ಫಾರ್ಮುಲಾ ರೇಸ್‌ನಲ್ಲಿ ಮಿಂಚುವ ಹೆಬ್ಬಯಕೆ ಭಾರತದ ಮೋಟಾರು ವಲಯದ ಕಾರ್ಟಿಂಗ್‌ ವಿಭಾಗದಲ್ಲಿ ಸದ್ಯ ಹೊಳೆಯುತ್ತಿರುವ ತಾರೆ ಕುಶ್‌ ಮೈನಿ. ಎಳವೆಯಿಂದಲೇ ರೇಸ್‌ನತ್ತ ಆಕರ್ಷಣೆಗೆ ಒಳಗಾಗಿ ಅದರಲ್ಲಿ ದೊಡ್ಡ ಸಾಧನೆ ಮಾಡುವ ಹಂಬಲ ಹೊತ್ತಿದ್ದ ಕುಶ್‌ ಸದ್ಯ ವಿಶ್ವ ಮಟ್ಟದ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಈ ವರ್ಷ ಇಟಲಿಯಲ್ಲಿ ನಡೆದ ಟ್ರೊಫೆವೊ ಆ್ಯಂಡ್ರೆಯಿ ಮಾರ್ಗುಟ್ಟಿ ಕಪ್‌ ರೇಸ್‌ನಲ್ಲಿ ಅಮೋಘ ಚಾಲನಾ ಕೌಶಲ ಮೆರೆದಿದ್ದ ಬೆಂಗಳೂರಿನ ಯುವ ಸಾಹಸಿ ಅಲ್ಲಿ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಜತೆಗೆ ಕೆ.ಜೆಡ್‌ (ಶಿಫ್ಟರ್‌ ಕಾರ್ಟ್‌) ವಿಭಾಗದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಕೂಡಾ. ಪ್ರತಿಷ್ಠಿತ ವಿಶ್ವ ಸೀರಿಸ್‌ ಕಾರ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿಹಿಡಿದಿರುವ ಕುಶ್‌ ಅವರು ‘ಪ್ರಜಾವಾಣಿ’ ಜತೆ ತಾವು ಬೆಳೆದುಬಂದ ಹಾದಿ ಮತ್ತು ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನು ಇಲ್ಲಿ ನೀಡಲಾಗಿದೆ. * ರೇಸ್‌ ಪಯಣ ಶುರುವಾಗಿದ್ದು ಹೇಗೆ? ಅಪ್ಪ ಮೋಟಾರು ಕಾರು ಸಾಹಸಿಯಾಗಿದ್ದರಿಂದ ಅವರು ಅಭ್ಯಾಸಕ್ಕೆ ಹೋದಾಗಲೆಲ್ಲಾ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಶುರುವಿನಲ್ಲಿ ಹವ್ಯಾಸ ಮತ್ತು ಮನರಂಜನೆಗಾಗಿ ಕಾರ್ಟಿಂಗ್‌ ರೇಸ್‌ನಲ್ಲಿ ಭಾಗವಹಿಸುತ್ತಿದ್ದೆ. ಕ್ರಮೇಣ ಆಸಕ್ತಿ ಬೆಳೆಯಿತು. 10ನೇ ವಯಸ್ಸಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. * ಫುಟ್‌ಬಾಲ್‌ ಬಿಟ್ಟು ರೇಸ್‌ನತ್ತ ಆಕರ್ಷಿತನಾಗಲು ಕಾರಣ? ಹೌದು. ಎಳವೆಯಲ್ಲಿ ಫುಟ್‌ಬಾಲ್‌ ನನ್ನ ಅಚ್ಚುಮೆಚ್ಚಿನ ಆಟವಾಗಿತ್ತು. ಈ ಕ್ರೀಡೆಯಲ್ಲಿಯೇ ಎತ್ತರದ ಸಾಧನೆ ಮಾಡಬೇಕು ಎಂದುಕೊಂಡಿದ್ದು ನಿಜ. ಆದರೆ ಕ್ರಮೇಣ ಫುಟ್‌ಬಾಲ್‌ಗಿಂತ ರೇಸ್‌ ನನಗೆ ಆಪ್ತವೆನಿಸುತ್ತಾ ಹೋಯಿತು. ಹೀಗಾಗಿ ಇದರತ್ತ ವಾಲಿಕೊಂಡೆ. * ನಿಮ್ಮ ಅಣ್ಣ ಅರ್ಜುನ್‌ ಮೈನಿ ಕೂಡಾ ಫಾರ್ಮುಲಾ–3 ಸಾಹಸಿ. ಅವರಿಂದ ಏನಾದರೂ ಸಲಹೆ ಪಡೆಯುತ್ತೀರಾ? ಗೋ ಕಾರ್ಟಿಂಗ್‌ನಲ್ಲಿ ಆತನಿಗಿಂತ ನನಗೇ ಅನುಭವ ಹೆಚ್ಚು ಅಂತ ಹೇಳಿದರೆ ತಪ್ಪಾಗಲಾರದು. ಏಕೆಂದರೆ ಆತ ಫಾರ್ಮುಲಾ–3ರತ್ತ ಮಾತ್ರ ಚಿತ್ತ ಹರಿಸಿದ್ದಾನೆ. ಫಾರ್ಮುಲಾಗೂ ಕಾರ್ಟಿಂಗ್‌ ರೇಸ್‌ಗೂ ಸಾಕಷ್ಟು ವ್ಯತ್ಯಾಸ ಇದೆ. ಫಾರ್ಮುಲಾ ರೇಸ್‌ನಲ್ಲಿ ಭಾಗವಹಿಸುವ ಸಮಯ ಬಂದಾಗ ಖಂಡಿತವಾಗಿಯೂ ಆತನ ಸಲಹೆ ಮತ್ತು ನೆರವು ನನಗೆ ಬೇಕಾಗುತ್ತದೆ. * ಪೋಷಕರ ಬೆಂಬಲದ ಬಗ್ಗೆ ಹೇಳಿ? ತಂದೆ– ತಾಯಿ ಇಬ್ಬರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಅವರಿಂದ ಎಲ್ಲಾ ಬಗೆಯ ಸಹಕಾರವೂ ಸಿಗುತ್ತಿದೆ. ನನ್ನ ಸಾಧನೆ ಕಂಡು ಅವರೂ ಖುಷಿ ಪಡುತ್ತಾರೆ. * ಎಷ್ಟನೇ ತರಗತಿಯಲ್ಲಿ ಓದುತ್ತಿದ್ದೀರಾ? ಇಂಡಸ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಈ ವರ್ಷ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದೇನೆ. * ರೇಸ್‌ ಬಗೆಗಿನ ಪ್ರೀತಿ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿಲ್ಲವೇ? ವರ್ಷಪೂರ್ತಿ ಒಂದಿಲ್ಲೊಂದು ಚಾಂಪಿಯನ್‌ಷಿಪ್‌ ನಡೆಯುತ್ತಿರುತ್ತದೆ. ಹೀಗಾಗಿ ನಿತ್ಯ ಶಾಲೆಗೆ ಹೋಗಲು ಆಗುವುದಿಲ್ಲ. ಹಾಗಂತ ವಿದ್ಯಾಭ್ಯಾಸವನ್ನು ಕಡೆಗಣಿಸಿಲ್ಲ. ಇವುಗಳೆಲ್ಲದರ ನಡುವೆಯೂ ಶಾಲೆಗೆ ಹಾಜರಾಗುತ್ತಿರುತ್ತೇನೆ. ವೈಯಕ್ತಿಕವಾಗಿ ಶಿಕ್ಷಕರನ್ನು ನೇಮಿಸಿಕೊಂಡಿರುವುದರಿಂದ ಅವರು ಮನೆಗೆ ಬಂದು ಪಾಠ ಹೇಳಿಕೊಡುತ್ತಾರೆ. ಈ ವಿಷಯದಲ್ಲಿ ನನ್ನ ಶಾಲೆಯಿಂದ ಸಿಕ್ಕ ಸಹಕಾರವನ್ನೂ ಮರೆಯುವಂತಿಲ್ಲ. * ನಿಮಗೆ ಸವಾಲೆನಿಸಿದ ಚಾಂಪಿಯನ್‌ಷಿಪ್‌ ಯಾವುದು? ಈವರೆಗೆ ಭಾಗವಹಿಸಿದ್ದ ಎಲ್ಲಾ ಚಾಂಪಿಯನ್‌ಷಿಪ್‌ಗಳೂ ಸವಾಲಿನದ್ದೇ ಆಗಿವೆ. ಯುರೋಪಿಯನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ವಿಶ್ವದ ಪರಿಣತ ಚಾಲಕರು ಭಾಗವಹಿಸುತ್ತಾರೆ. ಹೀಗಾಗಿ ಅಲ್ಲಿ ಪೈಪೋಟಿ ತುಂಬಾ ಕಠಿಣವಾಗಿರುತ್ತದೆ. ಇದರ ನಡುವೆಯೂ ಈ ಚಾಂಪಿಯನ್‌ಷಿಪ್‌ಗಳಲ್ಲಿ ಅಗ್ರ ಹತ್ತರೊಳಗೆ ಸ್ಪರ್ಧೆ ಕೊನೆಗೊಳಿಸಿದ ತೃಪ್ತಿ ಇದೆ. * ಇಟಲಿಯಲ್ಲಿ ಸಂಭವಿಸಿದ ಅವಘಡದ ಬಗ್ಗೆ ಹೇಳಿ? ಹೋದ ತಿಂಗಳು ಇಟಲಿಯ ಟ್ರೊಫೆವೊ ಇಂಡಸ್ಟ್ರಿಯ ಟ್ರ್ಯಾಕ್‌ನಲ್ಲಿ ಸ್ಪರ್ಧೆ ಆಯೋಜನೆಯಾಗಿತ್ತು. 16ರಿಂದ 40 ವರ್ಷದೊಳಗಿನ ವಿಭಾಗದ ಆ ಸ್ಪರ್ಧೆಯಲ್ಲಿ ಒಟ್ಟು 17 ಮಂದಿ ಭಾಗವಹಿಸಿದ್ದರು. ನನಗಿಂತಲೂ ಹೆಚ್ಚು ಅನುಭವಿಗಳಾಗಿದ್ದ ಕೆಲವು ಚಾಲಕರು ತುಂಬಾ ವೇಗವಾಗಿ ಕಾರ್ಟ್‌ ಚಲಾಯಿಸುತ್ತಿದ್ದರು. ಮೊದಲ ಲ್ಯಾಪ್‌ನಲ್ಲಿ ನಾನು ಕೂಡಾ ತುಂಬಾ ವೇಗವಾಗಿ ಕಾರ್ಟ್‌ ಓಡಿಸುತ್ತಿದ್ದೆ. ಈ ವೇಳೆ ತಕ್ಷಣವೇ ಮತ್ತೊಬ್ಬ ಸ್ಪರ್ಧಿ ನನ್ನ ಮುಂದೆ ಬಂದ. ಆತನ ಕಾರ್ಟ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕೂಡಲೇ ಬ್ರೇಕ್‌ ಹಾಕಿದೆ. ನಿಯಂತ್ರಣ ತಪ್ಪಿದ ಕಾರ್ಟ್‌ ಟ್ರ್ಯಾಕ್‌ನ ಪಕ್ಕದಲ್ಲಿದ್ದ ತಡೆಗೋಡೆಗೆ ಅಪ್ಪಳಿಸಿತು. ಗೋಡೆಗೆ ಬಡಿದ ರಭಸಕ್ಕೆ ನನ್ನ ಎಡಗೈನ ಭುಜದ ಮೂಳೆ ಮುರಿಯಿತು. ತಕ್ಷಣ ಚಿಕಿತ್ಸೆ ನೀಡಲಾಯಿತು. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ಜನವರಿ ವೇಳೆಗೆ ಸಂಪೂರ್ಣವಾಗಿ ಗುಣಮುಖನಾಗುವ ವಿಶ್ವಾಸ ಇದೆ. * ರೇಸ್‌ ಜೀವಕ್ಕೆ ಕುತ್ತು ತರುವಂತ ಕ್ರೀಡೆ ಅಂತ ಗೊತ್ತಾದ ಮೇಲೂ ಇದರಿಂದ ದೂರ ಇರಬೇಕು ಅನಿಸಲಿಲ್ಲವೇ? ನನ್ನೊಳಗೆ ಯಾವತ್ತೂ ಅಂತ ಆಲೋಚನೆ ಬಂದಿಲ್ಲ. ಸಾಧನೆಯ ಹಾದಿ ಯಲ್ಲಿ ಏಳು ಬೀಳು ಇದ್ದಿದ್ದೆ. ರೇಸ್‌ ಅನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಹೀಗಾಗಿ ಎಂತಹ ಅವಘಡವಾದರೂ ಅಂಜುವುದಿಲ್ಲ. ಬದಲಾಗಿ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತೇನೆ. * ನಿಮಗೆ ಪ್ರೇರಣೆ ಯಾರು? ಎರಾಗ್ಮಿನ್‌ ಮತ್ತು ಸೆಬಾಸ್ಟಿಯನ್‌ ವೆಟೆಲ್‌ ನನ್ನ ನೆಚ್ಚಿನ ಫಾರ್ಮುಲಾ ಚಾಲಕರು. ಅವರನ್ನು ಆದರ್ಶವಾಗಿಟ್ಟು ಕೊಂಡು ಬೆಳೆಯುತ್ತಿದ್ದೇನೆ. * ಭಾರತದಲ್ಲಿ ಮೋಟಾರು ಸ್ಪೋರ್ಟ್ಸ್‌ ಬೆಳವಣಿಗೆ ಹೇಗಿದೆ? ಆರಂಭದ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಮಾಧ್ಯಮಗಳಲ್ಲಿಯೂ ಮೋಟಾರು ರೇಸ್‌ ಚಾಂಪಿಯನ್‌ಷಿಪ್‌ಗಳಿಗೆ ಉತ್ತಮ ಪ್ರಚಾರ ಸಿಗುತ್ತಿದೆ. * ಯಾವ ರಾಷ್ಟ್ರಗಳ ಸ್ಪರ್ಧಿಗಳು ಬಲಾಢ್ಯರು ಅಂತ ನಿಮಗನ್ನಿಸುತ್ತದೆ? ಎಲ್ಲಾ ಮಾದರಿಯ ರೇಸ್‌ಗಳಲ್ಲೂ ಇಂಗ್ಲೆಂಡ್‌ ಮತ್ತು ಯುರೋಪ್‌ ಸ್ಪರ್ಧಿಗಳು ಪ್ರಾಬಲ್ಯ ಹೊಂದಿದ್ದಾರೆ. ಆ ದೇಶಗಳಲ್ಲಿ ಸ್ಪರ್ಧಿಗಳಿಗೆ ಬೇಕಾದ ಎಲ್ಲಾ ಬಗೆಯ ಮೂಲಭೂತ ಸೌಕರ್ಯಗಳಿವೆ. ಈ ವಿಚಾರದಲ್ಲಿ ನಾವು ತುಂಬಾ ಹಿಂದೆ ಬಿದ್ದಿದ್ದೇವೆ. * ಎಲ್ಲಿ ತರಬೇತಿ ನಡೆಸುತ್ತೀರಿ? ಭಾರತದಲ್ಲಿ ಗುಣಮಟ್ಟದ ಟ್ರ್ಯಾಕ್‌ಗಳು ಇಲ್ಲ. ಹೀಗಾಗಿ ನಾನು ಮತ್ತು ಅಣ್ಣ ಅರ್ಜುನ್‌ ನಮ್ಮ ಕೋಚ್‌ ಅಡ್ವಾಣಿ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್‌ ಮತ್ತು ಯುರೋಪ್‌ನಲ್ಲಿ ತರಬೇತಿ ಪಡೆಯುತ್ತೇವೆ. ಇದರಿಂದ ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡಂತೆಯೂ ಆಗುತ್ತದೆ. * ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ? ಸಮಯ ಸಿಕ್ಕಾಗಲೆಲ್ಲಾ ಸಾಕಷ್ಟು ಕಾಲ ಫುಟ್‌ಬಾಲ್‌ ಆಡುತ್ತೇನೆ. ಇದರ ಜತೆಗೆ ರೇಸ್‌ಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ವೀಕ್ಷಿಸುತ್ತೇನೆ. * ಮುಂದಿನ ಗುರಿ? ಗೋಕಾರ್ಟ್‌ನಲ್ಲಿ ಇದುವರೆಗಿನ ನನ್ನ ಸಾಧನೆ ತೃಪ್ತಿದಾಯಕವಾಗಿದೆ. ಮುಂದೆ ಫಾರ್ಮುಲಾ ರೇಸ್‌ನಲ್ಲಿ ಮಿಂಚಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದೇನೆ. ಅದೇ ನನ್ನ ಜೀವನದ ಮುಖ್ಯ ಗುರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.