ದಾಖಲೆಗಳ ಆಟಗಾರ ಮೆಕ್ಲಮ್‌ ಹದಿನಾಲ್ಕು ವರ್ಷ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಲಮ್‌ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಕ್ರಿಕೆಟ್‌ ಬದುಕಿನ ಪ್ರತಿ ಸಾಧನೆಯೂ ದಾಖಲೆ . ಆದರೆ ವಿಶ್ವಕಪ್‌ ಗೆಲ್ಲುವ ಆಸೆ ಮಾತ್ರ ಈಡೇರಲಿಲ್ಲ. ಇದರ ಬಗ್ಗೆ ಪ್ರಮೋದ್‌ ಜಿ.ಕೆ. ವಿಶ್ಲೇಷಿಸಿದ್ದಾರೆ. ‘ಸಾಮಾನ್ಯವಾಗಿ ಪ್ರತಿ ಕ್ರಿಕೆಟಿಗ ಮೊದಲ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸುತ್ತಾನೆ. ಆದರೆ ಬ್ರೆಂಡನ್‌ ಮೆಕ್ಲಮ್‌ ಹಾಗಲ್ಲ. ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್‌ ಸಿಡಿಸಬೇಕು ಎಂದು ಯೋಚಿಸುತ್ತಾನೆ. ಅವರು ಕ್ರೀಸ್‌ನಲ್ಲಿದ್ದರೆ ಕ್ರಿಕೆಟ್‌ ಪ್ರೇಮಿಗಳಿಗೆ ಭರ್ಜರಿ ಖುಷಿ ಸಿಗುತ್ತದೆ. ಇಂಥ ಅನೇಕ ಖುಷಿಗಳನ್ನು ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಂಚಿಕೊಳ್ಳಲು ನನಗೂ ಅವಕಾಶ ಲಭಿಸಿದ್ದು ಅದೃಷ್ಟವೆಂದೇ ಭಾವಿಸಿದ್ದೇನೆ...’ ಭಾರತ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ ಮಾತುಗಳಿವು. ನ್ಯೂಜಿಲೆಂಡ್‌ನ ಮೆಕ್ಲಮ್‌ ಹೀಗೆ ಪ್ರತಿಯೊಬ್ಬ ಕ್ರಿಕೆಟಿಗರಿಂದಲೂ ಶ್ಲಾಘನೆಗೆ ಒಳಗಾದ ಪ್ರತಿಭಾವಂತ ಆಟಗಾರ. ದೋನಿ ಮತ್ತು ಮೆಕ್ಲಮ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿದ್ದರು. ಹೋದ ವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ವೇಗವಾಗಿ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಕೇವಲ 54 ಎಸೆತಗಳಲ್ಲಿ ಮೂರಂಕಿ ಗಡಿ ಮುಟ್ಟಿ ವೆಸ್ಟ್‌ ಇಂಡೀಸ್‌ನ ವಿವಿಯನ್‌ ರಿಚರ್ಡ್ಸ್ 30 ವರ್ಷಗಳ ಹಿಂದೆ ಇಂಗ್ಲೆಂಡ್ ಎದುರು ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ರಿಚರ್ಡ್ಸ್‌ 56 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವಿಶೇಷವೆಂದರೆ ಮೆಕ್ಲಮ್ ವಿದಾಯದ ಟೆಸ್ಟ್ ಪಂದ್ಯದಲ್ಲಿ ವಿಶ್ವ ದಾಖಲೆ ಮಾಡಿದ್ದರು. ಮೆಕ್ಲಮ್‌ ಹೀಗೆ ವೃತ್ತಿ ಜೀವನದ ಆರಂಭದಿಂದಲೂ ಕೊನೆಯ ಪಂದ್ಯದವರೆಗೂ ಸದಾ ದಾಖಲೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಮೂರು (ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20) ಮಾದರಿಗಳಿಗೆ ಕಿವೀಸ್ ತಂಡವನ್ನು ಮುನ್ನಡೆಸಿದ್ದರು. ಐಪಿಎಲ್‌ನಲ್ಲಿಯೂ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಹೆಸರು ಮಾಡಿದ್ದಾರೆ. ವೇಗವಾಗಿ ರನ್‌ ಕಲೆ ಹಾಕುವ ಛಾತಿ ಹೊಂದಿರುವ ಮೆಕ್ಲಮ್‌ ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ದಾಖಲೆ ಮಾಡಿದ್ದಾರೆ. 2008ರಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡದಲ್ಲಿದ್ದ ಅವರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎದುರು 158 ರನ್ ಬಾರಿಸಿದ್ದರು. ಇವರ ದಾಖಲೆಯನ್ನು ಮುರಿಯಲು ಐದು ವರ್ಷಗಳೇ ಬೇಕಾದವು. ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿಯೂ ಮೆಕ್ಲಮ್‌ ಹೆಸರಿನಲ್ಲಿದೆ. 2014ರಲ್ಲಿ ಭಾರತ ವಿರುದ್ಧ ಈ ಸಾಧನೆ ಮಾಡಿದ್ದರು. ಜೊತೆಗೆ ಒಂದೇ ವರ್ಷದಲ್ಲಿ 1000 ರನ್‌ ಕಲೆ ಹಾಕಿದ ಕಿವೀಸ್‌ನ ಮೊದಲ ಆಟಗಾರ ಎನ್ನುವ ದಾಖಲೆಯನ್ನೂ ಮಾಡಿದ್ದಾರೆ. 2014ರ ಐಪಿಎಲ್‌ ಟೂರ್ನಿಯಲ್ಲಿ ಪಂದ್ಯವಾಡಲು ಅವರು ಬೆಂಗಳೂರಿಗೆ ಬಂದಿದ್ದಾಗ ‘ನೀವು ದಾಖಲೆಗಾಗಿಯೇ ಕ್ರಿಕೆಟ್ ಆಡುತ್ತೀರಾ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಹಾಗೇನು ಇಲ್ಲ. ನಾನಾಡುವ ಪ್ರತಿ ಪಂದ್ಯವೂ ದಾಖಲೆಯಾಗಿರಬೇಕು’ ಎಂದು ನಕ್ಕಿದ್ದರು. ವೇಗದ ಶತಕ ಗಳಿಸಿ ಟೆಸ್ಟ್‌ನಲ್ಲಿ ಮೆಕ್ಲಮ್‌ ವಿಶ್ವದಾಖಲೆ ನಿರ್ಮಿಸಿದ್ದಾಗ ಪ್ರತಿಕ್ರಿಯಿಸಿದ್ದ ವಿವಿಯನ್‌ ರಿಚರ್ಡ್ಸ್‌ ‘ಹತ್ತು ವರ್ಷಗಳಿಂದ ಮೆಕ್ಲಮ್‌ ಬ್ಯಾಟಿಂಗ್ ನೋಡುತ್ತಾ ಆತನ ಅಭಿಮಾನಿಯಾಗಿ ಬಿಟ್ಟಿದ್ದೇನೆ. ನನ್ನ ನೆಚ್ಚಿನ ಆಟಗಾರ ನನ್ನದೇ ದಾಖಲೆಯನ್ನು ಮುರಿದರೆ ಅದಕ್ಕಿಂತ ಹೆಚ್ಚಿನ ಖುಷಿ ಇನ್ನೇನಿದೆ’ ಎಂದಿದ್ದರು. ವೇಗದ ಆಟಕ್ಕೆ ಹೆಸರಾಗಿರುವ ಮೆಕ್ಲಮ್‌ ಐಪಿಎಲ್‌ ಆಡಲು ಶುರು ಮಾಡಿದ ಬಳಿಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡರು. ಕೋಲ್ಕತ್ತ ನೈಟ್ ರೈಡರ್ಸ್‌, ಕೊಚ್ಚಿ ಟಸ್ಕರ್ಸ್ ಕೇರಳ, ಸೂಪರ್‌ ಕಿಂಗ್ಸ್‌ ತಂಡಗಳಲ್ಲಿದ್ದರು. ಈಗ ಹೊಸ ತಂಡ ಗುಜರಾತ್ ಲಯನ್ಸ್‌ನಲ್ಲಿದ್ದಾರೆ. ದೇಶಿ ಟೂರ್ನಿಗಳಲ್ಲೂ ಹೀರೊ ದೇಶಿ ಟೂರ್ನಿಗಳಲ್ಲಿ ಆಡುವಾಗಿನಿಂದಲೇ ಬ್ರೆಂಡಮ್ ದಾಖಲೆಗಳ ಬೆನ್ನು ಹತ್ತಿದವರು. ಕಿವೀಸ್‌ನ ದೇಶಿ ಟೂರ್ನಿಯಲ್ಲಿ ಒಟಾಗೊ ವೋಲ್ಟ್ಸ್‌ ತಂಡದಲ್ಲಿ ಆಡುವಾಗ ‘ಶ್ರೇಷ್ಠ ಬ್ಯಾಟ್ಸ್‌ಮನ್‌’ ಗೌರವ ಪಡೆದಿದ್ದರು. ಆದ್ದರಿಂದ 21 ವರ್ಷದವರಾಗಿದ್ದಾಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿತು. 20 ಸದಸ್ಯರ ಐಸಿಸಿ ವಿಶ್ವ ಇಲೆವೆನ್‌ ಮತ್ತು ಐಸಿಸಿ ಸೂಪರ್‌ ಸೀರಿಸ್‌ನಲ್ಲಿದ್ದ ಶ್ರೇಷ್ಠ ಆಟಗಾರರ ತಂಡದಲ್ಲಿ ಸ್ಥಾನ ಗಳಿಸಿದ್ದರು. 2007ರಲ್ಲಿ ಬ್ರೆಂಡನ್‌ ಮೆಕ್ಲಮ್ ಕಟ್ಟಿದ್ದ ಸುಂದರ ಇನಿಂಗ್ಸ್‌ ಅನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅದು ಬಾಂಗ್ಲಾದೇಶ ಎದುರು ನಡೆದ ಪಂದ್ಯ. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. 28 ಎಸೆತಗಳಲ್ಲಿ 80 ರನ್‌ ಸಿಡಿಸಿದ್ದರು. ಆಗ ಅವರ ಸ್ಟ್ರೈಕ್‌ ರೇಟ್‌ 285.71! ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಪಟ್ಟಿಯಲ್ಲೂ ಮೆಕ್ಲಮ್‌ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಕೊನೆಯ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌ (100 ಸಿಕ್ಸರ್‌ಗಳು) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ಮೆಕ್ಲಮ್‌ ಖಾತೆಯಲ್ಲಿ ಈಗ ಒಟ್ಟು 107 ಸಿಕ್ಸರ್‌ಗಳಿವೆ. 2010ರಲ್ಲಿ ಬಾಂಗ್ಲಾದೇಶ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಬ್ರೆಂಡನ್‌ 185 ರನ್‌ ಕಲೆ ಹಾಕಿದ್ದರು. ಟೆಸ್ಟ್‌ನಲ್ಲಿ ವೈಯಕ್ತಿಕ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್‌ನ ಮೊದಲ ವಿಕೆಟ್‌ ಕೀಪರ್ ಎನ್ನುವ ದಾಖಲೆ ಹೊಂದಿದ್ದಾರೆ. ಆರನೇ ವಿಕೆಟ್ ಜೊತೆಯಾಟದಲ್ಲಿ ಮಾರ್ಟಿನ್ ಗುಪ್ಟಿಲ್ ಜೊತೆ ಸೇರಿ 339 ರನ್‌ ಗಳಿಸಿದ್ದಂತೂ ಸ್ಮರಣೀಯ ಇನಿಂಗ್ಸ್. ಆ ಇನಿಂಗ್ಸ್‌ನಲ್ಲಿ ಮೆಕ್ಲಮ್‌–ಗುಪ್ಟಿಲ್ ಜೋಡಿ ಇನ್ನು 12 ರನ್ ಗಳಿಸಿದ್ದರೆ ವಿಶ್ವ ದಾಖಲೆಯಾಗಿರುತ್ತಿತ್ತು. ಕಾಡಿದ ನಿರಾಸೆ ಹದಿನಾಲ್ಕು ವರ್ಷ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಮೆಕ್ಲಮ್‌ ತಮ್ಮ ತಂಡ ಹಲವಾರು ಸರಣಿ ಗೆಲ್ಲಲು ಕಾರಣರಾಗಿದ್ದಾರೆ. ಮೆಕ್ಲಮ್‌ ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಪಡೆದ ನಂತರದ ವರ್ಷದಲ್ಲಿಯೇ ವಿಶ್ವಕಪ್‌ ನಡೆಯಿತು. ಒಂದೇ ವರ್ಷದಲ್ಲಿ ಆಯ್ಕೆದಾರರ ಗಮನ ಸೆಳೆದಿದ್ದ ‘ಬಾಜ್‌’ ವಿಶ್ವಕಪ್‌ ತಂಡದಲ್ಲೂ ಸ್ಥಾನ ಗಿಟ್ಟಿಸಿದ್ದರು. ವಿಶ್ವಕಪ್‌ನಲ್ಲಿ ‘ಬ್ಲ್ಯಾಕ್‌ ಕ್ಯಾಪ್‌’ ತಂಡ 1975ರಿಂದ ಆಡುತ್ತಿದೆ. ಮೆಕ್ಲಮ್‌ 2003, 2007, 2011 ಮತ್ತು 2015ರ ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ ಪ್ರಶಸ್ತಿಯ ಆಸೆ ಮಾತ್ರ ಈಡೇರಲಿಲ್ಲ. ಹೋದ ವರ್ಷ ತಮ್ಮ ದೇಶದಲ್ಲಿಯೇ ನಡೆದ ವಿಶ್ವಕಪ್‌ನಲ್ಲಿ ಕಿವೀಸ್ ಪ್ರಶಸ್ತಿ ಸನಿಹ ಬಂದು ಮುಗ್ಗರಿಸಿತು. ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು ಏಳು ರನ್‌ಗಳಿಂದ ಸೋತಿತ್ತು. ಕಿವೀಸ್‌ ತಂಡ 12 ಬಾರಿ ವಿಶ್ವಕಪ್‌ ಆಡಿದೆ. ಅದರಲ್ಲಿ ಆರು ಸಲ ಸೆಮಿಫೈನಲ್‌ ತಲುಪಿ ಸೋತಿದೆ. ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ನಿರಾಸೆಯ ಹೊಳೆಯಲ್ಲಿ ಬ್ರೆಂಡನ್‌ ಆಸೆಯೂ ಕರಗಿ ಹೋಯಿತು. ಕ್ರಿಕೆಟ್‌ ಕುಟುಂಬ ಮೆಕ್ಲಮ್‌ ಅವರದು ಕ್ರಿಕೆಟ್ ಕುಟುಂಬ. ಇವರ ತಂದೆ ಸ್ಟುವರ್ಟ್‌ ಮೆಕ್ಲಮ್‌ ಪ್ರಥಮ ದರ್ಜೆ ಕ್ರಿಕೆಟಿಗ. ದೇಶಿ ಟೂರ್ನಿಗಳಲ್ಲಿ ಒಟಾಗೊ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು 75 ಪಂದ್ಯಗಳನ್ನಾಡಿದ್ದಾರೆ. ಬ್ರೆಂಡನ್ ಸಹೋದರ ನಥಾನ್‌ ಮೆಕ್ಲಮ್ ಕೂಡ ಕಿವೀಸ್ ತಂಡದಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. 2009ರಲ್ಲಿ ಚೊಚ್ಚಲ ಏಕದಿನ ಪಂದ್ಯವಾಡಿದ್ದ ಬಲಗೈ ವೇಗಿ ನಥಾನ್‌ ಈಗ ತಂಡದ ಪ್ರಮುಖ ಆಟಗಾರ. 87 ಏಕದಿನ ಮತ್ತು 61 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ವಿಶೇಷವೆಂದರೆ ಬ್ರೆಂಡನ್‌ ಮತ್ತು ಸ್ಟುವರ್ಟ್‌ ಇಬ್ಬರೂ ವಿಕೆಟ್‌ ಕೀಪರ್‌ಗಳು! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.