ಅಜ್ಜನ ದಿಟ್ಟ ಹೆಜ್ಜೆ... ‘ಮಕ್ಕಳು ಕೋಟ್ಯಂತರ ರೂಪಾಯಿ ದುಡಿಯುತ್ತಿದ್ದಾರೆ. ಅವರೆಲ್ಲಾ ಅಮೆರಿಕ, ಇಂಗ್ಲೆಂಡ್‌ನಲ್ಲಿದ್ದಾರೆ. ಅಲ್ಲಿಗೆ ಬರುವಂತೆ ಒತ್ತಾಯಿಸುತ್ತಿರುತ್ತಾರೆ. ಆದರೆ, ಯಾರ ಹಂಗಿನಲ್ಲೂ ನಾನು ಬದುಕ ಬಾರದು. ನನ್ನ ಕಾಲಿನ ಮೇಲೆ ನಿಂತುಕೊಂಡು ಜೀವನ ಸಾಗಿಸಬೇಕು...’ ಹೀಗೆಂದ 93 ವರ್ಷ ವಯಸ್ಸಿನ ಆ ಜೀವದ ಮೊಗದಲ್ಲಿ ಏನೋ ಉತ್ಸಾಹ. ಸ್ವತಂತ್ರವಾಗಿ ಜೀವನ ನಡೆಸುತ್ತಿರುವ ಹೆಮ್ಮೆ. ಅಂದಹಾಗೆ, ಇವರ ಹೆಸರು ವಿ. ಶ್ರೀರಾಮುಲು. ಸುಮಾರು 35 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಆಂಧ್ರಪ್ರದೇಶದ ನಿವೃತ್ತ ಕಮಾಂಡರ್‌ ಈ ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿದ್ದಾರೆ. ಯಾರ ಸಹಾಯವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಂದ ಹಣ ಪಡೆಯದೆ ತಮಗೆ ಬರುತ್ತಿರುವ ಪಿಂಚಣಿ ದುಡ್ಡಿನಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಾ ಸ್ಫೂರ್ತಿಯ ಸೆಲೆಯಾಗಿದ್ದಾರೆ. ‘ಪುತ್ರ ಅಮೆರಿಕದಲ್ಲಿ ವೈದ್ಯ. ಪುತ್ರಿ ಇಂಗ್ಲೆಂಡ್‌ನಲ್ಲಿ ಸ್ತ್ರೀರೋಗ ತಜ್ಞೆ. ಇನ್ನೊಬ್ಬ ಪುತ್ರಿ ಬೆಂಗಳೂರಿನಲ್ಲಿ ಇದ್ದಾಳೆ. ನಾನು ಹಾಗೂ 87 ವರ್ಷ ವಯಸ್ಸಿನ ಪತ್ನಿ ವಿಶಾಖಪಟ್ಟಣದಲ್ಲಿ ವಾಸಿಸುತ್ತಿದ್ದೇವೆ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಒಬ್ಬಂಟಿಯಾಗಿ ದೇಶ ವಿದೇಶ ಸುತ್ತುತ್ತಲೇ ಇರುತ್ತೇನೆ’ ಎನ್ನುತ್ತಾರೆ ಶ್ರೀರಾಮುಲು. ಮೈಸೂರಿನಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್‌ ಚಾಂಪಿ ಯನ್‌ಷಿಪ್‌ನಲ್ಲಿ ಅವರು ಪಾಲ್ಗೊಂಡಿದ್ದರು. ಇವರು 5 ಕಿ.ಮೀ. ನಡಿಗೆಯಲ್ಲಿ ಚಿನ್ನದ ಪದಕ ಜಯಿ ಸಿದರು. ಈ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು ಮೂರೂವರೆ ಸಾವಿರ ಅಥ್ಲೀಟ್‌ಗಳು ಭಾಗವಹಿಸಿದ್ದರು. ಇವರಲ್ಲಿ ಅತಿ ಹಿರಿಯರು ಶ್ರೀರಾಮುಲು. ‘ರಾತ್ರಿ 9 ಗಂಟೆಗೆ ಮಲಗಿ ಬೆಳಿಗ್ಗೆ 4 ಗಂಟೆಗೆ ಏಳುತ್ತೇನೆ. 10 ಕಿ.ಮೀ.ಓಡುತ್ತೇನೆ. ಯೋಗ ಮಾಡುತ್ತೇನೆ. ನಿವಾಸದ ಸಮೀಪ ಇರುವ ಈಜುಗೊಳದಲ್ಲಿ ಸ್ವಲ್ಪ ಹೊತ್ತು ಈಜುತ್ತೇನೆ. ಒಂದೊತ್ತಿನ ಊಟ ಬಿಟ್ಟಿರಬಹುದು. ಆದರೆ, ವ್ಯಾಯಾಮವನ್ನು ಯಾವತ್ತೂ ತಪ್ಪಿಸಿಲ್ಲ. ಇದರಿಂದಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ. ಫ್ರಾನ್ಸ್‌ನ ಲಿಯೋನ್‌ನಲ್ಲಿ ಕಳೆದ ವರ್ಷ ನಡೆದ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ವಿಶಾಖಪಟ್ಟಣ ಮೂಲದ ಇವರು 10 ಕಿ.ಮೀ. ನಡಿಗೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ‘20 ಕಿ.ಮೀ. ನಡಿಗೆ ನನ್ನ ನೆಚ್ಚಿನ ಸ್ಪರ್ಧೆ. ಆದರೆ, ಕೆಲವೊಂದು ಕಠಿಣ ನಿಯಮಗಳಿಂದಾಗಿ ನಾನು ಆ ಚಾಂಪಿಯನ್‌ಷಿಪ್‌ನಲ್ಲಿ ಅನರ್ಹನಾದೆ. ಇಲ್ಲದಿದ್ದರೆ ಆ ವಿಭಾಗದಲ್ಲೂ ಮೊದಲ ಸ್ಥಾನ ಪಡೆಯುತ್ತಿದ್ದೆ’ ಎಂದರು. ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಇದುವರೆಗೆ 4 ಚಿನ್ನದ ಪದಕ ಹಾಗೂ ಏಷ್ಯನ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ 11 ಚಿನ್ನದ ಪದಕ ಗೆದ್ದಿದ್ದಾರೆ. ಪರ್ವತಾರೋಹಣದಲ್ಲೂ ಎತ್ತಿದ ಕೈ. ಆಫ್ರಿಕಾದಲ್ಲಿರುವ ಮೌಂಟ್‌ ಕಿಲಿಮಂಜರೊ ಪರ್ವತ ಏರಿದ್ದಾರೆ. 2011ರಲ್ಲಿ ಅಮೆರಿಕದ ಸ್ಯಾಂಟಿಯಾಗೊದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್‌ನ 20 ಕಿ.ಮೀ. ನಡಿಗೆ ಸ್ಪರ್ಧೆ ವೇಳೆ ಬಿದ್ದು ಮಂಡಿಗೆ ಗಾಯಮಾಡಿಕೊಂಡಿದ್ದರು. ‘ಇನ್ನುಮುಂದೆ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ಆಗ ವೈದ್ಯರು ನನಗೆ ಸಲಹೆ ನೀಡಿದ್ದರು. ಆದರೆ, ಅವರ ಸಲಹೆ ತಿರಸ್ಕರಿಸಿದೆ. ಸ್ವಲ್ಪ ದಿನ ವಿಶ್ರಾಂತಿ ಪಡೆದು ಮತ್ತೆ ಅಂಗಳಕ್ಕಿಳಿದೆ’ ಎಂದು ಅವರು ನುಡಿಯುತ್ತಾರೆ. 1944ರಲ್ಲಿ ರಾಯಲ್‌ ಇಂಡಿಯನ್‌ ನೇವಿಗೆ ಸೇರಿದ್ದ ಇವರು 1979ರಲ್ಲಿ ನಿವೃತ್ತರಾಗಿದ್ದರು. ನಾವಿಗೇಷನ್‌ ಹಾಗೂ ರಡಾರ್‌ ವಿಭಾಗದಲ್ಲಿ ಪರಿಣತಿ ಪಡೆದಿದ್ದಾರೆ. ನೌಕಾಪಡೆಯಲ್ಲಿದ್ದಾಗ ಹಾಯಿದೋಣಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.