ಭಾರತದಲ್ಲಿ ಚುಟುಕು ಕ್ರಿಕೆಟ್‌ ರಂಗು... ಮುಂದಿನ ತಿಂಗಳು ಭಾರತದಲ್ಲಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಸಂಭ್ರಮ. ಹೊಡಿ ಬಡಿ ಚುಟುಕು ಕ್ರಿಕೆಟ್ ಆಟದ ಮಜವನ್ನು ಸವಿಯಲು ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದಾರೆ. ಟೂರ್ನಿಯ ಆಗು ಹೋಗುಗಳು, ನಿರೀಕ್ಷೆಗಳ ಕುರಿತು ಗಿರೀಶ ದೊಡ್ಡಮನಿ ಬರೆದಿದ್ದಾರೆ. ವಿಶ್ವ ಟ್ವೆಂಟಿ–20 ಕ್ರಿಕೆಟ್‌ನ ‘ಚುಟುಕು’ ಇತಿಹಾಸದಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ತಂಡ, ಟ್ರೋಫಿ ಗೆದ್ದ ಮೊದಲ ಆತಿಥೇಯ ಬಳಗ, ಎರಡು ಬಾರಿ ಪ್ರಶಸ್ತಿ ಜಯಿಸಿದ ನಾಯಕ... ಹೌದು; ಮಾರ್ಚ್ 8ರಿಂದ ಆರಂಭವಾಗಲಿರುವ ಆರನೇ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಈ ಮೂರು ದಾಖಲೆಗಳನ್ನು ಬರೆಯುವ ಅವಕಾಶ ಭಾರತಕ್ಕೆ ಇದೆ. 2007ರಿಂದ ಇಲ್ಲಿಯವರೆಗೆ ಐದು ಟೂರ್ನಿಗಳು ನಡೆದಿವೆ. ಈ ಟೂರ್ನಿಗಳನ್ನು ಆಯೋಜಿಸಿದ ಆತಿಥೇಯ ರಾಷ್ಟ್ರಗಳು ಟ್ರೋಫಿ ಗೆದ್ದಿಲ್ಲ. ಅಲ್ಲದೇ ಎಲ್ಲ ಟೂರ್ನಿಗಳಲ್ಲಿಯೂ ಬೇರೆ ಬೇರೆ ದೇಶಗಳು ಪ್ರಶಸ್ತಿ ಗೆದ್ದು ಸಂಭ್ರಮಿಸಿವೆ. ಇಂತಹ ಅನಿರೀಕ್ಷಿತ ಫಲಿತಾಂಶಗಳು ಹೊರಹೊಮ್ಮುವ ಕಾರಣದಿಂದಲೇ ಚುಟುಕು ಕ್ರಿಕೆಟ್ ಮಾದರಿಯು ಅಲ್ಪಾವಧಿಯಲ್ಲಿಯೇ ಅಪಾರ ಅಭಿಮಾನಿಗಳನ್ನು ಆಕರ್ಷಿಸಿದೆ. ಅಲ್ಲದೇ ಟಿ.ವಿ. ವಾಹಿನಿಗಳು, ಜಾಹೀರಾತುದಾರರು ಮತ್ತು ಮಾರುಕಟ್ಟೆಗೂ ಆಪ್ತವಾಗಿದೆ. ಮೂರು ತಾಸುಗಳ ಪಂದ್ಯದಲ್ಲಿ ಹಲವು ಏರಿಳಿತಗಳು, ಕೊನೆಯ ಎಸೆತದವರೆಗೂ ಉಳಿಯುವ ರೋಚಕತೆಯಿಂದಾಗಿಯೇ ಕೋಟಿ ಕೋಟಿ ಹೃದಯಗಳಿಗೆ ಲಗ್ಗೆ ಹಾಕಿರುವ ಮಾದರಿ ಇದು. ಇಂಗ್ಲೆಂಡ್‌ನ ದೇಶಿ ಕ್ರಿಕೆಟ್‌ನಲ್ಲಿ 2003ರಲ್ಲಿ ಜನಿಸಿದ ಚುಟುಕು ಕ್ರಿಕೆಟ್ ಕಳೆದ 13 ವರ್ಷಗಳಲ್ಲಿ ಬೆಳೆದ ಪರಿ ಅಮೋಘವಾದದ್ದು. ಟೆಸ್ಟ್ ಕ್ರಿಕೆಟ್ ಪ್ರಿಯರು ಟ್ವೆಂಟಿ–20ಯಲ್ಲಿ ಕ್ರಿಕೆಟ್‌ನ ‘ಅಸಲಿ’ ಮಜಾ ಎಲ್ಲ ಎಂದು ಟೀಕಿಸಿದರೂ ಯುವ ಹೃದಯಗಳನ್ನು ಕದಿಯುವಲ್ಲಿ ಇದು ಯಶಸ್ವಿಯಾಗಿದೆ. ಅದರಲ್ಲೂ ಕ್ರಿಕೆಟ್‌ ಆರಾಧಕರೇ ಇರುವ ಭಾರತ ಚುಟುಕು ಕ್ರಿಕೆಟ್‌ನ ‘ಶಕ್ತಿಕೇಂದ್ರ’ ಆಗಿ ರೂಪುಗೊಂಡಿದೆ. 2007ರಲ್ಲಿ ಮೊದಲ ಬಾರಿಗೆ ನಡೆದಿದ್ದ ಚುಟುಕು ವಿಶ್ವ ಟೂರ್ನಿಯಲ್ಲಿ ಗೆದ್ದ ಭಾರತದಲ್ಲಿ ಐಪಿಎಲ್‌ ಅಬ್ಬರ ಸೇರಿತ್ತು. ಇದೀಗ ಮೊದಲ ಬಾರಿಗೆ ವಿಶ್ವ ಟ್ವೆಂಟಿ–20 ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಟೂರ್ನಿಯ ಎರಡನೇ ಗುಂಪಿನಲ್ಲಿ ಭಾರತ ಪೈಪೋಟಿ ನಡೆಸಲಿದೆ. ಇದು ಕಠಿಣ ಗುಂಪು. ಏಕೆಂದರೆ, ಇಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳಿವೆ. ಸತತ ಆರನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಮಹೇಂದ್ರಸಿಂಗ್ ದೋನಿಗೆ ಎರಡನೇ ಟ್ರೋಫಿಗೆ ಮುತ್ತಿಕ್ಕುವ ಸುವರ್ಣಾವಕಾಶವೂ ಇದೆ. ಅನುಭವಿ ಯುವರಾಜ್ ಸಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜ, ಆರ್. ಅಶ್ವಿನ್, ಆಶಿಶ್ ನೆಹ್ರಾ ಅವಂತಹ ಘಟಾನುಘಟಿ ಆಟಗಾರರು ಇರುವುದು ಆತಿಥೇಯರ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ, ಹಾದಿ ಸುಗಮವಲ್ಲ. ಉಪಖಂಡದ ವಾತಾವರಣದಲ್ಲಿ ಆಡಲು ಕಳೆದ ಒಂದು ವರ್ಷದಿಂದ ಎಲ್ಲ ತಂಡಗಳೂ ಸಿದ್ದತೆ ಮಾಡಿಕೊಂಡಿವೆ. ಬಹುತೇಕ ಎಲ್ಲ ತಂಡಗಳಲ್ಲಿಯೂ (ಪಾಕ್ ಹೊರತುಪಡಿಸಿ) ಐಪಿಎಲ್‌ ಆಡಿದ ಅನುಭವಿಗಳೂ ಇದ್ದಾರೆ. ಆಸ್ಟ್ರೇಲಿಯಾಕ್ಕೆ ಒಲಿಯುವುದೇ ಕಿರೀಟ ಏಕದಿನ ಕ್ರಿಕೆಟ್‌ನಲ್ಲಿ ಐದು ಸಲ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡಕ್ಕೆ ಟಿ20 ಮಾದರಿಯಲ್ಲಿ ಇನ್ನೂ ಪ್ರಶಸ್ತಿ ಒಲಿದಿಲ್ಲ. 2010ರಲ್ಲಿ ವಿಂಡೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ, ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಯುವ ನಾಯಕ ಸ್ಟೀವನ್ ಸ್ಮಿತ್ ನೇತೃತ್ವದಲ್ಲಿ ಚಾಂಪಿಯನ್ ಆಗಿ ಮರಳಲು ತಂಡವು ಪಣ ತೊಟ್ಟಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯರನ್ ಫಿಂಚ್, ಜೇಮ್ಸ್ ಫಾಕ್ನರ್, ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಅನುಭವಿ ಆಲ್‌ರೌಂಡರ್ ಶೇನ್ ವಾಟ್ಸನ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಅದೇ ರೀತಿ ಇಂಗ್ಲೆಂಡ್ ಕೂಡ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಒಂದೂ ವಿಶ್ವಕಪ್ ಗೆದ್ದಿಲ್ಲ. ಆದರೆ, ಟಿ20ಯಲ್ಲಿ ಆ ಸಾಧನೆ ಮಾಡಿದೆ. ನಾಯಕ ಇಯಾನ್ ಮಾರ್ಗನ್, ಜೋಸ್ ಬಟ್ಲರ್, ಜೋ ರೂಟ್, ಜೇಸನ್ ರಾಯ್, ಮೋಯಿನ್ ಅಲಿ, ಲಿಯಾಮ್ ಡಾಸನ್, ಕ್ರಿಸ್ ಜಾರ್ಡನ್ ಅವರ ಆಟ ರಂಗೇರುವುದೇ ಕಾದು ನೋಡಬೇಕು. ಫಾಫ್ ಡು ಪ್ಲೆಸಿಸ್‌ ನಾಯಕತ್ವದ ದಕ್ಷಿಣ ಆಫ್ರಿಕಾ ಕೂಡ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಅನುಭವಿ ಆಟಗಾರರು ಹಾಶಿಮ್ ಆಮ್ಲಾ, ಕ್ವಿಂಟನ್ ಡಿ ಕಾಕ್, ಎ.ಬಿ. ಡಿವಿಲಿಯರ್ಸ್, ಇಮ್ರಾನ್ ತಾಹೀರ್, ಜೆ.ಪಿ. ಡುಮಿನಿ, ಡೇಲ್ ಸ್ಟೇಯ್ನ್‌ ಅವರ ಆಟವು ತಂಡಕ್ಕೆ ಆಸರೆಯಾಗುವುದು ಖಚಿತ. ‘ಕಪ್ಪುಕುದುರೆ’ ನ್ಯೂಜಿಲೆಂಡ್ ಕೂಡ ದುರ್ಬಲವಲ್ಲ. ಏಕೆಂದರೆ ಅದರ ಬತ್ತಳಿಕೆಯಲ್ಲಿ ನಾಯಕ ಕೇನ್ ವಿಲಿಯಮ್ಸನ್‌, ಟ್ರೆಂಟ್ ಬೌಲ್ಟ್, ಮಾರ್ಟಿನ್ ಗುಪ್ಟಿಲ್, ರಾಸ್ ಟೇಲರ್, ಕೋರಿ ಆ್ಯಂಡರ್ಸನ್, ಟಿಮ್ ಸೌಥಿ, ನಾಥನ್ ಮೆಕ್ಲಮ್, ಲೂಕ್ ರಾಂಚಿ ಅವರಂತಹ ಪರಿಣಾಮಕಾರಿ ಅಸ್ತ್ರಗಳಿವೆ. ಹಲವು ವಿವಾದಗಳಿಂದ ಸುದ್ದಿ ಮಾಡಿರುವ ವೆಸ್ಟ್ ಇಂಡೀಸ್ ತಂಡವೂ ತಿರುಗೇಟು ನೀಡಿದರೆ ಅಚ್ಚರಿಪಡಬೇಕಿಲ್ಲ. ಒಂದು ಬಾರಿ ಚುಟುಕು ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿಂಡೀಸ್ ತಂಡವನ್ನು ಡರೆನ್ ಸಾಮಿ ಮುನ್ನಡೆಸುವರು. ಡ್ವೇನ್ ಬ್ರಾವೊ, ಕ್ರಿಸ್ ಗೇಲ್, ಆಂಡ್ರೆ ರಸೆಲ್, ಮರ್ಲಾನ್ ಸ್ಯಾಮುವೆಲ್ಸ್, ಜಾನ್ಸನ್ ಚಾರ್ಲ್ಸ್, ಲೆಂಡ್ಲ್ ಸಿಮನ್ಸ್ ಅವರಂತಹ ಪ್ರತಿಭಾವಂತರು ಸಂಘಟಿತ ಹೋರಾಟ ನಡೆಸಿದರೆ ಕೆರೆಬಿಯನ್ ನಾಡಿಗೆ ಪ್ರಶಸ್ತಿ ಒಲಿಯಬಹುದು. ಉಪಖಂಡದ ಮಿಂಚು ಈ ಬಾರಿಯ ಅಚ್ಚರಿಯ ಫಲಿತಾಂಶ ನೀಡಬಹುದಾದ ತಂಡಗಳಲ್ಲಿ ಮೊದಲ ಸ್ಥಾನವನ್ನು ಬಾಂಗ್ಲಾಗೆ ನೀಡಬಹುದು.ಇತ್ತೀಚಿನ ವರ್ಷಗಳಲ್ಲಿ ಬಲಾಢ್ಯ ತಂಡಗಳ ಎದುರು ದಿಟ್ಟ ಪ್ರದರ್ಶನ ನೀಡಿ ಗಮನ ಸೆಳೆದಿರುವ ತಂಡ ಇದು. ಮಷ್ರಫೆ ಮೊರ್ತಾಜಾ ನಾಯಕತ್ವದ ಬಳಗದಲ್ಲಿ ಶಕೀಬ್ ಅಲ್ ಹಸನ್, ಮೊಹಮ್ಮದ್ ಮಿಥುನ್, ಮುಸ್ತಫಿಜುರ್ ರೆಹಮಾನ್, ನಾಸೀರ್ ಹುಸೇನ್ ಸೌಮ್ಯ ಸರ್ಕಾರ್, ತಮೀಬ್ ಇಕ್ಬಾಲ್ ಅವರಂತಹ ಉತ್ತಮ ಆಟಗಾರರು ಇದ್ದಾರೆ. ಎ ಗುಂಪಿನಲ್ಲಿ ಆಡಲಿರುವ ಬಾಂಗ್ಲಾಗೆ ನೆದರ್‌ಲೆಂಡ್ಸ್, ಐರ್ಲೆಂಡ್ ಮತ್ತು ಒಮನ್ ಎದುರಾಳಿಯಾಗಲಿವೆ. ಭಾರತ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ತಂಡಗಳ ಎದುರಿನ ಏಕದಿನ, ಟೆಸ್ಟ್ ಸರಣಿಗಳಲ್ಲಿ ಬಾಂಗ್ಲಾ ಕಳೆದ ವರ್ಷ ಮಿಂಚಿತ್ತು. ಅದರ ಆತ್ಮವಿಶ್ವಾಸ ಹೆಚ್ಚಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.