ಸಾನಿಯಾ–ಹಿಂಗಿಸ್‌ ಅಸಾಮಾನ್ಯ ಸಾಧನೆ ವಿಶ್ವದ ಅಗ್ರಮಾನ್ಯ ಟೆನಿಸ್‌ ಜೋಡಿಯ ಸತತ 41 ಪಂದ್ಯಗಳ ಗೆಲುವಿನ ದಾಖಲೆ ಚರಿತ್ರಾರ್ಹ. ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಸೋಲಿಲ್ಲದೇ ಸತತ 41 ಪಂದ್ಯಗಳನ್ನು ಗೆದ್ದುಕೊಂಡು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ 28 ಪಂದ್ಯಗಳನ್ನು ಜಯಿಸಿದ್ದ ಜಿಜಿ ಫರ್ನಾಂಡಿಸ್‌ ಮತ್ತು ಬೆಲಾರಸ್‌ನ ನತಾಶಾ ಜ್ವೆರೆವಾ ಅವರ ಹೆಸರಿನಲ್ಲಿದ್ದ 22 ವರ್ಷಗಳ ಹಳೆಯ ದಾಖಲೆಯನ್ನು ಈ ಜೋಡಿ ಅಳಿಸಿ ಹಾಕಿದೆ. ಜನವರಿಯಲ್ಲಿ ನಡೆದ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸಾನಿಯಾ–ಹಿಂಗಿಸ್‌ 4–6, 6–3, 10–8ರಲ್ಲಿ ರುಮೇನಿಯಾದ ರಲುಕಾ ಒಲಾರು ಮತ್ತು ಕಜಕಸ್ತಾನದ ಯುರೋಸ್ಲಾವಾ ಶ್ವೆಡೋವಾ ಅವರನ್ನು ಮಣಿಸುವ ಮೂಲಕ ಮಹತ್ವದ ಮೈಲುಗಲ್ಲನ್ನು ದಾಟಿತು. ಹೋದ ವರ್ಷ ಆಗಸ್ಟ್‌ನಲ್ಲಿ ನಡೆದ ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ನಿರಾಸೆ ಕಂಡಿದ್ದ ಈ ಜೋಡಿ ಬಳಿಕ ಸೋಲು ಕಂಡಿರಲಿಲ್ಲ. ರಷ್ಯಾ ಜೋಡಿಯಿಂದ ತಡೆ: ಶುಕ್ರವಾರ ಕತಾರ್‌ ಓಪನ್‌ ಕ್ವಾರ್ಟರ್‌ಫೈನಲ್‌ನಲ್ಲಿ 42ನೇ ಪಂದ್ಯ ಆಡಿದ ಸಾನಿಯಾ–ಹಿಂಗಿಸ್‌ ಅವರ ಗೆಲುವಿನ ಓಟಕ್ಕೆ ತಡೆ ಬಿದ್ದಿತು. ರಷ್ಯಾದ ಎಲೆನಾ ವೆಸ್ನಿನಾ ಮತ್ತು ಡರಿಯಾ ಕಸಾತ್‌ಕಿನಾ ಅಗ್ರಶ್ರೇಯಾಂಕದ ಸಾನಿಯಾ ಜೋಡಿಗೆ 2–6, 6–4, 10–5ರಲ್ಲಿ ಸೋಲುಣಿಸಿತು. ಡಬಲ್ಸ್‌ನಲ್ಲಿ ಸಾನಿಯಾ–ಹಿಂಗಿಸ್‌: 2013ರಲ್ಲಿ ಸಿಂಗಲ್ಸ್‌ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ ನಂತರದ ದಿನಗಳಲ್ಲಿ ಡಬಲ್ಸ್‌ಗೆ ಪ್ರಾಮುಖ್ಯತೆ ಕೊಟ್ಟು ಅಭ್ಯಾಸ ನಡೆಸಿದರು. ಮಾರ್ಟಿನಾ ಹಿಂಗಿಸ್‌ ಅವರೊಂದಿಗೆ ಮಹಿಳೆಯರ ಡಬಲ್ಸ್‌ ಆಡಲು ಪ್ರಾರಂಭಿಸಿದ್ದೇ ಅವರ ವೃತ್ತಿ ಜೀವನದ ದಿಕ್ಕು ಬದಲಾಯಿತು. ಈ ಜೋಡಿ ಇಲ್ಲಿಯವರೆಗೂ ಒಟ್ಟು 13 ಪ್ರಶಸ್ತಿಗಳನ್ನು ಜಯಿಸಿದೆ. ಇದರಲ್ಲಿ ಮೂರು ಗ್ರ್ಯಾಂಡ್‌ಸ್ಲಾಮ್‌ಗಳು ಸೇರಿವೆ. 2016ರಲ್ಲಿಯೇ ಸಾನಿಯಾ–ಹಿಂಗಿಸ್‌ ನಾಲ್ಕು ಪ್ರಶಸ್ತಿ ಜಯಿಸಿದ್ದಾರೆ. 2016ರಲ್ಲಿ ಬ್ರಿಸ್ಬೇನ್‌ , ಸಿಡ್ನಿ ಓಪನ್‌, ಆಸ್ಟ್ರೇಲಿಯಾ ಓಪನ್‌ ಹಾಗೂ ಸೇಂಟ್‌ ಪೀಟರ್ಸ್‌ಬರ್ಗ್‌ ಮಹಿಳೆಯರ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇದೇ ವರ್ಷ ಸಾನಿಯಾ ತಮ್ಮ ಕ್ರೀಡಾ ಸಾಧನೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ‘2015 ನನ್ನ ವೃತ್ತಿಜೀವನದ ಮಹತ್ವದ ಘಟ್ಟ. ಈ ಋತುವಿನಲ್ಲಿ ಗೆದ್ದ ಪ್ರಶಸ್ತಿಗಳು ಸ್ಮರಣೀಯ. ಮಾರ್ಟಿನಾ ಅವರೊಂದಿಗೆ ಆಡಿದ ಪ್ರತೀ ಪಂದ್ಯ ನನಗೆ ಮಹತ್ವದ್ದಾಗಿದೆ. ಅವರೊಂದಿಗೆ ಜಯಿಸಿದ ಪ್ರಶಸ್ತಿಗಳು ನನ್ನ ಕ್ರೀಡಾ ಬದುಕನ್ನು ರೂಪಿಸಿದವು. 2016ರಲ್ಲಿಯೂ ಶುಭಾರಂಭ ಮಾಡಿದ್ದೇವೆ’ ಎಂದು ಸಾನಿಯಾ ಕತಾರ್‌ ಓಪನ್‌ ಟೂರ್ನಿಯ ಮೊದಲು ತಮ್ಮ ವೃತ್ತಿಬದುಕಿನ ತಿರುವುಗಳ ಬಗ್ಗೆ ಮಾತನಾಡಿದ್ದಾರೆ. ಈ ಜೋಡಿ 2015ರಲ್ಲಿ ವಿಂಬಲ್ಡನ್‌ ಓಪನ್‌, ಯುಎಸ್‌ ಓಪನ್‌, ಹಾಗೂ 2016ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಸತತ ಎರಡು ಗ್ರ್ಯಾಂಡ್‌ ಸ್ಲಾಮ್‌ ಗೆದ್ದ ಬಳಿಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಾನಿಯಾ ಜೋಡಿ ಮೊದಲ ಸ್ಥಾನಕ್ಕೆ ಏರಿತು. ಬಳಿಕ ಡಬಲ್ಸ್‌ನಲ್ಲಿ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ ನೀಡುವ (ಐಟಿಎಫ್‌) ‘ವಿಶ್ವ ಚಾಂಪಿಯನ್ಸ್‌’ ಗೌರವ ಪಡೆದುಕೊಂಡಿದೆ. ಅದೇನೇ ಇದ್ದರೂ 41 ಪಂದ್ಯಗಳ ಸತತ ಗೆಲುವಿನ ದಾಖಲೆ ಬಹು ವರ್ಷಗಳ ಕಾಲ ಹೊಳೆಯುತ್ತಿರುತ್ತವೆ. ಇದು ಭಾರತದ ಹೆಮ್ಮೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.