ಒಲಿಂಪಿಕ್ಸ್‌ ಪದಕದ ಭರವಸೆ ‘ಮೊದಲ ನಾಲ್ಕು ಸುತ್ತುಗಳು ಕೊನೆಗೊಂಡಾಗ 98ನೇ ಸ್ಥಾನದಲ್ಲಿದ್ದೆ. ಅಂತಿಮ ಹಾಗೂ ಐದನೇ ಸುತ್ತು ನನ್ನ ವೃತ್ತಿ ಬದುಕನ್ನು ನಿರ್ಧರಿಸುವ ಸುತ್ತಾಗಲಿದೆ ಎಂದು ಕೋಚ್‌ ಎನ್ನಿಯೊ ಫಾಲ್ಕೊ ಬಳಿ ಹೇಳಿದ್ದೆ. ಈ ಸುತ್ತಿನಲ್ಲಿ ಅಮೋಘ ಸಾಮರ್ಥ್ಯ ನೀಡಿ ಫೈನಲ್‌ ಪ್ರವೇಶಿಸಿದರೆ ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದು ಎಂಬುದು ತಿಳಿದಿತ್ತು. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದೆ. ಕೊನೆಗೂ ಅದೃಷ್ಟ ಕೈಹಿಡಿಯಿತು...’ ಇಟಲಿಯ ಲೊನಾಟೊದಲ್ಲಿ ಹೋದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಿಶ್ವ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದಿಟ್ಟ ಹೋರಾಟ ನಡೆಸಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ಭಾರತದ ಅನುಭವಿ ಶೂಟರ್‌ ಮೈರಾಜ್‌ ಅಹ್ಮದ್‌ ಖಾನ್‌ ಹೀಗೆ ಭಾವುಕರಾಗಿ ಮಾತನಾಡಿದ್ದರು. 15 ವರ್ಷಗಳ ಕಾಲ ಸವೆಸಿದ್ದ ಕಠಿಣ ಹಾದಿಗೆ ಫಲ ಸಿಕ್ಕ ಕ್ಷಣ ಅದಾಗಿತ್ತು. ಹೀಗಾಗಿ ಸಹಜವಾಗಿಯೇ ಅವರ ಮೊಗದಲ್ಲಿ ಸಾರ್ಥಕತೆಯ ಭಾವವಿತ್ತು. ಉತ್ತರ ಪ್ರದೇಶದ ಖುರ್ಜಾದ 40 ರ ಹರೆಯದ ಮೈರಾಜ್‌ ಅವರು ಸ್ಕೀಟ್‌ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಶೂಟರ್‌ ಎಂಬ ಶ್ರೇಯಕ್ಕೂ ಭಾಜನರಾಗಿದ್ದರು. ಮೈರಾಜ್‌ ಅವರ ಈ ಸಾಧನೆ ಭಾರತ ಶೂಟಿಂಗ್‌ ಕ್ರೀಡೆಯಲ್ಲಿ ಕ್ಷಿಪ್ರಗತಿಯಲ್ಲಿ ದಾಪುಗಾಲಿಡುತ್ತಿರುವುದರ ದ್ಯೋತಕವಾಗಿದೆ. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಬೆಳ್ಳಿ ಪದಕ ಗೆದ್ದ ಬಳಿಕ ಭಾರತದಲ್ಲಿ ಶೂಟಿಂಗ್‌ ಕ್ರೀಡೆ ಇನ್ನಷ್ಟು ಹೊಳಪು ಪಡೆದುಕೊಂಡಿದೆ. ಈ ಕ್ರೀಡೆಯ ಶಕ್ತಿ ಕೇಂದ್ರಗಳಾಗಿರುವ ಅಮೆರಿಕ, ಚೀನಾ, ಸ್ವೀಡನ್‌, ಬ್ರಿಟನ್‌, ನಾರ್ವೆ ಮತ್ತು ಇಟಲಿಯಂತಹ ರಾಷ್ಟ್ರಗಳು ಈಗ ಭಾರತವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಭಿನವ್‌ ಬಿಂದ್ರಾ, ಗಗನ್‌ ನಾರಂಗ್‌, ಗುರ್‌ಪ್ರೀತ್‌ ಸಿಂಗ್‌, ಕರ್ನಾಟಕದ ಪಿ.ಎನ್‌. ಪ್ರಕಾಶ್‌, ಜಿತು ರಾಯ್‌, ವಿಜಯ್‌ ಕುಮಾರ್‌, ಅಪೂರ್ವಿ ಚಾಂಡೇಲಾ ಹೀಗೆ ಹಲವು ಮಂದಿ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ ಗಳಲ್ಲಿ ಅಮೆರಿಕ, ಚೀನಾ ರಾಷ್ಟ್ರಗಳ ಬಲಿಷ್ಠ ಶೂಟರ್‌ಗಳಿಗೆ ಪ್ರಬಲ ಪೈಪೋಟಿ ಒಡ್ಡುವ ಮಟ್ಟಿಗೆ ಬೆಳೆದಿದ್ದಾರೆ. ಈ ಸಾಲಿಗೆ ಮೈರಾಜ್‌ ಹೊಸ ಸೇರ್ಪಡೆ. ಇವರ ಸಾಧನೆ ಮೊದಲೆಲ್ಲಾ ಶೂಟಿಂಗ್‌ ಎಂದರೆ ಮೂಗು ಮುರಿಯುತ್ತಿದ್ದ ಯುವ ಸಮುದಾಯ ದವರೂ ಈ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲು ಶುರುಮಾಡುವಂತೆ ಪ್ರೇರೇಪಿಸಿದೆ. ಈ ಪ್ರಗತಿಯ ಹಿಂದೆ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಇಟ್ಟಿರುವ ಮಹತ್ವದ ಹೆಜ್ಜೆಗಳು ಎದ್ದು ಕಾಣುತ್ತಿವೆ. ಎನ್‌ಆರ್‌ಎಐ ಆರಂಭದಿಂದಲೂ ವಿವಿಧ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವೇಷಣೆಗೆ ಮುನ್ನುಡಿ ಬರೆದಿದೆ. ಹೋದ ವಾರ ನವದೆಹಲಿಯ ಕಾರ್ನಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಈ ಪೈಕಿ ಮಹತ್ವದ್ದು. ಈ ಚಾಂಪಿಯನ್‌ಷಿಪ್‌ನ ಮೂಲಕ ಪ್ರತಿ ಸಲದಂತೆ ಈ ಬಾರಿಯೂ ಹೊಸ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಮಹಾವೀರ್‌ ಸಿಂಗ್‌, ಹರ್‌ಪ್ರೀತ್‌ ಸಿಂಗ್‌, ಎಲಿಜಬೆತ್‌ ಕೋಶಿ, ಎನ್‌.ಗಾಯತ್ರಿ, ಅನಮ್‌ ಬಸಿತ್‌, ಆರತಿ ಸಿಂಗ್‌ ರಾವ್‌, ಸ್ವಪ್ನಿಲ್‌ ಕುಶಾಲೆ ಮತ್ತು ಪ್ರಾಚಿ ಗಡ್ಕರಿ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಭಾರತದ ಎಂಟು ಮಂದಿ ಶೂಟರ್‌ಗಳು ಮುಂದಿನ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಆಯೋಜನೆಗೊಂಡಿರುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಈ ಪಟ್ಟಿಯಲ್ಲಿರುವ ಚೈನ್‌ ಸಿಂಗ್‌, ಗಗನ್‌ ನಾರಂಗ್‌, ಅಭಿನವ್‌ ಬಿಂದ್ರಾ, ಜಿತು ರಾಯ್‌, ಪಿ.ಎನ್‌. ಪ್ರಕಾಶ್‌, ಗುರ್‌ಪ್ರೀತ್ ಸಿಂಗ್‌, ಅಪೂರ್ವಿ ಮತ್ತು ಮೈರಾಜ್‌ ಪ್ರತಿಭಾನ್ವಿತರು. ಇವರಲ್ಲಿ ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ಕೂಟದಲ್ಲಿ ಪದಕದ ಬೇಟೆಯಾಡುವ ತಾಕತ್ತು ಅಡಗಿದೆ. ಅಮೆರಿಕ, ಬ್ರಿಟನ್‌, ಚೀನಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳುತ್ತಿರುವ ನಮ್ಮವರ ಸಂಖ್ಯೆ ವಿರಳ ಎಂದೆನಿಸಬಹುದು. ಆದರೆ ಮುಂದಿನ ಒಲಿಂಪಿಕ್ಸ್‌ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ. ಈ ಹಾದಿಯಲ್ಲಿ ನಾವು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಸಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.