ಟೆನ್‌ ಪಿನ್‌ ಬೌಲಿಂಗ್‌ ಬೇಕಿದೆ ಕಾಯಕಲ್ಪ... ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ಗಳಂತೆ ಟೆನ್‌ಪಿನ್‌ ಬೌಲಿಂಗ್‌ ಕ್ರೀಡೆ ಕೂಡಾ ತನ್ನದೇ ಆದ ಪರಂಪರೆ ಹೊಂದಿದೆ. ಅಮೆರಿಕ, ಮಲೇಷ್ಯಾ, ದಕ್ಷಿಣ ಕೊರಿಯಾ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಕ್ರೀಡೆ ಭಾರತದಲ್ಲೂ ತನ್ನ ಕಂಪು ಪಸರಿಸಿದೆ. ಕ್ರಿಕೆಟ್‌, ಟೆನಿಸ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಕ್ರೀಡೆಗಳ ಅಬ್ಬರದ ನಡುವೆ ಟೆನ್‌ಪಿನ್‌ ಬೌಲಿಂಗ್‌ ನಿಧಾನವಾಗಿ ಉಸಿರಾಡುತ್ತಿದೆ. ಹೀಗಾಗಿ ಇಂದು ಬಹುತೇಕರಿಗೆ ಈ ಆಟದ ಅರಿವೇ ಇಲ್ಲ. ಅಮೆರಿಕ, ಮಲೇಷ್ಯಾ, ದಕ್ಷಿಣ ಕೊರಿಯಾಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕ್ರೀಡೆಗೆ ಸಿಗುತ್ತಿರುವ ಮನ್ನಣೆ ಅಷ್ಟಕ್ಕಷ್ಟೇ. ಇಲ್ಲಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕ್ರೀಡೆಯನ್ನು ವೃತ್ತಿಪರವಾಗಿ ಪರಿಗಣಿಸಿದವರಿಗಿಂತ ವಾರಾಂತ್ಯದಲ್ಲಿ ಮನರಂಜನೆಗಾಗಿ ಆಡುವವರ ಸಂಖ್ಯೆಯೇ ಹೆಚ್ಚು. ಟೆನ್‌ಪಿನ್‌ ಬೌಲಿಂಗ್‌ ಕ್ರೀಡೆಯನ್ನು ಭಾರತ ಸರ್ಕಾರ ಕ್ರಿಕೆಟ್‌, ಫುಟ್‌ಬಾಲ್‌ಗಳ ಹಾಗೆ ಸಾಮಾನ್ಯ ಕ್ರೀಡೆಯನ್ನಾಗಿ ಪರಿಗಣಿಸಿಲ್ಲ. ಇದು ಸದ್ಯ ಇತರೆ ಕ್ರೀಡೆಗಳ ಪಟ್ಟಿಯಲ್ಲಿದೆ. ಹೀಗಾಗಿ ಇದರ ಅಭಿವೃದ್ಧಿಗೆ ಸರ್ಕಾರದಿಂದ ಬಿಡಿಗಾಸಿನ ನೆರವು ಸಿಗುತ್ತಿಲ್ಲ. ಜತೆಗೆ ಮಾಧ್ಯಮಗಳಲ್ಲಿಯೂ ಹೇಳಿಕೊಳ್ಳುವಂತ ಪ್ರಚಾರ ಸಿಗುತ್ತಿಲ್ಲ. ಹೀಗಾಗಿ ಈ ಕ್ರೀಡೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತೆರೆಮರೆಯಲ್ಲಿಯೇ ಹೆಣಗಾಡುತ್ತಿದೆ. ಆರಂಭದ ದಿನಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಬಹಳಷ್ಟು ಮಂದಿ ಈ ಕ್ರೀಡೆಯತ್ತ ನೋಡುತ್ತಿದ್ದಾರೆ. ಇದರ ಪರಿಣಾಮ ಹಿಂದಿನ ಆರು ವರ್ಷಗಳಿಂದ ಈಚೆಗೆ ಟೆನ್‌ಪಿನ್‌ ಬೌಲಿಂಗ್‌ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಶೇಖ್‌ ಅಬ್ದುಲ್‌ ಹಮೀದ್‌, ಶಬ್ಬೀರ್‌ ಧನ್‌ಕೋಟ್‌, ಆಕಾಶ್‌ ಅಶೋಕ್‌ ಕುಮಾರ್‌ , ಪ್ರತಿಮಾ ಹೆಗ್ಡೆ, ಸ್ವಪ್ನಾ ಮಿತ್ರಾ, ಶಬೀನಾ ಸಲೀಮ್‌, ಜೂಡಿ ಅಲ್ಬನ್‌, ಮತ್ತು ಧ್ರುವ ಸರ್ದಾ, ಗಿರೀಶ್‌ ಅಶೋಕ್‌ ಗಾಬಾ ಅವರಂತ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಶೇಖ್‌ ಅಬ್ದುಲ್‌ ಅವರು 2014ರಲ್ಲಿ ನಡೆದಿದ್ದ ಥಾಯ್ಲೆಂಡ್‌ ಓಪನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಬೆಳಗಿದ್ದಾರೆ. ಚೆನ್ನೈನ ಶಬ್ಬೀರ್‌ ಅವರು ಕಾಮನ್‌ವೆಲ್ತ್‌ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹಿರಿಮೆ ಹೊಂದಿದ್ದಾರೆ. ಅವರು ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರೆ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಈ ವರ್ಷ ಬೆಳ್ಳಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಆಕಾಶ್‌, ಶಬ್ಬೀರ್‌, ಪ್ರತಿಮಾ, ಸ್ವಪ್ನಾ ಅವರಿದ್ದ ಭಾರತ ತಂಡ 2011ರಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನ ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದು ಇತಿಹಾಸ ಬರೆದಿದ್ದನ್ನು ಯಾರೂ ಮರೆಯುವಂತಿಲ್ಲ. ಈ ಯಶಸ್ಸಿನ ಹಿಂದೆ ಭಾರತ ಟೆನ್‌ಪಿನ್‌ ಬೌಲಿಂಗ್‌ ಫೆಡರೇಷನ್‌ ಕೊಡುಗೆ ಅಪಾರ. ಈ ಫೆಡರೇಷನ್‌ ಟೆನ್‌ಪಿನ್‌ ಕ್ರೀಡೆಯನ್ನು ಪ್ರವರ್ಧಮಾನಕ್ಕೆ ತರುವ ಉದ್ದೇಶದಿಂದ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲಾ, ಕಾಲೇಜು ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ ಯುವಕರನ್ನು ಈ ಕ್ರೀಡೆಯತ್ತ ಸೆಳೆಯಲು ಮುಂದಾಗಿದೆ. ಜತೆಗೆ ಪ್ರತಿ ವರ್ಷ ರಾಜ್ಯ ಚಾಂಪಿಯನ್‌ಷಿಪ್‌ಗಳನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಕೇವಲ ಮಹಾನಗರಕ್ಕೆ ಸೀಮಿತವಾಗಿದ್ದ ಈ ಕ್ರೀಡೆಯನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸುವ ಕಾರ್ಯದಲ್ಲಿ ನಿರತವಾಗಿದೆ. ಸದ್ಯ ಫೆಡರೇಷನ್‌ ಅಡಿಯಲ್ಲಿ 14 ಅಸೋಸಿಯೇಷನ್‌ಗಳು ಕಾರ್ಯನಿರ್ವಹಿ ಸುತ್ತಿವೆ. ಮುಂದಿನ ಒಂದು ವರ್ಷದಲ್ಲಿ ಈ ಸಂಖ್ಯೆಯನ್ನು 20ರಿಂದ 23ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇಷ್ಟಾದರೂ ಟೆನ್‌ಪಿನ್‌ ಬೌಲಿಂಗ್‌ ಬಗ್ಗೆ ಇನ್ನೂ ಹಲವರಲ್ಲಿ ನಿರ್ಲಕ್ಷ ಮನೋಭಾವ ಗಟ್ಟಿಯಾಗಿ ಬೇರೂರಿದೆ. ಇದನ್ನು ತೊಡೆದು ಹಾಕಲು ಫೆಡರೇಷನ್‌ ಕೂಡಾ ಕಾರ್ಯಪ್ರವೃತ್ತವಾಗಿದೆ. ‘ಇಂದು ಬಹುತೇಕ ಯುವಕ ಯುವತಿಯರು ಕ್ರಿಕೆಟ್‌, ಟೆನಿಸ್‌, ಬ್ಯಾಡ್ಮಿಂಟನ್‌ ಕ್ರೀಡೆಗಳತ್ತ ಆಕರ್ಷಿತರಾಗಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಟಿ.ವಿ.ಗಳಲ್ಲಿ ಈ ಕ್ರೀಡೆಗಳಿಗೆ ಸಿಗುತ್ತಿರುವ ಪ್ರಚಾರ ಮತ್ತು ಮನ್ನಣೆ. ಆದರೆ ಟೆನ್‌ಪಿನ್‌ಗೆ ಇಷ್ಟು ಪ್ರಚಾರ ಸಿಗುತ್ತಿಲ್ಲ. ಇದು ಈ ಕ್ರೀಡೆ ಹಿಂದುಳಿಯುವಂತೆ ಮಾಡಿದೆ’ ಎಂದು ಭಾರತ ಟೆನ್‌ಪಿನ್‌ ಬೌಲಿಂಗ್‌್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಆರ್‌.ಕಣ್ಣನ್‌ ಅಭಿಪ್ರಾಯ ಪಡುತ್ತಾರೆ. ‘ ಹಿಂದೆ ಟೆನ್‌ಪಿನ್‌ ಕ್ರೀಡೆ ಮಹಾ ನಗರಗಳ ಕೆಲವೇ ಕೆಲವು ಮಾಲ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಸಾಮಾನ್ಯ ಜನಕ್ಕೆ ಇದರ ಪರಿಚಯ ಇರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಎಲ್ಲರೂ ಮಾಲ್‌ಗಳಿಗೆ ಬರುತ್ತಾರೆ. ಹಾಗೆ ಬಂದವರಲ್ಲಿ ಟೆನ್‌ಪಿನ್‌ ಬೌಲಿಂಗ್‌ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಾವು ವಾರಾಂತ್ಯದಲ್ಲಿ ರಿಯಾಯಿತಿ ದರದಲ್ಲಿ ಟೆನ್‌ ಪಿನ್‌ ಆಡುವ ಅವಕಾಶ ಕಲ್ಪಿಸಿದ್ದೇವೆ. ಇದರಿಂದ ಪ್ರತಿಯೊಬ್ಬರಲ್ಲೂ ಈ ಕ್ರೀಡೆಯ ಬಗ್ಗೆ ಅಭಿರುಚಿ ಬೆಳೆಯುತ್ತದೆ’ ಎಂದು ಕಣ್ಣನ್‌ ಹೇಳುತ್ತಾರೆ. ಮುಂಚೂಣಿಯಲ್ಲಿ ಕರ್ನಾಟಕ... ಟೆನ್‌ಪಿನ್‌ ಬೌಲಿಂಗ್‌ನಲ್ಲಿ ಕರ್ನಾಟಕ ಪ್ರತಿಭಾನ್ವಿತರ ಕಣಜ ಎನಿಸಿದೆ. ರಾಷ್ಟ್ರೀಯ ತಂಡದಲ್ಲಿ ಮಿಂಚು ಹರಿಸುತ್ತಿರುವ ಆಕಾಶ್‌, ಪ್ರತಿಮಾ, ಸ್ವಪ್ನಾ ಹೀಗೆ ಬಹುತೇಕ ಆಟಗಾರರು ರಾಜ್ಯದವರು ಎಂಬುದು ವಿಶೇಷ. ಬೆಂಗಳೂರಿನಲ್ಲಿ ಹಲವು ಮಾಲ್‌ಗಳಲ್ಲಿ ಟೆನ್‌ಪಿನ್‌ ಬೌಲಿಂಗ್‌ ಅರೆನಾಗಳಿವೆ. ಜತೆಗೆ ಮೈಸೂರು, ಮಂಗಳೂರಿನಲ್ಲಿಯೂ ಈಗ ಇವು ತಲೆ ಎತ್ತಿವೆ. ಇಲ್ಲಿ ಹೆಚ್ಚೆಚ್ಚು ಮಂದಿ ಹೋಗಿ ಆಡುತ್ತಾರೆ. ಹೀಗಾಗಿ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. * ಏನಿದು ಟೆನ್‌ಪಿನ್‌.. 1880ರ ದಶಕದಲ್ಲಿ ನ್ಯೂ ಇಂಗ್ಲೆಂಡ್‌, ಕೆನಡಾ, ಅಮೆರಿಕ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾಗಳಲ್ಲಿ ಟೆನ್‌ಪಿನ್‌ ಬೌಲಿಂಗ್‌ ಕ್ರೀಡೆ ಬೆಳಕಿಗೆ ಬಂತು. 1940ರ ಬಳಿಕ ಈ ಕ್ರೀಡೆಯ ಕಂಪು ಇತರ ರಾಷ್ಟ್ರಗಳಿಗೂ ಹರಡಿತು. ಟೆನ್‌ಪಿನ್‌ ಬೌಲಿಂಗ್‌ ಸಂಪೂರ್ಣ ಯಾಂತ್ರಿಕೃತವಾಗಿರುತ್ತದೆ. ಒಟ್ಟಾರೆ 153 ಸೆಂಟಿ ಮೀಟರ್‌ ಅಳತೆಯ ಸಿಂಥೆಟಿಕ್‌ ಲೇನ್‌ನಲ್ಲಿ ಟೆನ್‌ಪಿನ್‌ ಬೌಲಿಂಗ್‌ ಆಡಲಾಗುತ್ತದೆ. ಲೇನ್‌ನ ಆರಂಭಿಕ ತುದಿಯಿಂದ ಬೌಲರ್‌ ಚೆಂಡನ್ನು ಉರುಳಿಸಿ ಅಂತಿಮ ತುದಿಯಲ್ಲಿರುವ ತ್ರಿಕೋನಾಕಾರದ 10 ಪಿನ್‌ಗಳನ್ನು ಬೀಳಿಸಬೇಕು. ಬೌಲರ್‌ ಚೆಂಡನ್ನು ಬಿಗಿಯಾಗಿ ಹಿಡಿದು ಸರಾಗವಾಗಿ ಗುರಿಯೆಡೆಗೆ ಉರುಳಿಸಲು ನೆರವಾಗಲಿ ಎಂಬ ಉದ್ದೇಶದಿಂದ ಚೆಂಡಿನ ಮೇಲೆ ಮೂರು ಸಂದಿಗಳನ್ನು ಮಾಡಲಾಗಿರುತ್ತದೆ. ಚೆಂಡನ್ನು ಗುರಿಯತ್ತ ಉರುಳಿಸಿದ ಬಳಿಕ ಬೌಲರ್‌ ಲೇನ್‌ನ ಆರಂಭದಲ್ಲಿ ಹಾಕಲಾಗಿರುವ ಗೆರೆಯನ್ನು ದಾಟುವಂತಿಲ್ಲ. ಒಂದು ವೇಳೆ ಈ ಗೆರೆ ದಾಟಿದರೆ ಅದನ್ನು ‘ಫೌಲ್‌’ ಎಂದು ಪರಿಗಣಿಸಲಾಗುತ್ತದೆ. ಈ ಅವಕಾಶದಲ್ಲಿ ಪಿನ್‌ಗಳನ್ನು ಬೀಳಿಸಿದರೂ ಸ್ಕೋರ್‌ ಗಣನೆಗೆ ಬರುವುದಿಲ್ಲ. * ಟೆನ್‌ಪಿನ್‌ ಬೌಲಿಂಗ್‌ನ ನಿಯಮಗಳು... ಒಂದು ಗೇಮ್‌ನಲ್ಲಿ 10 ಫ್ರೇಮ್‌ಗಳಿರುತ್ತವೆ. ಪ್ರತಿ ಫ್ರೇಮ್‌ನಲ್ಲಿ 10 ಪಿನ್‌ಗಳನ್ನು ಬೀಳಿಸಲು ಎರಡು ಅವಕಾಶ ನೀಡಲಾಗುತ್ತದೆ. ಒಂದೇ ಅವಕಾಶದಲ್ಲಿ 10 ಪಿನ್‌ಗಳನ್ನು ಉರುಳಿಸಿದರೆ ಅದನ್ನು ‘ಸ್ಟ್ರೈಕ್‌’ ಎಂದು ಕರೆಯಲಾಗುತ್ತದೆ. ಎರಡು ಅವಕಾಶದಲ್ಲಿ ಬೀಳಿಸಿದರೆ ಅದು ‘ಸ್ಪೇರ್‌’. ಎರಡೂ ಅವಕಾಶದಲ್ಲಿ ಎಲ್ಲಾ ಪಿನ್‌ಗಳನ್ನು ಬೀಳಿಸದಿದ್ದರೆ ಅದನ್ನು ‘ಓಪನ್‌ ಫ್ರೇಮ್‌’ ಎಂದು ಕರೆಯಲಾಗುತ್ತದೆ. ಒಂದು ಗೇಮ್‌ನಲ್ಲಿ ಗರಿಷ್ಠ 12 ಸ್ಟ್ರೈಕ್‌ಗಳನ್ನು ಹೊಡೆಯಬಹುದು. ಆಗ ಗರಿಷ್ಠ 300 ಸ್ಕೋರ್‌ ಆಗುತ್ತದೆ. ಸ್ಟ್ರೈಕ್‌ ಜಾಸ್ತಿ ಹೊಡೆದಷ್ಟು ಸ್ಕೋರ್‌ ಕೂಡಾ ಹೆಚ್ಚುತ್ತದೆ. ಜತೆಗೆ ಮುಂದಿನ ಫ್ರೇಮ್‌ನಲ್ಲಿ ಬೋನಸ್‌ ಸ್ಕೋರ್‌ಗಳು ಲಭಿಸುತ್ತವೆ. ಎರಡು ಅವಕಾಶದಲ್ಲಿ ಎಲ್ಲಾ ಪಿನ್‌ಗಳನ್ನು ಬೀಳಿಸಿದರೂ ಸ್ಕೋರ್‌ ಏರಿಕೆಯಾಗುತ್ತದೆ. ಮೊದಲೆರಡು ಸುತ್ತುಗಳಲ್ಲಿ ತಲಾ 12 ಹಾಗೂ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ 8 ಗೇಮ್‌ಗಳನ್ನು ಆಡಿಸಲಾಗುತ್ತದೆ. ಲೀಗ್‌ ಹಂತದ ಒಟ್ಟು 32 ಗೇಮ್‌ಗಳಲ್ಲಿ ಬೌಲರ್‌ಗಳು ಗಳಿಸಿದ ಸ್ಕೋರ್‌ಗಳ ಸರಾಸರಿ ತೆಗೆದು ಅಗ್ರ ನಾಲ್ಕು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರು ನಾಕೌಟ್‌ ಹಂತ ಪ್ರವೇಶಿಸುತ್ತಾರೆ. ನಾಕೌಟ್‌ನಲ್ಲಿ ತಲಾ 10 ಫ್ರೇಮ್‌ಗಳ ಎರಡು ಗೇಮ್‌ ಆಡಿಸಲಾಗುತ್ತದೆ. ಇದರಲ್ಲಿ ಹೆಚ್ಚು ಸ್ಕೋರ್‌ ಮಾಡಿದ ಅಗ್ರ ಇಬ್ಬರು ಫೈನಲ್‌ ಪ್ರವೇಶಿಸುತ್ತಾರೆ. ಫೈನಲ್‌ನಲ್ಲಿ ಹೆಚ್ಚು ಸ್ಕೋರ್‌ ಗಳಿಸಿದವರು ಚಾಂಪಿಯನ್‌ ಆಗಿ ಹೊರಹೊಮ್ಮುತ್ತಾರೆ. * ಪ್ರಮುಖ ಕೂಟಗಳು ವಿಶ್ವ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ , ಏಷ್ಯನ್‌ , ವಿಶ್ವ ಸಿಂಗಲ್ಸ್‌ , ವಿಶ್ವ ಯೂತ್‌ ಚಾಂಪಿಯನ್‌ಷಿಪ್‌. * ಮಲೇಷ್ಯಾದ ಫುಂಗ್‌ ಅವರ ಮಾರ್ಗದರ್ಶನದಲ್ಲಿ ನಾವು ಹಲವು ತಂತ್ರಗಳನ್ನು ಕಲಿಯುತ್ತಿದ್ದೇವೆ. ಆದರೆ ನಮ್ಮಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲದಿರುವುದರಿಂದ ಅಮೆರಿಕ, ಮಲೇಷ್ಯಾದ ಸ್ಪರ್ಧಿಗಳ ಸವಾಲು ಮೆಟ್ಟಿನಿಲ್ಲಲು ಕಷ್ಟವಾಗುತ್ತಿದೆ -ಆಕಾಶ್‌ ಅಶೋಕ್‌ ಕುಮಾರ್‌, ಕರ್ನಾಟಕದ ಆಟಗಾರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.