ಉಪಟಳಗಳ ನಡುವೆಯೇ ಉತ್ತುಂಗಕ್ಕೆ ಆಫ್ಘಾನಿಸ್ತಾನ ವಿಶ್ವಕಪ್‌ ಅರ್ಹತಾ ಸುತ್ತಿನ ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದವು. ಅಷ್ಟರಲ್ಲಿ ಆಪ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ಮೊಹಮ್ಮದ್‌ ನಬಿ ಅವರ ತಂದೆಯನ್ನು ಜಲಾಲಾಬಾದ್‌ನಲ್ಲಿ ದುಷ್ಕರ್ಮಿಗಳು ಅಪಹರಿಸುತ್ತಾರೆ. ಸುಮಾರು ಎರಡು ತಿಂಗಳು ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಸಂಕಷ್ಟದಿಂದಾಗಿ ಟೂರ್ನಿಗೆ ಸಿದ್ಧರಾಗಲು ನಬಿ ಅವರಿಗೆ ತುಂಬಾ ತೊಂದರೆಯಾಗುತ್ತದೆ. ಬೇಡಿಕೆಯನ್ನು ಪೂರೈಸಿಕೊಂಡ ಮೇಲೆ ಆ ದುಷ್ಕರ್ಮಿಗಳು ತಂದೆಯನ್ನು ಬಿಟ್ಟು ಕಳುಹಿಸುತ್ತಾರೆ. ಯುದ್ಧಪೀಡಿತ ಆಪ್ಘಾನಿಸ್ತಾನದಲ್ಲಿ ಇಂಥ ಸಮಸ್ಯೆಗಳು ಇಂದಿಗೂ ನಿಂತಿಲ್ಲ. ಇದರ ನಡುವೆಯೇ ಕ್ರಿಕೆಟಿಗರು ಹಾಗೂ ಇತರ ಕ್ರೀಡಾಪಟುಗಳು ತಮ್ಮ ಆಟದತ್ತ ಚಿತ್ತ ಹರಿಸಬೇಕಾಗಿದೆ. ಬಡತನ, ಅಪಹರಣ, ಹಿಂಸಾಚಾರ, ಭೂಕಂಪನದಂಥ ಸಮಸ್ಯೆಗಳಿಗೆ ಸಿಲುಕಿ ನಲುಗಿರುವ ದೇಶದ ಕ್ರಿಕೆಟ್‌ ಪ್ರೀತಿ ಮಾತ್ರ ಅದ್ಭುತ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ–ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಈ ತಂಡದ ಪಾಲಿಗೆ ಮೊದಲನೇಯದು. ಇದು ಈ ದೇಶದ ಪಾಲಿಗೆ ವಿಶ್ವಕಪ್ ಗೆದ್ದಷ್ಟೇ ಖುಷಿಯ ಕ್ಷಣ. ಅಷ್ಟೇ ಅಲ್ಲ; ಸ್ಕಾಟ್ಲೆಂಡ್‌ ಎದುರು ಗೆಲುವು ಕೂಡ ಸಾಧಿಸಿತು. ಕ್ರಿಕೆಟ್ ಲೋಕದ ಶಿಶುಗಳಾಗಿರುವ ಆಫ್ಘಾನಿಸ್ತಾನ ಮುಂದೊಂದು ದಿನ ಅದ್ಭುತ ಸಾಧನೆ ಮಾಡಲಿದೆ ಎಂಬ ಕನಸನ್ನು ಈ ದೇಶದ ಅಭಿಮಾನಿಗಳು ಹೊಂದಿದ್ದಾರೆ. 2012ರಲ್ಲಿ ಷಾರ್ಜಾದಲ್ಲಿ ಈ ದೇಶ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯ ಆಡಿದಾಗ ಇಡೀ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ಟೆಸ್ಟ್‌ ಆಡುವ ದೇಶವೊಂದರ ವಿರುದ್ಧ ಆಪ್ಘಾನಿಸ್ತಾನ ಆಡಿದ ಮೊದಲ ಏಕದಿನ ಪಂದ್ಯವದು. ಈಚೆಗೆ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡದವರು 3–2ರಲ್ಲಿ ಗೆದ್ದಿದ್ದಾರೆ. ಟ್ವೆಂಟಿ–20 ಸರಣಿಯನ್ನೂ ಜಯಿಸಿದ್ದಾರೆ. ಇದು ಈ ತಂಡದ ಪಾಲಿಗೆ ಮರೆಯಲಾಗದ ಕ್ಷಣ. ಅದು ಚೊಚ್ಚಲ ಸರಣಿ ಗೆಲುವು. ಈ ಪ್ರವಾಸಕ್ಕೆ ಕೋಚ್‌ ಆಗಿದ್ದವರು ಪಾಕ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌. ಭಾರತ ವಿರುದ್ಧವೂ ಈ ತಂಡದವರು ಒಂದು ಪಂದ್ಯ ಆಡಿದ್ದಾರೆ. ಆದರೆ, ಬಾಂಗ್ಲಾದೇಶ, ಜಿಂಬಾಬ್ವೆ, ಕೀನ್ಯಾ ಹೊರತುಪಡಿಸಿದರೆ ಉಳಿದ ದೇಶಗಳ ವಿರುದ್ಧ ಯಶಸ್ಸು ಲಭಿಸಿಲ್ಲ. ಟ್ವೆಂಟಿ–20 ರ್‌್ಯಾಂಕಿಂಗ್‌ನಲ್ಲಿ ಬಾಂಗ್ಲಾ, ಜಿಂಬಾಬ್ವೆಗಿಂತ ಮುಂದಿದ್ದಾರೆ. ಈ ತಂಡದ ನೂರ್ ಅಲಿ ಜದ್ರಾನ್‌, ನಾಯಕ ನಬಿ, ಅಫ್ತಾಬ್‌ ಆಲಾಮ್‌, ದವಲತ್‌ ಜದ್ರಾನ್‌, ಸಮಿವುಲ್ಲಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ದೇಶದ ಅಫ್ಸಾರ್‌ ಜಾಜೈ ಎಂಬ ಕ್ರಿಕೆಟಿಗ ಈಗಲೂ ಕಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಿನ ಕ್ರಿಕೆಟಿಗರು ಪಾಕ್‌ ಗಡಿಯ ನಿರಾಶ್ರಿತರ ಶಿಬಿರದಿಂದ ಬಂದವರು. ಅಲ್ಲಿಯೇ ಕ್ರಿಕೆಟ್‌ ಕಲಿತವರು. ನಾಯಕ ನಬಿ ಮೂಲತಃ ಪಾಕಿಸ್ತಾನದವರು. ಉರ್ದು ಮಾತನಾಡುವ ಇವರಿಗೆಲ್ಲಾ ಇಂಗ್ಲಿಷ್‌ ಗೊತ್ತಿಲ್ಲ. ಹಾಗಾಗಿಯೇ ವಿದೇಶಿ ಕೋಚ್‌ಗಳನ್ನು ನೇಮಿಸಲು ಈ ದೇಶದ ಕ್ರಿಕೆಟ್‌ ಮಂಡಳಿ ಹಿಂದೆಮುಂದೆ ನೋಡುತ್ತಿದೆ. ಇತ್ತೀಚೆಗಷ್ಟೇ ಭಾರತದ ಮನೋಜ್‌ ಪ್ರಭಾಕರ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಲಾಗಿದೆ. ದೇಶದಲ್ಲಿನ ಭದ್ರತಾ ಸಮಸ್ಯೆಯಿಂದಾಗಿ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ, ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಇಲ್ಲಿಲ್ಲ. 3 ಕೋಟಿ ಜನರಿರುವ ದೇಶದಲ್ಲಿ ಕೇವಲ 9 ಟರ್ಫ್‌ ಪಿಚ್‌ಗಳಿವೆಯಂತೆ. ಆಪ್ಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಉತ್ತೇಜನ ನೀಡಲು ಐಸಿಸಿ ಕೂಡ ಅನುದಾನ ನೀಡುತ್ತಿದೆ. ಬಿಸಿಸಿಐ ಕೂಡ ನೆರವಿನ ಹಸ್ತ ಚಾಚಿದೆ. ಇತ್ತೀಚೆಗೆ ಬಿಸಿಸಿಐ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಅಪ್ಘಾನಿಸ್ತಾನ ತಂಡ ಗ್ರೇಟರ್‌ ನೊಯಿಡಾದ ಕ್ರೀಡಾಂಗಣದಲ್ಲಿ ಬೇರೆ ಬೇರೆ ದೇಶಗಳ ವಿರುದ್ಧ ಪಂದ್ಯಗಳನ್ನು ಆಡಲಿದೆ. ಇದು ಆ ತಂಡದ ಪಾಲಿಗೆ ‘ತವರಿನ’ ಅಂಗಳವಾಗಿರಲಿದೆ. ಈ ದೇಶದಲ್ಲಿ 19ನೇ ಶತಮಾನದ ಮಧ್ಯ ಭಾಗದಿಂದಲೇ ಕ್ರಿಕೆಟ್‌ ಪ್ರಚಲಿತದಲ್ಲಿದೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಡ ಗುರುತಿಸಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ. 1995ರಲ್ಲಿ ಕ್ರಿಕೆಟ್‌ ಮಂಡಳಿ ಅಸ್ತಿತ್ವಕ್ಕೆ ಬಂತು. 2001ರಲ್ಲಿ ಐಸಿಸಿಗೆ ನೋಂದಣಿಯಾಯಿತು. 2010ರಲ್ಲಿ ಈ ದೇಶದ ತಂಡ ಟ್ವೆಂಟಿ–20 ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಇದು ಈ ತಂಡ ಪಾಲ್ಗೊಂಡ ದೊಡ್ಡ ಟೂರ್ನಿ. ಆಪ್ಘಾನಿಸ್ತಾನ ತಂಡದವರು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಭಾರಿ ಸುಧಾರಣೆ ಕಂಡಿರುವ ಈ ದೇಶಕ್ಕೆ ಉತ್ತಮ ಭವಿಷ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಕ್ರಿಕೆಟ್‌ ಪ್ರೇಮಿಗಳ ಬೆಂಬಲವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.