿ ಜೀವನದಲ್ಲಿ ಒಮ್ಮೆಯೂ 67 ಮೀಟರ್‌ ಸನಿಹವೂ ತಲುಪಿಲ್ಲ. 2012ರಲ್ಲಿ ಅಮೆರಿಕದಲ್ಲಿ ನಡೆದ ಅಥ್ಲೆಟಿಕ್ಸ್‌ ನಲ್ಲಿ 66.28 ಮೀಟರ್‌ ದೂರ ಎಸೆದದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಎನಿಸಿದೆ. ಆದ್ದರಿಂದ ಮುಂದಿನ ಒಂಬತ್ತು ತಿಂಗಳಲ್ಲಿ ವಿಕಾಸ್ ಸಾಮರ್ಥ್ಯದಲ್ಲಿ ಪ್ರಗತಿ ಕಂಡರೆ ಮಾತ್ರ ಅವರು ಫೈನಲ್‌ ಪ್ರವೇಶಿಸುವ ಆಸೆ ಈಡೇರಬಹುದು. ಹಿಂದಿನ ಒಲಿಂಪಿಕ್ಸ್‌ನಲ್ಲಿ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಟಿಂಟು ಲೂಕಾ ಸೆಮಿಫೈನಲ್ಸ್‌ ಹೀಟ್‌ನಲ್ಲಿ ಐದನೇ ಸ್ಥಾನ ಪಡೆದಿದ್ದರು. ಅವರು ಒಂದು ನಿಮಿಷ 59.69 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಆದರೆ, ಚಿನ್ನ ಗೆದ್ದ ರಷ್ಯಾದ ಮರಿಯಾ ಸಾವಿನೊವಾ ಒಂದು ನಿಮಿಷ 56.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಈ ವಿಭಾಗದಲ್ಲಿ ಪ್ರತಿ ಸೆಕೆಂಡ್‌ ನಲ್ಲೂ ಪೈಪೋಟಿ ಎದುರಿಸಬೇಕಾಗುತ್ತದೆ. ಆದ್ದರಿಂದ ಒಲಿಂಪಿಕ್ಸ್‌ಗೆ ಸಜ್ಜಾಗಲು ಉಳಿದ ಅವಧಿ ಅತ್ಯಂತ ಮಹತ್ವದ್ದಾಗಿದೆ. ನಿಜವಾಗುವುದೇ ನಿರೀಕ್ಷೆ: ಶೂಟಿಂಗ್‌ನಲ್ಲಿ ಚೈನ್ ಸಿಂಗ್‌ (50 ಮೀಟರ್ಸ್‌ ರೈಫಲ್‌ ತ್ರಿ ಪಿಸ್ತೂಲ್‌), ಗಗನ್‌ ನಾರಂಗ್‌ (50 ಮೀ. ರೈಫಲ್ ಪ್ರೊನೊ), ಅಭಿನವ್‌ ಬಿಂದ್ರಾ (10 ಮೀ. ಏರ್‌ ರೈಫಲ್‌), ಗುರುಪ್ರೀತ್‌ ಸಿಂಗ್‌ (10 ಮೀ. ಏರ್ ಪಿಸ್ತೂಲ್‌), ಜಿತು ರಾಯ್‌ (50 ಮೀ. ಪಿಸ್ತೂಲ್), ಕನ್ನಡಿಗ ಪ್ರಕಾಶ್‌ ನಂಜಪ್ಪ (50 ಮೀ. ಪಿಸ್ತೂಲ್‌), ಅಪೂರ್ವಿ ಚಾಂಡೇಲಾ (10 ಮೀ. ಏರ್‌ ರೈಫಲ್‌) ಮೇಲೆ ಹೆಚ್ಚು ನಿರೀಕ್ಷೆಯಿದೆ. ಕುಸ್ತಿಯಲ್ಲಿ ನರಸಿಂಗ್ ಪಂಚಮ್‌ ಯಾದವ್ ಅಥವಾ ಸುಶೀಲ್‌ ಕುಮಾರ್ ಇಬ್ಬರಲ್ಲಿ ಒಬ್ಬರು ಭಾರತವನ್ನು ಪ್ರತಿನಿಧಿಸಲಿದ್ದಾರೆ. * ಬ್ಯಾಡ್ಮಿಂಟನ್‌ ಬ್ಯಾಡ್ಮಿಂಟನ್‌ನಲ್ಲೂ ಭರವಸೆ: ಬ್ಯಾಡ್ಮಿಂಟನ್‌ನಲ್ಲಿ ಸೈನಾ, ಪಿ.ವಿ. ಸಿಂಧು ಮತ್ತು ಪರುಪಳ್ಳಿ ಕಶ್ಯಪ್‌ ಭರವಸೆಯ ಪ್ರತಿಭೆಗಳೆನಿಸಿದ್ದಾರೆ. ಸೈನಾ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಬಳಿಕ ಅವರು ಒಂಬತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಸಿಂಧು ಕೂಡ ಉತ್ತಮ ಫಾರ್ಮ್‌ ನಲ್ಲಿದ್ದಾರೆ. ಹೈದರಾಬಾದ್‌ನ ಸಿಂಧು ಮೂರು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಮಕಾವ್ ಟೂರ್ನಿ ಮತ್ತು ಒಂದು ಸಲ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಬ್ಯಾಡ್ಮಿಂಟನ್‌ನ ಭದ್ರ ಕೋಟೆ ಎನಿಸಿದ್ದ ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಚೀನಾ ಸ್ಪರ್ಧಿಗಳ ಸವಾಲಿಗೆ ಭಾರತ ಉತ್ತರ ನೀಡುತ್ತಿದೆ. ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಆರ್ಚರಿ ಯಲ್ಲಿ ಐವರು ಸ್ಪರ್ಧಿಗಳು ಮತ್ತು ಕುಸ್ತಿ ಯಲ್ಲಿ ಒಬ್ಬ ಸ್ಪರ್ಧಿ ಅರ್ಹತೆ ಪಡೆದಿದ್ದಾರೆ. ಉಳಿದ ಕ್ರೀಡಾಪಟುಗಳಿಗೆ ಇನ್ನು ಕಾಲಾವಕಾಶವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.