ಟ್ರ್ಯಾಕ್‌ನಲ್ಲಿ ಭರವಸೆಯ ಹೆಜ್ಜೆ ವಿಜಯ ಕುಮಾರಿ ‘ಕರ್ನಾಟಕದ ಎರಡನೇ ಪೂವಮ್ಮ ನೀನು. ಚೆನ್ನಾಗಿ ಓಡು’ ಎಂದು ಬೆನ್ನುತಟ್ಟಿ ಹೇಳಿದ ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ ಅವರ ಮಾತುಗಳನ್ನು ನೆನಪಿಸಿಕೊಂಡು ಕಣ್ಣರಳಿಸಿದರು ವಿಜಯಕುಮಾರಿ. ಟ್ರ್ಯಾಕ್‌ ಮೇಲೆ ಕಾಲಿರಿಸಿದ ಮೂರು ವರ್ಷಗಳಲ್ಲಿಯೇ ಆರು ಚಿನ್ನದ ಪದಕಗಳನ್ನು ಗೆದ್ದು ತಂದ ಜಿ.ಕೆ. ವಿಜಯಕುಮಾರಿ, ಅಥ್ಲೀಟ್‌ನಲ್ಲಿ ಭಾರತದ ಭವಿಷ್ಯದ ಭರವಸೆ. 4X400 ರಿಲೇ ಮತ್ತು 400 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ವಿಜಯಕುಮಾರಿ ಮುಂಬರುವ 2018ರ ಏಷ್ಯನ್‌ ಗೇಮ್ಸ್‌ ಅನ್ನು ಗಮನದಲ್ಲಿರಿಸಿಕೊಂಡು ಸಿದ್ಧತೆ ನಡೆಸಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ವೈ.ಎಸ್‌. ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಅವರಲ್ಲಿ ಒಲಿಂಪಿಕ್ಸ್‌ನಲ್ಲಿ ತಮ್ಮ ಹೆಸರು ಮೂಡಿಸುವ ಬಯಕೆಯಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆಯ ಗೌಡೇನಹಳ್ಳಿಯ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದವರು ವಿಜಯಕುಮಾರಿ. ಚಿಕ್ಕಂದಿನಿಂದಲೂ ಓಟದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಅವರಲ್ಲಿ ಅಥ್ಲೀಟ್‌ ಆಗಬೇಕೆಂಬ ಕನಸು ಬಿತ್ತಿದ್ದು ಶಾಲೆಯ ದೈಹಿಕ ಶಿಕ್ಷಕ ಮಹಾಲಿಂಗೇಗೌಡ. ಆನೆಗೊಳದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ಅವರನ್ನು ಶಿಕ್ಷಕರು ಬೆಂಗಳೂರು ಕ್ರೀಡಾ ಪ್ರಾಧಿಕಾರಕ್ಕೆ ಹೋಗುವಂತೆ ಸಲಹೆ ನೀಡಿದರು. ಪ್ರಾಧಿಕಾರದಲ್ಲಿ ಆಯ್ಕೆಯೂ ಆದ ಅವರು ಬೆಂಗಳೂರಿನ ಕೆಂಪೇಗೌಡ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ಓದುತ್ತಿರುವಾಗಲೇ ಆದಾಯ ತೆರಿಗೆ ಇಲಾಖೆಯು ಉದ್ಯೋಗ ನೀಡಿ ಪ್ರೋತ್ಸಾಹಿಸಿದೆ. ದೂರಶಿಕ್ಷಣದ ಮೂಲಕ ಓದನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ಅವರ ಗಮನ ಈಗ ನೆಟ್ಟಿರುವುದು ಟ್ರ್ಯಾಕ್‌ಗಳ ಮೇಲೆ. ಶಾಲಾ ದಿನಗಳಲ್ಲಿ ಅಭ್ಯಾಸ ನಡೆಸದಿದ್ದರೂ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ ಅವರಿಗೆ ಕ್ರೀಡೆಯಲ್ಲಿ ಮುಂದುವರಿಯಬೇಕೆಂಬ ಆಸೆ ಇರಲಿಲ್ಲ. ಅದರ ಕುರಿತು ತಿಳಿವಳಿಕೆಯೂ ಇರಲಿಲ್ಲ. ದೈಹಿಕ ಶಿಕ್ಷಕರ ಪ್ರೋತ್ಸಾಹ, ಮಾರ್ಗದರ್ಶನದಂತೆ ಬೆಂಗಳೂರಿಗೆ ಬಂದಿದ್ದರು. ವಿದ್ಯಾರ್ಥಿನಿ ನಿಲಯದಲ್ಲಿ ಉಚಿತವಾಗಿ ಸೀಟು ಸಿಕ್ಕಿದೆ ಎಂಬ ಕಾರಣಕ್ಕೆ ಮನೆಯಲ್ಲಿಯೂ ಒಪ್ಪಿಗೆ ದೊರಕಿತು. ಕ್ರೀಡಾ ಪ್ರಾಧಿಕಾರಕ್ಕೆ ಆಯ್ಕೆಯಾದ ಎರಡೇ ತಿಂಗಳಿನಲ್ಲಿ (2013ರ ಮೇ) ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 400 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದರೆ, ರಿಲೇನಲ್ಲಿ ಕಂಚಿನ ಪದಕ ಪಡೆದುಕೊಂಡರು. ಗೋವಾ, ತಿರುವನಂತಪುರ, ಹೈದರಾಬಾದ್‌ಗಳಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ವಿಜಯಕುಮಾರಿ ತಮ್ಮ ಓಟದ ಸಾಮರ್ಥ್ಯ ಸಾಬೀತುಪಡಿಸಿದರು. 2013ರ ಆಗಸ್ಟ್‌ನಲ್ಲಿ ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆದ ಏಷ್ಯನ್‌ ಯುವ ಕ್ರೀಡೆ, 2015ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದರು. ಅಥ್ಲೆಟಿಕ್‌ಗೆ ದೈಹಿಕವಾಗಿ ಸಾಮರ್ಥ್ಯ ಎಷ್ಟು ಅಗತ್ಯವೋ ಅಷ್ಟೇ ಮಾನಸಿಕ ಸಾಮರ್ಥ್ಯವೂ ಬೇಕು ಎನ್ನುತ್ತಾರೆ ವಿಜಯಕುಮಾರಿ. ಕಳೆದ ತಿಂಗಳು ರಾಂಚಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಐದನೇ ಸ್ಥಾನ ಪಡೆದಿದ್ದರು ಅವರು. ‘ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಓಡಿದ್ದರೆ ಖಂಡಿತಾ ಮೊದಲ ಸ್ಥಾನ ಬರುತ್ತಿದ್ದೆ. ಆದರೆ, ದೈಹಿಕವಾಗಿ ಸಂಪೂರ್ಣ ಸಿದ್ಧಳಾಗಿದ್ದರೂ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಆಗಿರಲಿಲ್ಲ. ಹೀಗಾಗಿ ಪದಕ ಜಯಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳುತ್ತಾರೆ. ‘ಕ್ರೀಡೆಯಲ್ಲಿ ಮನಸ್ಸಿಗೆ ಹೆಚ್ಚು ಕೆಲಸ ಕೊಡಬೇಕು, ನಾವು ಅಲ್ಲಿಗೆ ಹೋಗಿರುವುದು ಯಾವುದಕ್ಕೆ ಎಂಬುದರ ಮೇಲಷ್ಟೇ ಗಮನ ಇರಬೇಕು. ಸ್ಪರ್ಧೆ ಎಂದು ಅಂಜಿಕೊಂಡರೆ ಹಿಂದೆ ಉಳಿಯುತ್ತೇವೆ. ಎದುರಾಳಿಗಳೂ ನಮ್ಮಂತೆಯೇ ಇರುತ್ತಾರಷ್ಟೇ. ನನ್ನ ಗಮನ ಇರುವುದು ಓಡುವ ಟ್ರ್ಯಾಕ್‌ ಮೇಲೆ. ಅಕ್ಕಪಕ್ಕ ಯಾರಿದ್ದಾರೆ ಎನ್ನುವುದರ ಕುರಿತು ಯೋಚಿಸುವುದಿಲ್ಲ. ಪ್ರಯತ್ನ ಹಾಕುವುದಷ್ಟೇ ನನ್ನ ಗುರಿ’ ಎಂದು ಅವರು ಹೇಳುತ್ತಾರೆ. ಮೇ ತಿಂಗಳಿನಲ್ಲಿ ನಡೆಯಲಿರುವ ಜೂನಿಯರ್ ಮತ್ತು ಸೀನಿಯರ್ ಫೆಡರೇಷನ್‌ ಅಥ್ಲೆಟಿಕ್ಸ್‌ಗಳಲ್ಲಿ ಭಾಗವಹಿಸಲು ಅವರು ಅಭ್ಯಾಸ ನಡೆಸುತ್ತಿದ್ದಾರೆ. ‘ನಾನಿನ್ನೂ ಯಾವ ಸಾಧನೆ ಮಾಡಿಲ್ಲ. ಇದಿನ್ನೂ ನನ್ನ ಕ್ರೀಡಾ ಬದುಕಿನ ಆರಂಭವಷ್ಟೇ’ ಎನ್ನುತ್ತಾರೆ ವಿಜಯಕುಮಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.