ಕಬಡ್ಡಿಯಲ್ಲಿ ರಿಶಾಂಕ್‌ ಸಂಚಲನ.. ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ತಂಡ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ, ಇದರ ಹಿಂದಿರುವ ಶಕ್ತಿ ಯಾರೆಂಬ ಪ್ರಶ್ನೆ ಎದ್ದರೆ ತಕ್ಷಣಕ್ಕೆ ಅನೂಪ್‌ ಕುಮಾರ್‌ ಮತ್ತು ರಾಕೇಶ್‌ ಕುಮಾರ್‌ ಎಂಬ ಉತ್ತರ ಸಿಗಬಹುದು. ಆದರೆ ನಿಜಕ್ಕೂ ಇವರನ್ನು ಮೀರಿ ನಿಲ್ಲುವ ಮತ್ತೊಂದು ಪ್ರತಿಭೆ ಈ ತಂಡದಲ್ಲಿ ನಿಧಾನವಾಗಿ ಚಿಗುರೊಡೆಯುತ್ತಿದೆ. ಆ ಪ್ರತಿಭೆಯೇ ರಿಶಾಂಕ್‌ ದೇವಾಡಿಗ. ಕರ್ನಾಟಕ ಮೂಲದ ರಿಶಾಂಕ್‌ ‘ಡೂ ಆರ್‌ ಡೈ’ ದಾಳಿಯ ಪರಿಣತ ಎಂದೇ ಗುರುತಿಸಿಕೊಂಡಿದ್ದಾರೆ. ಶರವೇಗದ ದಾಳಿ ಹಾಗೂ ಪಾದರಸದಂತಹ ಚಲನೆಯ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಕಲೆ 24ರ ಹರೆಯದ ರಿಶಾಂಕ್‌ಗೆ ಕರಗತವಾಗಿದೆ. ರಿಶಾಂಕ್‌ ಕೇವಲ ರೈಡಿಂಗ್‌ ಮಾತ್ರವಲ್ಲ, ಟ್ಯಾಕ್ಲಿಂಗ್‌ ಮೂಲಕವೂ ಎದುರಾಳಿಗಳ ಸದ್ದಡಗಿಸಬಲ್ಲ ಗಟ್ಟಿಗ. ರಾಷ್ಟ್ರೀಯ ಟೂರ್ನಿಗಳಲ್ಲಿ ಬಿಪಿಸಿಎಲ್‌ ತಂಡವನ್ನು ಪ್ರತಿನಿಧಿಸುವ ರಿಶಾಂಕ್‌ ಮುಂದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡು ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಹೆಗ್ಗುರಿ ಹೊಂದಿದ್ದಾರೆ. ಅವರು ತಾವು ಬೆಳೆದುಬಂದ ಹಾದಿ ಹಾಗೂ ಕನಸುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ. *ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ? ಅಪ್ಪ ಅಮ್ಮ ಇಬ್ಬರೂ ದಕ್ಷಿಣ ಕನ್ನಡದ ಕುಂದಾಪುರ ಸಮೀಪದ ಹಳ್ಳಿಯವರು. ನನಗೆ ಮೂರು ವರ್ಷವಾಗಿದ್ದಾಗ ಕೆಲಸದ ನಿಮಿತ್ತ ಅಪ್ಪ ಮುಂಬೈಗೆ ಬಂದು ನೆಲೆಸಿದರು. ಇಲ್ಲಿ ಅವರು ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರು ತೀರಿಕೊಂಡರು. ಅಮ್ಮ ಸ್ವಂತ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದು. ಇದೇ ನಮಗೆ ಆಧಾರ. *ಕಬಡ್ಡಿ ಪಯಣ ಆರಂಭವಾಗಿದ್ದು? ನಾವು ನೆಲೆಸಿರುವ ಸಾಂಟಾಕ್ರ್ಯೂಸ್‌ ಒಕೋಲಾ ಬಡಾವಣೆಯಲ್ಲಿ ಕಬಡ್ಡಿ ಹೆಚ್ಚು ಜನಪ್ರಿಯವಾಗಿತ್ತು. ಕ್ರಿಕೆಟ್‌ನಂತೆ ಇಲ್ಲಿ ಬೀದಿಬೀದಿಯಲ್ಲೂ ಹುಡುಗರು ಕಬಡ್ಡಿ ಆಡುವುದು ಸಾಮಾನ್ಯವಾಗಿತ್ತು. ಸ್ಥಳೀಯವಾಗಿ ಟೂರ್ನಿಗಳು ನಡೆದಾಗ ತಪ್ಪದೆ ಅದನ್ನು ನೋಡಲು ಹೋಗುತ್ತಿದ್ದೆ. ದಿನ ಕಳೆದಂತೆ ಕಬಡ್ಡಿ ಬಗೆಗಿನ ಆಸಕ್ತಿ ಹೆಚ್ಚಿತು. ಬಳಿಕ ಇದನ್ನೇ ವೃತ್ತಿಪರ ಕ್ರೀಡೆಯನ್ನಾಗಿ ಸ್ವೀಕರಿಸಲು ನಿರ್ಧರಿಸಿದೆ. *ನಿಮ್ಮ ವಿದ್ಯಾಭ್ಯಾಸದ ಬಗ್ಗೆ? ಮುಂಬೈನ ಎಂ.ಡಿ. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ್ದೇನೆ. ಸದ್ಯ ರಾಮ್‌ ನಿರಂಜನ್‌ ಜುಂಜನವಾಲ ಕಾಲೇಜಿನಲ್ಲಿ ಅಂತಿಮ ಬಿ.ಕಾಂ, ಓದುತ್ತಿದ್ದೇನೆ. *ಕಬಡ್ಡಿ ಬಗೆಗಿನ ಆಸಕ್ತಿ ವಿದ್ಯಾಭ್ಯಾಸಕ್ಕೆ ತೊಡಕಾಗಿಲ್ಲವೇ? ಕಾಲೇಜಿನಲ್ಲಿ ಕ್ರೀಡೆಗೆ ಪೂರಕ ವಾತಾವರಣ ಇದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಾರೆ. ಜತೆಗೆ ಹಾಜರಾತಿಯೂ ಕಡ್ಡಾಯವಲ್ಲ. ಟೂರ್ನಿಗಳಿಲ್ಲದಿದ್ದಾಗ ತರಗತಿಗಳಿಗೆ ಹೋಗುತ್ತೇನೆ. ಹೀಗಾಗಿ ಕಬಡ್ಡಿ ಪ್ರೀತಿ ವಿದ್ಯಾಭ್ಯಾಸಕ್ಕೆ ಖಂಡಿತವಾಗಿಯೂ ಅಡ್ಡಿಯಾಗಿಲ್ಲ. *ಪ್ರೊ ಕಬಡ್ಡಿ ಲೀಗ್‌ ಬಗ್ಗೆ ಹೇಳಿ? ಲೀಗ್‌ ಆರಂಭಿಸಿದ ಮೇಲೆ ಅಳಿವಿನ ಅಂಚಿನಲ್ಲಿದ್ದ ಕಬಡ್ಡಿಗೆ ಮರುಜೀವ ಬಂದಿದೆ. ಯುವ ಆಟಗಾರರಿಗೆ ಹಿರಿಯರು ಮತ್ತು ಅನುಭವಿಗಳೊಂದಿಗೆ ಬೆರೆಯುವ ಮತ್ತು ಅವರಿಂದ ಆಟದ ತಂತ್ರ ಮತ್ತು ಕೌಶಲಗಳನ್ನು ಕಲಿಯುವ ಉತ್ತಮ ಅವಕಾಶ ಸಿಕ್ಕಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಬಡ್ಡಿಯನ್ನೇ ನಂಬಿದ್ದ ಎಲ್ಲರ ಬದುಕು ಹಸನಾಗಿದೆ. *ಪ್ರೊ ಕಬಡ್ಡಿಯಲ್ಲಿ ಆಡಲು ಶುರು ಮಾಡಿದ ಬಳಿಕ ನಿಮ್ಮ ಬದುಕಿನಲ್ಲಿ ಆದ ಬದಲಾವಣೆ ? ನನ್ನ ವೈಯಕ್ತಿಕ ಮತ್ತು ಕ್ರೀಡಾಬದುಕಿಗೆ ಹೊಸ ತಿರುವು ಸಿಕ್ಕಿದೆ. ಅಪ್ಪ ತೀರಿಕೊಂಡ ಮೇಲೆ ಕುಟುಂಬದ ಎಲ್ಲಾ ಜವಾಬ್ದಾರಿಗಳು ನನ್ನ ಹೆಗಲಿಗೆ ಬಿತ್ತು. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದೆವು. ಈಗ ಎಲ್ಲವೂ ಬಗೆಹರಿದಿದೆ. ಮೊದಲೆಲ್ಲಾ ಕಬಡ್ಡಿ ಆಟಗಾರರೆಂದರೆ ಮೂಗು ಮುರಿಯುವವರೇ ಹೆಚ್ಚಿದ್ದರು. ಲೀಗ್‌ ಆರಂಭವಾದ ಮೇಲೆ ನಮಗೂ ತಾರಾ ಮೌಲ್ಯ ಸಿಕ್ಕಿದೆ. ಹೋದಲೆಲ್ಲಾ ಜನ ಗುರುತಿಸುತ್ತಾರೆ. ನಮ್ಮೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು, ಹಸ್ತಾಕ್ಷರ ಪಡೆಯುವುದನ್ನು ನೋಡಿದರೆ ತುಂಬಾ ಆನಂದವಾಗುತ್ತದೆ. *ಕಬಡ್ಡಿ ಆಟಗಾರರಿಗೆ ಫಿಟ್‌ನೆಸ್‌ ತುಂಬಾ ಅಗತ್ಯ. ಇದನ್ನು ಕಾಪಾಡಿಕೊಳ್ಳಲು ನೀವೇನು ಮಾಡುತ್ತೀರಿ? ಕಬಡ್ಡಿ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆ. ಹೀಗಾಗಿ ಆಟಗಾರರಿಗೆ ಫಾರ್ಮ್‌ ಜತೆಗೆ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ನಿತ್ಯ ಮುಂಜಾನೆ ಓಡುವುದು ಮತ್ತು ಜಿಮ್‌ನಲ್ಲಿ ಹೆಚ್ಚು ಸಮಯ ಬೆವರು ಹರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದೇನೆ. ಜತೆಗೆ ಪ್ರೋಟಿನ್‌ಯುಕ್ತ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡಿದ್ದೇನೆ. ಇದೇ ನನ್ನ ಫಿಟ್ನೆಸ್‌ ಗುಟ್ಟು. *ನಿಮ್ಮ ನೆಚ್ಚಿನ ಆಟಗಾರ ಯಾರು? ಅನೂಪ್‌ ಕುಮಾರ್‌ ಮತ್ತು ರಾಕೇಶ್‌ ಕುಮಾರ್‌ ನನ್ನ ಅಚ್ಚುಮೆಚ್ಚಿನ ಆಟಗಾರರು. ಅವರ ಜತೆಯೇ ಮುಂಬಾ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇಬ್ಬರು ಪಂದ್ಯದ ವೇಳೆ ನನಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ. *ಮುಂಬಾ ತಂಡದ ಯಶಸ್ಸಿನ ಮಂತ್ರ ಏನು? ಪಂದ್ಯಕ್ಕೂ ಮುನ್ನ ನಡೆಯುವ ಅಭ್ಯಾಸದ ವೇಳೆ ಎಲ್ಲರೂ ಒಟ್ಟಾಗಿ ಚರ್ಚಿಸುತ್ತೇವೆ. ಜತೆಗೆ ಎದುರಾಳಿ ತಂಡ ಹಿಂದೆ ಆಡಿದ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸುತ್ತೇವೆ. ಇದರಿಂದ ಅವರ ಬಲ ಮತ್ತು ದೌರ್ಬಲ್ಯವನ್ನು ಅರಿತುಕೊಂಡು ಅದಕ್ಕನ್ನುಗುಣವಾಗಿ ರಣತಂತ್ರ ಹೆಣೆಯಲು ಅನುವಾಗುತ್ತದೆ. ಜತೆಗೆ ಪಂದ್ಯದ ವೇಳೆ ಯೋಜನೆಗೆ ಅನುಗುಣವಾಗಿ ಆಡುತ್ತೇವೆ. ಹೀಗಾಗಿ ಗೆಲುವು ನಮ್ಮನ್ನು ಅರಸಿ ಬರುತ್ತಿದೆ. *ಕಬಡ್ಡಿ ಬಿಟ್ಟು ಬೇರೆ ಯಾವುದಾದರೂ ಕ್ರೀಡೆಯಲ್ಲಿ ಆಸಕ್ತಿ ಇದೆಯೇ? ಇಲ್ಲ. ಕಬಡ್ಡಿಯೇ ನನ್ನ ಉಸಿರು. ಇದನ್ನು ಬಿಟ್ಟು ಬೇರೆ ಯಾವ ಕ್ರೀಡೆಯತ್ತಲೂ ಮುಖಮಾಡಿ ನೋಡಿಲ್ಲ. *ಒಂದೇ ವರ್ಷದಲ್ಲಿ ಎರಡು ಬಾರಿ ಲೀಗ್‌ ಆಯೋಜಿಸಿರುವುದಕ್ಕೆ ಹಲವು ಆಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲಾ. ಈ ವಿಷಯದಲ್ಲಿ ನಿಮ್ಮ ನಿಲುವು? ನನ್ನ ಪ್ರಕಾರ ಎರಡು ಬಾರಿ ಲೀಗ್‌ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಕಬಡ್ಡಿ ಕ್ರೀಡೆಯ ಜನಪ್ರಿಯತೆ ಇನ್ನಷ್ಟು ಹೆಚ್ಚುತ್ತದೆ. ತಮ್ಮೊಳಗೆ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ಯುವ ಆಟಗಾರರಿಗೆ ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. *ಪ್ರೊ ಕಬಡ್ಡಿ ಲೀಗ್‌ನಲ್ಲಿ ನೀಡುವ ಪ್ರದರ್ಶನ ರಾಷ್ಟ್ರೀಯ ತಂಡದ ಆಯ್ಕೆಗೆ ಮಾನದಂಡ ಎಂದು ನಿಮಗನಿಸುತ್ತದೆಯೇ? ಖಂಡಿತವಾಗಿಯೂ. ಪ್ರೊ ಕಬಡ್ಡಿ ಲೀಗ್‌ ಅನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವ ಆಟಗಾರ ಹೇಗೆ ಆಡುತ್ತಾನೆ ಎಂಬುದು ಇಲ್ಲಿ ಮನದಟ್ಟಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆಮಾಡುವ ಅವಕಾಶ ಹೆಚ್ಚಿದೆ. *ಮುಂದಿನ ಗುರಿ? ಎಲ್ಲರಂತೆ ನನಗೂ ವಿಶ್ವಕಪ್‌, ಏಷ್ಯನ್‌ ಕ್ರೀಡಾಕೂಟಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.