ಕಿರಿಯರ ಸಾಮರ್ಥ್ಯ, ಹಿರಿಯರ ಸವಾಲು... ಒಂದು ತಿಂಗಳು ನಡೆದ ಪ್ರೊ ಕಬಡ್ಡಿ ಲೀಗ್ ಮೂರನೇ ಆವೃತ್ತಿ ಹೊಸ ಪ್ರತಿಭೆಗಳ ಸಾಮರ್ಥ್ಯಕ್ಕೆ ವೇದಿಕೆಯಾಯಿತು. ಅನುಭವಿ ಆಟಗಾರರ ಸತ್ವಪರೀಕ್ಷೆಗೂ ಸಾಕ್ಷಿಯಾಯಿತು. ಸೋಲು, ಗೆಲುವಿನ ಮಾತು ಅದೇನೇ ಇರಲಿ. ಮತ್ತೆ ದೇಶಿ ಆಟದ ಸೊಬಗು ಸವಿಯಲು ಅವಕಾಶ ಸಿಕ್ಕಿದ್ದು ಕಬಡ್ಡಿ ಪ್ರೇಮಿಗಳಿಗೆ ಮುದ ನೀಡಿತು. ಇದರ ಬಗ್ಗೆ ಪ್ರಮೋದ್‌ ಜಿ.ಕೆ. ವಿಶ್ಲೇಷಿಸಿದ್ದಾರೆ. ‘ಕಬಡ್ಡಿ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆ. ಬೇಗನೆ ಗಾಯದ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ 30 ವರ್ಷದ ತನಕ ಆಡುವುದೇ ದೊಡ್ಡ ಸವಾಲು ಎಂದು ತುಂಬಾ ಜನ ನನಗೆ ಹೇಳಿದ್ದಾರೆ. ಆದರೆ ನನ್ನ ಪ್ರಕಾರ ವಯಸ್ಸು ಎಂಬುದು ಸಂಖ್ಯೆಯಷ್ಟೇ. ಅದು ಮನಸ್ಸಿನ ಶಕ್ತಿಗೆ ಸಂಬಂಧಿಸಿದ ವಿಚಾರ...’ ಪ್ರೊ ಕಬಡ್ಡಿ ಲೀಗ್‌ನ ಮೂರನೇ ಆವೃತ್ತಿಯಲ್ಲಿ ತಮ್ಮ ತಂಡವನ್ನು ಪ್ರಶಸ್ತಿ ಸುತ್ತಿನವರೆಗೆ ಮುನ್ನಡೆಸಿದ್ದ ಪಟ್ನಾ ಪೈರೇಟ್ಸ್ ತಂಡದ ನಾಯಕ ಮನಪ್ರೀತ್‌ ಸಿಂಗ್‌ ಹೇಳಿದ ಮಾತುಗಳಿವು. ಎರಡು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಸೆಮಿಫೈನಲ್‌ ಪಂದ್ಯದ ಬಳಿಕ ಅವರು ಈ ಅನಿಸಿಕೆ ಹಂಚಿಕೊಂಡಿದ್ದರು. ಅಂದ ಹಾಗೆ ಪಟ್ನಾ ತಂಡದ ಪ್ರಮುಖ ರೈಡರ್ ಆಗಿರುವ ಮನಪ್ರೀತ್‌ ವಯಸ್ಸು 36! ಮಣ್ಣಿನಂಕಣಕ್ಕೆ ಸೀಮಿತವಾಗಿದ್ದ ದೇಶಿ ಕ್ರೀಡೆ ಕಬಡ್ಡಿ ಈಗ ಹೈಟೆಕ್‌ ರೂಪ ಪಡೆದುಕೊಂಡಿದೆ. ಇದರ ವಿಸ್ತಾರ ಮ್ಯಾಟ್‌ವರೆಗೂ ಹಬ್ಬಿದೆ. ಆದ್ದರಿಂದ ಗಾಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದೆಲ್ಲವನ್ನೂ ಮನಪ್ರೀತ್‌ ಒಪ್ಪಿಕೊಳ್ಳುತ್ತಾರೆ. ಆದರೆ ಕಬಡ್ಡಿ ಆಡಲು ಇಂತಿಷ್ಟೇ ವಯಸ್ಸು ಆಗಿರಬೇಕು. ಇಷ್ಟು ವಯಸ್ಸಿನ ಬಳಿಕ ಈ ಕ್ರೀಡೆಯನ್ನು ಆಡಬಾರದು ಎಂದು ಎಲ್ಲೂ ನಿಯಮವಿಲ್ಲ ಎನ್ನುವುದು ಅವರ ವಾದ. ಇದಕ್ಕೆ ಪೂರಕವಾದ ಒಂದು ಉದಾಹರಣೆಯನ್ನೂ ಮನಪ್ರೀತ್‌ ಕೊಡುತ್ತಾರೆ. ‘ನಮ್ಮ ತಂಡದಲ್ಲಿರುವ ಸಂದೀಪ್‌ ನರ್ವಾಲ್‌, ಸುರೇಶ್‌ ಕುಮಾರ್‌, ಮನದೀಪ್‌ ಕುಮಾರ್‌, ರಾಮ ಕುಮಾರ್‌ ಶಹಾ, ರಾಜೇಶ್‌ ಮಂಡಲ್ ಎಲ್ಲರೂ 30 ವರ್ಷ ಮೇಲ್ವಟ್ಟವರು. ಇವರ ಜೊತೆಗೆ 20 ವರ್ಷ ವಯಸ್ಸಿನ ಗುರ್ವಿಂದರ್‌ ಸಿಂಗ್ ಮತ್ತು ದೀಪಕ್‌ ನರ್ವಾಲ್‌ ಕೂಡ ಇದ್ದಾರೆ. ಮೂವತ್ತು ವರ್ಷಕ್ಕೂ ಹೆಚ್ಚು ವಯಸ್ಸಾದವರೇ ನಮ್ಮ ತಂಡದಲ್ಲಿ ಹೆಚ್ಚಿದ್ದಾರೆ. ನಮ್ಮ ತಂಡ ಮೊದಲ ಎರಡು ವರ್ಷ ಸೆಮಿಫೈನಲ್‌ ತಲುಪಿತ್ತು. ಈ ವರ್ಷ ಪ್ರಶಸ್ತಿ ಸುತ್ತಿನವರೆಗೆ ಉತ್ತಮ ಸಾಮರ್ಥ್ಯ ತೋರಿದೆಯಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ. ಮನಪ್ರೀತ್ ಅವರ ಮಾತಿನಲ್ಲೂ ಸತ್ಯವಿದೆ. ಕಬಡ್ಡಿ ಆಡಲು ಕೇವಲ ದೈಹಿಕ ಬಲವಿದ್ದರಷ್ಟೇ ಸಾಲುವುದಿಲ್ಲ. ಉತ್ತಮ ತಂತ್ರಗಾರಿಕೆ, ಪಾದರಸದಂತ ವೇಗ, ಅಂಕಣದ ತುಂಬೆಲ್ಲಾ ಚಾಕಚಕ್ಯತೆಯಿಂದ ಸರಾಗವಾಗಿ ಓಡಾಡಬಲ್ಲ ಕೌಶಲ ಇರಬೇಕಾಗುತ್ತದೆ. ಜತೆಗೆ ಎದುರಾಳಿ ಆಟಗಾರರ ಹಿಡಿತದಿಂದ ತಪ್ಪಿಸಿಕೊಳ್ಳಲು ದೈಹಿಕ ಬಲಕ್ಕಿಂತ ಸೂಕ್ತ ಯೋಜನೆ ಅಗತ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ‘ಹಿರಿಯರ’ ಆಟ ಈ ಬಾರಿ ಕಬಡ್ಡಿ ಲೀಗ್‌ನಲ್ಲಿ ಗಮನ ಸೆಳೆಯಿತು. ಭಾರತ ತಂಡದಲ್ಲಿ ಆಡಿದವರು, ವಿಶ್ವಕಪ್‌ ಮತ್ತು ಏಷ್ಯನ್‌ ಕ್ರೀಡಾಕೂಟದಂಥ ಮಹತ್ವದ ಟೂರ್ನಿಗಳಲ್ಲಿ ಆಡಿದ ಅನುಭವಿಗಳು ಕಬಡ್ಡಿ ಲೀಗ್‌ನಲ್ಲೂ ಇದ್ದರು. ಲೀಗ್‌ನ ಪ್ರತಿ ತಂಡದಲ್ಲಿಯೂ 30 ವರ್ಷ ಮೇಲ್ಪಟ್ಟ ಆಟಗಾರರಿದ್ದರು. ಬಂಗಾಳ ವಾರಿಯರ್ಸ್ ತಂಡದ ನಾಯಕ ಡಿಫೆಂಡರ್‌ ರೈಟ್‌ ಕಾರ್ನರ್‌ ನಿಲೇಶ್ ಶಿಂಧೆ (36 ವರ್ಷ), ನಿತಿನ್ ಲಕ್ಷ್ಮಣ್‌ ಮೋರೆ (34 ವರ್ಷ), ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡದ ಬಲಿಷ್ಠ ರೈಡರ್‌ಗಳಾದ ಜಸ್ವೀರ್ ಸಿಂಗ್ (31 ವರ್ಷ), ಸಂಜಯ್ ಶಾಸ್ತ್ರಿ (32 ವರ್ಷ) ಹೀಗೆ ಅನೇಕ ಅನುಭವಿಗಳೇ ಲೀಗ್‌ನ ಆಕರ್ಷಣೆಯೆನಿಸಿದ್ದರು. ಇಲ್ಲಿ ಇನ್ನೊಂದು ಅಂಶವನ್ನು ಉದಾಹರಣೆಯಾಗಿ ನೀಡಬೇಕು. ಮುಂಬಾ ತಂಡದ ತ್ರಿವಳಿ ಶಕ್ತಿಗಳಾದ ನಾಯಕ ಅನೂಪ್‌ ಕುಮಾರ್‌, ರಾಕೇಶ್‌ ಕುಮಾರ್‌, ವಿಶಾಲ್‌ ಪ್ರಭಾಕರ್ ಮಾನೆ ಅವರೆಲ್ಲರೂ 30 ವರ್ಷ ಮೇಲ್ಟಟ್ಟವರೇ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ 35 ವರ್ಷದ ಜೀವಾ ಕುಮಾರ್‌ ಕೂಡ ಮಂಬಾ ತಂಡದ ಶಕ್ತಿ. ‘ಹಿರಿಯರೇ’ ಪ್ರಮುಖರಾಗಿರುವ ಈ ತಂಡ ಆಡಿದ ಎಲ್ಲಾ ಟೂರ್ನಿಗಳಲ್ಲಿ ನಾಕೌಟ್ ಹಂತ ತಲುಪಿದೆ. 2015ರಲ್ಲಿ ಚಾಂಪಿಯನ್‌ ಆಗಿತ್ತು. ಅಂಕಣದ ಎಡ ಮತ್ತು ಬಲ ಕವರ್‌ಗಳಲ್ಲಿ ಸೊಗಸಾಗಿ ಆಡುವ ಜೀವಾ ಡಿಫೆನ್ಸ್ ವಿಭಾಗದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಲೀಗ್‌ನಲ್ಲಿ ಅವರು 37 ಪಂದ್ಯಗಳನ್ನು (ಮೂರನೇ ಆವೃತ್ತಿಯ ಸೆಮಿಫೈನಲ್‌ ಪಂದ್ಯದ ಅಂತ್ಯಕ್ಕೆ) ಆಡಿದ್ದು ಒಟ್ಟು 84 ಪಾಯಿಂಟ್ಸ್‌ ಕಲೆ ಹಾಕಿದ್ದಾರೆ. ಡಿಫೆನ್ಸ್‌ ಮೂಲಕವೇ 83 ಪಾಯಿಂಟ್ಸ್‌ ಗಳಿಸಿದ್ದು ಅವರ ಚುರುಕಾದ ಹಿಡಿತದ ಸಾಮರ್ಥ್ಯಕ್ಕೆ ಸಾಕ್ಷಿ. ‘ಕಬಡ್ಡಿ ಆಡಲು ಉತ್ತಮ ದೈಹಿಕ ಶಕ್ತಿ ಬೇಕು ನಿಜ. ಆದರೆ ಇದೊಂದೇ ಇದ್ದರೆ ಸಾಲದು. ಈಗಿನ ಕ್ರೀಡೆಗೆ ಶಕ್ತಿಗಿಂತ ಹೆಚ್ಚಾಗಿ ಯುಕ್ತಿಯೂ ಅಗತ್ಯವಾಗುತ್ತದೆ. ಉಪಾಯದಿಂದ ಆಡುವ ಕೌಶಲ ಕಲಿತರೆ ಮಾತ್ರ ಈಗಿನ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಉಳಿಯಲು ಸಾಧ್ಯ. ಸತತ ಅಭ್ಯಾಸವೂ ಮುಖ್ಯ’ ಎಂದು ಜೀವಾ ಹೇಳುತ್ತಾರೆ. ಕಿರಿಯರ ಸವಾಲು: ಈ ಬಾರಿಯ ಕಬಡ್ಡಿ ಲೀಗ್‌ ಯುವ ಆಟಗಾರರ ಪ್ರತಿಭೆಗೂ ವೇದಿಕೆ ಒದಗಿಸಿಕೊಟ್ಟಿತು. ಕೆಲ ಅನುಭವಿ ಆಟಗಾರರನ್ನು ಹೊರತು ಪಡಿಸಿದರೆ ‘ಯುವಪಡೆ’ ವಿಜೃಂಭಿಸಿದ್ದೇ ಹೆಚ್ಚು. ಪ್ರತಿ ತಂಡದಿಂದಲೂ ಹೊಸ ಆಟಗಾರರು ಬೆಳಕಿಗೆ ಬಂದರು. 22 ವರ್ಷದ ಮೋಹಿತ್‌ ಚಿಲಾರ, ಪಟ್ನಾ ಪೈರೇಟ್ಸ್ ತಂಡದ ಪ್ರದೀಪ್‌ ನರ್ವಾಲ್‌, 21 ವರ್ಷದ ನಿತಿನ್‌ ತೋಮಾರ್‌, ಶ್ರೀಕಾಂತ್‌ ಜಾಧವ್, ಕೃಷ್ಣ ಮದಾನೆ, ಬಲ್ಬೀರ್‌ ಸಿಂಗ್‌, ಬೆಂಗಳೂರು ಬುಲ್ಸ್ ತಂಡದ ನಾಯಕ ಸುರ್ಜಿತ್‌ ನರ್ವಾಲ್‌, ದಬಾಂಗ್ ಡೆಲ್ಲಿ ತಂಡದ ಕಾಶಿಲಿಂಗ ಅಡಕೆ, ಹೋದ ವರ್ಷ ತೆಲುಗು ಟೈಟನ್ಸ್ ತಂಡದಲ್ಲಿದ್ದ 18 ವರ್ಷದ ಸಂದೀಪ್‌ ಕಂಡೋಲಾ ಹೀಗೆ ಹಲವಾರು ಆಟಗಾರರಿಗೆ ತಮ್ಮ ಪ್ರತಿಭೆ ತೋರಿಸಲು ಲೀಗ್ ವೇದಿಕೆಯಾಯಿತು. ಅದೇ ರೀತಿ ದೀಪಕ್‌ ನಿವಾಸ್‌ ಹೂಡಾ, 22 ವರ್ಷದ ರೋಹಿತ್‌ ಕುಮಾರ್ ಚೌಧರಿ ಲೀಗ್‌ನುದ್ದಕ್ಕೂ ಆಕರ್ಷಣೆ ಎನಿಸಿದ್ದರು. ಮುಂಬಾ ತಂಡದಲ್ಲಿ ಮಿಂಚುತ್ತಿರುವ ಕರ್ನಾಟಕದ ರಿಶಾಂಕ್‌ ದೇವಾಡಿಗ ಈಗ ಹಲವಾರು ಕಬಡ್ಡಿ ಪ್ರೇಮಿಗಳ ಕಣ್ಮಣಿ. ಎರಡು ವರ್ಷಗಳ ಅವಧಿಯಲ್ಲಿ ಈ ಲೀಗ್ ಮಾಡಿರುವ ಮೋಡಿ ಇದಕ್ಕೆ ಕಾರಣ. ಹೊಸ ಆಟಗಾರರು ಕೌಶಲಕ್ಕೆ ಮಹತ್ವ ಕೊಡುತ್ತಿರುವ ಕಾರಣ ಸಹಜವಾಗಿ ಅವರು ಬೇಗನೆ ಗಮನ ಸೆಳೆಯುತ್ತಿದ್ದಾರೆ. ಲೀಗ್‌ನ ಪಂದ್ಯಗಳು ವಾಹಿನಿಯಲ್ಲಿ ನೇರಪ್ರಸಾರವಾಗುವ ಕಾರಣ ಆಟಗಾರರ ಅಭ್ಯಾಸದ ವಿಧಾನಗಳಲ್ಲಿಯೂ ಅನೇಕ ಬದಲಾವಣೆಗಳಾಗಿವೆ. ಎದುರಾಳಿ ತಂಡದ ಶಕ್ತಿ, ದೌರ್ಬಲ್ಯ, ಆ ತಂಡದ ಜೊತೆ ಆಡಿದ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಅಧ್ಯಯನ ಕೂಡ ನಡೆಯುತ್ತಿದೆ. ಆದ್ದರಿಂದ ಬಹುತೇಕ ತಂಡ ಕ್ರಿಕೆಟ್‌ನಲ್ಲಿರುವಂತೆ ವಿಡಿಯೊ ವಿಶ್ಲೇಷಕರನ್ನು ನೇಮಿಸಿಕೊಂಡಿವೆ. ಕೋಚ್‌ಗಳು ಕೂಡ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ತಮ್ಮ ತಂಡದ ಹಿಂದಿನ ಪಂದ್ಯಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿ ತಪ್ಪು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಾಗಿ ಹೊಸದಾಗಿ ಬರುತ್ತಿರುವ ಆಟಗಾರರು ಬೇಗನೆ ಕೌಶಲ ಕಲಿಯಲು ಒತ್ತು ಕೊಡುತ್ತಿದ್ದಾರೆ. ಕಾಶಿಲಿಂಗ ಅಡಕೆ ಮತ್ತು ಸುರ್ಜಿತ್‌ ನರ್ವಾಲ್‌ ಎರಡನೇ ಆವೃತ್ತಿಯಲ್ಲಿ ಒಂದೇ ತಂಡದಲ್ಲಿದ್ದರು. ಇವರಿಬ್ಬರ ನಡುವೆ ಪಾಯಿಂಟ್ಸ್ ಗಳಿಸಲು ಭಾರಿ ಪೈಪೋಟಿ ಏರ್ಪಟ್ಟಿತ್ತು. ಆಟಗಾರರ ನಡುವಣ ಪೈಪೋಟಿಯಿಂದ ತಂಡದ ಪ್ರದರ್ಶನ ಮಟ್ಟವೂ ಉತ್ತಮವಾಗಿತ್ತು. ಅಂತಿಮವಾಗಿ ಇವರಿಬ್ಬರೂ ತಲಾ 113 ಪಾಯಿಂಟ್ಸ್‌ ಕಲೆ ಹಾಕಿದ್ದರು. ಈ ಬಾರಿಯ ಆವೃತ್ತಿಯಲ್ಲಿ 21 ವರ್ಷದ ರಿಶಾಂಕ್‌ ಮತ್ತು 18 ವರ್ಷದ ಪುಣೇರಿ ತಂಡದ ಪ್ರದೀಪ್‌ ಅನುಭವಿ ಆಟಗಾರರೇ ಅಚ್ಚರಿ ಪಡುವಂತೆ ಪ್ರದರ್ಶನ ನೀಡಿದ್ದಾರೆ. ತವರಿನಲ್ಲಿ ಪಂದ್ಯವಾಡಿದರೆ ರಿಶಾಂಕ್‌ ಆಟಕ್ಕೆ ಅಭಿಮಾನಿಗಳು ಹೆಚ್ಚೆದ್ದು ಕುಣಿಯುತ್ತಿದ್ದರು. 2015ರ ಫೈನಲ್‌ ಪಂದ್ಯ ಇದಕ್ಕೊಂದು ಉದಾಹರಣೆ. ಬೆಂಗಳೂರು ಬುಲ್ಸ್ ಎದುರಿನ ಆ ಪಂದ್ಯದಲ್ಲಿ ರಿಶಾಂಕ್‌ ಗಳಿಸಿದ್ದು ಐದು ಪಾಯಿಂಟ್ಸ್‌ ಮಾತ್ರ. ಆದರೆ ಕರ್ನಾಟಕದ ಈ ಆಟಗಾರ ರೈಡಿಂಗ್ ಹೋದರೆ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುತ್ತಿತ್ತು. ಈ ರೀತಿಯ ಪ್ರಚಾರ ಮತ್ತು ಖ್ಯಾತಿಯನ್ನು ಮೂರನೇ ಆವೃತ್ತಿಯಲ್ಲಿ ಪ್ರದೀಪ್‌ ಪಡೆದುಕೊಂಡಿದ್ದಾರೆ. ಪುಣೇರಿ ತಂಡ ಫೈನಲ್ ತಲುಪಲು ಕಾರಣವಾಗಿದ್ದೇ ಪ್ರದೀಪ್‌. ಇವರ ಆಟಕ್ಕೆ ತಂಡದ ನಾಯಕ ಮನಪ್ರೀತ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಲೀಗ್ ಮತ್ತು ನಾಕೌಟ್‌ ಹಂತದಲ್ಲಿ ನಾವು ಸತತ ಗೆಲುವು ಪಡೆಯಲು ಪ್ರದೀಪ್‌ ಕಾರಣ. ವಯಸ್ಸಿನಲ್ಲಿ ಚಿಕ್ಕವನಾದರೂ ರೈಡಿಂಗ್‌ನಲ್ಲಿ ತೋರುವ ಚುರುಕತನ ಅಚ್ಚರಿ ಮೂಡಿಸುತ್ತದೆ. ಈಗಿನ ಆಟವನ್ನು ಮುಂದುವರಿಸಿದರೆ ರಾಷ್ಟ್ರೀಯ ತಂಡದ ನಾಯಕನಾಗುವುದು ಕಷ್ಟವೇನಲ್ಲ’ ಎಂದು ಅವರು ಹೇಳುತ್ತಾರೆ. ಹೀಗೆ ಅನುಭವಿಗಳ ಮತ್ತು ಯುವ ಆಟಗಾರರ ಸೊಗಸಾದ ಆಟಕ್ಕೆ ಒಂದು ತಿಂಗಳು ನಡೆದ ‘ಕಬಡ್ಡಿ ಹಬ್ಬ’ ವೇದಿಕೆಯಾಯಿತು. ಇದೇ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಆಸೆ ಹೊತ್ತವರಿಗೆ ಲೀಗ್ ಸಂಜೀವಿನಿಯೂ ಆಯಿತು. ಎರಡು ವರ್ಷಗಳಲ್ಲಿ ನಡೆದ ಮೂರು ಆವೃತ್ತಿಗಳಿಗೆ ಲಭಿಸಿದ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ‘ಕಬಡ್ಡಿ ಊರಿನ’ ಮತ್ತೊಂದು ಪ್ರತಿಭೆ.... ಕಬಡ್ಡಿ ಲೀಗ್‌ನಲ್ಲಿ ಮಿಂಚುತ್ತಿರುವ ಹಲವು ಪ್ರತಿಭೆಗಳಲ್ಲಿ ಪಟ್ನಾ ಪೈರೇಟ್ಸ್‌ ತಂಡದ ಪ್ರದೀಪ್‌ ನರ್ವಾಲ್‌ ಕೂಡ ಒಬ್ಬರು. ಹರಿಯಾಣದ ಸೋನೆಪತ್‌ ದೇಶಿ ಕ್ರೀಡೆಯ ಪ್ರತಿಭಾವಂತರ ಕಣಜ ಎನಿಸಿದೆ. ಸುರ್ಜಿತ್‌ ನರ್ವಾಲ್ ಮತ್ತು ರವೀಂದರ್‌ ಪಾಹಲ್‌ ಕೂಡ ಇದೇ ಊರಿನಿಂದ ಬಂದವರು. ಇವರು ಮೊದಲ ಎರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಸರು ಮಾಡಿದ್ದಾರೆ. ‘ಸೋನೆಪತ್‌ನಲ್ಲಿ ಕಬಡ್ಡಿಗೆ ಉತ್ತಮ ಬೆಲೆಯಿದೆ. ಈ ಕ್ರೀಡೆಯನ್ನು ಊರಿನಲ್ಲಿ ಹೆಚ್ಚು ಜನ ಆಡುತ್ತಿದ್ದ ಕಾರಣ ನಾನೂ ಸಹಜವಾಗಿ ಆ ಕಡೆ ವಾಲಿದೆ. ಈಗ ದೇಶಿ ಕ್ರೀಡೆಗೆ ಇಷ್ಟೊಂದು ಮಹತ್ವ ಸಿಗುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಕಬಡ್ಡಿ ಬಗ್ಗೆ ಆಸಕ್ತಿ ಹೊಂದಿರುವವರು ಯಾವ ಅತಂಕವಿಲ್ಲದೇ ಈ ಕ್ರೀಡೆಯಲ್ಲಿ ಮುಂದುವರಿಯಬಹುದು’ ಎಂದು ಪ್ರದೀಪ್‌ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಕಬಡ್ಡಿ ಪಂದ್ಯಗಳು ಆರಂಭವಾದರೆ ನಮ್ಮೂರಿನಲ್ಲಿ ಹಬ್ಬದ ಸಂಭ್ರಮ. ಸೋನೆಪತ್‌ನ ಐದಾರು ಆಟಗಾರರು ಲೀಗ್‌ನಲ್ಲಿ ಆಡುತ್ತಿರುವ ಕಾರಣ ಪ್ರತಿಯೊಬ್ಬರಲ್ಲೂ ಕುತೂಹಲ. ಹೊಸ ಲೀಗ್ ಆಟಗಾರರ ಬದುಕು ಬದಲಿಸಿದೆ. ಕ್ರೀಡೆಯನ್ನೂ ನಂಬಿಕೊಂಡು ಬದುಕಬಹುದು ಎನ್ನುವ ಭರವಸೆ ಕೊಟ್ಟಿದೆ’ ಎಂದೂ ಪ್ರದೀಪ್‌ ಹೇಳುತ್ತಾರೆ. ಪ್ರದೀಪ್‌ ನರ್ವಾಲ್ ಸಾಧನೆ * ಪಂದ್ಯ-21 * ಒಟ್ಟು ಪಾಯಿಂಟ್ಸ್‌-130 * ರೈಡಿಂಗ್‌ ಪಾಯಿಂಟ್ಸ್‌-125 * ಡಿಫೆನ್ಸ್‌ ಪಾಯಿಂಟ್ಸ್‌-05 * ಒಟ್ಟು ಟ್ಯಾಕಲ್‌-15 * ಟ್ಯಾಕಲ್‌ ಮೂಲಕ ತಂದ ಪಾಯಿಂಟ್ಸ್‌-05 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.