ಕ್ರೀಡಾ ಕಾನೂನಿಗೊಂದು ನಿಯತಕಾಲಿಕ ಕ್ರೀಡಾಕೂಟ ನಡೆಯುತ್ತಿರುವಾಗ ಸ್ಪರ್ಧೆಯೊಂದರ ನಂತರ ವಿವಾದ ಉಂಟಾಗುತ್ತದೆ. ಮೊದಲಿಗನಾದ ತನ್ನನ್ನು ಬದಿಗೆ ನಿಲ್ಲಿಸಿ ಬೇರೆಯವರಿಗೆ ಬಹುಮಾನ ನೀಡಲಾಗಿದೆ ಎಂಬ ಆರೋಪ ಕ್ರೀಡಾಪಟುವಿನಿಂದ ಕೇಳಿ ಬರುತ್ತದೆ. ವಾದ,ವಿವಾದ ನಡೆಯುತ್ತದೆ... ಶಾಲೆಯಲ್ಲಿ ನಡೆಯುವ ಅಂತರ ತರಗತಿ ಸ್ಪರ್ಧೆ ಇರಬಹುದು, ರಾಷ್ಟ್ರಗಳ ನಡುವಣ ಸ್ಪರ್ಧೆಗಳೇ ಇರಬಹುದು; ವಿವಾದದ ಪ್ರಸಂಗಗಳು ಕ್ರೀಡಾ ಕ್ಷೇತ್ರದಲ್ಲಿ ಆಗಾಗ ನಡೆಯುತ್ತಿರುತ್ತವೆ. ಉತ್ತೇಜಕ ಔಷಧ ಸೇವನೆ, ಭ್ರಷ್ಟಾಚಾರ, ಆಯ್ಕೆಯಲ್ಲಿ ಅನ್ಯಾಯ, ಲೈಂಗಿಕ ದೌರ್ಜನ್ಯ... ಹೀಗೆ ಕ್ರೀಡಾ ಕ್ಷೇತ್ರದಲ್ಲಿ ವಿವಾದಗಳನ್ನು ಎಬ್ಬಿಸುವ ಅಂಶಗಳಿಗೆ ಕೊರತೆ ಏನೂ ಇಲ್ಲ. ಇದೆಲ್ಲದರ ನಡುವೆ ಕ್ರೀಡಾ ಅಭಿವೃದ್ಧಿ ಕಾನೂನು ಜಾರಿಗೆ ತರಲು ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಡಿಸುವ ಸಲುವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಕ್ರೀಡಾ ಕಾನೂನಿನ ಕುರಿತು ಜನರು ಚರ್ಚಿಸತೊಡಗಿದರು. ಈ ವೇಳೆ ಮೊಳಕೆಯೊಡೆದ ಕ್ರೀಡಾ ಕಾನೂನು ಕುರಿತ ನಿಯತಕಾಲಿಕದ ಬೀಜ ರಾಜ್ಯದ ಕಾನೂನು ವಿಶ್ವವಿದ್ಯಾಲಯದಲ್ಲಿ ಈಗ ಗಿಡವಾಗಿ ಬೆಳೆದಿದೆ. ಹುಬ್ಬಳ್ಳಿ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಕಾನೂನು ವಿವಿಯ ಕ್ರೀಡಾ ವಿಭಾಗ ಈ ನಿಯತಕಾಲಿಕವನ್ನು ಹೊರತರಲು ನಿರ್ಧರಿಸಿದೆ. ದೇಶ ಹಾಗೂ ವಿದೇಶದ ಹಿರಿಯ ಕಾನೂನು ತಜ್ಞರು ಮತ್ತು ಸಮಾಲೋಚಕರನ್ನು ಒಳಗೊಂಡಿರುವ ಸಮಿತಿ ವರ್ಷಕ್ಕೆ ಒಂದು ಸಂಚಿಕೆಯನ್ನು ಹೊರತರಲಿದೆ. ಮೊದಲ ಸಂಚಿಕೆ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದೆ. ಪ್ರಥಮ ಸಂಚಿಕೆ 180 ಪುಟಗಳದ್ದು. ಇದರಲ್ಲಿ ಕ್ರೀಡಾ ಕಾನೂನಿಗೆ ಸಂಬಂಧಿಸಿದ 10 ಲೇಖನಗಳು ಮತ್ತು ಪುಸ್ತಕ ವಿಮರ್ಶೆ ಇದೆ. ಇದು ಸದ್ಯದಲ್ಲಿಯೇ ಅಂತರ್ಜಾಲದಲ್ಲೂ ಸಿಗಲಿದೆ. ಕ್ರೀಡಾ ಕಾನೂನನ್ನು ತಜ್ಞರು ಶುದ್ಧ ಕಾನೂನು ಎಂದು ಹೇಳುವುದಿದೆ. ಭಾರತದಲ್ಲಿ ರಾಜಸ್ತಾನ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಯನ್ನು ನಿಯಂತ್ರಿಸಲು ಕ್ರೀಡಾ ಕಾನೂನನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲೂ ಇಂಥ ಪ್ರಯತ್ನ ನಡೆಯಬೇಕು ಎಂಬ ಆಶಯ ಹೊಂದಿರುವ ಕಾನೂನು ವಿವಿ ನಿಯತಕಾಲಿಕದಲ್ಲಿನ ಬರಹಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪೂರಕ ಮಾಹಿತಿ ನೀಡುವ ಉದ್ದೇಶ ಹೊಂದಿದೆ. ಕ್ರೀಡೆ ಈಗ ಕೇವಲ ದೈಹಿಕ ಚಟುವಟಿಕೆಗೆ ಮಾತ್ರ ಸೀಮಿತವಲ್ಲ. ಅದರ ಸುತ್ತ ವ್ಯಾಪಾರವಿದೆ, ವ್ಯವಹಾರವಿದೆ. ಉದ್ಯೋಗ ಸಾಧ್ಯತೆಗಳಂಥ ನಾನಾ ಆಯಾಮಗಳು ಅದಕ್ಕಿದೆ. ಆದ್ದರಿಂದಲೇ ವಿವಾದ, ಗೊಂದಲಗಳು ಹೆಚ್ಚಾಗಿವೆ. ಇದನ್ನು ನಿಯಂತ್ರಿಸಲು ಕಾನೂನು ಅಗತ್ಯ. ಕ್ರೀಡಾ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಂಸ್ಥೆಗಳು, ಸಂಘಗಳು ಭಾರತದಲ್ಲಿವೆ. ಗ್ವಾಲಿಯರ್‌ನ ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ, ಕ್ರೀಡಾ ಕಾನೂನು ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ, ಅಂತರರಾಷ್ಟ್ರೀಯ ಕ್ರೀಡಾ ಕಾನೂನು ಸಂಘ ಮುಂತಾದ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇವುಗಳ ಸಾಲಿಗೆ ಈಗ ರಾಜ್ಯ ಕಾನೂನು ವಿಶ್ವವಿದ್ಯಾಲಯವೂ ಸೇರಿದೆ. ‘ಕ್ರೀಡೆಗೆ ಸಂಬಂಧಿಸಿ ಜಾರಿಯಲ್ಲಿರುವ ಕಾನೂನನ್ನು ಜನರಿಗೆ, ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ತಿಳಿಸು ವುದು ನಮ್ಮ ಉದ್ದೇಶ. ಈ ನಿಯತಕಾಲಿಕೆಯಲ್ಲಿ ಮನರಂಜನೆಗೆ ಸಂಬಂಧಿಸಿದ ಕಾನೂನಿನ ಮಾಹಿತಿಯೂ ಇದೆ. ಕ್ರೀಡೆ ಮತ್ತು ಮನರಂಜನೆ ಈಗ ಒಂದೇ ನಾಣ್ಯದ ಎರಡು ಮುಖಗಳು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ’ ಎಂದು ಕಾನೂನು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಾಲಿದ್ ಖಾನ್‌ ತಿಳಿಸಿದರು. ‘ಭಾರತದಲ್ಲಿ ಈ ಕಾನೂನಿನ ಕುರಿತು ಇನ್ನೂ ಅರಿವು ಮೂಡಿಲ್ಲ. ಕ್ರೀಡಾಪಟುಗಳು ಮಾತ್ರವಲ್ಲ, ಪ್ರೇಕ್ಷಕರು ಕೂಡ ತಮ್ಮ ಹಕ್ಕಿನ ಕುರಿತು ಮಾಹಿತಿ ಹೊಂದಿಲ್ಲ. ಈ ನಿಯತಕಾಲಿಕ ಅವರೆಲ್ಲರ ಕಣ್ಣು ತೆರೆಸುವ ಪ್ರಯತ್ನ. ಆಸಕ್ತರು .@gmailಗೆ ಮೇಲ್‌ ಕಳುಹಿಸಿ ಪ್ರತಿಗಳನ್ನು ತರಿಸಿಕೊಳ್ಳಬಹುದು’ ಎಂದು ಸಂಪಾದಕೀಯ ವಿಭಾಗದವರು ತಿಳಿಸಿದ್ದಾರೆ. *** * ಹುಬ್ಬಳ್ಳಿಯ ಕಾನೂನು ವಿವಿಯ ಮುಂದಾಳುತ್ವ * ಕ್ರೀಡೆಗೆ ಸಂಬಂಧಿಸಿದ ಕಾನೂನಿನ ವಿವರಣೆ * ಕ್ರೀಡಾ ಲೇಖನ, ಪುಸ್ತಕ ವಿಮರ್ಶೆಗೆ ಅವಕಾಶ * ದೇಶ–ವಿದೇಶದ ಕಾನೂನು ತಜ್ಞರು ಭಾಗಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.