ದಕ್ಷಿಣ ಆಫ್ರಿಕಾ ಬತ್ತಳಿಕೆಯ ವೇಗದ ಅಸ್ತ್ರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ. ಕಾನ್ಪುರದ ಗ್ರೀನ್‌ ಪಾರ್ಕ್‌ ಅಂಗಳದಲ್ಲಿ 304 ರನ್‌ಗಳ ಗೆಲುವಿನ ಗುರಿ ಬೆಂಬತ್ತಿದ ದೋನಿ ಬಳಗ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಬತ್ತಳಿಕೆಯ ಬಲಿಷ್ಠ ಅಸ್ತ್ರವಾದ ಕಗಿಸೊ ರಬಾಡ ಅವರನ್ನು ದಾಳಿಗಿಳಿಸಿದ ದಕ್ಷಿಣ ಆಫ್ರಿಕಾ ನಾಯಕ ಎ.ಬಿ.ಡಿವಿಲಿಯರ್ಸ್‌ ಫಲ ಕಂಡರು. ದೋನಿ ಮತ್ತು ಬಿನ್ನಿ ರನ್‌ ಗಳಿಸದಂತೆ ತಡೆಯುವುದರೊಂದಿಗೆ ಇಬ್ಬರ ವಿಕೆಟ್‌ ಕಬಳಿಸಿದ ರಬಾಡ ತಂಡಕ್ಕೆ ಅವಿಸ್ಮರಣೀಯ ಜಯದ ಕಾಣಿಕೆ ನೀಡಿದರು. ನಂತರ ಸರಣಿಯುದ್ದಕ್ಕೂ ರಬಾಡ ಮಿಂಚಿದರು. ರಬಾಡ ಭಾರತಕ್ಕೆ ಬರುವ ಮುನ್ನ ಆಡಿದ್ದು ಕೇವಲ ಎರಡು ಸರಣಿ ಮಾತ್ರ; ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ. ಕಾನ್ಪುರದಲ್ಲಿ ಅಂಗಳಕ್ಕೆ ಇಳಿಯುವ ಮುನ್ನ ಐದು ಪಂದ್ಯಗಳನ್ನು ಆಡಿದ್ದರಷ್ಟೆ. 20 ವರ್ಷ ವಯಸ್ಸಿನ ಈ ವೇಗಿ 266ನೇ ಪಂದ್ಯ ಆಡಿದ ದೋನಿಯನ್ನು ಮತ್ತು ತನಗಿಂತ ಎರಡು ಪಟ್ಟು ಪಂದ್ಯಗಳಲ್ಲಿ ಆಡಿದ ಬಿನ್ನಿ ಅವರನ್ನು ಕಟ್ಟಿ ಹಾಕಿದ ಪರಿ ಅಚ್ಚರಿಗೆ ಕಾರಣವಾಗಿತ್ತು. ಎದುರಾಳಿ ಯಾರೇ ಆಗಿರಲಿ, ಸಮರ್ಪಕ ತಂತ್ರಗಳನ್ನು ಹೆಣೆಯುವ ಕಲೆ ಅವರಿಗೆ ಕರಗತ. ಕಳೆದ ವರ್ಷ ದುಬೈಯಲ್ಲಿ ನಡೆದ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿಕೊಟ್ಟಿತ್ತು. ಭಾರತ ಪ್ರವಾಸದಲ್ಲಿ ಏಕದಿನ ಟೂರ್ನಿಯ ಉತ್ತಮ ಪ್ರದರ್ಶನ ಟೆಸ್ಟ್‌ ತಂಡದಲ್ಲೂ ಆಡಲು ಅವಕಾಶ ಮಾಡಿಕೊಟ್ಟಿತು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ. ಕಾನ್ಪುರದ ಗ್ರೀನ್‌ ಪಾರ್ಕ್‌ ಅಂಗಳದಲ್ಲಿ 304 ರನ್‌ಗಳ ಗೆಲುವಿನ ಗುರಿ ಬೆಂಬತ್ತಿದ ದೋನಿ ಬಳಗ ಜಯದತ್ತ ಹೆಜ್ಜೆ ಹಾಕಿತ್ತು. ಅಂತಿಮ ಓವರ್‌ನಲ್ಲಿ ತಂಡಕ್ಕೆ ಬೇಕಾದದ್ದು 11 ರನ್‌ಗಳು. ಇನ್ನೂ ಐದು ವಿಕೆಟ್‌ಗಳು ಬಾಕಿ ಇದ್ದವು. ಕ್ರೀಸ್‌ನಲ್ಲಿ ಅನುಭವಿ ಸ್ಟುವರ್ಟ್‌ ಬಿನ್ನಿ ಜೊತೆ ಸ್ವತಃ ನಾಯಕ ಮಹೇಂದ್ರ ಸಿಂಗ್‌ ದೋನಿ ಇದ್ದರು. ಹೀಗಾಗಿ ಭಾರತದ ಗೆಲುವಿನ ಬಗ್ಗೆ ಪ್ರೇಕ್ಷಕರಿಗೆ ಸಂದೇಹವೇ ಇರಲಿಲ್ಲ. ಆದರೆ ಅಲ್ಲಿ ನಡೆದದ್ದೇ ಬೇರೆ. ಬತ್ತಳಿಕೆಯ ಬಲಿಷ್ಠ ಅಸ್ತ್ರವಾದ ಕಗಿಸೊ ರಬಾಡ ಅವರನ್ನು ದಾಳಿಗಿಳಿಸಿದ ದಕ್ಷಿಣ ಆಫ್ರಿಕಾ ನಾಯಕ ಎ.ಬಿ.ಡಿವಿಲಿಯರ್ಸ್‌ ಫಲ ಕಂಡರು. ದೋನಿ ಮತ್ತು ಬಿನ್ನಿ ರನ್‌ ಗಳಿಸದಂತೆ ತಡೆಯುವುದರೊಂದಿಗೆ ಇಬ್ಬರ ವಿಕೆಟ್‌ ಕಬಳಿಸಿದ ರಬಾಡ ತಂಡಕ್ಕೆ ಅವಿಸ್ಮರಣೀಯ ಜಯದ ಕಾಣಿಕೆ ನೀಡಿದರು. ಇದೇ ಸರಣಿಯ ಕೊನೆಯ ಪಂದ್ಯ. ಸ್ಥಳ–ಮುಂಬೈನ ವಾಂಖೆಡೆ ಮೈದಾನ. ಭಾರತದ ಅನುಭವಿ ವೇಗಿಗಳ ದಾಳಿಯನ್ನು ಪುಡಿಗಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು 438 ರನ್‌ ಸೇರಿಸಿದ್ದರು. ಉತ್ತರವಾಗಿ ಭಾರತ ಗಳಿಸಿದ್ದು ಕೇವಲ 224 ರನ್‌ ಮಾತ್ರ. ಇದರಲ್ಲೂ ವೇಗಿ ಕಗಿಸೊ ರಬಾಡ ಮಹತ್ವದ ಪಾತ್ರ ವಹಿಸಿದರು. ಶಾಲೆಯಲ್ಲಿ ಬೆಳಗಿದ ಪ್ರತಿಭೆ: ಜೊಹಾನ್ಸ್‌ಬರ್ಗ್‌ನಲ್ಲಿ ಹುಟ್ಟಿದ ರಬಾಡ ಈ ಮಟ್ಟಕ್ಕೆ ಬೆಳೆಯಲು ಕಾರಣ ಅವರು ಓದಿದ ಸೇಂಟ್‌ ಸ್ಥಿತಿಯನ್ಸ್‌ ಶಾಲೆ ಎಂಬುದು ದಕ್ಷಿಣ ಆಫ್ರಿಕಾದ ಪತ್ರಕರ್ತರ ಅಭಿಪ್ರಾಯ. ಕ್ರಿಕೆಟ್‌ಗೆ ಸಾಕಷ್ಟು ಪ್ರೋತ್ಸಾಹ ನೀಡುವ ಈ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರ ಕ್ರಿಕೆಟ್ ಭವಿಷ್ಯ ರೂಪುಗೊಂಡಿತ್ತು. ಬಾಂಗ್ಲಾದೇಶ ವಿರುದ್ಧ ನಡೆದ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಪಡೆದು ದಾಖಲೆ ಬರೆದಿದ್ದರು. ಎಂಟು ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ ಆರು ವಿಕೆಟ್ ಕಬಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಸರಣಿಯ ಮುಂದಿನ ಪಂದ್ಯಗಳಲ್ಲಿ ಸ್ವಲ್ಪ ದುಬಾರಿಯಾದರೂ (45/2, 41/0) ನಂತರ ನ್ಯೂಜಿಲ್ಯಾಂಡ್‌ ವಿರುದ್ಧ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡದರು. ಈ ಸರಣಿಯಲ್ಲಿ ಅವರ ಬೌಲಿಂಗ್‌ ವಿವರ ಹೀಗಿತ್ತು: 49/1, 33/2. ಭಾರತದಲ್ಲೂ ಬ್ಯಾಟ್ಸ್‌ಮನ್‌ಗಳನ್ನು ನಿರಂತರ ಕಾಡಿದರು. ಕಾನ್ಪುರ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ 150 ರನ್‌ ಗಳಿಸಿ ಮಿಂಚಿದರೂ ರಬಾಡ ಬೌಲಿಂಗ್‌ನಲ್ಲಿ ಅವರು ಗಳಿಸಿದ್ದು 13 ಎಸೆತಗಳಲ್ಲಿ 16 ರನ್ ಮಾತ್ರ. ಇಂದೋರ್‌ನಲ್ಲಿ 92 ರನ್‌ ಗಳಿಸಿದ ದೋನಿಗೆ ರಬಾಡ ನೀಡಿದ್ದು 24 ಎಸೆತಗಳಲ್ಲಿ 23 ರನ್‌. ಈ ಪಂದ್ಯದ 50ನೇ ಓವರ್‌ನ ಐದು ಎಸೆತಗಳಲ್ಲಿ ಒಂದು ರನ್‌ ಕೂಡ ಬಿಟ್ಟುಕೊಡದೇ ಇದ್ದದ್ದು ಮಾತ್ರವಲ್ಲ; ದೋನಿ ಅವರನ್ನು ಕಟ್ಟಿ ಹಾಕಿ ಅವರ ವಿಕೆಟ್‌ ಕೂಡ ಪಡೆದಿದ್ದರು. ಎಡಗೈ ಬ್ಯಾಟ್ಸ್‌ಮನ್‌ ಈಗ ಬೌಲರ್‌ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಪೈಕಿ ಆಫ್ರಿಕಾದ ಸುಟೊ ಭಾಷೆಯನ್ನು ಮಾತನಾಡುವವರು ಇಬ್ಬರು ಮಾತ್ರ. ಒಬ್ಬರು ಆರನ್ ಫಂಗಿಸೊ, ಇನ್ನೊಬ್ಬರು ರಬಾಡ. ಶಾಲಾ ದಿನಗಳಲ್ಲಿ ರಬಾಡ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದರು. ಅವರಲ್ಲಿ ಬ್ಯಾಟಿಂಗ್‌ ಸಾಮರ್ಥ್ಯ ಇನ್ನೂ ಉಳಿದುಕೊಂಡಿದೆ. ಇಂದೋರ್‌ ಏಕದಿನ ಪಂದ್ಯದಲ್ಲಿ ಭಾರತದ ಜಯಕ್ಕೆ ಕೆಲಕಾಲ ಆತಂಕ ಒಡ್ಡಿದ ಅವರು ಅಜೇಯರಾಗಿ ಉಳಿದಿದ್ದರು. ಪ್ರಯೋಗಗಳು ಮತ್ತು ಆಲಿಕೆ ಗುಣವೇ ರಬಾಡ ಈ ಮಟ್ಟಕ್ಕೆ ಬೆಳೆಯಲು ಕಾರಣ. ‘ಅವರು ಇನ್ನೂ ವಿದ್ಯಾರ್ಥಿ ಇದ್ದಂತೆ. ಹೇಳಿದ್ದನ್ನು ಕೇಳಿ ಅದನ್ನು ಅಂಗಳದಲ್ಲಿ ಅಳವಡಿಸುವ ಕಲೆ ಚೆನ್ನಾಗಿ ಗೊತ್ತು’ ಎನ್ನುತ್ತಾರೆ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್‌ ಕೊಚ್‌ ಚಾರ್ಲ್‌ ಲ್ಯಾಂಗ್‌ವೆಲ್ಟ್‌. ಎದುರಾಳಿಯ ಬ್ಯಾಟಿಂಗ್‌ ಶೈಲಿಗೆ ತದ್ವಿರುದ್ಧ ಚೆಂಡು ಎಸೆದು ಇಕ್ಕಟ್ಟಿಗೆ ಸಿಲುಕಿಸುವುದರಲ್ಲಿ ರಬಾಡ ನಿಸ್ಸೀಮ. ಗಂಟೆಗೆ 146 ಕಿಲೋಮಿಟ್‌ ವೇಗದಲ್ಲಿ ಎಸೆತ ಹಾಕಬಲ್ಲ ಅವರು ನಿಧಾನಗತಿಯ ಎಸೆತದ ಮೂಲಕ ಗೊಂದಲ ಸೃಷ್ಟಿಸುವ ಪರಿಣತಿಯನ್ನೂ ಹೊಂದಿದ್ದಾರೆ. ಅಗತ್ಯ ಬಿದ್ದಾಗ ಬೌನ್ಸರ್‌ ಹಾಗೂ ಯಾರ್ಕರ್‌ ಎಸೆತಗಳೂ ಅವರ ಬತ್ತಳಿಕೆಯಲ್ಲಿವೆ. ಇಂಥ ಅಸ್ತ್ರಗಳನ್ನು ಇರಿಸಿಕೊಂಡಿರುವುದರಿಂದಲೇ ಅವರನ್ನು ದಕ್ಷಿಣ ಆಫ್ರಿಕಾದ ಭವಿಷ್ಯದ ಪರಿಪೂರ್ಣ ಬೌಲರ್‌ ಎಂದು ಕರೆಯಲಾಗುತ್ತದೆ. * ಒಂದು ಪಂದ್ಯ ಮುಗಿಯುತ್ತಿದ್ದಂತೆ ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವತ್ತ ನಾನು ಗಮನ ಹರಿಸುತ್ತೇನೆ. –ಕಗಿಸೊ ರಬಾಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.