ಶಿಷ್ಯನ ಸಾಧನೆ ಕುರಿತು ಗುರುವಿನ ಸಂಶೋಧನೆ ಮಹಾನ್‌ ಸಾಧಕರು ಅಥವಾ ಮಹಾತ್ಮರ ಸಾಧನೆ ಬಗ್ಗೆ ಪಿ.ಎಚ್‌ಡಿ ಮಾಡುವುದು ಸಾಮಾನ್ಯ. ಆದರೆ ಹುಬ್ಬಳ್ಳಿ ನೆಹರೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಇರ್ಷಾದ್‌ ಅಹಮ್ಮದ್‌ ಮಕ್ಕೂಬಾಯಿ ಪಿ.ಎಚ್‌ಡಿ ಗಳಿಸಲು ಅಭ್ಯಾಸ ನಡೆಸಿರುವುದು ಶಿಷ್ಯನ ಸಾಧನೆಯನ್ನು! ಹುಬ್ಬಳ್ಳಿಯ ಗಾಂಧಿವಾಡ ಕೊಳಗೇರಿ ಪ್ರದೇಶದಲ್ಲಿ ಬೆಳೆದು ಕಿರಿಯ ವಯೋಮಾನದವರ ಫುಟ್‌ಬಾಲ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಜಿಗಿದ ಚಂದ್ರಶೇಖರ ರಾವ್‌ ಚಿಂತಾ ಬಗ್ಗೆ ಅಧ್ಯಯನ ಮಾಡಿದ ಮಕ್ಕೂಬಾಯಿ ಅವರಿಗೆ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯ ಮಾರ್ಚ್‌ ಒಂದರಂದು ಪಿ.ಎಚ್‌ಡಿ ಪ್ರದಾನ ಮಾಡಿದೆ. ಅವರು ಸಿದ್ಧಪಡಿಸಿದ ಮಹಾಪ್ರಬಂಧದ ಶೀರ್ಷಿಕೆ: ದಿ ಯಂಗ್‌ ಲೆಜೆಂಡ್‌ ಇಂಟರ್‌ನ್ಯಾಷನಲ್‌ ಫುಟ್‌ಬಾಲರ್‌ ಮಿಸ್ಟರ್‌ ಚಂದ್ರಶೇಖರ ರಾವ್‌ ಚಿಂತಾ: ಎ ಕೇಸ್ ಸ್ಟಡಿ. ಮಕ್ಕೂಬಾಯಿ ಮೂಲತಃ ಫುಟ್‌ಬಾಲ್ ಆಟಗಾರ; ಉತ್ತಮ ಸ್ಟ್ರೈಕರ್‌. ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಅವರು ಧಾರವಾಡ ಜಿಲ್ಲಾ ತಂಡದಲ್ಲೂ ಆಡಿದ್ದಾರೆ. ಸ್ಥಳೀಯ ಮಾಶಲ್‌ ಕ್ಲಬ್‌ನ ಫುಟ್‌ಬಾಲ್‌ ತಂಡದ ನಾಯಕರಾಗಿದ್ದರು. ಎಂ.ಪಿಎಡ್‌ ಮಾಡಿದ ನಂತರ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ಡಿಪ್ಲೊಮಾ ಪೂರೈಸಿದರು. ದಾವಣಗೆರೆ ಜಿಲ್ಲಾ ಕ್ರೀಡಾ ಇಲಾಖೆಯಲ್ಲಿ ಫುಟ್‌ಬಾಲ್ ಕೋಚ್ ಆಗಿದ್ದ ಅವರು ರಾಜೀನಾಮೆ ನೀಡಿ ಹುಬ್ಬಳ್ಳಿಯ ನೆಹರೂ ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥರಾದರು. ಎಳವೆಯಿಂದ ಮೂಡಿದ ಬಾಂಧವ್ಯ: ಸಣ್ಣ ವಯಸ್ಸಿನಿಂದಲೇ ಚಿಂತಾ ಅವರಿಗೆ ಫುಟ್‌ಬಾಲ್ ಪಾಠ ಹೇಳಿಕೊಟ್ಟ ಮಕ್ಕೂಬಾಯಿ ಪಿಯುಸಿ ವರೆಗೆ ತರಬೇತಿ ನೀಡಿದರು. ನಂತರ ಕರ್ನಾಟಕ ಕ್ರೀಡಾ ಅಕಾಡೆಮಿ (ಸ್ಯಾಕ್‌) ಕೋಚ್‌ ದಾದಾಪೀರ್ ಅವರ ಬಳಿ ಕಳುಹಿಸಿದರು. ಉತ್ತಮ ಡಿಫೆಂಡರ್ ಆಗಿರುವ ಚಿಂತಾ 16,17 ಮತ್ತು 19 ವರ್ಷದೊಳಗಿನವರ ತಂಡಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ದೇಶದ ಪ್ರತಿಷ್ಠಿತ ಫುಟ್‌ಬಾಲ್ ಸಂಸ್ಥೆಯಾದ ಟಾಟಾ ಫುಟ್‌ಬಾಲ್ ಅಕಾಡೆಮಿ, ಗೋವಾದ ಸ್ಪೋರ್ಟಿಂಗ್‌ ಕ್ಲಬ್‌, ಸಲ್ಗಾಂವ್ಕರ್‌ ಗೋವಾ, ವಿವಾ ಕೇರಳ, ಕೋಲ್ಕತ್ತಾದ ಪ್ರಯಾಗ್‌ ಯುನೈಟೆಡ್‌ ತಂಡಗಳಲ್ಲಿ ಬೇಡಿಕೆಯ ಆಟಗಾರನಾಗಿ ಗಮನ ಸೆಳೆದಿದ್ದಾರೆ. ‘ಸ್ಲಮ್‌ ಪ್ರದೇಶದಲ್ಲಿ ಹುಟ್ಟಿ ಬೆಳೆದ ಚಿಂತಾ ಫುಟ್‌ಬಾಲ್‌ನಿಂದಾಗಿ ಇಂದು ವರ್ಷಕ್ಕೆ ಲಕ್ಷಗಟ್ಟಲೆ ಹಣ ಗಳಿಸುತ್ತಿದ್ದಾರೆ. ಇದು ಯುವ ಆಟಗಾರರಿಗೆ ಮಾದರಿ, ಪ್ರೇರಣೆಯಾಗಬಲ್ಲ ಬೆಳವಣಿಗೆ. ಆದ್ದರಿಂದ ಅವರ ಕುರಿತು ಪಿ.ಎಚ್‌ಡಿ ಮಾಡಲು ನಿರ್ಧರಿಸಿದೆ. ಕಲಬುರ್ಗಿಯ ಬಿ.ಎನ್‌.ಎಂಜಿನಿಯರಿಂಗ್‌ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಂ.ಡಿ.ಸಯೀದುದ್ದೀನ್‌ ಮಾರ್ಗದರ್ಶನ ಮಾಡಿದರು’ ಎಂದು ಮಕ್ಕೂಬಾಯಿ ವಿವರಿಸುತ್ತಾರೆ. ‘ಭಾರತದಲ್ಲಿ ಫುಟ್‌ಬಾಲ್ ಕುಂಟುತ್ತಾ ಸಾಗುತ್ತಿದೆ. ಆಟಗಾರರಿಗೆ ಪ್ರೋತ್ಸಾಹ ಕೊಡುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದರೂ ನೈತಿಕ ಬಲ ತುಂಬಲು ನೆರವಾಗಬಹುದು. ಇಂಥ ಪ್ರಕ್ರಿಯೆಯ ಭಾಗವಾಗಿ ನಾನು ಪಿ.ಎಚ್‌ಡಿ ಮಾಡಿದ್ದೇನೆ’ ಎನ್ನುತ್ತಾರೆ ಮಕ್ಕೂಬಾಯಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.